ಹೇಮಾವತಿ ನಾಲೆಯಿಂದ ಬುಗುಡನಹಳ್ಳಿಯಲ್ಲಿ ಸಂಗ್ರಹವಾಗುವ ನೀರು ಮುಂದಿನ 8 ತಿಂಗಳ ಕಾಲ ನಗರಕ್ಕೆ ಪೂರೈಕೆ ಮಾಡಬಹುದಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
ತುಮಕೂರು ನಗರದ ಬುಗುಡನಹಳ್ಳಿ ಕೆರೆಗೆ ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿದ ನಂತರ ನಗರದ ಎಂ.ಜಿ.ಸ್ಟೇಡಿಯಂನಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಗೊರೂರು ಜಲಾಶಯದಿಂದ ಹೇಮಾವತಿ ನಾಲೆಗೆ ಮೇ 23ರಂದು ನೀರು ಹರಿಯಬಿಟ್ಟಿದ್ದು, ಮೇ 25ರ ರಾತ್ರಿ ಬುಗಡನಹಳ್ಳಿ ಕೆರೆಗೆ ನೀರು ತಲುಪಿದೆ ಎಂದು ತಿಳಿಸಿದ ಅವರು ನಗರದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಹಾಸನದಲ್ಲಿ ಇತ್ತೀಚೆಗೆ ಜರುಗಿದ ನೀರಾವರಿ ಸಮಿತಿ ನಿರ್ಣಯದಂತೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ತುಮಕೂರಿಗೆ ಗೊರೂರು ಜಲಾಶಯದಿಂದ ನೀರು ಹರಿಸಲಾಗಿದೆ. ಮುಂದಿನ 50 ದಿನಗಳಿಗೆ ಮಾತ್ರ ಪೂರೈಕೆ ಮಾಡುವಷ್ಟು ಕೆರೆಯಲ್ಲಿ ನೀರು ಲಭ್ಯವಿತ್ತು. ಮುಂದಾಲೋಚನೆಯಿಂದ ಕೆರೆಗೆ ನೀರು ಹರಿಸಲಾಗಿದೆ ಎಂದು ತಿಳಿಸಿದರು.
ಹೇಮಾವತಿ ನೀರನ್ನು ಬುಗುಡನಹಳ್ಳಿ ಕೆರೆಯಲ್ಲಿ ಸಂಗ್ರಹಿಸಿ ಶುದ್ಧೀಕರಿಸಿ ನಾಗರಿಕರಿಗೆ ಪೂರೈಕೆ ಮಾಡಲಾಗುವುದು. ಹೇಮಾವತಿ ಜಲಾಶಯದಿಂದ ಪ್ರತೀ ದಿನ 2 ಟಿಎಂಸಿ ನೀರನ್ನು ಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ 8 ದಿನಗಳಲ್ಲಿ ಕೆರೆ ಭರ್ತಿಯಾಗಲಿದ್ದು, ಕೆರೆ ಭರ್ತಿಯಾದ ನಂತರ ಹೆಬ್ಬಾಕ, ನರಸಾಪುರ, ಅಮಾನಿಕೆರೆಗೆ ನೀರನ್ನು ತುಂಬಿಸುವ ಪ್ರಯತ್ನ ಮಾಡಲಾಗುವುದು. ಪ್ರಸಕ್ತ ವರ್ಷ ಅವಧಿಗೂ ಮುನ್ನವೇ ಮಳೆಗಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದು ಎಂದು ಹೇಳಿದರು.
ಪ್ರಸಕ್ತ ವರ್ಷ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಜಿಲ್ಲಾಡಳಿತದಿಂದ ಈಗಾಗಲೇ ಸಭೆಗಳನ್ನು ನಡೆಸಿ ನೀಲನಕ್ಷೆಯನ್ನು ಸಿದ್ಧಪಡಿಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರ ಸ್ಥಾನದಲ್ಲಿ 35 ಲಕ್ಷ ರೂ.ಗಳ ವೆಚ್ಚದಲ್ಲಿ ಅಲಂಕಾರಿಕ ಮೀನುಗಳ ಪ್ರದರ್ಶನಕ್ಕಾಗಿ ಮತ್ಸಾಲಯವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ವಿಶೇಷವಾಗಿ ಶಾಲಾ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮತ್ಸಾಲಯವನ್ನು ನಿರ್ಮಿಸಲಾಗುತ್ತಿದೆ. ವಿವಿಧ ಜಾತಿಯ ಮೀನುಗಳ ಪರಿಚಯ, ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ. ಸದ್ಯದಲ್ಲಿಯೇ ಈ ಮತ್ಸಾಲಯವನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ನಗರದ ಹೊರವಲಯದಲ್ಲಿರುವ ನರಸಾಪುರ ಗೇಟ್‌ನಿಂದ ಬುಗುಡನಹಳ್ಳಿ ಜಲಸಂಗ್ರಹಾಗಾರದವರೆಗೂ ಕಾಲ್ನಡಿಗೆಯಲ್ಲಿ ಸಾಗಿ ಹೇಮಾವತಿ ನಾಲೆ ನೀರು ಹರಿಯುವಿಕೆಯನ್ನು ಸಚಿವರು ಪರಿವೀಕ್ಷಿಸಿದರು. ಬುಗುಡನಹಳ್ಳಿ ಕೆರೆಯಲ್ಲಿ ಬೆಳೆದಿರುವ ಜಾಲಿಗಿಡ, ಜಂಗಲ್, ಗಿಡ-ಗಂಟೆಗಳನ್ನು ಕೂಡಲೇ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಕೆರೆಗೆ ಯಾವುದೇ ಕಲುಷಿತ ನೀರು ಸೇರದಂತೆ ಎಚ್ಚರಿಕೆವಹಿಸಬೇಕು ಎಂದು ಪಾಲಿಕೆ ಆಯುಕ್ತ ಅಶ್ವಿಜ ಅವರಿಗೆ ನಿರ್ದೇಶನ ನೀಡಿದರು.
