1980ರ ದಶಕದಲ್ಲಿ ಇರಾಕ್-ಇರಾನ್ ಯುದ್ಧದಲ್ಲಿ 2.5 ಲಕ್ಷ ಜನರ ಸಾವಿಗೆ ಕಾರಣವಾದ ರೆಜಾಯಿ, ಪ್ರಸ್ತುತ ಸಂಘರ್ಷದ ಕುರಿತು ಮಾತನಾಡುತ್ತಾ, “ಇನ್ನು ಮುಂದೆ ಕಣ್ಣಿಗೆ ಕಣ್ಣು ಎಂಬ ಪ್ರತೀಕಾರವಿರುವುದಿಲ್ಲ. ಶತ್ರುಗಳ ಕಣ್ಣಿಗೆ ಬದಲಾಗಿ ಅವರ ತಲೆ, ಕೈ ಮತ್ತು ಕಾಲುಗಳನ್ನೇ ಕಡಿಯಲಾಗುವುದು” ಎಂದು ಎಚ್ಚರಿಸಿದ್ದಾರೆ
ಇರಾನ್ನ ಉನ್ನತ ನಾಯಕರನ್ನು ಹತ್ಯೆಗೈದರೆ, ಆ ದೇಶದ ಆಡಳಿತ ವ್ಯವಸ್ಥೆ ಕುಸಿದುಬೀಳುತ್ತದೆ ಅಥವಾ ಅಮೆರಿಕ ಮತ್ತು ಇಸ್ರೇಲ್ನ ಹಿತಾಸಕ್ತಿಗಳಿಗೆ ತಲೆಬಾಗುವ, ಮಾತುಕತೆಗೆ ಸಿದ್ಧವಿರುವ ನಾಯಕರು ಅಧಿಕಾರಕ್ಕೆ ಬರುತ್ತಾರೆ ಎಂಬುದು ಅಮೆರಿಕದ ಲೆಕ್ಕಾಚಾರವಾಗಿತ್ತು. ಇದೇ ಉದ್ದೇಶದಿಂದ ವಾಯುದಾಳಿ ನಡೆಸಿ ಇರಾನ್ನ ಪರಮೋಚ್ಛ ನಾಯಕ ಅಲಿ ಖಮೇನಿ ಸೇರಿದಂತೆ ಹಲವು ಉನ್ನತ ಮಟ್ಟದ ನಾಯಕರನ್ನು ಹತ್ಯೆ ಮಾಡಲಾಯಿತು. ಆದರೆ, ಈ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಗಿದ್ದು, ಈ ಹತ್ಯೆಗಳು ಇರಾನ್ನಲ್ಲಿ ಕಟ್ಟರ್ವಾದಿಗಳನ್ನು ನಿವಾರಿಸುವ ಬದಲು, ಕಡು ಕಟ್ಟರ್ವಾದಿಗಳು ಮತ್ತು ವಿನಾಶಕಾರಿ ಸಿದ್ಧಾಂತವನ್ನು ನಂಬುವವರು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದೆ. ಈ ಬೆಳವಣಿಗೆಯು ಪಶ್ಚಿಮ ಏಷ್ಯಾದ ಶಾಂತಿಯ ಭರವಸೆಯನ್ನು ಮತ್ತಷ್ಟು ಕಮರಿಸಿದೆ.
