ಈ ಹಿಂದಿನ ಸರ್ಕಾರಗಳು ಮಾಡಿದಂತೆ ಅಧಿಕಾರಿಗಳನ್ನೋ, ಶಾಸಕಿಯನ್ನೋ ನಾಮನಿರ್ದೇಶನ ಮಾಡಿದರೆ ಅವರವರ ಕ್ಷೇತ್ರದ ಕಾರ್ಯಗಳಲ್ಲೆ ಮುಳುಗಿಹೋಗುವ ಅವರು ವಕ್ಫ್ ಬೋರ್ಡಿನಲ್ಲಿ ಎಷ್ಟರ ಮಟ್ಟಿಗೆ ಮಹಿಳಾಪರ ಧ್ವನಿ ಆಗುತ್ತಾರೆ, ಬೀದಿಗಿಳಿದು ಕೆಲಸ ಮಾಡುತ್ತಾರೆ ಎಂಬುದು ಸದ್ಯದ ಪ್ರಶ್ನೆ.
ವಕ್ಫ್ ಬೋರ್ಡಿನ ಚುನಾವಣೆಗಳ ಮುಗಿದು ತಿಂಗಳುಗಳ ಕಳೆಯುತ್ತ ಬಂದರೂ ಅಧ್ಯಕ್ಷಗಾದಿ ಹಿಡಿಯಲು ಪೈಪೋಟಿ ನಡೆಸುತ್ತಿರುವವರು ವಕ್ಫ್ ಬೋರ್ಡಿಗೆ ಧಾರ್ಮಿಕ ಗುರುಗಳು ಮತ್ತು ಮಹಿಳಾ ಸದಸ್ಯರನ್ನು ಸರ್ಕಾರ ನಾಮನಿರ್ದೇಶನ ಮಾಡುವುದನ್ನೇ ಕಾಯುತ್ತ ಕುಳಿತಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯ ಜಾರಿ ಕುರಿತು ದೇಶದಾದ್ಯಂತ ತೀವ್ರ ಪರ-ವಿರೋಧಗಳ ಚರ್ಚೆಯ ಜೊತೆಗೆ ಹೋರಾಟಗಳ ತೀವ್ರ ಸ್ವರೂಪವನ್ನು ಪಡೆದುಕೊಂಡಿರುವ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ಸಬಲೀಕರಣ ಮತ್ತು ವಕ್ಫ್ ನಿರ್ವಹಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ರಾಜ್ಯ ವಕ್ಫ್ ಮಂಡಳಿಗಳು (ಸೆಕ್ಷನ್ 14) ಮತ್ತು ಕೇಂದ್ರ ವಕ್ಫ್ ಮಂಡಳಿ (ಸೆಕ್ಷನ್9) ಎರಡರಲ್ಲೂ ಇಬ್ಬರು ಮುಸ್ಲಿಂ ಮಹಿಳೆಯರನ್ನು ಸದಸ್ಯರನ್ನಾಗಿ ಸೇರಿಸಲಾಗುವುದು ಎಂಬ ಅಂಶವನ್ನು ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆ, 2025ರ ಪ್ರಮುಖ ಅಂಶವೆಂದೇ ಬಿಜೆಪಿ ಹೇಳುತ್ತಾ, ಮುಸ್ಲಿಂ ಮಹಿಳೆಯರನ್ನು ಒಡೆದಾಳುವ ತಂತ್ರಕ್ಕೆ ತ್ರಿವಳಿ ತಲಾಖ್ ನಂತರ ಮತ್ತೊಮ್ಮೆ ಕೈಹಾಕಿದೆ. ಆದರೆ ಬಿಜೆಪಿಯ ಈ ತಂತ್ರ ಕರ್ನಾಟಕದಲ್ಲಿ ಕೈಗೂಡುವುದಿಲ್ಲ.
