ಪ. ರಮಾನಂದರ ಕತೆ | ಬಾಳ್ವೆಯ ಮಸಾಲೆ

Date:

Advertisements
ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಸಂಜೆ 4 ಗಂಟೆಯಾಗುತ್ತಲೇ ಶಾಲೆಯಿಂದ ಬಿಡುಗಡೆಹೊಂದಿ ಹೊರಗೆ ಬರುವ ಮಕ್ಕಳ ಗುಂಪಿನ ದೃಶ್ಯವು ನಿಮ್ಮೆಲ್ಲರ ಮನಸ್ಸಿನಲ್ಲಿ ಚೆನ್ನಾಗಿ ನಾಟಿಕೊಂಡಿರಬೇಕು. ಆದರೆ ಸಂಜೆ 6 ಗಂಟೆಯಾಗುತ್ತಲೇ ಮಂಗಳೂರ ಹುಜೂರಿನಿಂದ ಗುಮಾಸ್ತರೆಲ್ಲರೂ ಬಂಧವಿಮುಕ್ತರಾಗಿ ಹೊರಗೆ ಬರುವ ದೃಶ್ಯದ ಪರಿಚಯವು ನಿಮಗೆ ವಿಶೇಷವಾಗಿರಲಾರದು. ಪರಂತು, ಈ ಎರಡು ದೃಶ್ಯಗಳಿಗೂ ವಿಶೇಷ ತಾರತಮ್ಯವಿಲ್ಲವೆಂದು ನೀವು ತಿಳಿದುಕೊಂಡರೆ ಅದನ್ನು ವರ್ಣಿಸುವ ಒಂದು ದೊಡ್ಡ ಕೆಲಸವು ನನಗೆ ಉಳಿಯಿತು.

ಇಂದು ಈ ಎರಡನೆಯ ದೃಶ್ಯದಲ್ಲಿ ತನ್ನ ಮನೆಗೆಂದು ಮೆಲ್ಲಮೆಲ್ಲನೆ ಸರಿದುಹೋಗುತ್ತಿರುವ 26 ವರ್ಷ ಪ್ರಾಯದ ವ್ಯಕ್ತಿಯ ಮೇಲೆ ಚೆನ್ನಾಗಿ ನಿಮ್ಮ ದೃಷ್ಟಿಯಿಡಿರಿ. ಅವನೇ ಹರಿಕಮತನು. ‘ಅವನು ತನ್ನ ಮನೆಗೆ ಮೆಲ್ಲಮೆಲ್ಲನೆ ಸರಿದುಹೋಗುವುದೇಕೆ?’ ಎಂದು ನೀವು ಕೇಳುವಿರಿ. ಹಾಗೆ ನೀವು ಕೇಳುವುದು ವಿಹಿತವು ಮಾತ್ರವಲ್ಲ, ನೀವು ಆ ಪ್ರಶ್ನೆಯಿಂದ ನಿಮ್ಮ ವಿಚಾರತೀಕ್ಷ್ಣತೆಯನ್ನು ಅಭ್ರಮತೆಯಿಂದ ಪ್ರಚುರಗೊಳಿಸುವುದು ಯೋಗ್ಯವೇ ಸರಿ. ಆದರೆ ಹರಿಕಮತನು, ಪಾಪ! ಮತ್ತೇನು ಮಾಡುವನು? ಅವನ ಹೆಂಡತಿ ರುಕ್ಮಿಣಿಯ ಸಂಸಾರ ಮಾಡುವುದಕ್ಕೆ ನೆರವಾದ ಮೇಲೆ ಅವನು ಡೊಂಗರಕೇರಿಯಲ್ಲಿ ಬಿಡಾರ ಮಾಡಿ ಇಂದಿಗೆ ಆರು ವರ್ಷಗಳಾಗಿದ್ದುವು. ಬರೇ ಒಂದು ಅಥವಾ ಎರಡು ವರ್ಷಗಳಾಗಿದ್ದರೆ ಅವನು ಮೆಲ್ಲಮೆಲ್ಲನೆ ಅಲ್ಲ, ಓಡಿ ಓಡಿ ಹೋಗುತ್ತಿದ್ದನೋ ಏನೋ. ಆದರೆ ಆರು ವರ್ಷ! -ಹೋಗಲಿ; ನೀವು ಅವನ ಸ್ಥಿತಿಯಲ್ಲಿದ್ದರೆ ನೀವೂ ಅವನಂತೆ ಮೆಲ್ಲಮೆಲ್ಲನೆ ಹೋಗುತ್ತಿದ್ದಿರಿ… ಕೋಪ ಮಾಡಬೇಡಿ, ನಾನಾದರೆ ನನ್ನ ಬಿಡಾರವನ್ನೇ ಸೇರುತ್ತಿದ್ದಿಲ್ಲ!

ಅದರಲ್ಲಿಯೂ ರುಕ್ಮಿಣಿಯು ಪತಿಗೆ ಶತ್ರುವಾಗುವಷ್ಟು ರೂಪವತಿಯಾದ ಭಾರ್ಯೆಯಲ್ಲ. ಹರಿಕಮತನು ಶೀಲವೇ ಸೌಂದರ್ಯವೆಂದು ತಿಳಿಯುವುದಕ್ಕೆ ಆರು ವರ್ಷಗಳಿಂದ ಯತ್ನಿಸುತ್ತಿದ್ದರೂ ಅವನ ಮನಸ್ಸಿನಲ್ಲಿ ಅವಳ ಕುರೂಪದ ಭಾವನೆಯೇ ಬಲವಾಗುತ್ತಿತ್ತು. ಕಚೇರಿಯಲ್ಲಿ ಕೆಲಸ ಮಾಡಿ ಬೇಸರಹತ್ತಿದಾಗ, ತನ್ನ ಅಂಗಿಯ ಜೇಬಿನಲ್ಲಿ ಸಾಹುಕಾರ ಪುತ್ತುಸೆಟ್ಟಿಯ ಬೀಡಿ ಕಟ್ಟು ಒಂದಿದ್ದರೂ ಅದರಿಂದ ಬೀಡಿಯನ್ನು ತೆಗೆಯದೆ ತನ್ನ ಹತ್ತಿರ ಕೆಲಸ ಮಾಡುತ್ತಿದ್ದ ರಾಮನಾಯಕನೊಡನೆ ಒಂದು ಬೀಡಿಯನ್ನು ಬೇಡುವ ಸಂಪ್ರದಾಯವನ್ನು ಅವನು ಇಟ್ಟುಕೊಂಡಿದ್ದನು. ರಾಮನಾಯಕನು ಬೀಡಿಯನ್ನು ಕೂಡಲೆ ಕೊಡುತ್ತಿದ್ದನಾದರೂ, ‘ಪುತ್ತುಸೆಟ್ಟಿಯ ಬೀಡಿ ಸೇದುವವನಿಗೆ ಈ ಹಾಳು ದೂಮಮೂಲ್ಯನ ಬೀಡಿ ಹಿಡಿದೀತೇ?’ ಎಂದು ಪ್ರತಿಯೊಂದು ಸಾರಿ ಕೇಳುತ್ತಿದ್ದನು. ‘ಹಿಡಿಯದೇನು? ತನ್ನ ಹೆಂಡತಿ ಕುರೂಪಿ, ಪರರ ಹೆಂಡತಿ ಸುರೂಪಿ ಎಂಬ ನಾಣ್ನುಡಿ ನಿನಗೆ ಗೊತ್ತಿಲ್ಲವೆ?’ ಎಂದು ಹರಿಕಮತನು ಯಾವಾಗಲೂ ಉತ್ತರ ಕೊಡುತ್ತಿದ್ದನು.

Advertisements

ಎಂತಹ ಹುಚ್ಚುತನವು! -ಬೀಡಿ ಸೇದುವುದಲ್ಲ, ತನ್ನ ಹೆಂಡತಿ ಕುರೂಪಿ, ಪರರ ಹೆಂಡತಿ ಸುರೂಪಿ ಎಂದು ತಿಳಿದುಕೊಳ್ಳುವುದು! ನಾನು ಎಷ್ಟೋ ಜನರ ಹೆಂಡಿರನ್ನು ನೋಡಿದ್ದೇನೆ. ಹಾಗೆ ನೋಡಿದಾಗಲೆಲ್ಲ ನನ್ನ ಹೃದಯವು ಎಷ್ಟೋ ಸಾರಿ ಅವರ ಗಂಡಂದಿರಿಗಾಗಿ ನೀರಾಗಿ ಧಾರೆಯಾಗಿ ಹರಿದು ಹೋಗಿಬಿಟ್ಟಿದೆ. ಅಂತಹವರಲ್ಲಿ ಹರಿಕಮತನ ಹೆಂಡತಿ ಅಗ್ರಗಣ್ಯಳು. ಅವಳು ನನ್ನ ಹೆಂಡತಿಯಂತಿಲ್ಲ; ನನಗೆ ಪರಕೀಯನಾದ ಹರಿಕಮತನ ಹೆಂಡತಿಯು. ಆದರೆ ನನ್ನ ಕಥೆಯ ನಾಯಕಿಯಾದುದರಿಂದ ಅವಳು ಕುರೂಪಿಯಲ್ಲ, ಸುರೂಪಿಯೆಂದು ಹೇಳಬೇಕಾಗಿ ನಿಮ್ಮ ಬಲಾತ್ಕಾರವಿದ್ದರೆ, ನಾನು-ನಾನು- ಹೋಗಲಿ, ನಾನು ಈ ಕಥೆಯನ್ನು ಇಲ್ಲಿಯೇ ನಿಲ್ಲಿಸಬೇಕಾಗುವುದು.

ಹರಿಕಮತನಿಗೆ ಒಂದಾದರೂ ಕೂಸಿದ್ದಿದ್ದರೆ ಈ ಕಥೆಯೇ ಬೇರೆಯಾಗಿ ಹೋಗುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ. ಆಗ್ಗೆ ರುಕ್ಮಿಣಿಯು ಕುರೂಪಿಯಾಗಿದ್ದಳೆಂದು ಹೇಳುವುದಕ್ಕೆ ಸಂದರ್ಭವೇ ಇರುತ್ತಿದ್ದಿಲ್ಲ. ಹರಿಕಮತನು ಕೂಡ ತನ್ನ ಹೆಂಡತಿಯಷ್ಟು ಸುಂದರಿ ಮತ್ತಾರೂ ಇಲ್ಲವೆಂದು ತಿಳಿದುಕೊಳ್ಳುತ್ತಿದ್ದನೋ ಏನೋ. ಏಕೆಂದರೆ, ತಂದೆಯಂತೆ ಮಗುವಾದರೆ, ಮಗುವಿನಂತೆ ತಾಯಿಯಲ್ಲವೇ? ಆದರೆ ಈ ವಿಷಯದಲ್ಲಿಯೂ ಹರಿಕಮತನು ನಿರ್ಭಾಗ್ಯನು. ಅವನ ಆರು ವರ್ಷಗಳ ಸಂಸಾರದಲ್ಲಿಯೂ ಸರ್ವಶಕ್ತನಾದ ಜಗದೀಶ್ವರನು ಅವನಿಗೆ ಈ ಒಂದು ಭಾಗ್ಯವನ್ನು ದಯಪಾಲಿಸಲಿಕ್ಕೆ ಅಶಕ್ತನಾದನು. ಹೀಗಿರುವಾಗ್ಗೆ ಅವನು ಯಾರಿಗಾಗಿ ಬೇಗಬೇಗನೆ ತನ್ನ ಬಿಡಾರಕ್ಕೆ ಹೋಗುವುದು?