ಮಾರ್ಚ್ 13 ರಂದು ಇರಾನ್ನ ರಾಜಧಾನಿ ಟೆಹ್ರಾನ್ನ ಎನ್ಖೆಲಾಬ್ ಚೌಕದಲ್ಲಿ ಬೃಹತ್ ಜಾಹೀರಾತು ಫಲಕವೊಂದು ಪ್ರತ್ಯಕ್ಷವಾಯಿತು. ಅದರಲ್ಲಿ ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಸಮರ ಕಂದಕದಲ್ಲಿ ನಿಂತು, ಇಸ್ಲಾಮಿಕ್ ರಿವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ಗಳಿಗೆ ಶತ್ರುಗಳ ಮೇಲೆ ಕ್ಷಿಪಣಿ ಉಡಾವಣೆ ಮಾಡಲು ಸೂಚಿಸುತ್ತಿರುವ ಚಿತ್ರವಿತ್ತು. ಯಹೂದಿ ಬುಡಕಟ್ಟುಗಳ ವಿರುದ್ಧ ಐತಿಹಾಸಿಕ ವಿಜಯ ಸಾಧಿಸಿದ್ದ ಇಸ್ಲಾಂನ ಪೂಜ್ಯ ವ್ಯಕ್ತಿ ಇಮಾಮ್ ಅಲಿ ಅವರಿಗೆ ಮೊಜ್ತಬಾರನ್ನು ಹೋಲಿಸಿ, ಈ ಕ್ಷಿಪಣಿ ದಾಳಿಯ ಕಾರ್ಯಾಚರಣೆಯು ‘ದೈವಿಕ ಪ್ರೇರಿತ’ ಎಂದು ಬಿಂಬಿಸಲಾಗಿತ್ತು. ಇರಾನ್ನ ವಿರೋಧಿಗಳ ಪಾಲಿಗೆ ಇದೊಂದು ಅತಿದೊಡ್ಡ ದುಃಸ್ವಪ್ನದ ಸಾಕ್ಷಾತ್ಕಾರದಂತಿತ್ತು. ಮಿಲಿಟರಿ ಆಡಳಿತವಿರುವ, ಯುವ ಕಟ್ಟರ್ವಾದಿ ನಾಯಕತ್ವದ ಮತ್ತು ಐಆರ್ಜಿಸಿ ಪಡೆಗಳು ಇನ್ನಷ್ಟು ಪ್ರಬಲವಾಗಿರುವ ಇರಾನ್ ಈಗ ವಿಶ್ವದ ಮುಂದಿದೆ.
ಇರಾನ್ನ ಈ ನೂತನ ನಾಯಕತ್ವವು ದೇಶದೊಳಗಾಗಲಿ ಅಥವಾ ವಿದೇಶಗಳಲ್ಲಾಗಲಿ ಯಾವುದೇ ರೀತಿಯ ರಾಜಕೀಯ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧದ ಒಂದು ತಿಂಗಳ ನಂತರ ನೂತನ ನಾಯಕತ್ವವನ್ನು “ಹೆಚ್ಚು ಸಮಂಜಸ” (More reasonable) ಎಂದು ಕರೆದಿದ್ದರೂ, ವಾಸ್ತವ ಭಿನ್ನವಾಗಿದೆ. ಇಸ್ರೇಲ್ ಸೇನಾ ಗುಪ್ತಚರ ವಿಭಾಗದ ಇರಾನ್ ಡೆಸ್ಕ್ನ ಮಾಜಿ ಮುಖ್ಯಸ್ಥ ಡ್ಯಾನಿ ಸಿಟ್ರಿನೋವಿಚ್ ಹೇಳುವಂತೆ, “ಯುದ್ಧವು ಆಡಳಿತವನ್ನು ಬದಲಾಯಿಸಿದೆ, ಆದರೆ ಅದು ಕೆಟ್ಟದಾಗಿದೆ. ಯುದ್ಧಕ್ಕೂ ಮುನ್ನ ಇರಾನ್ ಜನರು ಎದುರಿಸುತ್ತಿದ್ದ ಪರಿಸ್ಥಿತಿಗಿಂತಲೂ ಭೀಕರವಾದ ವಾಸ್ತವವನ್ನು ನಾವೇ ಸೃಷ್ಟಿಸಿದ್ದೇವೆ” ಎಂದಿದ್ದಾರೆ.
