ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
‘ಯಾಕ, ಏ ಗಂಡಬೀರಿ, ಸುಮ್ಮಗ ದಾರೀ ಹಿಡಿದು ಹೋಗಾಕ ವಲ್ಯಂತೈತೇನ ಜೀವ?’
‘ನಾ ದಾರಿ ಹಿಡಿದಾರ ಹೋಕ್ಕೇನಿ. ಅಡ್ಡದಾರಿ ಅರೆ ಬೀಳತೇನಿ. ನಿನಗ್ಯಾಕದರ ಗೊಡವಿ?’
‘ಹಾಳಭಾಂವೀ ಬೀಳು. ನನ್ನ ಹೆಸರು ಮಾತ್ರ ತಗದ್ಯಂದರ ನೋಡು.’
‘ಅವ್ವ! ತನ್ನ ಹೆಸರಂತ. ನಿನ್ನ ತೊಟ್ಲಾಗ ಹಾಕಿದಾಗ ನಿಮ್ಮ ಅಪ್ಪ ಅವ್ವಗೇನು ಗುತಿಗಿದ್ದಿದ್ದಿಲ್ಲ. ನನ್ನ ಕತ್ತಿಗೂ ನಾ ಭೈರೂ ಅಂತ ಹೆಸರಿಟ್ಟೇನಿ.’
ತನ್ನ ಹೆಸರು ತೆಗಿಯಬೇಡೆಂದು ಬೆದರಿಸಹೋದರೆ ಗಂಗೆಯ ನಾಲಿಗೆಯು ತಂದೆತಾಯಿಗಳನ್ನೂ ಎಳೆದದ್ದನ್ನು ಕಂಡು ಭೈರವನು ತೆಪ್ಪಗಾದನು. ಪಾಪ! ಹೆಣ್ಣುಮಕ್ಕಳ ಸಂಗತಿ. ಮಾಡುವನೇನು! ಮತ್ತಾರಾದರೂ ಅವನನ್ನು ಈ ಪರಿ ತಡವಿದ್ದರೆ ಅವರ ಹಲ್ಲುಗಳೇನು ಬಾಯಲ್ಲಿ ಉಳಿಯುತ್ತಿದ್ದಿಲ್ಲ.
ಈ ಮೊದಲು ಗಂಗೆಯು ಅವನನ್ನು ಏನೆಂದು ಕೆಣಕಿದ್ದಳೋ ಭೈರವನೇ ಬಲ್ಲ. ‘ಈ ಭೈರೂಗ ಡೌಲೆಷ್ಟು ನೋಡು. ತಾ ನೋಡಿದರ ಕತ್ತಿ ಮುಟ್ಟಿ ಹೊತಗೊಂಡು ಸುಮ್ಮಗ ದಾರೀ ನಡಿಲಾಸಲ್ಲ’ ಎಂದು ನಮ್ಮ ತರ್ಕ.
ಅವನದೋ- ಇರಲಿ, ಅವನ ಅಂಚಿನ ಧೋತರ, ಚುಂಗು ಬಿಟ್ಟು ಸುತ್ತಿದ ಜರದ ರುಮಾಲ, ಜಪಾನೀ ರಬ್ಬರಟ್ಟೆಯೆ ಬೂಟು ಇವೆಲ್ಲವುಗಳ ಮೇಲೆ ಈ ಹೊಡತ.
ಗಂಗೆಯು ನಿಜವಾಗಿಯೇ ಗಂಡುಬೀರಿಯಾಗಿದ್ದಳು. ಓಣಿಯಲ್ಲಿಯ ಓರಿಗೆಯ ಹೆಣ್ಣು ಮಕ್ಕಳೊಡನೆ ಎಂದೂ ಆಡಿದವಳಲ್ಲ. ಅದಕ್ಕೆ ಕಾರಣವೂ ಇತ್ತು. ಗಂಗೆಯು 3-4 ವರ್ಷದವಳಿರುವಾಗಲೇ ಅವಳ ತಾಯಿ ತೀರಿಕೊಂಡಳು. ಒಂದೇ ಹುಡುಗೆಯನ್ನು ಬಿಡಲಾರದೇ ಒಗೆಯಲಿಕ್ಕೆಂದು ಹೋದಾಗ ಫಕೀರಪ್ಪನು (ಗಂಗೆಯ ತಂದೆ) ಹತ್ತೀಕೊಳ್ಳಕ್ಕೆ ತನ್ನ ಸಂಗಡಲೇ ಕರೆದೊಯ್ಯುತ್ತಿದ್ದನು. ಬರಬರುತ್ತ ಗಂಗೆಯು ಮನೆಗೆಲಸ, ಅರಿವೆ ಒಗೆಯುವದು, ಇಸ್ತ್ರಿ ಮಾಡುವದು ಇವೆಲ್ಲವುಗಳಲ್ಲಿ ತಂದೆಗೆ ನೆರವಾಗಹತ್ತಿದಳು. ಇತ್ತೀಚೆಗೆ ಫಕೀರಪ್ಪನ ಶಕ್ತಿ ನಿಲ್ಲುತ್ತ ಬಂದದ್ದರಿಂದ ಒಗೆಯಲಿಕ್ಕೆ ಬಹುಶಃ ಗಂಗೆಯೇ ಹೋಗುವಳು. ತಂದೆಯು ಬೇಡೆಂದರೂ ಜುಲುಮೆಯಿಂದ ತನ್ನ ಒಡ್ಯಾಣವನ್ನು ಮಾರಿಸಿ ಒಂದು ಕತ್ತೆಯನ್ನು ಕೊಳ್ಳಹಚ್ಚಿದ್ದಳು. ಹೀಗಾಗಿ ತಂದೆ, ಮಗಳು ಹಾಗೂ ಕತ್ತೆ ಮೂವರೂ ಕೂಡಿ ಹೇಗೋ ನಿರ್ವಾಹವನ್ನು ಸಾಗಿಸಿದ್ದರು.
ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ
ಮೊದಮೊದಲು ಫಕೀರಪ್ಪನ ಕೆಲಸವು ಚೆನ್ನಾಗಿ ಸಾಗಿತ್ತು. ಆದರೆ ಇತ್ತೀಚೆಗೆ ಬಿಳಿಛಾಯ ಮಬ್ಬಿಗೆ ಬಿದ್ದ ಜನರು ಹೆಚ್ಚುತ್ತಾ ಹೋದಂತೆ ವಾಸಿಂಗ ಕಂಪನಿಗಳು ಹೆಚ್ಚಾಗಿ ಮನೆಯಗಸರಿಗೆ ಬಿದ್ದ ಹೊಡತದಿಂದ ಅವನೂ ಹಣ್ಣಾಗಿದ್ದನು. ಈ ವಿವೇಚನೆಯನ್ನು ತಂದೆಯ ಬಾಯಿಂದ ಮೇಲೆ ಮೇಲೆ ಕೇಳುತ್ತಿದ್ದ ಗಂಗೆಗೆ ಕಂಪೆನಿಯವರೆಂದರೆ ಸಿಟ್ಟುಬೆಂಕಿ.
ಭೈರವನೂ ಅವನಣ್ಣನೂ ಕೂಡಿ ‘ಜುಬಿಲೀ ವಾಸಿಂಗ ಕಂಪೆನಿ’ಯನ್ನಿಟ್ಟಿದ್ದರು. ಅಣ್ಣನು ಇಂಗ್ಲಿಷ ಶಾಲೆಯ ಮೆಟ್ಟಲುಗಳನ್ನು ಸವೆಸುವಷ್ಟಲ್ಲದಿದ್ದರೂ ಕೆಲದಿನ ಮೆಟ್ಟಿಬಂದದ್ದರಿಂದ ಅಂಗಡಿಯಲ್ಲಿ ಕುರ್ಚಿಯ ಮೇಲೆ ಕುಳಿತು ಅಲ್ಲಿಯ ಕೆಲಸ ನೋಡಿಕೊಳ್ಳುತ್ತಿದ್ದನು. ಕತ್ತೆ ಮೊಟ್ಟೆಗಳ ಕೂಡ ಗುದ್ದಾಡುವುದು ಭೈರವನ ಪಾಲಿಗೆ ಬಂದಿತ್ತು.
ಭೈರವನನ್ನು ಪರಿಪರಿಯಿಂದ ಕಾಡಿ ಗಂಗೆಯು ತನ್ನ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದಳು. ಒಣ ಹಾಕುವ ಹಗ್ಗದ ಕತ್ತರಿಗೋಲುಗಳನ್ನು ಮೆಲ್ಲಗೆ ಸರಿಸಿ ಅವನ ಅರಿವೆಗಳು ಮಣ್ಣಾಗುವಂತೆ ಮಾಡುವದು, ಅವನು ಒಣಹಾಕ ಹೋದಾಗ ಒಂದೆರಡು ಅರಿವೆಗಳನ್ನು ಕಲ್ಲು ಕಟ್ಟಿ ಬಾವಿಯಲ್ಲಿ ಮುಣುಗಿಸುವದು, ಇವೇ ಮೊದಲಾದವುಗಳು ಅವಳ ನಿಯಮಿತ ಚೇಷ್ಟೆಗಳಾಗಿದ್ದವು. ಭೈರವನು ಮಾತ್ರ ತಾನೇ ಸರಿಯಾಗಿ ನಿಲ್ಲಿಸಿರಲಿಕ್ಕಿಲ್ಲವೆಂದುಕೊಂಡು ಮಣ್ಣಾದ ಅರಿವೆಗಳನ್ನು ತಂದು ಮತ್ತೆ ಹಿಂಡಿಹಾಕುವನು. ಕಳೆದ ಅರಿವೆಗಾಗಿ ಸನಿಯದರಲ್ಲಿಯೇ ಕಂಪನಿಯ ದಿವಾಳಿ ತೆಗೆಯಿಸುವವನೆಂದು ಅನ್ನಿಸಿಕೊಳ್ಳುವದಂತೂ ವಾರದಲ್ಲಿ ಒಂದೆರಡು ಬಾರಿ ಇದ್ದದ್ದೇ. ಒಂದು ದಿನ ಸಹಜವಾಗಿ ಗಂಗೆಯ ಮುಂದೆ ಈ ಮಾತು ತೆಗೆದನು.