ಒಂದು ವೇಳೆ ತನ್ನ ಹೆಂಡತಿಯು ಕುರೂಪಿಯಾದರೆ, ಸಾಯಹೋಗಲಿ, ಒಂದು ವೇಳೆ ಅವನಿಗೆ ಮಕ್ಕಳಿಲ್ಲದಿದ್ದರೂ ಚಿಂತೆ ಇದ್ದಿಲ್ಲ. ಮಕ್ಕಳಿದ್ದರೂ ಚಿಂತೆ ಅಲ್ಲವೇ? ಆದರೆ ಹರಿಕಮತನ ಈ ಆರು ವರ್ಷಗಳ ಸಂಸಾರವು ಕೂಡ ಒಂದೇ ಅಚ್ಚುಪಡಿಯಲ್ಲಿ ಎರಕಹೊಯ್ದಂತಾಗಿರಬೇಕಿತ್ತೆ? ಒಂದು ಇಂಗ್ಲೀಷು ನಾಣ್ನುಡಿಯಿದೆ: “Variety is Spice of Life’ ಎಂದು. ಎಂದರೆ, ವಿವಿಧತೆಯೇ ಬಾಳ್ವೆಯ ಮಸಾಲೆ. ಈ ಭಾಷಾಂತರಕ್ಕಾಗಿ ನನ್ನನ್ನು ದೂರಬೇಡಿ. ಇಂತಹ ಅಕೃತ್ಯಕ್ಕೆ ನಾನು ಜವಾಬದಾರನಲ್ಲ. (ನನ್ನ ಹತ್ತಿರದಲ್ಲಿರುವ, ಅಂದರೆ ನಾನು ಯಾವಾಗಲೂ ಉಪಯೋಗಿಸುವ ಒಂದು ಇಂಗ್ಲಿಷ್-ಕನ್ನಡ ನಿಘಂಟೇ ಇದರ ಪೂರ್ಣ ಜವಾಬದಾರಿಕೆಯನ್ನು ವಹಿಸಿಕೊಳ್ಳುವುದು.) ನಿರ್ಭಾಗ್ಯನಾದ ಹರಿಕಮತನ ಜೀವನಕ್ಕೆ ವಿವಿಧತೆಯ ಮಸಾಲೆ ಕೂಡ ಇದ್ದಿಲ್ಲ. ಹೆಚ್ಚೇಕೆ? ಅವನ ಆರು ವರ್ಷಗಳ ಸಂಸಾರದಲ್ಲಿ ರುಕ್ಮಿಣಿಗೆ ಒಂದು ತಲೆನೋವಾದರೂ ಎದ್ದಿರಬೇಕೇ? ಇಲ್ಲ, ಒಂದು ದಿನಕ್ಕಾದರೂ ಇಲ್ಲ!

bale masale 07

ಹೀಗಾಗಿ ಹರಿಕಮತನಿಗೆ ಒಂದು ದಿನದಂತೆ ಮತ್ತೊಂದಾಯಿತು. ಮತ್ತೊಂದರಂತೆ ಇನ್ನೊಂದಾಯಿತು. ಇನ್ನೊಂದರಂತೆ ಮಗದೊಂದಾಯಿತು. ಒಂದು ತಿಂಗಳಿನ 30 ದಿನಗಳೂ ಒಂದೇ ರೀತಿಯಾದುವು. ಒಂದು ವರ್ಷದ 365 ದಿನಗಳೂ ಹೀಗೆಯೇ. ರುಕ್ಮಿಣಿಯೊಡನೆ ಅವನು ಇಂದಿನವರೆಗೆ ನಡೆಯಿಸಿದ ಈ ಆರು ವರ್ಷಗಳ 365 X 6 ಅಂದರೆ 2,190 ದಿನಗಳೂ ಒಂದೇ ವಿಧವಾದುವು. ಚುಟುಕವಾಗಿ ಹೇಳುವುದಾದರೆ ಹರಿಕಮತನ ಬಾಳ್ವೆಗೆ ಮಸಾಲೆಯೇ ಇಲ್ಲದಂತಾಯಿತು.

ಹರಿಕಮತನು ಮುಂದು ಮುಂದಕ್ಕೆ ಹೋದನು. ತಾನು ಈ ಬಿಡಾರವನ್ನು ಸೇರಿದೊಡನೆ ತನಗೆ ಎಂದಿನಂತೆ ಇಂದೂ ಸಂಭವಿಸಬಹುದಾದ ವಿದ್ಯಮಾನಗಳನ್ನೆಲ್ಲ ಒಂದೊಂದಾಗಿಯೇ ತನ್ನ ಮನಸ್ಸಿನಲ್ಲಿ ತಿರುಗಿಸುತ್ತಾ ಮುಂದೆ ಮುಂದೆ ಹೋಗುವವನಾದನು. ನೋಡೋಣ; ಹರಿಕಮತನಿಗೆ ತನ್ನ ಬಿಡಾರದಲ್ಲಿ ಸಂಭವಿಸಬಹುದಾದ ಈ ವಿದ್ಯಮಾನಗಳು ಯಾವು-ಯಾವುವು ಎಂದು ಪರೀಕ್ಷಿಸಿ ನೋಡೋಣ.

ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ

ಸ್ವಲ್ಪ ಸಮಯದಲ್ಲಿಯೇ ಬಿಡಾರವನ್ನು ಸೇರುವನು. ಇದಕ್ಕೇನೂ ಸಂದೇಹವಿಲ್ಲ. ರುಕ್ಮಿಣಿಯು ಬಾಗಿಲಬಳಿಯಲ್ಲಿ ಎಲೆ ಅಡಿಕೆಯನ್ನು ಹಾಕಿಕೊಳ್ಳುತ್ತಾ ಕೂತುಕೊಳ್ಳುವಳು. ಅವನು ಬಂದಕೂಡಲೇ ಎದ್ದುನಿಂತು ‘ಬಂದಿರೇ?’ ಎಂದು ಕೇಳುವಳು. ‘ಹೌದು’ ಎಂದು ಅವನು ಹೇಳಬೇಕಾಗುವುದು. ‘ಸ್ವಲ್ಪ ಕಾಫಿ ಮಾಡಿಕೊಡಲೇ?’ ಎನ್ನುವಳು. ತಾನು ಹೊಟೇಲಿನಲ್ಲಿ ಕುಡಿದಿರುವುದರಿಂದ ‘ಬೇಡ, ಈಗ ಬೇಡ’ ಎಂದು ಅವನ ಉತ್ತರ. ಈ ಸಂವಾದವಾದ ಬಳಿಕ ರುಕ್ಮಿಣಿಯು ಅವನ ಹತ್ತಿರ ಸರಿದು ‘ಇವತ್ತೇನು ಪಲ್ಯ ಮಾಡಲಿ?’ ಎಂದು ಕೇಳುವಳು. ರುಕ್ಮಿಣಿಯನ್ನು ದೂರಬೇಡಿ. ಪ್ರತಿಯೊಬ್ಬ ಹೆಂಡತಿಗೆ ಅತಿ ಪ್ರಾಮುಖ್ಯವಾಗಿರುವ ಪ್ರಶ್ನೆಯನ್ನೇ ಅವಳು ಕೇಳಿರುವಳು. ‘ನನಗೆ ಎಲ್ಲವೂ ಸರಿಯೇ; ನಿನಗೆ ಬೇಕಾದ್ದನ್ನು ಮಾಡು’ ಹರಿಕಮತನು ಉತ್ತರ ಕೊಡುವನು. ಇದು ನಿಮ್ಮಲ್ಲಿಯೂ ನನ್ನಲ್ಲಿಯೂ ವಾಡಿಕೆಯಾದ ಉತ್ತರವೇ ಎಂದು ನಾನು ಬೇರೆ ಹೇಳಬೇಕಾದ್ದಿಲ್ಲ. ರುಕ್ಮಿಣಿಯು ತನಗೆ ಬೇಕಾದ್ದನ್ನೇ ಮಾಡುವಳು. ಹಿಂದಿನ 2,190 ದಿನಗಳಲ್ಲಿಯೂ ಮಾಡಿದಂತೆ, ಈ 2,191ನೆಯ ದಿನದಲ್ಲಿಯೂ ತೊಗರಿಬೇಳೆಯ ತೊವ್ವೆಯನ್ನು ಮಾಡಿ ಬಡಿಸುವಳು ಎಂದು ಹರಿಕಮತನು ತಿಳಿದುಕೊಳ್ಳುವನು. ಇದೂ ಗಂಡಂದಿರಾದ ನಮ್ಮೆಲ್ಲರ ಅನುಭವದಲ್ಲಿರುವುದು.

ಅಷ್ಟರೊಳಗೆ ಹರಿಕಮತನು ತನ್ನ ಕೋಟನ್ನೂ ಟೊಪ್ಪಿಗೆಯನ್ನೂ ತೆಗೆದಿಟ್ಟು ಒಂದು ಗಳಿಗೆ ಜಗಲಿಯಲ್ಲಿರುವ ವಿರಾಮಕುರ್ಚಿಯಲ್ಲಿ ಕುಳಿತುಕೊಳ್ಳುವನು. ಹೀಗೆ ಅವನು ಕೂತುಕೊಂಡ ಸ್ವಲ್ಪ ಸಮಯದಲ್ಲಿಯೇ ಅವನ ಬಿಡಾರದ ಬಲಗಡೆಯಿಂದ ‘ಸರಿಗ್ಗ ಗಗ್ಗನಿ ಪಪ್ಪಮ ಮಮ್ಮಸ’ ಎಂಬ ಒಂದು ಹದಿನೈದು ರೂಪಾಯಿ ಹಾರ್ಮೋನಿಯಮ್ ಸ್ವರಕ್ಕೆ ಜೋಡಣೆಯಾಗಿ ಒಂದು ತರದ ಉದ್ವೇಗದ ಸ್ವರವು ಹೊರಡುವುದು. ಕೂಡಲೆ ಅವನ ಬಿಡಾರದ ಎಡಗಡೆಯಿಂದ ಒಬ್ಬನು ಕೊಳಲನ್ನು ಬಾರಿಸಲಿಕ್ಕೆ ಕಲಿಯುವನು. ಇದಾದ ಒಂದೆರಡು ನಿಮಿಷಗಳಲ್ಲಿಯೇ ಅವನ ಬಿಡಾರದ ಹಿಂದುಗಡೆಯಿರುವ ಕೃಷ್ಣಪ್ಪನು ತಾನೊಬ್ಬ ಬಿಡಾರಂ ಕೃಷ್ಣಪ್ಪನೋ ಎಂಬ ಭಾವನೆಯನ್ನು ತಾಳಿ, ತನ್ನ ವಿಲಕ್ಷಣವಾದ ಕೂಗುಗಳಿಂದ ಸುತ್ತಮುತ್ತಲಿನ ವಾಯುಮಂಡಲವನ್ನೆಲ್ಲ ಅಲ್ಲೋಲ ಕಲ್ಲೋಲ ಮಾಡಿಬಿಡುವನು.