ತಂದೆ ಅಲಿ ಖಮೇನಿ ಮತ್ತು ಕುಟುಂಬದ ಇತರ ಸದಸ್ಯರನ್ನು ಬಲಿತೆಗೆದುಕೊಂಡ ವಾಯುದಾಳಿಯಿಂದ ಪಾರಾಗಿ, ಧರ್ಮಗುರುಗಳ ಮಂಡಳಿಯಿಂದ ಪರಮೋಚ್ಚ ನಾಯಕನಾಗಿ ಆಯ್ಕೆಯಾದ 56 ವರ್ಷದ ಮೊಜ್ತಬಾ ಖಮೇನಿ, ನೇಮಕಗೊಂಡಾಗಿನಿಂದಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ದಾಳಿಯಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದು, ದೈನಂದಿನ ಆಡಳಿತದಲ್ಲಿ ಭಾಗವಹಿಸುತ್ತಿಲ್ಲ ಎಂಬ ಊಹಾಪೋಹಗಳೂ ಇವೆ. ಆದರೆ, ಅವರ ಅನುಪಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸುತ್ತಿರುವ ನಾಯಕರು, ಇರಾನ್ನ ಮಿಲಿಟರಿ, ಇಂಧನ ಸೌಲಭ್ಯಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ನಿರಂತರ ಬಾಂಬ್ ದಾಳಿಯ ನಡುವೆಯೂ ಬಗ್ಗಿಲ್ಲ. ಬದಲಾಗಿ, ದೇಶದೊಳಗಿನ ವಿರೋಧ ಪಕ್ಷಗಳನ್ನು ಬಂಧನ, ಮರಣದಂಡನೆಗಳ ಮೂಲಕ ಹತ್ತಿಕ್ಕುತ್ತಿದ್ದಾರೆ ಮತ್ತು ಬೀದಿಗಿಳಿಯುವ ಪ್ರತಿಭಟನಾಕಾರರಿಗೆ ಗುಂಡೇಟಿನ ಎಚ್ಚರಿಕೆ ನೀಡುತ್ತಿದ್ದಾರೆ.
ಯುದ್ಧವನ್ನು ಶೀಘ್ರವಾಗಿ ಕೊನೆಗೊಳಿಸುವ ಬದಲು, ಈ ಹೊಸ ನಾಯಕರು ನೆರೆಯ ಅರಬ್ ರಾಷ್ಟ್ರಗಳ ಮೇಲೆ ಸತತ ದಾಳಿಗಳನ್ನು ಆರಂಭಿಸಿದ್ದಾರೆ. ಜಾಗತಿಕ ತೈಲ ಪೂರೈಕೆಯ ಶೇಕಡಾ 20ರಷ್ಟು ಸಾಗಣೆಯಾಗುವ ‘ಹಾರ್ಮುಜ್ ಜಲಸಂಧಿ’ಯ ಮೇಲಿನ ತಮ್ಮ ನಿಯಂತ್ರಣವನ್ನು ಅವರು ಹೊಸ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅಮೆರಿಕದೊಂದಿಗೆ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ನಡೆದ ವಿಫಲ ಮಾತುಕತೆಗೆ ಕಳುಹಿಸಲಾದ ಇರಾನ್ ನಿಯೋಗದಲ್ಲಿ ಸಂಪ್ರದಾಯವಾದಿ ಮೊಹಮ್ಮದ್ ಬಘೇರ್ ಘಾಲಿಬಾಫ್ ಮತ್ತು ಪಾಶ್ಚಿಮಾತ್ಯರೊಂದಿಗಿನ ಸಂವಾದವನ್ನು ತೀವ್ರವಾಗಿ ವಿರೋಧಿಸುವ ಅಲಿ ಬಘೇರಿ ಕಾನಿ ಅವರಂತಹ ನಾಯಕರು ಇದ್ದರು. ಯುದ್ಧದ ನಷ್ಟದಿಂದಾಗಿ ಒಪ್ಪಂದಕ್ಕೆ ಬರಲೇಬೇಕಾದ ಆರ್ಥಿಕ ಒತ್ತಡವಿದ್ದರೂ, ಅಮೆರಿಕ-ಇರಾನ್ ನಡುವಿನ ದ್ವೇಷ ಮುಂದುವರಿಯುವ ಲಕ್ಷಣಗಳೇ ಸ್ಪಷ್ಟವಾಗಿವೆ.