‘ಗಂಗೀ, ತಂದ ಅರಿವಿ ತಿರುಗಿ ಮನೀಗ ಒಯ್ಯುದರಾಗ ಒಂದೆಡ್ಡು ಕಮ್ಮ ಆಕ್ಯಾವ ನೋಡು. ಎಲ್ಲಿ ಹೋಕ್ಕಾವೋ ಯಾರು ಒಯ್ತಾರೋ ಶಿವನ ಬಲ್ಲ. ನೋಡಿದರೆ ಇಬ್ಬರೂ ಇಲ್ಲೇ ಇರತೇವಿ.’
‘ಕೊಳ್ಳದ ದೆವ್ವ ಒಯ್ದಿದ್ದೀತು!’ ಎಂದು ಕಿಡಗೇಡಿ ನಗೆಯಿಂದ ಗಂಗೆಯು ನುಡಿದಳು.
ಭೈರವನ ಮನದಲ್ಲಿ ನಿಜಸಂಗತಿಯ ಸುಳುವು ಕೂಡ ಹತ್ತಲಿಲ್ಲ. ಮರುಮಾತಿನ ಈ ಸಂಧಿಯನ್ನು ಹಾಗೆಯೇ ಬಿಡಬಾರದೆಂದು ಅವನೆಂದನು: ‘ಎದುರಿಗೆ ನಿಂತೈತಿ ಅದ ದೆವ್ವ ಹೌದಲ್ಲೊ!’
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ನುಡಿದದ್ದೊಂದೇ ತಡ. ಗಂಗೆಯು ಒಸಕ್ಕನೇ ಮೈಮೇಲೆ ಬಂದು ಅಂದಳು: ‘ಯಾಕಲಾ ಕುಂಪಣಿ ಅಂಗಡೀ ಇಟ್ಟು ಸಾವಕಾರಾದ್ರ ನಿನ್ನಷ್ಟಕ್ಕ ನೀ ಆದೀ. ಬಡವರ ಮ್ಯಾಗ ಬಲ್ಲಬಲ್ಲ ಹಾಂಗ ಕಳವು ತುಡುಗು ಹೊರಸತೀ? ಅಪ್ಪನ ಮುಂದ ಹೇಳಿದ್ನೇಂದ್ರ ನೋಡೀಗ ಚಾವಡ್ಯಾಗ ಒಯ್ದು ಕುಂಡರಸ್ವಾನು.’
ಈ ಬೆದರಿಕೆಗೆ ಬೆದರಿದನೋ ಏನೋ ಅಂತೂ ಭೈರವನು ಸುಮ್ಮನಾದನು.
2
ಸುಮಾರು ತಾಸು ರಾತ್ರಿಯಾಗಿರಬಹುದು. ಗಂಗೆಯು ದಣುವಾರಿಸಿಕೊಂಡು ಅದೇ ಅಡಿಗೆ ಮಾಡತೊಡಗಿದ್ದಳು. ಫಕೀರಪ್ಪನು ಇಸ್ತ್ರಿಯ ಬೆಂಕಿಗೆ ಗಾಳೀ ಹಾಕಿ ಪುಟ ಕೊಡುತ್ತಿದ್ದನು. ಇಷ್ಟರಲ್ಲಿ ಭೈರವನು ಅವನ ಸಮಾಚಾರಕ್ಕಾಗಿ ಬಂದನು.
‘ಇಷ್ಟು ಮೈಯಾಗ ಶೀಕಿದ್ದು ಈಗ್ಯಾಕ ಮತ್ತೆ ಇಸ್ತ್ರಿ ಮಾಡಾಕ ಹಿಡಿದೀ? ಯಾಡು ದಿನ ಬಿಟ್ಟು ನೆಟ್ಟಗಾದ ಮ್ಯಾಗ ಮಾಡಿದರಾಗದ?’ ಎಂದು ಭೈರವನೆಂದನು.

‘ಭೈರೂ, ಮದ್ಲ ನಮಗೆ ಮಂದಿ ಅರವಿ ಕೊಡಾಕ ವಲ್ಲದು. ಅದರಾಗ 15 ದಿನಗಟ್ಲೆ ಇಟಗೊಂಡು ಕುಂತ್ರ ಹ್ಯಾಂಗ ಹೇಳು. ನಿಮ್ಮಂಗಡೀಗೆ ಹ್ಯಾಂಗೈತೀಗ ಕೆಲಸ?’
‘ಕೆಲಸೇನ ಕೇಳತಿ. ಗಡಗಡ ಇಸ್ತ್ರಿ ಮಾಡಿ ಬಂಡಲ್ ಕಟ್ಟಿ ಕೊಡಾಣಾಗವಲ್ಲದು ಅಣ್ಣನ ಕಡಿಂದ. ಅದಕ ಇನ್ನೊಬ್ಬರನ್ಯಾರನರೆ ನೋಡಬೇಕಂತಿದ್ದ. ನೋಡು ನೀನ ಮಾಡತಿದ್ರ. ನಿಂದೂ ಸಗತಿ ನಿಂತ್ಯೂ. ಮದ್ಲಿನ್ಹಾಂಗ ದುಡಿತದ ಕೆಲಸ ಆಗಾಣಿಲ್ಲ. ಅಲ್ಲೇ ಅಂಗಡ್ಯಾಗ ಕುಂತು ಇಸ್ತ್ರಿ ಮಾಡತಿದ್ರ ರೂಪಾಯಿಕ್ಕಿಷ್ಟಂತ ಬೇಕಾರ ಮಾಡು. ಇಲ್ಲಾ ಸಂಬಳ ಬಗೀಹರದರ ಹಾಂಗ ಮಾಡು, ಒಣಾ ನಿಗ್ಗರ ಇಲ್ಲ.’
ಈ ಮಾತು ಕೇಳಿ ಗಂಗೆಯು ಸುಮ್ಮನಿರುವವಳೇ?
‘ಅಪ್ಪ! ಇಷ್ಟು ಬಾಗ್ಗೇವು ಬಂತೇನೋ ನಿನಗ? ಅಪ್ಪಾ, ಏನ ಬ್ಯಾಡ. ಇವರಲ್ಲಿ ದುಡ್ಯಾಕ ಇರಬ್ಯಾಡ. ಅಷ್ಟೂ ಕೆಲಸಾ ಆದ್ರ ನಾ ಮಾಡತೇನಿ. ನಿನಗ್ಯಾಕದರ ಚಿಂತಿ’ ಎಂದಂದಳು.
ಫಕೀರಪ್ಪನು ಮಗಳ ಕಡೆಗೊಮ್ಮೆ ಪ್ರೀತಿಪೂರಿತ ಅಭಿಮಾನದ ದೃಷ್ಟಿಯಿಂದ ನೋಡಿದನು. ಮತ್ತೆ ಮರುಕ್ಷಣವೇ ‘ನಿನ್ನೆಷ್ಟ ದಿನ ಇನ್ನ ಮನ್ಯಾಗಿಟಗೊಂಡಿರಲಿ?’ ಎಂದನು. ಗಂಗೆಗೆ ಅವನ ಈ ಮಾತಿನ ಅರ್ಥವು ಹೊಳೆಯಲಿಲ್ಲ. ‘ನಾಯಲ್ಕೂ ನಿನ್ನ ಬಿಟ್ಟು ಹೋಗುವದಿಲ್ಲ’ ಎಂದು ಆಶ್ವಾಸನ ಕೊಟ್ಟಳು. ‘ಅನ್ನಾಗೈತೋ ಇಲ್ಲೋ ನೋಡ್ಹೋಗೊಳಗ’ ಎಂದು ಫಕೀರಪ್ಪನು ಕಳಿಸಿಕೊಟ್ಟನು. ಇನ್ನೆರಡು ದಿನದ ಮೇಲೆ ಏನೆಂಬದೂ ಹೇಳುವೆನೆಂದು ಭೈರವನಿಗೆ ಹೇಳಿದನು.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
ಭೈರವನ ಅಂದಿನ ಮಾತು ಕೇಳಿ ಗಂಗೆಯ ಗಾಯದಲ್ಲಿ ಕಾರ ಕಲಿಸಿದಂತಾಯಿತು. ಅಡಿಗೆ ಮಾಡುವಾ ಅತ್ತ ಅವಳ ಲಕ್ಷವೇ ಇರಲಿಲ್ಲ. ಭೈರವನ ಸೊಕ್ಕು ಮುರಿಯುವ ವಿಚಾರ ಮಾಡತೊಡಗಿದಳು. ಕೊನೆಗೊಂಟಿ ಹಾದಿಯನ್ನು ಕಂಡಳು. ತಾವೂ ಒಂದು ಕಂಪನಿ ತೆಗೆಯಬೇಕೆಂದು ಊಟಕ್ಕೆ ಕುಳಿತಾಗ ತಂದೆಯ ಮುಂದೆ ಮಾತೆತ್ತಿದಳು. ಆಗದೆಂದು ಮೊದಲು ಫಕೀರಪ್ಪನು ಕಿವಿಗೊಡಲಿಲ್ಲ. ಹೆಚ್ಚು ಆಗ್ರಹ ತೊಡಲು ದುಡ್ಡಿನ ಅಡಚಣೆಯನ್ನು ಮುಂದೆ ಮಾಡಿದನು. ‘ಅಂಗಡೀ ಭಾಡಿಗ್ಗೇ 100 ರೂಪಾಯಿ, ಮೇಜು-ಕಪಾಟಿಗೆ 100 ರೂಪಾಯಿ ಬೇಕು. ಅದನ್ಯಾರು ಕೊಡೋರು?’