ಹರಿಕಮತನು ‘ಸರ್ವಂ ವಿಷ್ಣುಮಯಂ ಜಗತ್’ ಎಂಬ ವೇದವಾಕ್ಯವನ್ನು ಸಂಪೂರ್ಣವಾಗಿ ಶಿರಸಾವಹಿಸಲಿಕ್ಕೆ ಸಿದ್ದನಾಗಿದ್ದನು. ಅವನನ್ನು ನೀವು ಒತ್ತಾಯಪಡಿಸಿದರೆ ‘ಸರ್ವಂ ಕಾವ್ಯಮಯಂ ಜಗತ್’ ಎಂಬ ಮತವನ್ನೂ ಸ್ವೀಕರಿಸಲಿಕ್ಕೆ ಅವನು ಒಂದು ವೇಳೆ ಒಪ್ಪಿಗೆ ಕೊಟ್ಟಾನು. ಆದರೆ ‘ಸರ್ವಂ ಸಂಗೀತಮಯಂ ಜಗತ್’ ಎಂದು ಯಾರಾದರೂ ಒಬ್ಬರು ಪೀಕಲಾಟವನ್ನು ಎಬ್ಬಿಸುವುದಾದರೆ, ಅವನು ಹರಿಕಮತನಿಂದ ಎರಡು ಮೈಲು ದೂರವಾದರೂ ಇರುವಂತೆ ಜಾಗ್ರತೆ ತೆಗೆದುಕೊಳ್ಳುವುದು ಒಳ್ಳೇದು. ನಾನು ಈಗಲೆ ನಿಮಗೆ ತಿಳಿಸುತ್ತೇನೆ. ಮತ್ತೆ ನನ್ನನ್ನು ದೂರಬೇಡಿ.

ಹೀಗಿರುವಾಗ ‘ಬಲಗಡೆ ಗುಂಡು, ಎಡಗಡೆ ಗುಂಡು, ಹಿಂದುಗಡೆ ಗುಂಡು’ ಎಂಬಂತೆ ತನ್ನ ಬಿಡಾರದ ಮೂರೂ ಕಡೆಗಳಿಂದಲೂ ಸಿಡಿಮದ್ದಿನಂತೆ ಬರುವ ಗಾಯನದ ಹೊಡೆತಕ್ಕೆ ಹರಿಕಮತನು ತಲೆಬಗ್ಗಿಸುವನೇ? ಇಲ್ಲ. ಎಂದೂ ಇಲ್ಲ; ಈ 2,190 ದಿನಗಳಲ್ಲಿಯೂ ಅವನು ತಲೆ ಬಗ್ಗಿಸಲಿಲ್ಲ. ‘ಹರದಾರಿ, ಹರದಾರಿ, ಹರದಾರಿ, ಮುಂದು!’ ಎಂಬ ಸೂತ್ರವನ್ನು ಕೂಡಲೆ ಜ್ಞಾಪಕಕ್ಕೆ ತಂದುಕೊಂಡು ತನ್ನ ಟೊಪ್ಪಿಗೆಯನ್ನೂ, ಕೋಟನ್ನೂ ಪುನಃ ಹಾಕಿಕೊಂಡು ಹೊರಡುವನು.

ಇದನ್ನು ನೋಡಿದ ಕೂಡಲೆ ರುಕ್ಮಿಣಿಯು ಹೊರಕ್ಕೆ ಬಂದು ‘ಈಗೆಲ್ಲಿ ಹೊರಡೋಣವೋ? ಗಂಟೆ ಏಳೂವರೆ ಆಯಿತು. ಇನ್ನು ಅರ್ಧಗಂಟೆಯೊಳಗೆ ಊಟ ಸಿದ್ಧವಾಗುವುದು. ಒಂದು ದಿನವಾದರೂ ಮನೆಯಲ್ಲಿ ಕೂತುಕೊಳ್ಳಬಾರದೇ?’ ಎಂದು ತೀಕ್ಷ್ಣತೆಯಿಂದ ಕೇಳುವಳು.

ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು

ಹರಿಕಮತನು ಸುಣ್ಣದ-ಡಬ್ಬಿಯಂತಿರುವ ತನ್ನ ವೋಚ್‌ನ್ನು ಫಕ್ಕನೆ ಹೊರಕ್ಕೆ ತೆಗೆದು- ಇಲ್ಲ, ರುಕ್ಕಿಣಿಯ ತಲೆಗೆ ಎಸೆಯುವುದಿಲ್ಲ- ಸಮಯವನ್ನು ನೋಡುವನು. ‘ಇಲ್ಲ; 7 ಗಂಟೆ ಆಗಲಿಲ್ಲ; ಇನ್ನೂ 7 ಗಂಟೆಗೆ 10 ಮಿನಿಟುಂಟು. ಕ್ಲಬ್ಬಿಗೆ ಹೋಗೋಣವೋ ಎಂದು ಹೊರಟೆ. ಪೇಪರು ನೋಡದೆ ಎಷ್ಟೋ ದಿವಸಗಳಾದುವು. ಇಂದಾದರೂ ನೋಡಬೇಕು’ ಎಂದು ಹೇಳುತ್ತ ಹೊರಗೆ ಹೋಗಿಯೇ ಬಿಡುವನು. ಜಗಲಿಯ ಮೆಟ್ಟಿಲಿನ ಮೇಲಿನಿಂದ, ‘ಇನ್ನು ಅರ್ಧ ಗಂಟೆಯೊಳಗೆ ಬರುತ್ತೇನೆ’ ಎಂದು ಹೇಳಿ ರುಕ್ಮಿಣಿಯ ಪ್ರತ್ಯುತ್ತರವು ತನ್ನ ಕಿವಿಗೆ ಬೀಳುವ ಮೊದಲೇ ಥಟ್ಟನೆ ಹೋಗಿ ಮಾರ್ಗವನ್ನು ಸೇರುವನು.

ಹರಿಕಮತನ ಸಂಜೆಯ ಅರ್ಧ ತಾಸು ಎಂಬುದು ನಮ್ಮಂತಹ ನಾಗರಿಕರ ಎರಡು ತಾಸುಗಳಷ್ಟು ದೊಡ್ಡದು. ಇದು ಅವನ ತಪ್ಪಲ್ಲ. ಕಾಲಕ್ಕೆ ಸಮಯದ ಬೆಲೆ ಗೊತ್ತಿಲ್ಲ. ಅದು ಬಹಳ ಪಕ್ಷಪಾತಿಯು. ಹರಿಕಮತನು ಸಂಜೆ ಕ್ಲಬ್ಬಿನಲ್ಲಿ ಬಿಝಿಕ್ ಆಟವನ್ನು ಆಡಲಿಕ್ಕೆಂದು ಕೂತುಕೊಳ್ಳುವುದೇ ತಡ, ಅದು ನಾಗಾಲೋಟದಿಂದ ಓಡಲಿಕ್ಕೆ ಪ್ರಾರಂಭಿಸುತ್ತದೆ. ಅದೇ ಸಮಯವು ಮನೆಯಲ್ಲಿದ್ದಾಗ್ಗೆ ಆಮೆಯಂತೆ ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತದೆ. ಹರಿಕಮತನು ತಾನು ಪೇಪರು ನೋಡದೆ ಅನೇಕ ದಿನಗಳಾದುವು ಎಂದು ಹೇಳುವ ಮಾತೂ ನಿಜವಾದದ್ದೇ. ಏಕೆಂದರೆ ಅವನಿಗೆ ಪೇಪರು ನೋಡುವ ಅಭ್ಯಾಸವು ಆಗುವ ಮೊದಲೇ ಬಿಟ್ಟುಹೋಗಿದೆ. ಇದೂ ಅವನ ತಪ್ಪಲ್ಲ. ಅವನು ಆಡುವ ಬಿಝಿಕ್ ಆಟದ ತಪ್ಪು.

ಅದು ಹೇಗೂ ಇರಲಿ. ಅವನು ಕ್ಲಬ್ಬಿನಿಂದ ತಿರುಗಿ ತನ್ನ ಬಿಡಾರಕ್ಕೆ ಬರುವಾಗ ರಾತ್ರಿ 9 ಗಂಟೆಯಾಗುವುದು. ಒಂದೊಂದು ವೇಳೆ ರುಕ್ಮಿಣಿಯು ಅವನಿಗಾಗಿ ಕಾದು ಕಾದು ಊಟ ಮಾಡದೆಯೇ ನಿದ್ದೆ ಹೋಗುವಳು. ಒಂದೊಂದು ವೇಳೆ ಅದೇ ಕಾರಣದಿಂದ ತೂಕಡಿಸುವಳು. ಒಂದೊಂದು ವೇಳೆ ಮತ್ತೂ ಅದೇ ಕಾರಣದಿಂದ ಮಹಾಕಾಳಿಯ ಅವತಾರವನ್ನು ಧರಿಸುವಳು. ಇಂದು ತಾನು ತನ್ನ ಬಿಡಾರವನ್ನು ಮುಟ್ಟಿದೊಡನೆ ಅವಳು ಯಾವ ರೂಪವನ್ನು ಧರಿಸುವಳು ಎಂಬ ಒಂದು ಸಂಗತಿಯನ್ನು ಮಾತ್ರ ಹರಿಕಮತನಿಗೆ ಖಂಡಿತವಾಗಿ ಹೇಳಲು ಸಾಧ್ಯವಿಲ್ಲ.

*

ಇದೇ ರೀತಿಯಲ್ಲಿ ಹರಿಕಮತನು ತಾನು ಬಿಡಾರವನ್ನು ಮುಟ್ಟಿದೊಡನೆ ತನ್ನ ಸಂಸಾರದ ದಿನವಹಿಯ ಚಕ್ರವು ಹೇಗೆ ಹೇಗೆ ತಿರುಗುವುದೆಂದು ಮೊದಲೇ ಊಹಿಸಿಕೊಂಡು, ಅದನ್ನೇ ತನ್ನ ಮನಸ್ಸಿನೊಳಗೆ ತಿರುಗಿಸುತ್ತಾ ಮೆಲ್ಲಮೆಲ್ಲನೆ ತನ್ನ ಬಿಡಾರಕ್ಕಾಗಿ ಸರಿದುಹೋದನು. ಆದರೆ ಯಾವನೊಬ್ಬನು ಒಂದು ತಾಣಕ್ಕೆಂದು ಹೊರಟು ಆಮೇಲೆ ಎಷ್ಟೇ ಮೆಲ್ಲಮೆಲ್ಲನೆ ಹೋದರೂ ಆ ತಾಣವನ್ನು ಮುಟ್ಟಲೇ ಬೇಕಲ್ಲವೇ? ಇದರಲ್ಲಿ ಸಂಶಯವಿಲ್ಲ. ಹರಿಕಮತನು ಯಾವ ತಾಣಕ್ಕೆಂದು ಹೊರಟಿದ್ದನೋ ಅದನ್ನು ಮುಟ್ಟಿಯೇಬಿಟ್ಟನು. ರುಕ್ಮಿಣಿಯು ಬಾಗಿಲ ಬಳಿಯಲ್ಲಿ ಎಲೆ ಅಡಿಕೆಯನ್ನು ಹಾಕಿ, ‘ಬಂದಿರೇ?’ ಎಂದು ಹೇಳುವುದನ್ನು ಕೇಳಲಿಕ್ಕೆ ಅವನ ಕಿವಿಗಳು ತವಕಗೊಂಡವು. ‘ಹೌದು’ ಎಂದು ಉಚ್ಚರಿಸಲಿಕ್ಕೆ, ಅವನ ತುಟಿಗಳು ಬಿಚ್ಚತೊಡಗಿದವು. ಅವನ ಕಾಲುಗಳು ಅಷ್ಟರೊಳಗೆ ಅವನನ್ನು ಹೊತ್ತುಕೊಂಡು ಅವನನ್ನು ಜಗಲಿಯ ಮೇಲೆ ತಂದುಬಿಟ್ಟವು… ಆದರೆ… ಆದರೆ… ಇದೇನು? ‘ಬಂದಿರೆ?’ ಎಂದು ದಿನವೂ ಕೇಳಿಬರುವ ಸ್ವರವೆಲ್ಲಿ? ಅವನ ಕಿವಿಗಳು ಫಕ್ಕನೆ ಕಿವುಡಾಗಿ ಹೋದುವೇ?… ರುಕ್ಮಿಣಿ ಎಲ್ಲಿ?… ಅವನ ಕಣ್ಣುಗಳು ಕೂಡ… ಇಲ್ಲ, ಅವನ ಕಣ್ಣುಗಳು ಸರಿಯಾಗಿದ್ದವು. ಕಿವಿಗಳೂ ನೆಟ್ಟಗಿದ್ದವು… ‘ಬಂದಿರೆ?’ ಎಂದು ಕೇಳುವ ರುಕ್ಮಿಣಿಯ ಸ್ವರವೂ ಮಾತ್ರ ಇಲ್ಲ! ಇದೇನು, ರುಕ್ಮಿಣಿಯೂ ಬಾಗಿಲ ಬಳಿಯಲ್ಲಿ ಇರಲಿಲ್ಲ!