ಕೇಂದ್ರ ವಕ್ಫ್ ಕಾಯಿದೆ 1995ರ ಅಡಿಯಲ್ಲಿ ರಚಿತವಾದ ಕರ್ನಾಟಕ ವಕ್ಫ಼್ ಬೋರ್ಡಿನಲ್ಲಿ ವಕ್ಫ್ ಸಮಿತಿ ರಚನೆಯಾದಾಗಿನಿಂದಲೂ ಇಬ್ಬರು ಮುಸ್ಲಿಂ ಮಹಿಳೆಯರನ್ನು ಸದಸ್ಯರನ್ನಾಗಿ ಮಾಡುವ ನಿಯಮವಿದೆ. ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕ ವಕ್ಫ್ ಬೋರ್ಡಿನ ಈ ನಡೆ ಸಂವಿಧಾನದ ಆಶಯಗಳಿಗೆ ಪೂರಕವಾಗಿದೆ. ಆದರೆ ಈ ಎರಡು ಮಹಿಳಾ ಸ್ಥಾನಗಳನ್ನು ಬಹುತೇಕ ಮುಸ್ಲಿಂ ಮಹಿಳಾ ಅಧಿಕಾರಿಗಳಿಗೆ ಅಥವಾ ಈಗಾಗಲೇ ಚುನಾಯಿತರಾದ ಮುಸ್ಲಿಂ ಶಾಸಕಿಗೆ ಅಥವಾ ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ಯಾವುದೇ ರೀತಿಯಲ್ಲೂ ತೊಡಗಿಕೊಳ್ಳದ, ಯಾವುದಾದರೂ ಸ್ತ್ರೀಯರಿಗೆ ನಾಮಕಾವಾಸ್ತೆ ಸದಸ್ಯತ್ವ ನೀಡುವ ಪರಿಪಾಠವಿದೆ ಎಂಬುದು ಖೇದಕರ.
ರಾಜ್ಯ ರಾಜಕಾರಣದಲ್ಲಿ ಮುಸ್ಲಿಂ ಮಹಿಳೆಯರ ಪಾತ್ರ ಮತ್ತು ಭಾಗವಹಿಸುವಿಕೆಯ ಕುರಿತು ಪ್ರಶ್ನೆಗಳು ಬಂದಾಗಲೆಲ್ಲ ಸಿಗುವ ಉತ್ತರ ಶೂನ್ಯ ಅಥವಾ ಬೆರಳೆಣಿಕೆಗೂ ಕಡಿಮೆ. ನೆರೆಯ ರಾಜ್ಯಗಳಿಗೆ ಹೋಲಿಸಿಕೊಂಡರೆ ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡಿರುವ ಸ್ತ್ರೀಯರ ಸಂಖ್ಯೆಯು ನಮ್ಮ ರಾಜ್ಯದಲ್ಲಿ ಕಡಿಮೆಯೇ ಇದೆ. ಇದಕ್ಕೆ ಕಾರಣಗಳನ್ನು ಹುಡುಕಿಕೊಂಡು ಹೊರಟರೆ ಸಂಕುಚಿತತೆ, ಶಿಕ್ಷಣದ ಕೊರತೆ, ಭಾಷೆ ಹಲವಾರು ವಿಚಾರಗಳ ಜೊತೆಗೆ ಸಮಾನ ಅವಕಾಶಗಳನ್ನು ಕೊಡಲು ಸೋತ ಸಕಲ ಸರ್ಕಾರಗಳು ಕಣ್ಣೆದುರಿಗೆ ಬರುತ್ತವೆ.
ಈ ದಿನ ಸಂಪಾದಕೀಯ | ಕುಂಭಮೇಳದ ಕಾಲ್ತುಳಿತದಲ್ಲಿ ಗತಿಸಿದವರ ಮನೆಗಳಿಗೇಕೆ ಧಾವಿಸಲಿಲ್ಲ ಬಿಜೆಪಿ ಹಿಂಡು?