‘ಸಾಲಾ ತಗೀಬೇಕು. ಸಾಲಕೇನ ಸೂಲ. ಅರಿವಿಗೊಂದು ಬಿಲ್ಲೀ ಹಾಂಗ ಹೆಚ್ಚಿಗಿ ಶಿಗತೈತಿ. ಮುಂದ ಮುಟ್ಟಿಸಬೇಕು’ ಎಂದಳು.
ಇಷ್ಟಾದರೂ ತನ್ನ ಕಲ್ಪನೆಗೆ ಯಶ ಬಂತೆಂದು ಗಂಗೆಗೆ ಸಮಾಧಾನ. ಬಂದ ಕಠಿಣ ಕಾಲಕ್ಕೆ ಬಾಗಿ ಬಿದ್ದು ಹೋಗುವುದಕ್ಕಿಂತಲೂ ಕೊನೆಗೊಮ್ಮೆ ತಲೆಯೆತ್ತಿ ಯತ್ನ ಮಾಡಿ ನೋಡೋಣವೆಂದು ಫಕೀರಪ್ಪನೂ ಅಂದುಕೊಂಡನು.
ಕಂಪೆನಿ ತೆಗೆಯುವದಂತೂ ನಿಶ್ಚಿತವಾಯಿತು. ಸಾಲವನ್ನು ದೇಶಪಾಂಡೆಯರಲ್ಲಿ ಕೇಳಬೇಕೆಂದು ಗಂಗೆಯು ಸೂಚಿಸಿದಳು. ಬಹುದಿನದ ಬಳಿಕೆ. 20 ವರ್ಷ ಫಕೀರಪ್ಪನು ಅವರ ಅರಿವೆ ಒಗೆದಿದ್ದನು. ಬಾಯಿ ತೆಗೆದರೆ ಕೊಡಬಹುದೆಂಬ ಭರವಸೆಯೂ ಇತ್ತು. ಮರುದಿನ ಅರಿವೆ ಕೊಡಲು ಹೋದಾಗ ಕೇಳುವೆನೆಂದು ಫಕೀರಪ್ಪ ಹೇಳಿದನು.
ಮಾರನೆಯ ದಿನ ಮುಂಜಾನೆ ಲಗುಬಗೆಯಿಂದೆದ್ದು ಗಂಗೆಯು ‘ಧಣೇರ’ ಅರಿವೆಗಳನ್ನು ಆರಿಸಿ ಇಸ್ತ್ರೀ ಮಾಡಿಕೊಟ್ಟಳು. ಫಕೀರಪ್ಪನೂ ಒಂದು ಬಗೆಯ ಉತ್ಸಾಹದಿಂದ ಅವರ ಮನೆಯ ಕಡೆಗೆ ಸಾಗಿದನು. ಆ ತಾನೊಂದು ಬಗೆದರೆ ದೈವವೊಂದು ಬಗೆದಿತ್ತು. ಅರಿವೆಗಳನ್ನು ಕೊಟ್ಟು ಮಾಸಿದ ಅರಿವೆಗಳನ್ನು ಕೇಳಿದನು. 2 ದಿನದ ಹಿಂದೆಯೇ ಧಣೇರ ಅರಿವೆಗಳು ಜುಬಿಲೀ ಕಂಪನಿಗೆ ಹೋಗಿದ್ದವು. ಧಣೇರು ಫಕೀರಪ್ಪನ ಮನನೋಯಿಸಬಾರದೆಂದು ನುಡಿದರು:
‘ಇಲ್ಲೆ ನೋಡು, ಫಕೀರಪ್ಪಾ, ಮೊನ್ನೆ ಆ ಜುಬಿಲೀ ಕಂಪನಿ ಮ್ಯಾನೇಜರ ಬಂದಿದ್ದಾ ನಮ್ಮ ಹತ್ತೀಕೊಳ್ಳದಾಗಿನ ಭಾವೀ ಗುತಿಗೀ ಕೇಳ್ಲಿಕ್ಕೆ. ನಮಗೇನು ನಿಮ್ಮ ಗಂಜಿ ನಡೀತದ. ಅದರ ಈಗಿನ ಹುಡುಗರದೆು ಕೇಳತೀ, 7-7 ದಿನಕ್ಕೊಮ್ಮೆ ಕಡಕ ಇಸ್ತ್ರೀವು ಬೇಕವರಿಗೆ. ಅದಕ ಕೈಯೆತ್ತಿ ಕೊಡೋ ಆ ರೊಕ್ಕರ ಉಳೀಲೆಂತ್ಹೇಳಿ ನಮ್ಮವೆಲ್ಲಾ ಅರಿವೀ ಒಗೆದು ಮ್ಯಾಲೆ 25 ರೂಪಾಯಿ ಕೊಡತೇನೆಂದಾ, ಕೊಟ್ಟುಬಿಟ್ಟೆ. ಈ ಉಗಾದಿಂದ ನಿನ್ನ ಆಯಾ ಮಾತ್ರ ಒಯಿ ಹಾಂ. ಅದನ್ನೇನು ತಪ್ಸುದಿಲ್ಲ.’
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ಈ ಮಾತಾದ ಬಳಿಕ ಸಾಲ ಕೇಳಲು ಫಕೀರಪ್ಪನ ನಾಲಿಗೆಯೇಳಲಿಲ್ಲ. ಬರಿಗೈಯಿಂದ ಮನೆಗೆ ಬಂದು ಮಗಳ ಮುಂದೆ ನಡೆದ ಸಂಗತಿಯನ್ನು ಹೇಳಿದನು. ಗಂಗೆಯು ವಿಷಣ್ಣಳಾಗಿ ‘ಭೈರೂನ ಕಂಪನಿಗೆ ಗುತಿಗಿ ಉಗಾದಿಂದ’ ಎಂದು ತನ್ನಷ್ಟಕ್ಕೆ ತಾನೇ ಅಂದುಕೊಂಡಳು.
3
ಧಾರವಾಡ ಗುಡ್ಸ್ಶೆಡ್ಡಿನ ದಾರಿಯಲ್ಲಿ ಗೇಟು ದಾಟಿ ತುಸು ಮುಂದೆ ಹೋಗಲು ಎಡಬದಿಗಿರುವ ಕೊಳ್ಳವೇ ಹತ್ತೀಕೊಳ್ಳ. ಸುತ್ತಲೂ ಸಣ್ಣ ಸಣ್ಣ ದಿನ್ನೆಗಳ ಸಾಲು. ಒಂದು ಬದಿಗೆ ಕಂಡು ಮತ್ತೆ ಗುಡ್ಡದಲ್ಲಿ ಸೇರಿದ ಹೊಗೆಬಂಡಿಯ ಮಾರ್ಗ. ಕೊಳ್ಳದ ಕಾವಲುಗಾರನಿಗಾಗಿ ಹೊಸದಾಗಿ ಕಟ್ಟಿಸಿದ ಮಂಚಿಗೆ (ಸಿಗ್ನಲ್ ಕೇಬಿನ್). ಕೊಳ್ಳದ ನಟ್ಟನಡುವೆ ಬೈತಲು ತೆಗೆದಂತೆ ಒಂದು ಕೊರಕಲು. ಅದರ ಎರಡು ಬದಿಯಲ್ಲಿಯೂ ಸಣ್ಣ ಕಂಟೆಗಳು. ಕೆಳಗೆ ತೆಗ್ಗಿನಲ್ಲಿ ಒಂದು ಬದಿಗೆ ರೇಲ್ವೇಬಾವಿಯ ಪಂಪಿನ ಶೆಡ್ಡು. ಹುಡುಗರಾಗಿರಬೇಕು ಅಂದರೇ ಹತ್ತಿಕೊಳ್ಳದ ಸವಿ ತಿಳಿಯುವದು. ಅಕೋ ನಂದನವನವನ್ನು ಸೇರುವ ಆನಂದದಿಂದ ಮಾಳಮಡ್ಡಿಯ ಹುಡುಗರದೊಂದು ಕವಳೀಹಣ್ಣಿನ ಪಾರ್ಟಿ ಬರುತ್ತಿದೆ. ಕೊರಕಲದಲ್ಲಿಳಿದರು. ಎತ್ತ ನೋಡಿದತ್ತ ಚಿಪ್ಪಡ. ಅದರಲ್ಲಿಯೇ ಒಂದು ಕಿಂಡಿಯನ್ನು ಹುಡುಕಿ ವನಶ್ರೀ ಭಾಂಡಾರದಿಂದ ಹವಳ ಮುತ್ತುಗಳನ್ನು ಕದ್ದುತರಲು ಒಬ್ಬರ ಹಿಂದೊಬ್ಬರು ಪಾರಾದರು. ಬಾಲ್ಯದ ಚಾಪಲ್ಯ ನಮ್ಮಲಿಲ್ಲ. ಮೊದಲಿನಂತೆ ಮೈ ಮಣಿಯುವದಿಲ್ಲ. ಅವರೊಡನೆ ಹೋಗಲು ಸುಮ್ಮನೆ ಮೈತರಿಸಿಕೊಂಡಷ್ಟೇ ಆದೀತು. ಸುಮ್ಮನೆ ಕಾವಲುಗಾರನಿಗೆ ವರದಿ ಕೊಡುವದೇ ಉತ್ತಮ.