ಬಾಗಿಲಿಗೆ ಬೀಗ ಹಾಕಿದ್ದಿತು.

ಹರಿಕಮತನಿಗೆ ತಲೆ ತಿರುಗಲಾರಂಭಿಸಿತು. ಅವನ ಹುರುಳಿಲ್ಲದ ಸಂಸಾರದ ದಿನವಹಿಯ ಚಕ್ರಕ್ಕೆ ಎಲ್ಲಿಯೋ ಒಂದು ಕಡೆ ಬಿರಿ ಕಟ್ಟಿದಂತಾಯಿತು. ಅವನು ಅನೇಕ ಕಾಲದಿಂದ ಇಚ್ಛಿಸಿದ್ದ ವಿವಿಧತೆಯು ಅವನ ಜೀವನದಲ್ಲಿ ಕಳೆಯನ್ನು ತುಂಬಿಸಲಾರಂಭಿಸಿತು. ಅನೇಕ ಕಾಲದಿಂದ ಅವನು ಹಂಬಲಿಸುತ್ತಿದ್ದ ಮಸಾಲೆಯ ಖಾರವು ಅವನ ತಲೆಗೇರಹತ್ತಿತು.

ಒಂದು ವಿಚಿತ್ರ ರೀತಿಯ ಆಹ್ಲಾದದಿಂದ ಅವನು ನೆರೆಮನೆಗೆ ಓಡಿಹೋದನು. ಕಂಡ ಸಂಗತಿಯನ್ನು ತವಕದಿಂದ ಹೇಳಿದನು. ನೆರೆಮನೆಯವರು ಅವನ ಬಿಡಾರದ ಬೀಗದ ಕೈಯನ್ನು ಕೊಟ್ಟರು. ‘ರುಕ್ಮಿಣಿಯು ಎಲ್ಲಿ ಹೋಗಿರುತ್ತಾಳೋ ಗೊತ್ತಿಲ್ಲ. ಅವಳು ಬಹಳ ಅವಸರದಲ್ಲಿದ್ದಳು. ಅವಳು ಮಧ್ಯಾಹ್ನದ ಮೇಲೆ 2 ಗಂಟೆಗೇ ಹೋಗಿದ್ದಾಳೆ. ಅವಳ ಅಣ್ಣನು ಅವಳನ್ನು ಕರಕೊಂಡು ಹೋಗಲಿಕ್ಕೆ ಬಂದಿದ್ದನು. ಬಿಡಾರದ ಬೀಗದ ಕೈಯನ್ನು ಮಾತ್ರ ನಮ್ಮ ಹತ್ತಿರ ಕೊಟ್ಟಳು. ಮತ್ತೇನೂ ನಮಗೆ ಗೊತ್ತಿಲ್ಲ’ವೆಂದು ನೆರೆಮನೆಯವರು ತಿಳಿಸಿದರು.

ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’

ಬೀಗದ ಕೈಯನ್ನು ತೆಗೆದುಕೊಂಡು ಹರಿಕಮತನು ತನ್ನ ಬಿಡಾರಕ್ಕೆ ಹೋದನು. ಬಿಡಾರದ ಬೀಗವನ್ನು ತೆಗೆದನು. ಬಾಗಿಲನ್ನು ತೆರೆದು ಒಳಕ್ಕೆ ಹೋದನು. ಸಂಜೆಯ ಹೊತ್ತು ಮೀರಿದ್ದುದರಿಂದ ಒಳಗೆ ಕತ್ತಲಾಗಿತ್ತು. ದೀಪವನ್ನು ಹುಡುಕಿ ದೀಪ ಹಚ್ಚಿದನು.

ಹರಿಕಮತನ ಮನಸ್ಸಿನಲ್ಲಿ ವಿಧವಿಧವಾದ ಆಲೋಚನೆಗಳೂ ಊಹೆಗಳೂ ನುಸುಳಿಕೊಂಡುವು. ಅವನ ಹೃದಯದಲ್ಲಿ ಒಂದು ನವೀನ ರೀತಿಯ ವೇದನೆಯು ವ್ಯಾಪಿಸಿಕೊಂಡಿತು. ಕೋಣೆಯೊಳಗೆ ಸುತ್ತುಮುತ್ತಲೂ ನೋಡಿದನು. ಪ್ರತಿಯೊಂದೆಡೆಯಲ್ಲಿಯೂ ಅವಸರದ ಕುರುಹುಗಳು ಅವನ ಕಣ್ಣುಗಳನ್ನು ಕುಕ್ಕಿದುವು. ರುಕ್ಮಿಣಿಯು ಉಟ್ಟುಕೊಂಡ ಸೀರೆಯು ನೆಲದಲ್ಲಿ ಬಿಟ್ಟ ಹಾಗೆಯೆ ಒಂದು ಕಡೆಯಿತ್ತು. ಅವಳು ತೊಟ್ಟಿದ್ದ ರವಕೆಯು ನೆಲದ ಮೇಲೆ ಇನ್ನೊಂದು ಕಡೆಯಲ್ಲಿ ಬಿದ್ದಿತ್ತು. ಗಂಡನ ಪತಿತ್ವದ ಕಣ್ಣುಗಳಿಗೆ ಆ ರವಕೆಯು ರುಕ್ಮಿಣಿಯ ಮೈಯ ಆಕಾರವನ್ನು ಘಂಟಾಘೋಷವಾಗಿ ಇನ್ನೂ ಪ್ರಕಟಗೊಳಿಸುತ್ತಿತ್ತು. ವೀಳ್ಯದೆಲೆ ಹರಿವಾಣವು ಮತ್ತೊಂದೆಡೆ ಮಗುಚಿ ಬಿದ್ದಿತ್ತು. ಇದಲ್ಲದೆ ಅವಳ ಅನೇಕಾನೇಕ ವಸ್ತುಗಳೂ ನೆಲದಲ್ಲಿ ಬಿದ್ದುಕೊಂಡಿದ್ದುವು. ನೆಲದ ಮಧ್ಯದಲ್ಲಿ ಒಂದು ಕಾಗದವೂ ಬಿದ್ದಿತ್ತು. ಅವನು ಅದನ್ನು ತವಕದಿಂದ ಹೆಕ್ಕಿ ತೆಗೆದು ದೀಪದ ಬಳಿಗೆ ಹೋದನು. ರುಕ್ಕಿಣಿಯು ಅವಸರದಿಂದ ಬರೆದ ಕಾಗದದಲ್ಲಿ ಹೀಗಿತ್ತು:-

‘ಆಂಮನಿಗೆ ಮೈಯಲ್ಲಿ ಯೇನು ಕುಡುವದಿಲ್ಲವಂತೆ. ಅಂಣಯ್ಯನವರು ನಂನನು ಕರಕೊಂಡು ಹೋಗಲಿಕ್ಕೆ ಗಾಡಿ ಮಾಡಿಕೊಂಡು ಬಂದಿರುತ್ತಾರೆ. ನಾಂನು ಇಗಲೇ ಅವರೊಂದಿಗೆ ಪದವಿಗೆ ಅಂಮನ ಮನೆಗೆ ಹೊಗ್ತೆನೆ. ಅಮ್ಮ ಕ್ಲೆಮದಲ್ಲಿದರೆ ನಾನು ನಾಳೆ ಬರತ್ತೆನೆ.

-ರುಕ್ನಿಣಿ

ರಾತ್ರಿ ಉಟಕ್ಕೆ ಬೆಳಿಗೆ ಉಳಿದ ಅಂನವುಂಟು. ಮೆಲೊಗರವು ಸ್ವಲ್ಪವುಂಟು, ಬೇಕಾದರೆ ನೆರೆಮನೆಯಿಂದ ಸ್ವಲ್ಪ ತರಿಸಿರಿ, ವಿಸೇಶವೆನೂ ಇಲ್ಲ.’

ಹರಿಕಮತನು ಕಾಗದವನ್ನು ಒಮ್ಮೆ ಓದಿದನು. ಇನ್ನೊಮ್ಮೆ ಓದಿದನು. ಮತ್ತೊಮ್ಮೆ ಓದಿದನು. ಅವನ ದಾಂಪತ್ಯ ಸಂಸಾರದ ಅದುವರೆಗಿನ 2,190 ದಿನಗಳಲ್ಲಿಯೂ ರುಕ್ಮಿಣಿಯು ಬರೆದ ಕಾಗದವನ್ನು ಅವನು ಓದಿದುದು ಇದೇ ಮೊದಲನೇ ಸಾರಿ. ಇದನ್ನು ತಿಳಿದುಕೊಂಡ ಕೂಡಲೇ ಅವನ ಮೈಯಲ್ಲಿ ರೋಮಾಂಚವೆದ್ದಿತು. ರುಕ್ಮಿಣಿಯ ಕಾಗದ! ತನ್ನ ಹಂಡತಿಯ ಕಾಗದ! ‘ಆದರೆ ನಾನು ಪಡುವ ಸಂತೋಷವನ್ನು ಯಾರಿಗೆ ತಿಳಿಸಲಿ? ರುಕ್ಮಿಣಿಯು ಅಲ್ಲಿದ್ದರೆ’ …ಹುಚ್ಚು, ರುಕ್ಮಿಣಿಯು ಅಲ್ಲಿಲ್ಲವೆಂದು ಗೊತ್ತಿಲ್ಲವೇ?