ನರಸಾಪುರ ಗೇಟ್‌ನಿಂದ ಜಲಸಂಗ್ರಹಾಗಾರಕ್ಕೆ ಸೇರುವ ರಸ್ತೆಯನ್ನು ಅಗಲೀಕರಣಗೊಳಿಸಬೇಕು. ಕೆರೆ ಏರಿ ಮೇಲೆ ತಿರುಗಾಡಲು ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಗೊರೂರು ಜಲಾಶಯದಿಂದ ಮೇ 23 ರಿಂದ ಹೇಮಾವತಿ ನಾಲೆಗೆ ನೀರು ಹರಿಸಲಾಗಿದ್ದು, ಮೇ 25 ರಾತ್ರಿ 11.15 ಗಂಟೆಗೆ ತುಮಕೂರಿಗೆ ನೀರು ತಲುಪಿದೆ. ಸಂಗ್ರಹವಾದ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುವುದು ಎಂದು ತಿಳಿಸಿದರು.
ಸಚಿವರು ನಂತರ ಜಿಲ್ಲಾ ಪಂಚಾಯತಿ ಹಾಗೂ ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಕ್ರೀಡಾಂಗಣದ ಬಳಿ ನವೀಕರಿಸುತ್ತಿರುವ ಮತ್ಸಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮತ್ಸಾಲಯದೊಂದಿಗೆ ಪರಿಸರ ಹಾಗೂ ಜಿಲ್ಲೆಯ ಜೀವ ವೈವಿಧ್ಯತೆಯ ಬಗ್ಗೆ ಮಾಹಿತಿ ತಿಳಿಸುವ ಸಲುವಾಗಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲು ಮಕ್ಕಳಿಗಾಗಿ ಮಿನಿ ಥಿಯೇಟರ್ ಅನ್ನು ನಿರ್ಮಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಜಿ. ಪ್ರಭು ಅವರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಜಿ. ಪ್ರಭು ಮಾತನಾಡಿ ಸುಮಾರು 100 ಮಕ್ಕಳು ಕುಳಿತು ಸಾಕ್ಷ್ಯಚಿತ್ರ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ತುಮಕೂರಿನ ಪ್ರಮುಖ ಆಕರ್ಷಣೆ ಇದಾಗಲಿದೆ. ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸದೆ ಮುಚ್ಚಲಾಗಿದ್ದ ಮತ್ಸಾಲಯಕ್ಕೆ ಮರುಜೀವ ನೀಡಲಾಗುತ್ತಿದೆ. ಮುಂದಿನ 10 ದಿನಗಳೊಳಗಾಗಿ ನವೀಕರಣ ಕಾರ್ಯವನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು. ಈ ಮತ್ಸಾಲಯವನ್ನು. ವಿವಿಧ 36 ಜಾತಿಯ ಅಲಂಕಾರಿಕ ಮೀನುಗಳ ಅಕ್ವೇರಿಯಂಗಳನ್ನು ಅಳವಡಿಸಲಾಗಿದೆ. ಕೋಯಿಕಾರ್ಪ್, ಗೋಲ್ಡ್ ಫಿಶ್, ಅರೋಹನ, ಫ್ಲವರ್‌ಆರ್ಮ್, ಪ್ಯಾರಲ್ಸ್ ಸೇರಿದಂತೆ ಹಲವಾರು ಜಾತಿಯ ಮೀನುಗಳನ್ನು ಪ್ರದರ್ಶನಕ್ಕಿಡಲಾಗುವುದು ಎಂದು ಸಚಿವರಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಹೇಮಾವತಿ ನಾಲಾ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಿ. ಸಂಪತ್ ಕುಮಾರ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎ.ಸಿ. ಶಿವಶಂಕರ್, ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ ಗಿರೀಶ್ ಬಾಬುರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.