ತಲೆ ಕೆಳಗೆ ಮಾಡಿ ತೂಗುಹಾಕಿದ ಶರ್ಟಿನ ತೋರಣ ಕಟ್ಟಿದವರಾರು? ನಮ್ಮ ಗಂಗೆ ಭೈರವರೇ. ಏನೋ ನಡೆದಿದೆ ಸರಸಸಲ್ಲಾಪ.
‘ಏ ಗಂಗೀ, ಒಂದೀಟು ಅತ್ತ ಮಾರಿಮಾಡಿ ಒಗಿಯಲ್ಲ. ನನಗೆ ನೀರು ಸಿಡಿತಾವೂ.’
‘ಸಿಡಿದರ ನನಗೇನು ಹೇಳತೀ, ಉಗಾದಿಮಟಾ ಯತ್ತಬೇಕತ್ತ ಮಾರಿಮಾಡಿ ಒಗಿತೇನಿ. ಆಮ್ಯಾಗ ಬೇಕಾದರ ನಿನ್ನ ಭಾಂವಿಗೆ ನಿನಗ ಗಂಟು. ಒಬ್ಬನ ಕಲ್ಲ ಕಟಿಗೊಂಡು ಮುಣುಗುವಂತಿ.’
ಅಣ್ಣನು ಹಿಡಿದುಕೊಂಡುಬಂದ ಗುತ್ತಿಗೆಯ ಮೇಲೆ ಗಂಗೆಯ ಕಟಾಕ್ಷವಿದ್ದುದನ್ನು ಕಂಡು ಭೈರವನು ಸುಮ್ಮನಾದನು.
ಆ ದಿನ ಮೊಟ್ಟೆಗೂಡಿಸಿ ಕಟ್ಟಿಕೊಂಡು ಹೊರಡಬೇಕಾದರೆ ಬೆಳದಿಂಗಳು ಬಂತು. ಇಬ್ಬರೂ ಹುಬ್ಬು ಗಂಟಿಕ್ಕಿ ತಂತಮ್ಮ ಕತ್ತೆಗಳನ್ನು ಮುಂದೆ ಹಾಕಿಕೊಂಡು ಕೊಳ್ಳದ ಏರಿಯನ್ನು ಏರಹತ್ತಿದರು. ಗಂಗೆಯು ಏರಿಯ ನೆತ್ತಿಗಾಗಲೇ ಬಂದಿದ್ದಳು. ಭೈರವನು ತುಸು ಹಿಂದುಳಿದಿದ್ದನು. ಇಷ್ಟರಲ್ಲಿ ಹುಬ್ಬಳ್ಳಿಯ ಲೋಕಲ್ ಗಾಡಿಯು ಚಿಟ್ಟನೇ ಚೀರಿತು. ನಿಶಾಂತ ಸ್ತಬ್ಧತೆಯಲ್ಲಿ ಅದನ್ನು ಕೇಳಿದ ಭೈರವನ ಕತ್ತೆಯು ಬೆದರಿ ಒಂದು ಹೆಜ್ಜೆ ಹಿಂದೆ ಇಟ್ಟು ತುಸು ಮಗ್ಗಲಾಯಿತು. ಡುಬ್ಬದ ಮೇಲೆ ಹೇರಿದ ಮೊಟ್ಟೆಯ ಗಂಟು ಭೈರವನನ್ನು ಹಿಂದಕ್ಕೆ ದಬ್ಬಿತು. ಇಳುಕಲ ಕಾಲು ದಾರಿಯಲ್ಲಿ ರಬ್ಬರಟ್ಟೆಯ ಬೂಟು ಮೆಟ್ಟಿದ ಭೈರವನಿಂದ ಹಿಂಜೋಲಿಯನ್ನು ತಡೆಯುವದಾಗಲಿಲ್ಲ. ಅಯ್ಯೋ ಎಂದವನೇ ಇಳುಕಲುದ್ದಕ್ಕೂ ಗಡಗಡನೆ ಉರುಳಿಹೋಗಿ ಬಿದ್ದನು. ಗಂಗೆಯು ಹೊರಳಿ ನೋಡಿದಳು. ಬೆಳದಿಂಗಳಲ್ಲಿ ಕೊಳ್ಳದಡಿಯಲ್ಲಿ ಬಿದ್ದ ಭೈರವನ ಅಸ್ಪಷ್ಟ ಆಕೃತಿಯು ಕಂಡಿತು. ಬರಿಗಾಲಲ್ಲಿದ್ದ ಗಂಗೆಯು ದುಡುದುಡನೆ ಓಡುತ್ತ ಹೋಗಿ ನೋಡಿದಳು. ಭೈರವನು ನಿಶ್ಚೇಷ್ಟನಾಗಿ ಬಿದ್ದಿದ್ದನು.
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್ರ ಕತೆ | ಕದ್ದವರು ಯಾರು?
ಅವಳ ಮನದ ಉಳಿದ ಭಾವನೆಗಳೆಲ್ಲಿಯೋ ಅಡಗಿಹೋಗಿ ಅವನ ಅಸಹಾಯ ಸ್ಥಿತಿಯಲ್ಲಿ ಅವನನ್ನುಪಚರಿಸಿ ಎಚ್ಚರಿಸಬೇಕೆಂಬುದೊಂದೇ ಪ್ರಬಲವಾಗಿದ್ದಿತು. ಓಡುತ್ತ ಹೋಗಿ ಮೈಮೇಲಿನ ಸೆರಗನ್ನು ಬಾವಿಯಲ್ಲಿ ತೆಪ್ಪಗೆ ತೊಯ್ಸಿಕೊಂಡು ಬಂದು ನೋಡಿದಳು. ಹಣೆಗೊಂದು ತೂತು. ಮೆಲಕಿನಿಂದ ಹರಿಯುವ ರಕ್ತದ ಧಾರೆ. ತಲೆಯ ಹತ್ತಿರ ಕುಳಿತು ರಕ್ತ ಒರಿಸಲು ಅನುವಾಗಬೇಕೆಂದು ಅವನ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡಳು. ರಕ್ತವನ್ನು ಒರಿಸಿ ನೆತ್ತಿಗೆ ನೀರು ಬಡೆದಳು. ತುಸು ಹೊತ್ತಿನ ಮೇಲೆ ಆ ಶೀತೋಪಚಾರಗಳಿಂದೆಚ್ಚೆತ್ತ ಭೈರವನು ಕಣ್ಣು ತೆರೆದು ನೋಡಿದನು. ಬೆಳದಿಂಗಳಲ್ಲಿ ತಂಗಾಳಿಯಿಂದ ಸುಳಿಯುವ ಗಂಗೆಯ ಮುಂಗೂದಲುಗಳು; ಹಿಂದೆ ದೃಷ್ಟಿಯನ್ನೊಯ್ದಂತೆ ಚಂದ್ರನನ್ನು ಬಿಂಬಿಸುವ ಅವಳ ಬೆವರೊಡೆದ ಹಣೆ; ಅದರ ಕೆಳಗೆ ಸ್ನೇಹಪೂರ್ಣವಾದೆರಡು ಕಣ್ಣುಗಳು. ಎಚ್ಚತ್ತನೋ ಇಲ್ಲವೋ ನೋಡಬೇಕೆಂದು ಅದೇ ಸಮಯಕ್ಕೆ ಬಾಗಿ ನೋಡಿದಳು. ತಲೆಯ ಹತ್ತರಿದ್ದ ಅವಳೆಡಗೈಯನ್ನು ತನ್ನ ಕೈಯಲ್ಲಿ ಹಿಡಿದು ‘ಗಂಗೀ’ ಎಂದಿಷ್ಟೇ ಅಂದನು.

‘ಭಾಳ ಪೆಟ್ಟ ಹತ್ಯೇನು ಭೈರೂ?’
‘ಇಲ್ಲ ಭಾಳೇನೂ ಇಲ್ಲ’ ಎಂದು ಉತ್ತರಕೊಟ್ಟು ಮಗ್ಗಲಾಗಿ ಏಳತೊಡಗಿದನು. ಗಂಗೆಯ ಸಹಾಯದಿಂದ ಎದ್ದು ನಿಂತು ಅರಿವೆಯ ಮಣ್ಣು ಜಾಡಿಸಹೋದನು. ಅರಿವೆಗೆ ರಕ್ತವೇ ಹತ್ತಿತ್ತು. ಮೊಣಕಾಲ ಪರಟೆಯ ಬದಿಯಲ್ಲಿ ಕೆತ್ತಿದ್ದರಿಂದ ಉರಿಯುತ್ತಿತ್ತು. ಚೆನ್ನಾಗಿ ಕಾಲೂರಲು ಬರುತ್ತಿದ್ದಿಲ್ಲ. ಅಂತೂ ಇಬ್ಬರೂ ಒಮ್ಮೆ ಏರಿಯನ್ನೇರಿ ದಾರಿಗೆ ಬಂದು ಕೂಡಿದರು. ಇಬ್ಬರ ಕತ್ತೆಗಳೂ ಒಡೆಯರಿಗೊದಗಿದ ಯಾವ ಸಂಗತಿಯ ಪರಿವೆಯೂ ಇಲ್ಲದೆ ದಾರಿಯ ಮಗ್ಗಲಿಗೆ ಮೇಯುತ್ತ ನಿಂತಿದ್ದವು.