ಅವನ ಸಂಸಾರದ 2,190 ದಿನಗಳಲ್ಲಿ ಅವನು ರುಕ್ಮಿಣಿಯಿಂದ ಅಗಲಿಕೆ ಹೊಂದಿದ್ದುದು ಇದೇ ಮೊದಲನೆಯ ಸಾರಿ. ಸತ್ತುಹೋದ ಎಮ್ಮೆಗೆ ಹಾಲು ಹೆಚ್ಚು. ನಮ್ಮ ಹತ್ತಿರವಿರುವ ಒಂದು ವಸ್ತುವನ್ನು ನಾವು ಕಳಕೊಂಡ ಮೇಲೆಯೇ ಅದರ ಪೂರ್ಣ ಬೆಲೆಯು ನಮಗೆ ತಿಳಿದು ಬರುವುದು. ಇದರ ಪೂರ್ಣಾನುಭವವು ಹರಿಕಮತನಿಗೆ ಈಗಾಗಲಾರಂಭಿಸಿತು. ರುಕ್ಮಿಣಿಯು ಹರಿಕಮತನಿಗೆ ಅವನು ಉಸಿರಾಡುವ ಗಾಳಿಯಂತಿದ್ದಳು. ಲಕ್ಷ್ಯಕ್ಕೆ ತಂದುಕೊಳ್ಳುವ ವಸ್ತುವಲ್ಲವಾದರೂ ಅವಶ್ಯಕವಾದ ವಸ್ತುವಿನಂತಿದ್ದಳು. ರುಕ್ಮಿಣಿಯ ಅವಶ್ಯಕತೆಯು ಅವನಿಗೆ ಆಗ ತಾನೆ ಹಟಾತ್ತಾಗಿ ತಿಳಿದುಬಂತು.

ಇದನ್ನು ಓದಿದ್ದೀರಾ?: ಕುಲಕರ್ಣಿ ಶ್ರೀನಿವಾಸರ ಕತೆ | ಹೊಸಬಾಯಿ

ಹರಿಕಮತನು ಅಲ್ಲಿಯೇ ಕುಳಿತುಬಿಟ್ಟನು. ಬೀಡಿ ಸೇದುವುದಕ್ಕೆಂದು ಬೀಡಿಯೊಂದನ್ನು ತನ್ನ ಕಿಸೆಯೊಳಗಿಂದ ತೆಗೆದನು. ಆದರೆ ಅದನ್ನು ಹಚ್ಚಲಿಕ್ಕೆ ಕೈ ಬಾರದೆ ಹೋಯಿತು. ತನ್ನ ಮುಂದೆಯೇ ನೋಡುತ್ತ ಕಲ್ಲು ಪ್ರತಿಮೆಯಂತೆ ಕೂತುಕೊಂಡನು. ಕೋಣೆಯಲ್ಲಿ ಬೆಳಕಿದ್ದರೂ ಅವನ ಹೃದಯದಲ್ಲಿ ಅಂಧಕಾರವು ವ್ಯಾಪಿಸಿಕೊಂಡಿತು. ಕೋಣೆಯೊಳಗಿದ್ದ ಪ್ರತಿಯೊಂದು ವಸ್ತುವು ‘ರುಕ್ಮಿಣಿ ಎಲ್ಲಿ?’ ಎಂದು ಕಠೋರಸ್ವರದಿಂದ ಅವನನ್ನು ವಿಚಾರಿಸುವಂತೆ ಅವನಿಗೆ ತೋರಿಬಂತು. ಹೊರಗಿನಿಂದ ‘ಸರಿಗ್ಗ ಗಗ್ಗನಿ ಪಪ್ಪಮ ಮಮ್ಮಸ’ ಎಂಬ ಉದ್ವೇಗದ ಸ್ವರವು ಕೇಳಲಾರಂಭಿಸಿತು. ಎಡಗಡೆಯಿಂದ ಕೊಳಲಿನ ಆರ್ದ್ರ ಧ್ವನಿಯು ಮೆಲ್ಲಮೆಲ್ಲನೆ ಹೊರಟಿತು. ಹಿಂದುಗಡೆಯಿರುವ ಕೃಷ್ಣಪ್ಪನೂ ತನ್ನ ವಿಲಕ್ಷಣವಾದ ಕೂಗುಗಳಿಂದ ಸುತ್ತುಮುತ್ತಲಿನ ವಾಯುಮಂಡಲವನ್ನು ಅಲ್ಲೋಲ ಕಲ್ಲೋಲ ಮಾಡಲಾರಂಭಿಸಿದನು. ಸುತ್ತಲೂ ಸರ್ವಜಗತ್ತು ಸಂಗೀತಮಯವಾಯಿತು. ಈಗ ಹರಿಕಮತನಿಗೆ ಕ್ಲಬ್ಬಿಗೆ ಹೋಗಲು ಯಾವ ಆತಂಕವಿರುವುದು? ತಟಕ್ಕನೇ ಎದ್ದು ಅವನೇಕೆ ಈಗ ಕ್ಲಬ್ಬಿಗೆ ಹೋಗಬಾರದು? ಅವನು ಹಾಗೆ ಹೋದರೆ ಅವನನ್ನು ಈಗ ಕೇಳುವವರು ಯಾರು? ಇಡೀ ರಾತ್ರಿಯು ಈಗ ಅವನದೇ ಆಗಿರುವುದು. 9 ಗಂಟೆ ಅಲ್ಲ, 10 ಗಂಟೆಯವರೆಗಾದರೂ ಅವನು ಕ್ಲಬ್ಬಿನಲ್ಲಿ ಬಿಝಿಕ್ ಆಡಲಿಕ್ಕೆ ಕೂತುಕೊಂಡರೆ ಅವನನ್ನು ಕೇಳುವವರು ಯಾರು?

ಆದರೆ ಹರಿಕಮತನು ಕೂತಲ್ಲಿಂದ ಕದಲಲಿಲ್ಲ. ಸುತ್ತಮುತ್ತಲಿಂದೆದ್ದ ಸಂಗೀತದ ಆರ್ಭಟಕ್ಕೂ ಅವನು ಕದಲಲಿಲ್ಲ. ಅವನ ಕಿವಿಗಳು ಅತ್ತಿತ್ತಣ ಸದ್ದುಗಳಿಗೆಲ್ಲ ಕಿವುಡಾಗಿದ್ದುವು. ರುಕ್ಮಿಣಿಯ ಸ್ವರದ ಗಾಯನವು ಮಾತ್ರವೇ ಅವನ ಕಿವಿಗಳಲ್ಲಿ ತುಂಬಿಹೋಗಿತ್ತು. ರುಕ್ಮಿಣಿಯ ರೂಪಲಾವಣ್ಯವು ಮಾತ್ರವೇ ಅವನ ಕಣ್ಣುಗಳಲ್ಲಿ ನಲಿದಾಡುತ್ತಿತ್ತು. ‘ಆಹಾ ನಾನು ಎಂತಹ ಮದಾಂಧನು! ರುಕ್ಮಿಣಿಯು ನನಗೆ ನಿಜವಾಗಿಯೂ ಎಷ್ಟು ಪ್ರಿಯಳಾಗಿದ್ದಳು! ಎಷ್ಟು ಹತ್ತಿರದವಳು! ಅಂಥವಳನ್ನು ನಾನು ಇಷ್ಟರವರೆಗೆ ಲಕ್ಷಿಸಲಿಲ್ಲವಲ್ಲ! ಅಹೋರಾತ್ರಿ ಎಂಬಂತೆ ಅವಳು ನನಗಾಗಿ ಗೇದು ನನ್ನ ಸುಖವೇ ತನ್ನ ಸುಖವೆಂದು ತಿಳಿದುಕೊಂಡಿದ್ದರೂ, ನಾನು ಮಾತ್ರ ಅವಳ ಸುಖವನ್ನು ಒಂದು ಕ್ಷಣಮಾತ್ರಕ್ಕೆ ಕೂಡ ಎಣಿಸಲಿಲ್ಲವಲ್ಲ! ನಾನು ಪ್ರತಿ ಸಂಜೆಗೆ ಕ್ಲಬ್ಬಿಗೆ ಹೋಗಿ ಸಮಯವನ್ನು ಆನಂದದಿಂದ ಕಳೆಯುತ್ತಿದ್ದಾಗ್ಗೆ ಅವಳು ನನಗಾಗಿ ಕಾದು ಕಾದು ಎಷ್ಟು ಬೇಸರ ಪಡುತ್ತಿದ್ದಳೋ, ನನ್ನ ಮಾತುಕಥೆಗಳಿಗಾಗಿ ಎಷ್ಟು ಆತುರಪಡುತ್ತಿದ್ದಳೋ, ತನ್ನ ಏಕಾಕಿಯಾದ ಜೀವನಕ್ಕಾಗಿ ಎಷ್ಟು ದುಃಖಿಸುತ್ತಿದ್ದಳೋ, ದೇವರೇ ಬಲ್ಲ. ನಾನು ಪಾಷಾಣಹೃದಯನು, ಕಠಿಣಮನಸ್ಕನು, ಹೆಂಡತಿಯನ್ನು ಬೇಸರದಿಂದ ಕೊಲ್ಲುವಾತನು, ಬಹಳ ಪಾಪಿಷ್ಠನು, ಹುಚ್ಚನು… ಇಲ್ಲ, ಇನ್ನು ಹೀಗೆ ಮಾಡುವುದಿಲ್ಲ. ಇನ್ನುಮುಂದೆ ಕ್ಲಬ್ಬಿಗೆ ಹೋಗುವುದಿಲ್ಲ; ನಾಳೆಯೇ ಕ್ಲಬ್ಬಿನ ಮೆಂಬರಿಕೆಗೆ ರಾಜೀನಾಮೆಯನ್ನು ಕೊಡುವೆನು. ಬಿಝಿಕ್ ಆಟಕ್ಕೆ ತರ್ಪಣೆಯನ್ನು ಬಿಡುವೆನು. ಇನ್ನು ಮುಂದೆ ನನ್ನ ಸಂಜೆಯ ಸಮಯವನ್ನು ನನ್ನ ಪ್ರಿಯಳಾದ, ನನ್ನ ಹೆಂಡತಿಯಾದ, ರುಕ್ಮಿಣಿಯ ಸಹವಾಸದಲ್ಲಿಯೇ ಕಳೆಯುವೆನು, ಅವಳ ಸುಖವೇ ನನ್ನ ಸುಖವೆಂದು ಭಾವಿಸುವೆನು. ಅವಳನ್ನು ನನ್ನ ಮಾತುಕಥೆಗಳಿಂದ ಸಂತೋಷಗೊಳಿಸುವೆನು. ಸಿನೆಮಾ ನಾಟಕಾದಿಗಳಿಗೆ ಇನ್ನು ಮುಂದೆ ಅವಳನ್ನು ಕರಕೊಂಡು ಹೋಗುವೆನು, ಗೃಹಕೃತ್ಯದಲ್ಲಿ ಇನ್ನು ಮುಂದೆ ಅವಳಿಗೆ ನಾನೂ ಸಹಾಯವನ್ನಿತ್ತು ಅವಳ ಮೇಲಿರುವ ಕೆಲಸದ ಭಾರವನ್ನು ಹಗುರ ಮಾಡುವೆನು… ಇದೇ ರೀತಿಯಲ್ಲಿ ರಾಮನು ತಾನು ಕಳಕೊಂಡ ಸೀತೆಗಾಗಿ ಹಂಬಲಿಸಿದಂತೆ ಹರಿಕಮತನು ರುಕ್ಮಿಣಿಗಾಗಿ ಹಂಬಲಿಸಲಾರಂಭಿಸಿದನು.