ರಾಜ್ಯದ ನಲವತ್ತೈದು ಸಾವಿರಕ್ಕೂ ಅಧಿಕ ಮಸೀದಿಗಳು, ದರ್ಗಾಗಳು, ಈದ್ಗಾಗಳು, ಖಬ್ರಸ್ತಾನಗಳು (ಸಮಾಧಿ ಸ್ಥಳಗಳು), ಅಶೂರ್ಖಾನಾಗಳು, ಅನಾಥಾಶ್ರಮಗಳು, ಮಕಾನ್ಗಳು ವಕ್ಫ಼್ ಬೋರ್ಡಿನ ಅಡಿಯಲ್ಲಿ ಬರುತ್ತವೆ. ಅಂದರೆ ರಾಜ್ಯದಲ್ಲಿರುವ ಎಂಬತ್ತು ಲಕ್ಷ ಮುಸಲ್ಮಾನರನ್ನು ಒಳಗೊಂಡಿರುವ ಮತ್ತು ಪ್ರತಿನಿಧಿಸುವ ಸಂಸ್ಥೆ ವಕ್ಫ್ ಬೋರ್ಡ್. ಇಂತಹ ವಕ್ಫ್ ಬೋರ್ಡಿಗೆ ಮಹಿಳಾ ಸದಸ್ಯರ ನಾಮ ನಿರ್ದೇಶನ ಮಾಡುವಾಗ ಮಹಿಳಾ ಪರವಾಗಿರುವ ಕಾಂಗ್ರೆಸ್ ಸರ್ಕಾರ ಸಾಮಾಜಿಕವಾಗಿ, ರಾಜಕೀಯವಾಗಿ ಮುಸ್ಲಿಂ ಮಹಿಳೆಯರೊಂದಿಗೆ ಕೆಲಸ ಮಾಡುತ್ತಿರುವವರಿಗೆ ಹೊಸಬರಿಗೆ ಮತ್ತು ಸಮರ್ಥರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕಿದೆ.
ಈ ಹಿಂದಿನ ಸರ್ಕಾರಗಳು ಮಾಡಿದಂತೆ ಅಧಿಕಾರಿಗಳನ್ನೋ, ಶಾಸಕಿಯನ್ನೋ ನಾಮನಿರ್ದೇಶನ ಮಾಡಿದರೆ ಅವರವರ ಕ್ಷೇತ್ರದ ಕಾರ್ಯಗಳಲ್ಲೇ ಮುಳುಗಿಹೋಗುವ ಅವರು, ವಕ್ಫ್ ಬೋರ್ಡಿನಲ್ಲಿ ಎಷ್ಟರ ಮಟ್ಟಿಗೆ ಮಹಿಳಾಪರ ಧ್ವನಿ ಆಗುತ್ತಾರೆ, ಬೀದಿಗಿಳಿದು ಕೆಲಸ ಮಾಡುತ್ತಾರೆ ಎಂಬುದು ಸದ್ಯದ ಪ್ರಶ್ನೆ.
ಮುಸಲ್ಮಾನ ಮಹಿಳೆಯರ ನಾಯಕತ್ವಕ್ಕೆ ಅಡಿಗಲ್ಲು ಹಾಕುವ ಹೊಣೆಗಾರಿಕೆಯನ್ನು ಕಾಂಗ್ರೆಸ್ ಸರ್ಕಾರ ಹೊರುವ ಮೂಲಕ ಬಿಜೆಪಿಯ ಒಡೆದಾಳುವ ಕಾಯ್ದೆಗೆ ಸೆಡ್ಡು ಹೊಡೆಯುತ್ತದೋ, ಇಲ್ಲ ಈ ಹಿಂದಿನಂತೆಯೇ ಐ.ಎ.ಎಸ್, ಕೆ.ಎ.ಎಸ್ ಅಧಿಕಾರಿಗಳನ್ನು ನಾಮ ನಿರ್ದೇಶನ ಮಾಡಿ ನಾಮಕಾವಾಸ್ತೆ ಮಹಿಳಾ ಪ್ರಾತಿನಿಧ್ಯ ನೀಡುತ್ತಿದ್ದೇವೆ ಎನ್ನುವ ಹಿಂದಿನ ಸರ್ಕಾರಗಳ ಹಳೆ ಚಾಳಿಗಳನ್ನೆ ಮುಂದುವರೆಸುತ್ತದೋ ಕಾದು ನೋಡಬೇಕು.