ಇದನ್ನು ಓದಿದ್ದೀರಾ? ನ್ಯಾಯಮೂರ್ತಿಗಳೇ, ದಯವಿಟ್ಟು ನೀವೇ ಹಿಂದೆ ಸರಿಯಿರಿ; ಹೈಕೋರ್ಟ್ನಲ್ಲಿ ಕೇಜ್ರಿವಾಲ್ ಖತರ್ನಾಕ್ ವಾದ ಮಂಡನೆ
ಮೊಜ್ತಬಾ ಖಮೇನಿ ಯುವಕರಾಗಿದ್ದಾಗಿನಿಂದಲೂ ತೆರೆಮರೆಯಲ್ಲಿಯೇ ಕಠಿಣ ನಿಲುವಿನ ಅಧಿಕಾರಿಗಳನ್ನು ಬೆಳೆಸಿದವರು. ತಮ್ಮ ತಂದೆಯ ಕಚೇರಿಯಲ್ಲಿ ಅನಧಿಕೃತ ಹುದ್ದೆಯಲ್ಲಿದ್ದರೂ, ಅವರು ಐಆರ್ಜಿಸಿ ಮತ್ತು ಬಸಿಜ್ (Basij – ಬೀದಿ ಮಟ್ಟದ ಭದ್ರತಾ ಪಡೆ) ಪಡೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರು ‘ಹಬೀಬ್ ಸರ್ಕಲ್’ ಎಂಬ ವಿಶ್ವಾಸಾರ್ಹ ಮಿತ್ರರ ಜಾಲವನ್ನು ಅವಲಂಬಿಸಿದ್ದಾರೆ. ಈ ಜಾಲವು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದು ಅಮೆರಿಕದ ಕಾಂಗ್ರೆಸ್ ಮಸೂದೆಯೊಂದು ಉಲ್ಲೇಖಿಸಿದೆ. ಇರಾಕ್ ಯುದ್ಧದ ಅನುಭವಿಗಳನ್ನು ಒಳಗೊಂಡ ಈ ಜಾಲವು ಇಂದು ಇರಾನ್ನ ಗುಪ್ತಚರ ಮತ್ತು ಭದ್ರತಾ ವ್ಯವಸ್ಥೆಯ ಬೆನ್ನೆಲುಬಾಗಿದೆ.
ಇರಾನ್ನ ಹೊಸ ನಾಯಕತ್ವದ ನೇಮಕಾತಿಗಳು ಅವರ ಕ್ರೂರತೆಯನ್ನು ಪ್ರತಿಬಿಂಬಿಸುತ್ತವೆ. ನೂತನ ರಾಷ್ಟ್ರೀಯ ಭದ್ರತಾ ಮುಖ್ಯಸ್ಥ ಮೊಹಮ್ಮದ್ ಬಘೇರ್ ಜೋಲ್ಘಾದರ್ ಹಿಂಸಾತ್ಮಕ ಹಿನ್ನೆಲೆ ಹೊಂದಿದವರು. ಘರ್ಷಣೆ ಆರಂಭಕ್ಕೂ ಮೊದಲು ಅಮೆರಿಕದ ಪೆಟ್ರೋಲಿಯಂ ಎಂಜಿನಿಯರ್ ಮತ್ತು ಇಬ್ಬರು ಪೊಲೀಸರ ಹತ್ಯೆಯಲ್ಲಿ ಇವರು ಭಾಗಿಯಾಗಿದ್ದರು. ಇರಾನ್ ಶತ್ರುಗಳ ಮೇಲೆ ದಾಳಿ ಮಾಡಲು ವಿದೇಶಿ ಉಗ್ರರಿಗೆ ತರಬೇತಿ ನೀಡುವ ‘ಖುದ್ಸ್ ಫೋರ್ಸ್’ (Quds Force) ಸ್ಥಾಪನೆಯಲ್ಲಿ ಇವರ ಪಾತ್ರವಿದೆ. ಅಮೆರಿಕದೊಂದಿಗಿನ ಮಾತುಕತೆಗಳಲ್ಲಿ ಇವರದೇ ಅಂತಿಮ ನಿರ್ಧಾರವಾಗಿರುತ್ತದೆ. ಇವರು ಇತ್ತೀಚೆಗೆ ಹತ್ಯೆಗೀಡಾದ ಪ್ರಾಯೋಗಿಕ ಸಂಧಾನಕಾರ ಅಲಿ ಲಾರಿಜಾನಿ ಅವರ ಸ್ಥಾನವನ್ನು ತುಂಬಿದ್ದಾರೆ.