ಇದನ್ನು ಓದಿದ್ದೀರಾ?: ಎ.ಆರ್. ಕೃಷ್ಣಶಾಸ್ತ್ರಿ ಅವರ ಕತೆ | ಬಂಗಲಿಯ ವಾಸ

ಸ್ವಲ್ಪ ಸಮಯದಲ್ಲಿಯೇ ಫಕ್ಕನೆ ಎದ್ದು ನಿಂತನು. ತನ್ನ ಪ್ರತಿಜ್ಞೆಗಳನ್ನು ಆಚರಣೆಗೆ ತರಲಿಕ್ಕೆ ಕೂಡಲೇ ಸೊಂಟ ಕಟ್ಟಿದನು. ರುಕ್ಮಿಣಿಯು ಅವಸರದಿಂದ ಅಲ್ಲಲ್ಲಿಯೇ ಬಿಟ್ಟಿದ್ದ ವಸ್ತ್ರಗಳನ್ನು ಸರಿಯಾಗಿಡಲಿಕ್ಕೆ ಹೋದನು. ನೆಲದ ಮೇಲೆಯೇ ಅವಳು ಅವಸರದಲ್ಲಿ ಬಿಟ್ಟುಹೋದ ಸೀರೆಯನ್ನು ನೆರಿಗೆ ಹಾಕಿಡಲಿಕ್ಕೆ ಕೈಯಲ್ಲಿ ತೆಗೆದನು, ಕೂಡಲೇ ಅವನ ಮೈಯಲ್ಲೆಲ್ಲ ರೋಮಾಂಚನವೆದ್ದಿತು. ಅವಳು ಅಲ್ಲಿಯೇ ಬಿಟ್ಟುಹೋದ ಅವಳ ರವಕೆಯನ್ನು ಕೈಯಲ್ಲಿ ಹಿಡಿದುಕೊಂಡನು. ಅವನ ಕಣ್ಣುಗಳಲ್ಲಿ ನೀರು ಬರಲಾರಂಭಿಸಿತು. ಹೌದು ಹರಿಕಮತನು ತಲೆಯನ್ನು ಬಗ್ಗಿಸಿ ಅಳಲಾರಂಭಿಸಿದನು. ರವಕೆಯು ರುಕ್ಮಿಣಿಯ ಮೈಯ ಆಕಾರವನ್ನು ಇನ್ನೂ ವ್ಯಕ್ತಗೊಳಿಸುತ್ತಿತ್ತು ಎಂದು ನಾನು ಮೊದಲೇ ಹೇಳಿದ್ದೇನಲ್ಲವೇ? ಇನ್ನು ಹರಿಕಮತನು ಆ ಕೋಣೆಯ ಏಕಾಂತದಲ್ಲಿ ಏನು ಮಾಡಿದನೆಂದು ನಾನು ಹೇಳುವುದು ವಿಹಿತವಲ್ಲ. ಆದರೆ ನಾನು ಹೀಗೆ ಹೇಳಿದುದರಿಂದಲೇ ನೀವು ಅದನ್ನು ಕೇಳಲಿಕ್ಕೆ ಬಹಳ ಆತುರಪಡುವಿರಿ! ಆದುದರಿಂದ ಹೇಳಿಯೇಬಿಡುವೆನು. ಹರಿಕಮತನು ರುಕ್ಮಿಣಿಯ ಆ ರವಕೆಯನ್ನು ತನ್ನ ಹೃದಯದ ಮೇಲೆ ಬಲವಾಗಿ ಒತ್ತಿಕೊಂಡು ಅನೇಕ ಸಾರಿ ಚುಂಬಿಸಿದನು. ಆ ರವಕೆಯೇ ತನ್ನ ರುಕ್ಮಿಣಿಯೆಂದು ಭ್ರಮಿಸಿ ಅದರೊಂದಿಗೆ ಹುಚ್ಚುಹುಚ್ಚಾಗಿ ಮಾತಾಡಲಿಕ್ಕೆ ತೊಡಗಿದನು- ‘ಪ್ರಿಯೇ, ರುಕ್ಮಿಣಿ, ನಾನು ನಿನಗೆ ಮಹಾಪರಾಧವನ್ನು ಮಾಡಿದೆ! ನಿನ್ನನ್ನು ತೃಣಸಮಾನಳನ್ನಾಗಿ ಎಣಿಸಿದೆ! ಪ್ರಿಯೇ, ನನ್ನನ್ನು ಕ್ಷಮಿಸು! ಒಮ್ಮೆ ನೀನು ನಿನ್ನ ತೌರು ಮನೆಯಿಂದ ಬಾ! ಇನ್ನು ನಿನ್ನ ಸುಖವೇ ನನ್ನದು!… ವಿವಿಧತೆಯೇ ನನ್ನ ಜೀವನಕ್ಕೆ ಬೇಕಾದ ಮಸಾಲೆಯೆಂದು ಭ್ರಾಂತನಾಗಿ ನಾನು ವಿವಿಧತೆಗಾಗಿಯೇ ಈತನಕ ಹಂಬಲಿಸಿದೆನು! ನಾನು ಹುಚ್ಚನು! ನನ್ನ ಜೀವನಕ್ಕೆ ಬೇಕಾದ ಮಸಾಲೆಯು ವಿವಿಧತೆಯಲ್ಲ, ನೀನೇ ಆಗಿರುವಿ! ಪ್ರಿಯೇ, ರುಕ್ಕಿಣೀ, ಬಾ! ಒಮ್ಮೆ ಬಾ!…’

ಹರಿಕಮತನ ಬಿಡಾರದ ಮುಂದೆ ಒಂದು ಗಾಡಿಯು ಬಂದು ನಿಂತಿತು. ಸ್ವಲ್ಪ ಸಮಯದಲ್ಲಿಯೇ ಒಂದು ವ್ಯಕ್ತಿಯು ಹರಿಕಮತನಿರುವ ಕೋಣೆಯೊಳಗೆ ಬಂದು ನಿಂತಿತು. ಹರಿಕಮತನು ತನ್ನ ಹೃದಯಕ್ಕೆ ಒತ್ತಿಕೊಂಡಿದ್ದ ರವಕೆಯನ್ನು ಕೂಡಲೆ ಕೆಳಗೆ ಬೀಳಿಸಿಬಿಟ್ಟನು. ತನ್ನ ಕಣ್ಣುಗಳನ್ನು ಬಿಟ್ಟುಬಿಟ್ಟು ತನ್ನ ಮುಂದೆಯೇ ಬಿರಬಿರನೆ ನೋಡಲಾರಂಭಿಸಿದನು.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

‘ಅಮ್ಮಯ್ಯ! ಹೇಗಾದರೂ ಮಾಡಿ ಹೊತ್ತು ಮೀರುವಷ್ಟರೊಳಗೆ ವಾಪಸು ಮನೆಗೆ ಬಂದೆನು’ ಎಂದು ರುಕ್ಮಿಣಿಯು ಪ್ರಾರಂಭಿಸಿದಳು. ‘ಸುಮ್ಮನೆ ನನ್ನನ್ನು ಕರಕೊಂಡು ಹೋದುದು. ನಾನು ಪದವಿನ ಹತ್ತಿರಕ್ಕೆ ಮುಟ್ಟುವಷ್ಟರೊಳಗೆ ಅಮ್ಮ ಪೂರ್ಣ ಹುಶಾರಾಗಿದ್ದರು. ಏನೋ ತಲೆತಿರುಗಿ ಬಿದ್ದರಂತೆ. ಬಹಳ ಸಮಯದವರೆಗೆ ಮಾತನಾಡಲಿಲ್ಲವಂತೆ. ಅಪ್ಪ ಗಾಬರಿಪಟ್ಟು ಅಣ್ಣನನ್ನು ಇಲ್ಲಿಗೆ ಕಳುಹಿಸಿದುದಂತೆ. ಅಲ್ಲೇ ನಿಲ್ಲಬೇಕೆಂದು ಬಹಳ ವತ್ತಾಯ ಮಾಡಿದರು. ಆದರೆ ನೀವು ಉಪವಾಸದಲ್ಲಿ ಬೀಳುವಿರಿ ಎಂದು ಹೆದರಿ ಬಂದೇಬಿಟ್ಟೆ… ಎಮ್ಮೆಯನ್ನು ಕರೆದಿದ್ದೀರೋ ಇಲ್ಲವೋ?…’

bale masale 01

ಹರಿಕಮತನ ಸಂಸಾರದ ದಿನವಹಿಯ ಚಕ್ರಕ್ಕೆ ಬಿರಿ ಕಟ್ಟಿದ್ದುದು ಫಕ್ಕನೆ ಬಿಚ್ಚಿಹೋಯಿತು. ಅದು ಮೆಲ್ಲಮೆಲ್ಲನೆ ತಿರುಗಲಾರಂಭಿಸಿತು. ಬಿಡಾರದ ಬಲಗಡೆಯಿಂದ ‘ಸರಿಗ್ಗ ಗಗ್ಗನಿ ಪಪ್ಪಮ ಮಮ್ಮಸ’ ಎಂಬ ಆ ಉದ್ವೇಗದ ಸ್ವರವು ಪುನಃ ಕೇಳಲಾರಂಭಿಸಿತು. ಎಡಗಡೆಯ ಬಿಡಾರದಿಂದ ಕೊಳಲು ಕೂಗಲು ಪ್ರಾರಂಭಿಸಿತು. ಹಿಂದುಗಡೆಯಿಂದ ಕೃಷ್ಣಪ್ಪನ ಗಾಯನವು ವಾಯುಮಂಡಲವನ್ನೆಲ್ಲ ಅಲ್ಲೋಲಕಲ್ಲೋಲ ಮಾಡಲಿಕ್ಕೆ ಪ್ರಾರಂಭಿಸಿತು. ಹರಿಕಮತನ ಸಂಸಾರದ ದಿನವಹಿಯ ಚಕ್ರವು ಎಂದಿನಂತೆ ಸರಾಗವಾಗಿ ತಿರುಗಿತು. ಅವನು ತನ್ನ ವೋಚ್‌ನ್ನು ಹೊರಗೆ ತೆಗೆದು ನೋಡಿದನು. 7 ಗಂಟೆಗೆ 10 ಮಿನಿಟುಗಳಿದ್ದವು. ಕೂಡಲೇ ತನ್ನ ಟೊಪ್ಪಿಗೆಯನ್ನೂ ಕೋಟನ್ನೂ ಹಾಕಿಕೊಂಡನು.

‘ಈಗೆಲ್ಲಿ ಹೊರಡೋಣವೋ? ಗಂಟೆ ಏಳೂವರೆ ಆಯಿತು. ಇನ್ನು ಅರ್ಧಗಂಟೆಯೊಳಗೆ ಊಟ ಸಿದ್ಧವಾಗುವುದು. ಒಂದು ದಿನವಾದರೂ ಮನೆಯಲ್ಲಿ ಕೂತುಕೊಳ್ಳಬಾರದೇ?’ ಎಂದು ರುಕ್ಮಿಣಿಯು ಸ್ವಲ್ಪ ತೀಕ್ಷ್ಣತೆಯಿಂದ ಕೇಳಿದಳು.