‘ನೀ ಇಲ್ಲೇ ಕೂಡಟು. ಈಗ ಠೇಸಣದಿಂದೊಬ್ಬ ಟಾಂಗಾದವನ್ನ ಕರಕೊಂಡು ಬರತೇನಿ. ಅದರಾಗ ಹೋಗ್ವಂತಿ. ನಿನ್ನ ಅರಿವಿ ತಂದು ನಾ ಅಂಗಡಿಗೆಲ್ಲಾ ಮುಟ್ಟಸತೇನಿ.’
‘ಯಾತಕ, ಬ್ಯಾಡ, ನಡಿ. ಹಗೂರಕ ಇಬ್ಬರೂ ಕೂಡೇ ಹೋಗೂಣ್ಹಂಗ.’
ಭೈರವನೇನೂ ರೊಕ್ಕಕ್ಕೆ ಹಿಂದುಮುಂದೆ ನೋಡುವವನಲ್ಲ. ಆದರೂ ಏಕೆ ಬೇಡೆಂದನೋ! ಗಂಗೆಯು ಹೇಳಿದ ವಾಹನಕ್ಕಿಂತಲೂ ಅವಳ ಆಧಾರದಿಂದಲೇ ಮನೆಗೆ ಹೋಗುವುದು ಹೆಚ್ಚು ಸುಖವೆನಿಸಿದ್ದೀತು. ಅಂದು ಮನೆಗೆ ಬರಲು 2 ತಾಸು ರಾತ್ರಿಯಾಯಿತು. 3 ಸಾರೆ ಫಕೀರಪ್ಪನು ಅಂಗಡಿಯವರೆಗೆ ಹೋಗಿ ಬಂದಿದ್ದನು.
4
ಆ ದಿನದ ನಂತರ ಭೈರವನ ಅರಿವೆಗಳು ಕಳೆದುಹೋಗಲಿಲ್ಲ. ಮಾತ್ರ ಅದಲುಬದಲಾಗುತ್ತಿದ್ದವು. ಆದ್ದರಿಂದ ಭೈರವನು ಮೇಲೆ ಮೇಲೆ ಫಕೀರಪ್ಪನ ಮನೆಗೆ ಬರಬೇಕಾಗುತ್ತಿತ್ತು. ಬದಲಾಗಿರದಿದ್ದರೂ ನೆವಮಾಡಿಕೊಂಡು ಬಂದು ಗಂಗೆಯ ಕೂಡ ತಾಸುಗಟ್ಲೆ ಮಾತಾಡುತ್ತ ಕೂಡುತ್ತಿದ್ದನು. ಅರಿವೆ ಬದಲಾಗಲು ಕಾರಣವೆಂದರೆ ಇತ್ತೀಚೆಗೆ ಇಬ್ಬರ ಮೊಟ್ಟೆಗಳನ್ನೂ ಭೈರವನೇ ಒಗೆಯುತ್ತಿದ್ದನು. ಗಂಗೆಯು ಒಣಗಿಸಿ ಬೇರೆ ಬೇರೆ ಮಾಡಿ ಕಟ್ಟುತ್ತಿದ್ದಳು.
ಒಂದು ದಿನ ಹೀಗೆಯೇ ಒಣಹಾಕುತ್ತಿದ್ದಾಗ ಭೈರವನು ಒಂದು ಗಿಡದಡಿಯಲ್ಲಿ ಕುಳಿತು ನಿಟ್ಟುಸಿರುಬಿಟ್ಟಂದನು: ‘ಏನ ಗನಾ ಬಿಸಿಲಪಾ ಇದು. ಗಂಗೀ ನೀ ಒಗೀತಿದ್ದಾಗ ತಂಪಾಗುತ್ತಿತ್ತು ನೋಡು. ಸಂಪಾಗಿ ನೀರ ಸಿಡಿಸತಿದ್ದಿ. ಈಗ್ಯಾಕ ಬಿಟ್ಟಿ?’
‘ಉಗಾದೀ ಮ್ಯಾಗ ಹತ್ತೀಕೊಳ್ಳದ ಬಾಂವ್ಯಾಗ ಒಗೀಬ್ಯಾಡಂತ ಹೇಳಿದಪ್ಪಾ. ನಿಮ್ಮ ಕಂಪನಿಗೇನೋ ಗುತಿಗೈತೆಂತಲ್ಲ.’
‘ವಾ! ರೆ ಹುಡುಗಿ! ಅದಕ ನನ್ನ ಕಡಿಂದ ಒಗಿಸಿಕೊಂಡ ಒಯ್ತೀ ಏನ? ಒಳ್ಳೊಳ್ಳೇ ಬಾಲಿಷ್ಟರನ ತಲ್ಯಾಗೂ ಬರಾಕಿಲ್ಲ ನೋಡೀ ಹಂಚಿಕಿ.’
‘ನುಗ್ಗಿಕೇರಿ ತನಕ ಎಲ್ಲೆ ಹೋಗಲೊಬ್ಬಾಕೆ ಇನ್ನ. ನೀನ ತಾ ಇಲ್ಲೇ ಒಗದ ಕೊಡತೇನೆಂದ ಕ್ಯಾಸ ಬಿಡಿಸಿದಿ, ಬೇಶಾತಂದೆ. ಮತ್ತೇನ ಮಾಡಲಿ. ಇಲ್ಲಿ ಒಗ್ಯಾಕೂ ಆಗದೂ ಬಿಡಾಕೂ ಆಗದು. ಗುತಿಗೀ ಹಿಡಕೊಂಡು ಬಂದೀರಿ ಧಣೇರ ಕಡಿಂದ.’
‘ನನ್ನ ನೀ ಗುತಿಗಿ ಹಿಡಿದ ಮ್ಯಾಗ, ನಾ ಹಿಡಿದ ಗುತಿಗೀನೂ ನಿಂದ ಆತಲ್ಲ.’
(ಕೃಪೆ: ಮಲ್ಲಿಗೆ ಮಾಸಪತ್ರಿಕೆ; ‘ಜಯಕರ್ನಾಟಕ’: 1931; ‘ದಾಸರ ಹುಡುಗೆ’ ಕಥಾಕುಂಜ ಗ್ರಂಥ ಭಾಂಡಾರ, ಬೆಳಗಾವಿ, 1947)

ಟೇಂಗ್ಸೆಯವರ ‘ಗಂಗೆಯ ಗುತ್ತಿಗೆ’
ಟೇಂಗ್ಸೆ ಗೋವಿಂದರಾಯರ ಬಗ್ಗೆ ಈಗ ವಿಶೇಷ ವಿವರಗಳು ಸಿಗುವುದಿಲ್ಲ. (ಇವರು ಮೊದಲು ಧಾರವಾಡದಲ್ಲಿ ವಕೀಲರಾಗಿದ್ದು, ನಂತರ ಬೆಳಗಾವಿಯ ಟಿಳಕವಾಡಿ ಹೈಸ್ಕೂಲು ಹಾಗೂ ಬೆನನ್ ಸ್ಮಿಥ್ ಹೈಸ್ಕೂಲುಗಳಲ್ಲಿ ಶಿಕ್ಷಕರಾಗಿದ್ದರು. ನಿವೃತ್ತಿಯ ನಂತರ ಪತ್ತೆ ಸಿಗುತ್ತಿಲ್ಲ.) ಆದರೆ ಅವರು ಕನ್ನಡ ಸಣ್ಣಕತೆಯ ಆರಂಭಕಾಲದಲ್ಲಿ ಬಹಳಷ್ಟು ಭರವಸೆಯನ್ನು ಹುಟ್ಟಿಸಿದ ಕತೆಗಾರರಲ್ಲಿ ಒಬ್ಬರು ಎಂಬುದು ಮಾತ್ರ ನಿರ್ವಿವಾದ. ಮುಂದೆ ಈ ಭರವಸೆಯನ್ನು ಅವರು ಈಡೇರಿಸಲಿಲ್ಲವಾದರೂ, 1933ರ ಹೊತ್ತಿಗೆ ‘ಕಾಮನ ಬಿಲ್ಲು’, ‘ನವಿಲುಗರಿ’ಗಳಂಥ ಪ್ರತಿಷ್ಠಿತ ಸಂಕಲನಗಳಲ್ಲಿ ಪ್ರಾತಿನಿಧ್ಯ ಪಡೆಯುವಷ್ಟು ಅವರಿಗೆ ಆಗಲೇ ಪ್ರಸಿದ್ಧಿ ಬಂದಿತ್ತು. ಇದಕ್ಕಿಂತ ಬಹಳ ಮುಂಚೆಯೇ ಅವರ ಕೆಲವು ಕತೆಗಳು ‘ಜಯಕರ್ನಾಟಕ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ವಿಶ್ವಾಸಕ್ಕೆ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದುವು. ನಂತರ 1944ರಲ್ಲಿ ಹತ್ತು ಕತೆಗಳನ್ನು ಒಳಗೊಂಡ ‘ದಾಸರ ಹುಡುಗೆ’ ಎಂಬ ಅವರದೊಂದು ಸಂಕಲನ ಪ್ರಕಟವಾಗಿದೆ. ಇದರಲ್ಲಿ ‘ನವಿಲುಗರಿ’ಯಲ್ಲಿ ಸೇರಿರುವ ‘ಛಪ್ಪರ್ಬಂದ್’ ಹಾಗೂ ‘ನಡೆದು ಬಂದ ದಾರಿ’ ಸಂಪುಟದಲ್ಲಿ ಬಂದಿರುವ ಇನ್ನೊಂದು ಕತೆ ಸೇರಿಲ್ಲ. ಇವುಗಳನ್ನು ಹೊರತುಪಡಿಸಿ, ಟೇಂಗ್ಸೆಯವರು ಹೆಚ್ಚಿನ ಕತೆಗಳನ್ನು ಬರೆದಂತಿಲ್ಲ. ‘ಜಯಕರ್ನಾಟಕ’ದ 1932ರ ಸೆಪ್ಟೆಂಬರ್ ಸಂಚಿಕೆಯಲ್ಲಿ ‘ಎಲ್ಲಿತ್ತೋ ಅಲ್ಲಿಗೇ ಹೋಗಲಿ’ ಎಂಬ ಇನ್ನೊಂದು ಕತೆ ಪ್ರಕಟವಾಗಿದೆ. ಕತೆಗಳನ್ನಲ್ಲದೆ ಟೇಂಗ್ಸೆಯವರು ‘ದೇವರ ಬಾಗಿಲು’ ಎಂಬ ನಾಟಕವನ್ನು ಬರೆದಿರುವದಾಗಿ ತಿಳಿದುಬರುತ್ತದೆ. ಕೆಲವು ದಿನ ‘ಜಯಕರ್ನಾಟಕ’ದ ಸಂಪಾದಕರಾಗಿಯೂ ಅವರು ಕೆಲಸ ಮಾಡಿದ್ದಾರೆ.
ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ
ಟೇಂಗ್ಸೆಯವರ ಕತೆಗಳ ಬರವಣಿಗೆಯ ಮಟ್ಟ ಏಕರೂಪವಾಗಿಲ್ಲ. ‘ದಾಸರ ಹುಡುಗೆ’ಯಂಥ ಕತೆಗಳು ಜೀವನೋತ್ಸಾಹದ ಬುಗ್ಗೆ ಚಿಮ್ಮಿದಂತೆ ಆಕರ್ಷಕವಾಗಿ ಆರಂಭವಾದರೂ ಕೊನೆಗೆ ಗುರಿ ತಪ್ಪುತ್ತವೆ. ಅನೇಕ ಕಡೆ ಕತೆಯ ಕಲ್ಪನೆ ಕೃತಕವಾಗಿದೆ. ಆದರೆ ಅವರ ಎಲ್ಲ ಕತೆಗಳಲ್ಲೂ ವಿವರಗಳು ಕಣ್ಣಿಗೆ ಕಟ್ಟುತ್ತವೆ. ಸಂಭಾಷಣೆಗಳಲ್ಲಿಯ ಉತ್ತರ ಕರ್ನಾಟಕದ ಆಡುಮಾತಿನ ಸತ್ವ ಆಕರ್ಷಿಸುತ್ತದೆ. ದಾಟಿಯಲ್ಲಿಯ ವಿನೋದ, ವ್ಯಂಗ್ಯಗಳೂ ಗಮನ ಸೆಳೆಯುತ್ತವೆ.
‘ಗಂಗೆಯ ಗುತ್ತಿಗೆ’ ಟೇಂಗ್ಸೆಯವರಿಗೆ ತಕ್ಷಣ ಪ್ರಸಿದ್ಧಿಯನ್ನು ತಂದುಕೊಟ್ಟ ಕತೆ. ಇದು ಅವರ ಮೊದಲ ಕತೆಯೂ ಹೌದು. ಇದನ್ನು ಬಹುವಾಗಿ ಮೆಚ್ಚಿದ ಮಾಸ್ತಿಯವರು ‘ಮೈಸೂರು ಜನಗಣತಿಯ ವರದಿ’ಗೆ ಬರೆದ ಕನ್ನಡ ಸಾಹಿತ್ಯವನ್ನು ಕುರಿತ ಅನುಬಂಧದಲ್ಲಿ ಈ ಕತೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಬರೆದರು: ‘ಅದರಲ್ಲಿ ಅಗಸರ ಕುಲದ ಕಿರಿಯ ತರುಣ ತರುಣಿಯರ ಪ್ರೇಮಲೀಲೆಯನ್ನೂ ಕಷ್ಟ ನಿಷ್ಠುರಗಳನ್ನೂ ಕುರಿತು ವರ್ಣಿಸಿದರು. ಅವರ ನಿತ್ಯಜೀವನದ ಭಾವಗಳಿಗೆ, ಆಲೋಚನೆಗಳಿಗೆ ಸಹಾನುಭೂತಿಯುಳ್ಳವನ ಹಸ್ತಸ್ಪರ್ಶವಾಗಿ ಅಪೂರ್ವ ಕಳೆಗೊಂಡಿವೆ. ಈ ಕತೆಗಳ ಭಾಷೆಯು ಜನರಾಡುವ ಭಾಷೆಯನ್ನು ಸಮೀಪಿಸುತ್ತದೆ. ಕತೆಯಲ್ಲಿ ಎಲ್ಲಿ ಅವಶ್ಯಕವೋ ಅಲ್ಲಿ ಶೈಲಿಯು ಕವಿತೆಯ ಮಟ್ಟವನ್ನು ಮುಟ್ಟುತ್ತದೆ. ಆದರೆ ಪ್ರಧಾನವಾಗಿ ಈ ಭಾಷೆಯಲ್ಲಿ ಜೀವನದ ಸಾಮಾನ್ಯ ವಾಣಿಯ ಸತ್ಯ ಸ್ವರೂಪವು ಕಾಣಬರುತ್ತದೆ.’
‘ಕಾಮನ ಬಿಲ್ಲಿ’ನಲ್ಲಿ ಈ ಕತೆಯನ್ನು ಸೇರಿಸಿಕೊಂಡ ಅ.ನ.ಕೃ., ಮಾಸ್ತಿಯವರ ವಿಮರ್ಶೆಯನ್ನು ಒಪ್ಪಿಕೊಳ್ಳುತ್ತ, ಈ ಕತೆಯ ಮೇಲೆ ಆಂಗ್ಲ ಕತೆಗಾರ ಆ್ಯಂಟನಿ ಟ್ರಾಲಪ್ನ ‘ಮ್ಯಾಲಕಾಯ್ಜ ಕೋವ್’ (Malachis Cove) ಎಂಬ ಕಥೆಯ ಪ್ರಭಾವ ಇದೆ ಎಂಬುದನ್ನು ಎತ್ತಿ ತೋರಿಸಿದರು. ಆದರೂ ‘ಪ್ರಾಯಶಃ ಕಥಾಸೂಚನೆಯು ಅಲ್ಲಿಂದ ಇರಬಹುದಲ್ಲದೆ ಹೆಚ್ಚಲ್ಲ’ ಎಂದೂ ಹೇಳಿದರು.
