“ಅಂಬೇಡ್ಕರರ ಹೋರಾಟದ ಫಲವಾಗಿ ದಲಿತರು, ಹಿಂದುಳಿದವರು, ಮಹಿಳೆಯರು ಸ್ವಾಭಿಮಾನದ ಬದುಕನ್ನು ಕಾಣಲು ಸಾಧ್ಯವಾಗಿದೆ. ಅವರು ಸಂವಿಧಾನವನ್ನು ರಚಿಸದಿದ್ದರೆ ಭಾರತದ ಸ್ಥಿತಿ ಬೇರೆಯಾಗಿರುತ್ತಿತ್ತು” ಎಂದು ಅಭಿಪ್ರಾಯಪಟ್ಟರು. ದಾವಣಗೆರೆ ಜಿಲ್ಲೆ ಹರಿಹರ ನಗರದ ಎ.ಕೆ.ಕಾಲೋನಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಸಂಸ) ತಾಲೂಕು ಸಮಿತಿಯಿಂದ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಹಲವರ ವಿರೋಧದ ನಡುವೆಯೂ ಹರಿಹರ ನಗರದ ಮುಖ್ಯ ಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಕ್ಕೆ ನಿವೇಶನ ಮಂಜೂರು ಮಾಡಿಸಿದೆ” ಎಂದು ಮಾಜಿ ಶಾಸಕ ಎಸ್. ರಾಮಪ್ಪ ನೆನಪಿಸಿಕೊಂಡರು.
“ವಾಣಿಜ್ಯ ಪ್ರದೇಶವಾಗುವುದರಿಂದ ಹಳೆ ಕೋರ್ಟ್ ಜಾಗದಲ್ಲಿ ಅಂಬೇಡ್ಕರ್ ಭವನಕ್ಕೆ ನಿವೇಶನ ಕೊಡಿಸುವುದು ಬೇಡ ಎಂದು ಹಲವರು ತಕರಾರು ಮಾಡಿದರು. ಆದರೆ ಆಗ ಶಾಸಕನಿದ್ದ ನಾನು ಸರ್ಕಾರದ ಮೇಲೆ ಒತ್ತಡ ಹೇರಿ ವಾಣಿಜ್ಯ ಪ್ರದೇಶದಲ್ಲೇ ನಿವೇಶನ ಮಂಜೂರು ಮಾಡಿಸಿದೆ” ಎಂದು ತಿಳಿಸಿದರು.
ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, “ನಾಡಿನ ದಲಿತರು, ಹಿಂದುಳಿದವರ ಆಶಾಕಿರಣವಾದ ಪ್ರೊ.ಬಿ.ಕೃಷ್ಣಪ್ಪರು ಜನಿಸಿದ ಬೀದಿಯಲ್ಲೇ ಬಡ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ ಮಾಡಿ ಅವರನ್ನು ಸ್ಮರಿಸುವ ಕಾರ್ಯ ಸಂಘಟನೆಯಿಂದ ನಡೆಸಲಾಗುತ್ತಿದೆ” ಎಂದರು.
“ಒಳ ಮೀಸಲಾತಿಯ ಬೀಜವನ್ನು ನಾಡಿನಲ್ಲಿ ಮೊದಲು ಬಿತ್ತಿದ ಕೀರ್ತಿ ಪ್ರೊ. ಬಿ ಕೃಷ್ಣಪ್ಪರಿಗೆ ಸಲ್ಲುತ್ತದೆ. ಈ ಕೇರಿಯಲ್ಲಿರುವ ಅವರು ಜನಿಸಿದ ಮನೆ ಶಿಥಿಲಾವಸ್ಥೆಯಲ್ಲಿದೆ. ಅದನ್ನು ಜೀರ್ಣೋದ್ದಾರ ಮಾಡಿ ಜಿಲ್ಲಾಡಳಿತ ಸ್ಮಾರಕವನ್ನಾಗಿ ರೂಪಿಸಬೇಕು. ಅಲ್ಲಿ ವಾಸವಿರುವ ಅವರ ಬಂಧುಗಳಿಗೆ ಪರ್ಯಾಯ ವಸತಿ ವ್ಯವಸ್ಥೆ ಮಾಡಬೇಕಿದೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಧೂಡಾ ಮಾಜಿ ಸದಸ್ಯ ಜಿ.ವಿ.ವೀರೇಶ್ ಮಾತನಾಡಿ, “ದೇಶದಲ್ಲಿ ಅಂಬೇಡ್ಕರರು, ಕರ್ನಾಟಕದಲ್ಲಿ ಪ್ರೊ. ಬಿ ಕೃಷ್ಣಪ್ಪನವರು ಮಾಡಿದ ಹೋರಾಟವನ್ನು ನಾವು ಸದಾ ಸ್ಮರಿಸಬೇಕು. ಅವರಿಗೆ ಗೌರವ ಸಲ್ಲಿಸುವ ಜೊತೆಗೆ ಅವರ ಆದರ್ಶಗಳನ್ನೂ ಪಾಲನೆ ಮಾಡುವತ್ತಲೂ ಆದ್ಯತೆ ನೀಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೊಲಿಗೆಯಂತ್ರ ತರಬೇತಿಗೆ ಅಪರಿಚಿತರಿಗೆ ಹಣ ಪಾವತಿಸಿ ಮೋಸಹೋಗಬೇಡಿ: ಕೈಗಾರಿಕಾ ಇಲಾಖೆ ಸ್ಪಷ್ಟನೆ
ಶ್ರೀಶೈಲ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಬಿ.ಆರ್.ಗುರುದೇವ ಸಂವಿಧಾನ ಪೀಠಿಕೆ ವಾಚಿಸಿದರು. ಸಮಾರಂಭದಲ್ಲಿ 1000 ನೋಟ್ಬುಕ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸಹನಾ ಆರ್ಕೇಷ್ಟ್ರಾ ತಂಡದವರಿಂದ ರಸ ಮಂಜರಿ ಕಾರ್ಯಕ್ರಮ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ.ಆರ್.ಸುರೇಶ್, ಎಚ್.ಜೆ.ಮರಿದೇವ, ಯಶವಂತಪ್ಪ, ಮೂಕ ಮೈಲಪ್ಪ, ನೋಟದವರ ಕರಿಲಿಂಗಪ್ಪ, ಹಾಲೇಶಪ್ಪ ಡಿ, ರಾಜೂ ಜೆ, ಷಣ್ಮುಖಪ್ಪ, ಮಾರುತಿ ಪಿಬಿ, ಕುಮಾರ್ ಡಿ, ಗೋಣಿಬಸಪ್ಪ, ಗಾಯಕರಾದ ಬಿ.ಆರ್.ಹನುಮಂತಪ್ಪ, ಚಂದ್ರಶೇಖರ್ , ಅಮ್ಜದ್ ಸೇರಿದಂತೆ ಇತರ ಮುಖಂಡರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.