‘ಇಲ್ಲ, 7 ಗಂಟೆ ಆಗಲಿಲ್ಲ; ಇನ್ನೂ 12 ಮಿನಿಟುಂಟು. ಕ್ಲಬ್ಬಿಗೆ ಹೋಗೋಣವೋ ಎಂದು ಹೊರಟೆ. ಪೇಪರು ನೋಡದೆ ಸುಮಾರು ದಿನಗಳಾದವು. ಇಂದಾದರೂ ನೋಡಬೇಕು’ ಎಂದು ಹೇಳುತ್ತಾ ಹರಿಕಮತನು ಹೊರಗೆ ಹೋಗಿಯೇ ಬಿಟ್ಟನು. ಜಗುಲಿಯ ಮೆಟ್ಟಿಲಿನ ಮೇಲಿಂದ, ‘ಇನ್ನು ಅರ್ಧ ಗಂಟೆಯೊಳಗೆ ಬರುತ್ತೇನೆ’ ಎಂದು ಹೇಳಿ ರುಕ್ಮಿಣಿಯ ಪ್ರತ್ಯುತ್ತರವು ತನ್ನ ಕಿವಿಗೆ ಬೀಳುವ ಮೊದಲೆ ಥಟ್ಟನೆ ಹೋಗಿ ಮಾರ್ಗವನ್ನು ಸೇರಿದನು.

(ಕೃಪೆ: ಮಲ್ಲಿಗೆ ಮಾಸಪತ್ರಿಕೆ. ‘ಹುಚ್ಚು ಬೆಳದಿಂಗಳಿನ ಹೂಬಾಣಗಳು’, ಮನೋಹರ ಗ್ರಂಥಮಾಲೆ, ಧಾರವಾಡ 1938)

ಪ.ರಮಾನಂದ ಬಾಳ್ವೆಯ ಮಸಾಲೆ

ಪ. ರಮಾನಂದರ ‘ಬಾಳ್ವೆಯ ಮಸಾಲೆ’

ಪ. ರಮಾನಂದರ (ಪಡುಕೋಣೆ ರಮಾನಂದರಾಯರು- 1897-1983) ‘ಹುಚ್ಚು ಬೆಳದಿಂಗಳಿನ ಹೂಬಾಣಗಳು'(1938) ಕನ್ನಡ ಸಣ್ಣ ಕತೆಗಳ ಇತಿಹಾಸದಲ್ಲಿಯೇ ಒಂದು ವಿಶಿಷ್ಟವಾದ, ಅಪರೂಪದ ಸಂಕಲನ. ಇದರಲ್ಲಿ ಒಟ್ಟು 13 ಬರಹಗಳಿವೆ. ಅವುಗಳಲ್ಲಿ ಒಂದೆರಡು ಶುದ್ಧ ನಗೆಬರಹಗಳಾದರೆ, ಕೆಲವು ಹಾಸ್ಯಪ್ರಧಾನವಾದ ಕಥೆಗಳು. ಒಂದೆರಡು ಗಂಭೀರವಾದ ಕತೆಗಳೂ ಇವೆ. ಈ ಬರಹಗಳೆಲ್ಲ ಸಂಕಲನ ರೂಪದಲ್ಲಿ ಬರುವುದಕ್ಕೆ ಬಹಳ ವರ್ಷ ಮುಂಚೆಯೇ ರಮಾನಂದರು ಬರೆಯುವುದನ್ನು ನಿಲ್ಲಿಸಿದ್ದಾಗಿಯೂ, ಬಹಳ ಹಿಂದೆಯೇ ಈ ಬರಹಗಳು ಮಂಗಳೂರು ಕಡೆಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದುದಾಗಿಯೂ ಲೇಖಕರ ಮಾತಿನಿಂದ ತಿಳಿದು ಬರುತ್ತದೆ. ಈ ಸಂಕಲನದಲ್ಲಿ ಸೇರದೇ ಹೋಗಿರುವ ಇನ್ನೂ ಹಲವಾರು ಬರಹಗಳು ಪತ್ರಿಕೆಗಳಲ್ಲಿಯೇ ಉಳಿದಿರಬೇಕು. ಅವುಗಳನ್ನು ಹುಡುಕಿ ಸಂಕಲಿಸುವುದು ಅಗತ್ಯವಾಗಿದೆ.

ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು

ಅದೇನಿದ್ದರೂ, 1933ರ ಹೊತ್ತಿಗೆ ಆಗಲೇ ರಮಾನಂದರು ತಮ್ಮ ಬರಹಗಳ ಮೂಲಕ ಓದುಗರ ಹಾಗೂ ವಿಮರ್ಶಕರ ಗಮನವನ್ನು ಸೆಳೆದಿದ್ದರೆಂಬುದು ಮಾತ್ರ ನಿರ್ವಿವಾದ. ಅದೇ ವರ್ಷ ಪ್ರಕಟವಾದ ‘ಕಾಮನ ಬಿಲ್ಲು’ ಹಾಗೂ ‘ನವಿಲುಗರಿ’ಗಳಲ್ಲಿ ಅವರ ಕತೆಗಳಿಗೆ ಪ್ರಾತಿನಿಧ್ಯ ಸಿಕ್ಕಿದೆ. ನಂತರ ಮಾತ್ರ ಯಾವ ಮುಖ್ಯ ಆ್ಯಂಥಾಲಜಿಗಳಲ್ಲೂ ಅವರ ಕತೆಗಳು ಸೇರಿಲ್ಲ. ಕನ್ನಡ ಸಣ್ಣ ಕತೆಗಳ ಸಮೀಕ್ಷೆಗಳಲ್ಲಿ ಒಬ್ಬಿಬ್ಬರು ಅವರ ಹೆಸರನ್ನು ಎತ್ತಿದ್ದಾರೆ. ಆದರೆ ಕುರ್ತಕೋಟಿಯವರೊಬ್ಬರನ್ನು ಬಿಟ್ಟು (‘ಯುಗಧರ್ಮ ಹಾಗೂ ಸಾಹಿತ್ಯದರ್ಶನ’) ಯಾರೂ ಅವರ ಕತೆಗಳ ಬಗ್ಗೆ ವಿಶೇಷವಾದುದನ್ನು ಹೇಳಿಲ್ಲ. ರಮಾನಂದರ ಕತೆಗಳಲ್ಲಿ ನಿರುದ್ದಿಶ್ಯವಾದ ವಿಶುದ್ಧ ಹಾಸ್ಯವೇ ಜೀವಾಳವಾಗಿದೆ. ಅವರ ಕತೆಗಳನ್ನು ‘ಹಾಸ್ಯಪ್ರಧಾನ’ ಎನ್ನುವುದಕ್ಕಿಂತ ಹಾಸ್ಯವೇ ಉದ್ದೇಶವಾಗಿ ಉಳ್ಳವೆಂದು ಕರೆಯುವದೇ ಹೆಚ್ಚು ಸೂಕ್ತವಾದದ್ದು. ಅವರ ಹಾಸ್ಯದಲ್ಲಿ ಸಾಮಾಜಿಕ ವಿಡಂಬನೆ ಇತ್ಯಾದಿ ಯಾವುದೂ ಇಲ್ಲ. ವ್ಯಂಗ್ಯ, ಕಟಕಿ ಮೊದಲಾದ ಹರಿತವಾದ ಆಯುಧಗಳೂ ಅವರಲ್ಲಿಲ್ಲ. ಕೆಲವು ವಿಕ್ಷಿಪ್ತ ಪಾತ್ರಗಳ ಮೂಲಕ ಹಾಗೂ ಕೆಲವು ವಿಲಕ್ಷಣವಾದ ಸನ್ನಿವೇಶಗಳ ಮೂಲಕ ಒಂದು ಬಗೆಯ ಹುಚ್ಚು ನಗೆಯನ್ನು ಹುಟ್ಟಿಸುವುದು ಅವರ ವೈಶಿಷ್ಟ್ಯವಾಗಿದೆ. ‘ನನ್ನ ಭಾವ’, ‘ಅಂಕು ಡೊಂಕು ಸಂಕಪಾಲ’ ಈ ಮಾದರಿಯ ಉತ್ತಮ ಉದಾಹರಣೆಗಳಾಗಿವೆ. ಈ ಕತೆಗಳಲ್ಲಿ ಹಾಸ್ಯದ ಹಿಂದಿನ ಕಟುಸತ್ಯ, ಕರುಣ, ಬದುಕಿನ ವ್ಯಂಗ್ಯ ಇತ್ಯಾದಿ ಅರ್ಥವಿಸ್ತಾರಗಳು ಕಾಣುವುದಿಲ್ಲವೆಂಬುದು ನಿಜ. ಆದರೆ ಈ ಹಾಸ್ಯಕ್ಕೆ ತನ್ನದೇ ಆದ ಆಕರ್ಷಕ ಚೆಲುವೂ ಇದೆ. ಇನ್ನು ಅವರ ಗಂಭೀರ ಕತೆಗಳಲ್ಲಿ ವರ್ಗಸಂಘರ್ಷದ ಹಿನ್ನೆಲೆಯುಳ್ಳ ‘ವಿಮೋಚನೆ’ ವಿಶೇಷ ಉಲ್ಲೇಖಕ್ಕೆ ಅರ್ಹವಾಗಿದೆ.

‘ಬಾಳ್ವೆಯ ಮಸಾಲೆ’ಯೂ ರಮಾನಂದರ ವಿಶಿಷ್ಟ ಹಾಸ್ಯದ ಕತೆಗಳಲ್ಲಿ ಒಂದಾಗಿದೆ. ಈ ಕತೆಯ ವಸ್ತು ಸಾಮಾನ್ಯರ ಜೀವನದ ವೈವಿಧ್ಯರಹಿತವಾದ ದೈನಂದಿಕಗಳ ಬೇಸರ ಹಾಗೂ ಅದರಿಂದ ತಪ್ಪಿಸಿಕೊಳ್ಳಬೇಕೆನ್ನುವ ಮನುಷ್ಯನ ವ್ಯರ್ಥ ಪ್ರಯತ್ನ ಎನ್ನಬಹುದು. ಪ್ರತ್ಯೇಕವಾಗಿ ನೋಡಿದಾಗ ಇದೊಂದು ಗಂಭೀರವಾದ ದುರಂತ ಕಥೆಯ ವಸ್ತುವಾಗಿ ಕಾಣುತ್ತದೆ- ಅನಂತಮೂರ್ತಿಯವರ ‘ಅವಸ್ಥೆ’ಯಲ್ಲಿಯ ಹಾಗೆ. ಆದರೆ ರಮಾನಂದರ ಕೈಯಲ್ಲಿ ಇದೊಂದು ಹಾಸ್ಯಕಥೆಯಾಗಿ ಮಾರ್ಪಟ್ಟಿದೆ.