ನಂತರ ಇನ್ನೊಂದು ಲೇಖನದಲ್ಲಿ ಮಾಸ್ತಿಯವರು ಈ ಕತೆಯನ್ನು ಕುರಿತು ಮತ್ತೆ ಬರೆಯುತ್ತ ‘ರೂಪಾಂತರ ಇಂಥ ಸ್ವತಂತ್ರ ಸಾಹಿತ್ಯ ಆಗಬಹುದೆ’ (‘ಪ್ರಸಂಗ-3’, ಪುಟ: 333) ಎಂದು ಮೆಚ್ಚುಗೆಯ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಟೇಂಗ್ಸೆಯವರು ತಮ್ಮ ಕತೆಯ ಮೂಲವನ್ನು ಕುರಿತು ಎಲ್ಲಿಯೂ ಹೇಳಿಲ್ಲ. ಆದರೆ ಇದು ಟ್ರಾಲಪ್ನ ಕತೆಯನ್ನು ಆಧರಿಸಿದ್ದು ಎಂಬುದರಲ್ಲಿ ಸಂಶಯವಿಲ್ಲ. ‘ಮ್ಯಾಲಕಾಯ್ಜ್ ಕೋವ್’ನಲ್ಲಿರುವದು ತಕ್ಕಮಟ್ಟಿಗೆ ಸಂಕೀರ್ಣವಾದ ಒಂದು ಗಂಭೀರ ಪ್ರೇಮಕಥೆ. ಕಡಲ ದಂಡೆಯ ಇಕ್ಕಟ್ಟಾದ ಜಾಗದಲ್ಲಿ ಮನೆ ಮಾಡಿಕೊಂಡು, ತೆರೆಗಳ ಮೇಲೆ ತೇಲಿ ಬರುವ ಜೊಂಡನ್ನು ಸಂಗ್ರಹಿಸಿ ಗೊಬ್ಬರವಾಗಿ ಮಾರಿ ಬದುಕುತ್ತಿರುವವರು ಮುದುಕ ಮ್ಯಾಲಕಾಯ್ ಮತ್ತು ಅವನ ಗಂಡುಬೀರಿ ಮೊಮ್ಮಗಳು ಮ್ಯಾಲಿ. ನೆರೆಯ ಒಕ್ಕಲಿಗನ ಮಗ ಬಾರ್ಟಿ ತನ್ನ ಹೊಲಕ್ಕಾಗಿ ಸಮುದ್ರದ ಜೊಂಡು ಹಿಡಿಯಲು ತನ್ನ ಕತ್ತೆಯೊಡನೆ ಅದೇ ಜಾಗೆಗೆ ಬರುತ್ತಾನೆ. ಈ ಪೈಪೋಟಿಯನ್ನು ಸಹಿಸದ ಮುದುಕ ಮತ್ತು ಹುಡುಗಿ ಅವನೊಡನೆ ಜಗಳವಾಡುತ್ತಾರೆ. ಸಾಕಷ್ಟು ತೊಂದರೆ ಕೊಡುತ್ತಾರೆ. ಆದರೆ ಬಾರ್ಟಿ ಇದನ್ನೆಲ್ಲ ಹಗುರವಾಗಿ ತೆಗೆದುಕೊಂಡು ನಕ್ಕುಬಿಡುತ್ತಾನೆ. ಹುಡುಗಿ ಅವನನ್ನು ದ್ವೇಷಿಸುತ್ತಾಳೆ. ಆದರೆ ಅನನುಭವಿಯಾದ ಬಾರ್ಟಿ ಕಾಲು ಜಾರಿ ಅಪಾಯಕಾರಿಯಾದ ಮಡುವೊಂದರಲ್ಲಿ ಬೀಳುತ್ತಾನೆ. ತೆರೆಗಳ ರಭಸಕ್ಕೆ ಬಂಡೆಗಳಿಗೆ ಅಪ್ಪಳಿಸಲ್ಪಟ್ಟು ಗಾಯಗೊಳ್ಳುತ್ತಾನೆ. ಇವನಿಗೆ ಇಂಥದೇನಾದರೊ ಆಗಲಿ ಎಂದು ಮನಸ್ಸಿನಲ್ಲೇ ಬಯಸಿದ್ದರೂ ಮ್ಯಾಲಿ ಅವನ ಪ್ರಾಣಾಪಾಯದ ಹೊತ್ತಿನಲ್ಲಿ ತನ್ನ ಪ್ರಾಣವನ್ನು ಗಂಡಾಂತರಕ್ಕೊಡ್ಡಿ ಅವನನ್ನು ಹೊರಗೆ ಎಳೆದು ತರುತ್ತಾಳೆ. ಈ ಸನ್ನಿವೇಶದಲ್ಲಿ ಅವಳ ದ್ವೇಷ ಕರಗಿ ಪ್ರೀತಿ ಮೂಡುತ್ತದೆ. ಅವನನ್ನು ಬದುಕಿಸುವದರಲ್ಲಿ ಅವಳಿಗೆ ಅವ್ಯಕ್ತ ಆನಂದ, ಸಮಾಧಾನ ದೊರೆಯುತ್ತವೆ. ಓಡಿಹೋಗಿ ಬಾರ್ಟಿಯ ತಂದೆ-ತಾಯಿಗಳನ್ನು ಕರೆತರುತ್ತಾಳೆ. ಆದರೆ ಅವರು ಮುದುಕ-ಮೊಮ್ಮಗಳು ಸೇರಿ ದ್ವೇಷದಿಂದ ತಮ್ಮ ಒಬ್ಬನೇ ಮಗನನ್ನು ಕೊಂದಿದ್ದಾರೆಂದು ಭಾವಿಸುತ್ತಾರೆ. ಅವರು ಹೀಗೆ ಭಾವಿಸಬಹುದೆಂದು ಗೊತ್ತಿದ್ದರೂ ಬಾರ್ಟಿಯ ಬಗೆಗೆ ತನ್ನಲ್ಲಿ ಹುಟ್ಟಿದ ನೈಜ ಪ್ರೀತಿ ಅವಳಿಗೆ ಹೊಸ ಅನುಭವವನ್ನು, ಸಂತೋಷವನ್ನು ಕೊಡುತ್ತದೆ. ಕೊನೆಗೆ ಬಾರ್ಟಿಗೆ ಎಚ್ಚರ ಬಂದಾಗ ನಿಜ ಸಂಗತಿ ಗೊತ್ತಾಗುತ್ತದೆ. ಬಾರ್ಟಿ-ಮ್ಯಾಲಿಯರ ಮದುವೆಯಲ್ಲಿ ಕತೆ ಮುಗಿಯುತ್ತದೆ. ಈ ಕತೆಯ ಮುಖ್ಯ ಒತ್ತು ಇರುವುದು ಮ್ಯಾಲಿಗೆ ಬಾರ್ಟಿಯ ಮೇಲಿದ್ದ ದ್ವೇಷ ಹೋಗಿ ಒಂದು ಸಹಜವಾದ ಮಾನವೀಯ ಸನ್ನಿವೇಶದಲ್ಲಿ ಪ್ರೀತಿಯಾಗಿ ಪರಿವರ್ತನೆಯಾಗುವ ಕ್ರಿಯೆಯ ಮೇಲೆ.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಪಾತ್ರಗಳಲ್ಲಿ, ಘಟನೆಗಳಲ್ಲಿ, ಅನೇಕ ವಿವರಗಳಲ್ಲಿ ‘ಗಂಗೆಯ ಗುತ್ತಿಗೆ’ಗೂ ‘ಮ್ಯಾಲಕಾಯ್ಜ್ ಕೋವ್’ಗೂ ಅನೇಕ ಹೋಲಿಕೆಗಳಿರುವದು ಸ್ಪಷ್ಟವಾಗಿದೆ. ಗಂಗೆಯ ಗಂಡುಬೀರಿತನ, ಪರದೇಶಿತನ, ಭೈರವನ ಮೃದು ಸ್ವಭಾವ, ಅವನ ಕತ್ತೆ, ಗಂಗೆಯ ಮುದುಕ ತಂದೆ ಫಕೀರಪ್ಪ ಇತ್ಯಾದಿಗಳು ಮೂಲದಿಂದ ಬಂದುವು. ಮುಖ್ಯ ಸನ್ನಿವೇಶವಂತೂ ಸರಿಯೇ. ಆದರೂ ‘ಗಂಗೆಯ ಗುತ್ತಿಗೆ’ ಒಂದು ಸ್ವತಂತ್ರ ಕೃತಿಯಷ್ಟೇ ಉಜ್ವಲವಾಗಿದೆಯೆಂಬುದು ಸುಳ್ಳಲ್ಲ. ಇದಕ್ಕೆ ಟೇಂಗ್ಸೆಯವರು ಮಾಡಿಕೊಂಡಿರುವ ಅಲ್ಪಸ್ವಲ್ಪ ವ್ಯತ್ಯಾಸಗಳು ಕಾರಣವಲ್ಲ. ಭೈರವ ಕೊಳ್ಳಕ್ಕೆ ಉರುಳಿಬಿದ್ದಾಗ ಗಂಗೆ ಅವನಿಗೆ ಸಹಾಯ ಮಾಡುವದರಲ್ಲಿ ಅಂಥ ಪ್ರಾಣಾಪಾಯದ ಪ್ರಶ್ನೆಯೇನೂ ಇಲ್ಲ. ಗಂಗೆಗೆ ಭೈರವನ ಬಗೆಗೆ ಇರುವದು ಅಂಥ ಆಳವಾದ ದ್ವೇಷವೂ ಅಲ್ಲ. ಇಂಥ ಸಣ್ಣ-ಪುಟ್ಟ ಬದಲಾವಣೆಗಳೇನೋ ಇವೆ. ಆದರೆ ಮುಖ್ಯವಾಗಿ ‘ಗಂಗೆಯ ಗುತ್ತಿಗೆ’ಯಲ್ಲಿ ಇಡಿಯ ಸಾಮಾಜಿಕ ಪರಿಸರವೇ ಬದಲಾಗಿದೆ. ನಮ್ಮಲ್ಲಿ ರೂಪಾಂತರವೆಂದು ಕರೆದುಕೊಳ್ಳುವ ಅನೇಕ ಕೃತಿಗಳು ಕೇವಲ ಹೆಸರುಗಳನ್ನು ಬದಲಿಸಿ, ತೊಡಕಿನ ಸಾಂಸ್ಕೃತಿಕ ಸಮಸ್ಯೆಗಳನ್ನು ಹಾಗೇ ಉಳಿಸಿ ಎಡಬಿಡಂಗಿಗಳಾಗಿರುವುದೇ ಹೆಚ್ಚು. ‘ಗಂಗೆಯ ಗುತ್ತಿಗೆ’ ಇಂಥ ಸಾಮಾಜಿಕ-ಸಾಂಸ್ಕೃತಿಕ ತೊಡಕುಗಳನ್ನು ಯಶಸ್ವಿಯಾಗಿ ಜೀರ್ಣಿಸಿಕೊಂಡಿದೆ. ಅಷ್ಟೇ ಅಲ್ಲ, ಒಂದು ವಿಶಿಷ್ಟ ಸಾಮಾಜಿಕ ಪರಿಸರವನ್ನು ನಿರ್ಮಿಸಿಕೊಂಡು ಗಂಗೆ-ಭೈರವರ ಪ್ರೇಮಕಥೆಯನ್ನು ಅದರ ಒಂದು ಭಾಗವನ್ನಾಗಿ ಬಳಸಿಕೊಳ್ಳುವ ಮೂಲಕ ಮೂಲಕಥೆಯ ಅರ್ಥವನ್ನು ಹಿಗ್ಗಿಸಿದೆ.
