ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಸ್ಥಿತಿಯು ತೀವ್ರವಾಗುತ್ತಿರುವ ಬೆಳವಣಿಗೆಯಲ್ಲೀ, ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ತಾತ್ಕಾಲಿಕ ಕದನ ವಿರಾಮ ಜಾರಿಗೆ ಬಂದಿದೆ. ಇನ್ನೊಂದೆಡೆ, ಅಮೆರಿಕ ಮತ್ತು ಇರಾನ್ ನಡುವಿನ ಸ್ಥಗಿತಗೊಂಡಿರುವ ಶಾಂತಿ ಮಾತುಕತೆಗಳಿಗೆ ಪಾಕಿಸ್ತಾನ ಮಧ್ಯಸ್ಥಿಕೆಯನ್ನು ವಹಿಸಿದ್ದು, ಮಾತುಕತೆ ಮತ್ತೊಮ್ಮೆ ಶುರುವಾಗುವ ಲಕ್ಷಣಗಳು ಕಂಡುಬಂದಿವೆ. ಆದರೆ, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ಅಮೆರಿಕ ಸೇನೆ ಇರಾನ್ ಬಂದರುಗಳ ಮೇಲೆ ದಿಗ್ಬಂಧನವನ್ನು ತೀವ್ರಗೊಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ನಡುವೆ ನಡೆದಿದ್ದ ಮಾತುಕತೆಯ ಫಲವಾಗಿ 10 ದಿನಗಳ ಕದನ ವಿರಾಮ ಘೋಷಣೆಯಾಗಿದೆ. ಆದರೆ, ಇಸ್ರೇಲ್ ಸೇನೆ ಲೆಬನಾನ್ ಗಡಿಯಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಲೆಬನಾನ್ನಲ್ಲಿ 10 ಕಿಲೋಮೀಟರ್ ಸುರಕ್ಷತಾ ವಲಯದಲ್ಲಿ ತಮ್ಮ ಸೇನೆ ಮುಂದುವರೆಯಲಿದೆ ಮತ್ತು ಉಗ್ರರ ನುಸುಳುವಿಕೆಯನ್ನು ತಡೆಯಲು ಇದು ಅತ್ಯವಶ್ಯಕ ಎಂದು ಅವರು ಹೇಳಿದ್ದಾರೆ. ಈ ಕದನ ವಿರಾಮವನ್ನು ಕತಾರ್ ಮತ್ತು ಇರಾನ್ ಸ್ವಾಗತಿಸಿವೆ. ಇರಾನ್ನ ಸಂಸತ್ತಿನಲ್ಲಿ ಮಾತನಾಡಿದ ಸಭಾಪತಿ, ಇದು ಹಿಜ್ಬುಲ್ಲಾ ಸಂಘಟನೆಯ ದೃಢತೆಯ ಫಲ ಎಂದಿದ್ದಾರೆ.
ಹೋರ್ಮುಜ್ ಜಲಸಂಧಿ ಮತ್ತು ಇರಾನ್ ಬಂದರುಗಳ ಮೇಲೆ ಅಮೆರಿಕ ಸೇನೆ ಭಾರಿ ನಿಗಾ ಇಟ್ಟಿದ್ದು, ಕಠಿಣ ದಿಗ್ಬಂಧನ ಹೇರಿದೆ. ಸುಮಾರು 10 ಸಾವಿರಕ್ಕೂ ಕ್ಕೂ ಹೆಚ್ಚು ಸೈನಿಕರು, ಯುಎಸ್ಎಸ್ ಅಬ್ರಹಾಂ ಲಿಂಕನ್ ಮತ್ತು ಯುಎಸ್ಎಸ್ ಡೆಲ್ಬರ್ಟ್ ಡಿ ಬ್ಲಾಕ್ ಸೇರಿದಂತೆ 12 ನೌಕಾ ಹಡಗುಗಳು ಹಾಗೂ 100 ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, “ಹೋರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಸಾಮಾನ್ಯ ಹಡಗುಗಳಿಗೆ ತೊಂದರೆ ಕೊಟ್ಟರೆ, ಅಂತಹ ಇರಾನ್ನ ಹಡಗುಗಳನ್ನು ಭಸ್ಮ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 100 ಡಾಲರ್ ಗಿಂತ ಹೆಚ್ಚಾಗಿದೆ.
ಇದನ್ನು ಓದಿದ್ದೀರಾ? ಇರಾನ್: ಬಿತ್ತಿದ್ದನ್ನು ಬೆಳೆದ ಅಮೆರಿಕ, ಆಡಳಿತ ಬದಲಿಸುವ ಕೊಲೆಗಡುಕತನ ಕಡುಕಟ್ಟರ್ ವಾದವನ್ನು ಭುಗಿಲೆಬ್ಬಿಸಿತು!
ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಗಳಿಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದ್ದು, ಮುಂದಿನ ಸುತ್ತಿನ ಮಾತುಕತೆ ಕೂಡ ಇಸ್ಲಾಮಾಬಾದ್ನಲ್ಲಿಯೇ ನಡೆಯುವ ಸಾಧ್ಯತೆ ಇದೆ ಎಂದು ವೈಟ್ ಹೌಸ್ ಕಾರ್ಯದರ್ಶಿ ಕರೋಲಿನ್ ಲೀವಿಟ್ ಹೇಳಿದ್ದಾರೆ.
ಅಮೆರಿಕ-ಇರಾನ್ ನಡುವೆ ತಾತ್ಕಾಲಿಕ ಶಾಂತಿ ಒಪ್ಪಂದದ ಸಾಧ್ಯತೆ ಇದ್ದು, ಇರಾನ್ ತನ್ನ ಬಳಿ ಇರುವ ‘ನ್ಯೂಕ್ಲಿಯರ್ ಡಸ್ಟ್’ (ಸಂವರ್ಧಿತ ಯುರೇನಿಯಂ) ಅನ್ನು ಅಮೆರಿಕಕ್ಕೆ ಹಿಂದಿರುಗಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, 20 ವರ್ಷಗಳ ಕಾಲ ಅಣು ಸಂವರ್ಧನೆ ನಿಲ್ಲಿಸುವ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ.
ಜಾಗತಿಕ ಪ್ರತಿಕ್ರಿಯೆ ಮತ್ತು ಭಾರತದ ಕಳವಳ
ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನ ಸ್ಥಿತಿಯನ್ನು ಶಮನ ಪಡಿಸಲು ಮತ್ತು ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ 40 ದೇಶಗಳ ನಾಯಕರ ಜೊತೆ ವರ್ಚುವಲ್ ಸಭೆ ನಡೆಸಲಿದ್ದಾರೆ.
ಇನ್ನೊಂದೆಡೆ, ಭಾರತ ಸಹ ಈ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ಹರೀಶ್ ಪರ್ವತನೇನಿ, ವಾಣಿಜ್ಯ ಹಾಗೂ ತೈಲ ಹಡಗುಗಳ ಮೇಲೆ ಆಗುತ್ತಿರುವ ದಾಳಿಗಳನ್ನು ಖಂಡಿಸಿದ್ದಾರೆ. ಜಾಗತಿಕ ತೈಲ ಸರಬರಾಜು ಮತ್ತು ಆರ್ಥಿಕತೆಗೆ ಇದರಿಂದ ಭಾರಿ ಪೆಟ್ಟುಬೀಳುತ್ತಿದ್ದು, ಕೂಡಲೇ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಬೇಕು ಎಂದು ಭಾರತ ಆಗ್ರಹಿಸಿದೆ.