ಇದನ್ನು ಓದಿದ್ದೀರಾ?: ಕಡೆಂಗೋಡ್ಲು ಶಂಕರಭಟ್ಟ ಅವರ ಕತೆ | ಅದ್ದಿಟ್ಟು

ಮುಖ್ಯವಾಗಿ ಕತೆಯ ನಿರೂಪಣೆಯ ಧಾಟಿಯೇ ಹಾಸ್ಯಪೂರ್ಣವಾಗಿದೆ. ಹರಿಕಮತನ ವೈವಿಧ್ಯವಿಲ್ಲದ ದಿನನಿತ್ಯದ ಬದುಕಿನ ವಿವರಗಳು ಈ ಧಾಟಿಗೆ ಪೂರಕವಾಗಿ ಬಂದಿವೆ. ‘ತನ್ನ ಹೆಂಡತಿ ಕುರೂಪಿ, ಪರರ ಹೆಂಡತಿ ಸುರೂಪಿ’ ಎಂದು ಹರಿಕಮತನು ಬೇರೆಯವರ ಬಗ್ಗೆ ಹೇಳುವ ಮಾತು ಅವನ ಹೆಂಡತಿಯ ವಿಷಯದಲ್ಲಿ ಸತ್ಯವೇ ಆಗಿರುವುದು, ಹರಿಕಮತ-ರುಕ್ಮಿಣಿಯರ ಸಾಯಂಕಾಲದ ಸಂಭಾಷಣೆ, ‘ಸರಿಗ್ಗ ಗಗ್ಗನಿ ಪಪ್ಪಮ ಮಮ್ಮಸ’ ಸಂಗೀತ ಪಾಠ -ಇವೆಲ್ಲ ಇಂಥ ಹಾಸ್ಯಮಯವಾದ ವಿವರಗಳಾಗಿವೆ. ಈ ವೈವಿಧ್ಯವಿಲ್ಲದ ದೈನಂದಿಕಗಳ ನಡುವೆ ಹರಿಕಮತ ವಿಷಣ್ಣನಾಗಿದ್ದರೂ, ಇದರಿಂದ ಪಾರಾಗಿ ಕ್ಲಬ್ಬಿಗೆ ಹೋಗಬೇಕೆನ್ನುವ ಅವನ ಬಯಕೆಯೂ ಒಂದು ಚಟವಾಗಿ ಇನ್ನೊಂದು ದೈನಂದಿನ ಕ್ರಿಯೆಯಾಗಿ ಅವನ ವೈವಿಧ್ಯರಹಿತ ಬದುಕಿಗೆ ಸೇರಿಕೊಳ್ಳುತ್ತದೆ- ಅವನಿಗೇ ಅರಿವಿಲ್ಲದಂತೆ.

ಅವನು ಮನೆಗೆ ಬಂದಾಗ ಆಕಸ್ಮಿಕವಾಗಿ ಹೆಂಡತಿ ಮನೆಯಲ್ಲಿ ಇಲ್ಲದ್ದು ಅಷ್ಟೇ ಆಕಸ್ಮಿಕವಾಗಿ ಅವನ ದೈನಂದಿಕಗಳಲ್ಲಿ ತೀವ್ರವಾದ ಬದಲಾವಣೆಯನ್ನು ತಂದು ಅವನಲ್ಲಿ ಹೆಂಡತಿಯ ಬಗ್ಗೆ, ತನ್ನ ಬದುಕಿನ ಬಗ್ಗೆ ತೀರ ಬೇರೆಯ ರೀತಿಯಲ್ಲಿ ಯೋಚಿಸಲು ಹಚ್ಚುತ್ತದೆ. ಆದರೆ ಈ ಪುನರಾಲೋಚನೆ ಗಂಭೀರವಾದದ್ದಲ್ಲ, ಆಳವಾದದ್ದಲ್ಲ ಎಂಬುದನ್ನು ಕತೆಯ ಉತ್ತೇಕ್ಷೆಯ, ಹಾಸ್ಯದ ಧಾಟಿ ನೆನಪಿಸುತ್ತಲೇ ಬರುತ್ತದೆ. ರುಕ್ಮಿಣಿಯ ಕಾಗದದ ಭಾಷೆ, ಮರುದಿನವೇ ಕ್ಲಬ್ಬಿನ ಮೆಂಬರಿಕೆಗೆ ರಾಜೀನಾಮೆ ಕೊಡುವೆನೆಂಬ ಹರಿಕಮತನ ಪ್ರತಿಜ್ಞೆಯ ಅಣಕು ಗಾಂಭೀರ್ಯ, ಸೀರೆ-ರವಿಕೆಗಳನ್ನು ಅಪ್ಪಿಕೊಂಡು ಅವನು ಹೇಳುವ ಸ್ವಗತದ ನಾಟಕೀಯತೆ- ಇತ್ಯಾದಿಗಳು ಕತೆಯ ತೋರಿಕೆಯ ಗಾಂಭೀರ್ಯವನ್ನು ಒಳಗಿನಿಂದಲೇ ವಿರೋಧಿಸುತ್ತವೆ.

ಅಂತೂ ಹರಿಕಮತನಿಗೆ ಹೆಂಡತಿಯ ಅನುಪಸ್ಥಿತಿ ಅವರ ದೈನಂದಿಕಗಳಲ್ಲಿ ಬದಲಾವಣೆಯನ್ನು ತರುವ ಒಂದು ಹೊಸ ಅವಕಾಶವಾಗಿ ಬರುತ್ತದೆ. ಆದರೆ ಅದಕ್ಕೆ ಆಸ್ಪದವನ್ನೇ ಕೊಡದಂತೆ ಅಷ್ಟೇ ಆಕಸ್ಮಿಕವಾಗಿ ಅದೇ ಹೊತ್ತಿಗೆ ತಿರುಗಿ ಬರುವ ರುಕ್ಮಿಣಿ ಅವನನ್ನು ಮತ್ತೆ ಅದೇ ದೈನಂದಿಕಗಳ ಚಕ್ರದಲ್ಲಿ ಎಸೆಯುತ್ತಾಳೆ. ತನ್ನ ಪುನರಾಲೋಚನೆ, ಪ್ರತಿಜ್ಞೆಗಳನ್ನೆಲ್ಲ ತಕ್ಷಣ ಮರೆತು ಹರಿಕಮತ ಕ್ಲಬ್ಬಿಗೆ ಹೊರಡಲು ತಯಾರಾಗುತ್ತಾನೆ. ಮತ್ತೆ ಅದೇ ದೈನಂದಿನ ಸಂಭಾಷಣೆಯ ಪುನರಾವೃತ್ತಿಯಲ್ಲಿ ಕತೆ ಮುಗಿಯುತ್ತದೆ.

ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?

ಕೊನೆಯ ಆಕಸ್ಮಿಕ ತಿರುವಿನಲ್ಲಿ ಕತೆ ಮತ್ತೆ ಹಾಸ್ಯಕಥೆಯಾಗಿ ತಿರುಗಿ, ಹರಿಕಮತನು ತನ್ನ ದೈನಂದಿಕಗಳಿಂದ ತಪ್ಪಿಸಿಕೊಳ್ಳಲು ಮಾಡಿದ ಒಂದು ಹಾಸ್ಯಾಸ್ಪದ ಪ್ರಯತ್ನವಾಗಿ ಪರಿಣಮಿಸುತ್ತದೆ. ಮುಖ್ಯವಾಗಿ ಹರಿಕಮತ ‘ಅವಸ್ಥೆ’ಯ ಕೃಷ್ಣಪ್ಪನಂತೆ ದೈನಂದಿಕಗಳಿಂದ ಬಿಡುಗಡೆ ಪಡೆದು ಕ್ಷುದ್ರತೆಯನ್ನು ಗೆಲ್ಲಬೇಕೆನ್ನುವ ಮಹತ್ವಾಕಾಂಕ್ಷಿಯಲ್ಲ, ಸಂವೇದನಾಶೀಲನಲ್ಲ. ಅವನೊಬ್ಬ ಸಾಮಾನ್ಯ ಮನುಷ್ಯ. ಅವನ ಬದಲಾವಣೆಯ ಆಶೆಗೆ ವಿಶೇಷ ಮಹತ್ವವೇನೂ ಇಲ್ಲ. ಬದಲಾವಣೆಯಿಂದ ಅವನ ಸಾಮಾನ್ಯತೆಯೇನೂ ಹೋಗುವುದಿಲ್ಲ. ಒಂದು ವೇಳೆ ರುಕ್ಮಿಣಿ ಆ ಹೊತ್ತಿಗೆ ತಿರುಗಿ ಬರದಿದ್ದರೂ ಅವನು ಬದಲಾಗುತ್ತಿದ್ದನೆಂದು ನಂಬಲು ಆಗುವುದಿಲ್ಲ. ರುಕ್ಮಿಣಿ ತಿರುಗಿ ಬಂದು ಯಥಾಸ್ಥಿತಿಯನ್ನುಂಟುಮಾಡುವುದು, ವ್ಯಂಗ್ಯವಾಗಿ ಅವನ ಸ್ವಭಾವವನ್ನು ಹೆಚ್ಚು ನಾಟಕೀಯವಾಗಿ ಪ್ರಕಟಿಸುತ್ತದೆ, ಅಷ್ಟೇ. ಅಂತೆಯೇ ಕೃಷ್ಣಪ್ಪನ ಸಂದರ್ಭದಲ್ಲಿ ದುರಂತವಾಗುವ ವಸ್ತು ಹರಿಕಮತನ ವಿಷಯದಲ್ಲಿ ವಿನೋದವಾಗುತ್ತದೆ. ಎಂದರೆ ಇಲ್ಲಿಯ ವಿನೋದಕ್ಕೆ ಹರಿಕಮತನ ಸ್ವಭಾವದಲ್ಲಿಯ ವೈಯಕ್ತಿಕ ವಿಕ್ಷಿಪ್ತತೆಯೇ ಮುಖ್ಯ ಕಾರಣವಾಗಿದೆಯೇ ಹೊರತು ಮನುಷ್ಯನ ಸಾರ್ವತ್ರಿಕ ಸ್ವಭಾವವಲ್ಲ.

ಆದರೆ ರಮಾನಂದರು ಕತೆಯು ಕೆಲಸ ಮಾಡುವ ಸ್ತರವನ್ನು ಕಲಾತ್ಮಕವಾಗಿ ನಿರ್ವಹಿಸಿ ಉದ್ದಿಷ್ಟ ಪರಿಣಾಮವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಡುಕೋಣೆಯವರ ಬರಹಗಳಲ್ಲಿ ಹೆಚ್ಚಿನವು ಇಂಗ್ಲಿಷ್ ಮೂಲದ ರೂಪಾಂತರಗಳಾಗಿವೆ. ಆದರೆ ಲೇಖಕರು ನಿರ್ದಿಷ್ಟ ಮೂಲಗಳನ್ನು ಸೂಚಿಸಿಲ್ಲ. ಬದಲಾಗಿ ತಮ್ಮ ಮಾತಿನಲ್ಲಿ ಕೆಲವು ಜನ ಹಾಸ್ಯ ಲೇಖಕರನ್ನು ಹೆಸರಿಸಿದ್ದಾರೆ. ‘ಬಾಳ್ವೆಯ ಮಸಾಲೆ’ ಓ. ಹೆನ್ರಿಯ ‘Pendulum’ ಎಂಬ ಕತೆಯ ರೂಪಾಂತರವೆಂದು ಮುಂಬಯಿಯ ಶ್ರೀಮತಿ ಮಿತ್ರಾ ವೆಂಕಟರಾಜ ನನ್ನ ಗಮನಕ್ಕೆ ತಂದರು. ಅದು ನಿಜ. ಆದರೆ ಮೂಲದ ಗಂಭೀರ ಕಥೆ ಇಲ್ಲಿ ಹಾಸ್ಯಕ್ಕೆ ತಿರುಗಿದೆ.

(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ದೇವುಡು ಅವರ ಕತೆ | ಮೂರು ಕನಸು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

Download Eedina App Android / iOS

X