ಫಕೀರಪ್ಪ ಹಳೆಯ ಕಾಲದ ಮುದುಕ. ಅರಿವೆಗಳನ್ನು ಒಗೆದು ಗಂಜೀ ಮಾಡಿಕೊಟ್ಟು ಜೀವನಕ್ಕೆ ಹಾದಿ ಮಾಡಿಕೊಂಡವನು. ಆದರೆ ಕಾಲ ಬದಲಾಗುತ್ತದೆ. ಹೊಸ ವಾಷಿಂಗ್ ಕಂಪೆನಿಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಜೊತೆಗೆ ಸ್ಪರ್ಧೆಗಿಳಿಯುವದು ಫಕೀರಪ್ಪನಿಗೆ ಆಗುವುದಿಲ್ಲ. ಹೊಸ ಗಿರಾಕಿಗಳು ಅವನಿಗೆ ದೊರೆಯುವದಿಲ್ಲವಷ್ಟೇ ಅಲ್ಲ, ಹಳೆಯ ಗಿರಾಕಿಗಳೂ ಕೈಬಿಡತೊಡಗುತ್ತವೆ. ಆಧುನೀಕರಣದ ಪ್ರಕ್ರಿಯೆಯಲ್ಲಿ ಇದು ಅನಿವಾರ್ಯವಾಗಿ ನಡೆಯುವ ಸಂಗತಿ, ದೇಶಪಾಂಡೆಯವರು ಫಕೀರಪ್ಪನಿಗೆ ಹೇಳುವ ಮಾತುಗಳಲ್ಲಿ ಸಾಮಾಜಿಕ ಬದಲಾವಣೆಯ ಈ ವಿವರ ಸಹಜವಾಗಿ ಕಾಣಿಸಿಕೊಂಡಿದೆ. ಈ ಬಗೆಯ ಬದಲಾವಣೆ ಹಳೆಯ ವ್ಯವಸ್ಥೆಯನ್ನು ಮುರಿದು ಉಂಟುಮಾಡುವ ದುಃಖವನ್ನು ಕಥೆ ಸೂಚಿಸುತ್ತದೆ. ಫಕೀರಪ್ಪನಿಗೆ ಆಸರವಾಗಿದ್ದ ಬಾವಿ ಅವನ ಕೈ ಬಿಡುವದು ಕೂಡ ಈ ಬದಲಾವಣೆಯ ಪರಿಣಾಮವಾಗಿಯೇ ಎಂಬುದು ಮಹತ್ವದ ವಿಷಯವಾಗಿದೆ.
ಇದನ್ನು ಓದಿದ್ದೀರಾ?: ಪ. ರಮಾನಂದರ ಕತೆ | ಬಾಳ್ವೆಯ ಮಸಾಲೆ
ಈ ಬದಲಾವಣೆ ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧಗಳ ಮೇಲೂ ಪ್ರಭಾವ ಬೀರುತ್ತದೆ. ಗಂಗೆ-ಭೈರವರು ನಿಷ್ಕಾರಣವಾಗಿ ವೈರಿಗಳಾಗುತ್ತಾರೆ. ಫಕೀರಪ್ಪ ಗಿರಾಕಿಗಳನ್ನು ಕಳೆದುಕೊಂಡು ಜೀವನ ನಿರ್ವಹಣೆಗೂ ತೊಂದರೆಯಾದಾಗ ಭೈರವ ಅವನನ್ನು ತನ್ನ ವಾಷಿಂಗ್ ಕಂಪೆನಿಯಲ್ಲಿ ದಿನಗೂಲಿಗೆ ಕೆಲಸಕ್ಕೆ ಕರೆಯುವದು ಅವರ ನಡುವಿನ ಸಮಾನ ಸಂಬಂಧವನ್ನು ಮಾಲಿಕ-ಆಳುಗಳ ಸಂಬಂಧವಾಗಿ ಬದಲಿಸುವ ಪ್ರಯತ್ನವಾಗುತ್ತದೆ. ಒಳ್ಳೆಯ ಉದ್ದೇಶದಿಂದಲೇ ಭೈರವ ಮಾಡುವ ಅಮಾಯಕ ಸಲಹೆ ಗಂಗೆಗೆ ಸೊಕ್ಕಿನ ಮಾತಾಗಿ ಕಾಣುತ್ತದೆ. ಆದರೆ ಕೊನೆಗೂ ಮನುಷ್ಯ ಸಂಬಂಧಗಳ ಆಳವಾದ ತೊಡಕುಗಳೇ ಬದಲಾವಣೆಯ ದುಃಖವನ್ನು ಗೆಲ್ಲುತ್ತವೆ. ಮನುಷ್ಯ-ಮನುಷ್ಯರ ನಡುವಿನ ಪ್ರೀತಿ, ಮನುಷ್ಯ ಸಂಬಂಧಗಳ ಹಿಂದಿನ ಜವಾಬುದಾರಿಯ ಪ್ರಜ್ಞೆ ಇಲ್ಲಿ ಮುಖ್ಯವಾಗಿವೆ. ಈ ವಿಷಯದಲ್ಲಿ ಭೈರವನು ತೋರಿಸುವ ತಿಳಿವಳಿಕೆ ಸಹಾನುಭೂತಿಗಳು ಅರ್ಥಪೂರ್ಣವಾಗಿವೆ. ಇದು ಕಥೆಯ ಮುಖ್ಯವಾದ ಅಂಶ. ಈ ಅಂಶವೇ ‘ಗಂಗೆಯ ಗುತ್ತಿಗೆ’ಯ ಪ್ರೇಮಕಥೆಗೆ ಒಂದು ಗಟ್ಟಿಯಾದ ಸಾಮಾಜಿಕ ಚೌಕಟ್ಟನ್ನು ಒದಗಿಸಿದೆ. ಇದು ಟೇಂಗ್ಸೆಯವರ ಸ್ವಂತದ ಕಾಣಿಕೆ.
ಹೀಗೆ ಗಂಗೆ-ಭೈರವರ ಪ್ರೇಮ ಸಾಮಾಜಿಕ ಬದಲಾವಣೆಗಳಿಂದ ಹುಟ್ಟುವ ದುಃಖಕ್ಕೆ ಒಂದು ಪರಿಹಾರವೆಂಬಂತೆ ಬಂದಿದ್ದರೂ, ಅದರ ಉಜ್ವಲವಾದ ಸ್ವತಂತ್ರ ಜೀವಂತಿಕೆಗೆ ಯಾವ ಕುಂದೂ ಬಂದಿಲ್ಲ. ಇಲ್ಲಿಯ ಪ್ರೇಮಕಥೆ ಎಷ್ಟು ಆಕರ್ಷಕವಾಗಿದೆಯೆಂದರೆ, ಓದುಗರ ಲಕ್ಷ್ಯವನ್ನು ಅದೇ ಸೆಳೆದುಬಿಡುವಂತಿದೆ. ಗಂಗೆ-ಭೈರವರ ಆರಂಭದ ಹುಸಿ ಜಗಳದಲ್ಲಿ ಕಾಣುವ ಯೌವನಸಹಜವಾದ ಲವಲವಿಕೆ, ಆರೋಗ್ಯಕರವಾದ ವಿನೋದಗಳು ಈ ಪ್ರೇಮಕಥೆಗೆ ಹೊಸ ಹೊಳಪು ಕೊಟ್ಟಿವೆ. ಗಂಗೆಯ ಹಂಗಿಸುವ ಮಾತುಗಳು, ಬೇಕೆಂತಲೇ ಭೈರವನಿಗೆ ನೀರು ಸಿಡಿಸಿ ಕಾಲು ಕೆದರಿ ತೆಗೆಯುವ ಜಗಳ, ತನ್ನ ಕತ್ತೆಯ ಮೇಲೆ ಹಾಸಿ ಬೈದು ಭೈರವನನ್ನು ಸಿಟ್ಟಿಗೇಳಿಸುವ ರೀತಿ, ಬಟ್ಟೆಗಳು ಅದಲು-ಬದಲಾಗುವ ಜಾದೂ, ಮೊದಲಿನ ಜಗಳಗಳೇ ನಂತರ ಮಧುರ ನೆನಪುಗಳಾಗುವ ಬದಲಾವಣೆ-ಇವೆಲ್ಲ ಮೂಲದಲ್ಲಿಲ್ಲದ, ಜೀವನೋತ್ಸಾಹ ಚಿಮ್ಮುವ ಆಕರ್ಷಕ ವಿವರಗಳು.
ಈ ಕಥೆಯ ಧಾಟಿ, ಭಾಷೆ, ಸಂಭಾಷಣೆಗಳ ಸೊಗಸು ಇಲ್ಲಿಯ ಪ್ರೇಮಕಥೆಯ ಆಕರ್ಷಕತೆಯನ್ನು ಹೆಚ್ಚಿಸಿರುವ ಇತರ ಮುಖ್ಯ ಅಂಶಗಳು. ಅದರಲ್ಲಿಯೂ ಸಂಭಾಷಣೆಯಲ್ಲಿಯ ಹಿತವಾದ ಜಾಣತನ, ಆಡುಮಾತಿನ ಸಹಜ ಸತ್ವ ಸೊಗಸುಗಳಂತೂ ಅಪೂರ್ವವೆಂದೇ ಹೇಳಬೇಕು. ಮಾತಿನ ಸೊಗಸಿಗಾಗಿಯೇ ಈ ಕಥೆಯನ್ನು ಮತ್ತೆ ಮತ್ತೆ ಓದುವಂತಿದೆ. ಇದು ಉತ್ತರ ಕರ್ನಾಟಕದ ಲೇಖಕರಿಗೆ ಬಹಳ ಹಿಂದೆಯೇ ಸಿದ್ದಿಸಿದ ಅಪರೂಪದ ವರ.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)