ಐಆರ್ಜಿಸಿಯ ಹೊಸ ಕಮಾಂಡರ್ ಇನ್ ಚೀಫ್ ಅಹ್ಮದ್ ವಾಹಿದಿ ಮತ್ತು ಖಮೇನಿಯ ಹೊಸ ಮಿಲಿಟರಿ ಸಲಹೆಗಾರ ಮೊಹ್ಸೆನ್ ರೆಜಾಯಿ ಇಬ್ಬರೂ 1994 ರಲ್ಲಿ ಅರ್ಜೆಂಟೀನಾದ ಬ್ಯೂನಸ್ ಐರಿಸ್ನಲ್ಲಿ 85 ಜನರನ್ನು ಬಲಿಪಡೆದ ಯಹೂದಿ ಸಮುದಾಯ ಕೇಂದ್ರದ ಬಾಂಬ್ ಸ್ಫೋಟದಲ್ಲಿ ಆರೋಪಿಗಳಾಗಿದ್ದಾರೆ. 1980ರ ದಶಕದಲ್ಲಿ ಇರಾಕ್-ಇರಾನ್ ಯುದ್ಧದಲ್ಲಿ 2.5 ಲಕ್ಷ ಜನರ ಸಾವಿಗೆ ಕಾರಣವಾದ ರೆಜಾಯಿ, ಪ್ರಸ್ತುತ ಸಂಘರ್ಷದ ಕುರಿತು ಮಾತನಾಡುತ್ತಾ, “ಇನ್ನು ಮುಂದೆ ಕಣ್ಣಿಗೆ ಕಣ್ಣು ಎಂಬ ಪ್ರತೀಕಾರವಿರುವುದಿಲ್ಲ. ಶತ್ರುಗಳ ಕಣ್ಣಿಗೆ ಬದಲಾಗಿ ಅವರ ತಲೆ, ಕೈ ಮತ್ತು ಕಾಲುಗಳನ್ನೇ ಕಡಿಯಲಾಗುವುದು” ಎಂದು ಎಚ್ಚರಿಸಿದ್ದಾರೆ. ಟೆನ್ನೆಸ್ಸೀ ವಿಶ್ವವಿದ್ಯಾಲಯದ ತಜ್ಞ ಸಯೀದ್ ಗೊಲ್ಕರ್ ಅವರ ಪ್ರಕಾರ, ಐಆರ್ಜಿಸಿಯ ಅತ್ಯಂತ ವಿಪರೀತ ಗುಂಪು ಅಧಿಕಾರ ವಹಿಸಿಕೊಳ್ಳುತ್ತಿರುವುದು ಯುದ್ಧವನ್ನು ಇನ್ನಷ್ಟು ದೀರ್ಘಗೊಳಿಸಲಿದೆ.
ಮೊಜ್ತಬಾ ಖಮೇನಿ ಅವರ ಈ ಕಠಿಣ ನಿಲುವು ನಿನ್ನೆಯದಲ್ಲ. ಕಾಲು ಶತಮಾನದ ಹಿಂದೆಯೇ ಸುಧಾರಣಾವಾದಿಗಳ ಜನಪ್ರಿಯತೆ ಹೆಚ್ಚಾದಾಗ, ಅವರು ತೀವ್ರ ಸಂಪ್ರದಾಯವಾದಿಗಳನ್ನು ಪ್ರೋತ್ಸಾಹಿಸಲು ಆರಂಭಿಸಿದ್ದರು. 2005 ಮತ್ತು 2009 ರ ಚುನಾವಣೆಗಳಲ್ಲಿ ಐಆರ್ಜಿಸಿ ಮತ್ತು ಬಸಿಜ್ ಪಡೆಗಳನ್ನು ಬಳಸಿ ಮಹಮೂದ್ ಅಹಮದಿನೆಜಾದ್ ಅವರನ್ನು ಗೆಲ್ಲಿಸುವ ಮೂಲಕ ‘ಚುನಾವಣಾ ದಂಗೆ’ ನಡೆಸಿದ್ದರು ಎಂದು ಸುಧಾರಣಾವಾದಿ ನಾಯಕ ಮೆಹದಿ ಕರೂಬಿ ಆರೋಪಿಸಿದ್ದರು. 2009 ರ ಜೂನ್ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಜನರು “ಸಾಯಿ ಮೊಜ್ತಬಾ, ನಿನಗೆಂದಿಗೂ ನಾಯಕತ್ವ ಸಿಗದಿರಲಿ” ಎಂದು ಘೋಷಣೆ ಕೂಗಿದ್ದು ಅವರ ಮೇಲಿನ ಜನಾಕ್ರೋಶವನ್ನು ಮತ್ತು ದೇಶ ಕಟ್ಟರ್ವಾದದತ್ತ ಸಾಗಿದ್ದನ್ನು ತೋರಿಸುತ್ತದೆ.
ಈ ಹೊಸ ನಾಯಕತ್ವವು ‘ಮಹ್ದಿಸಂ’ (Mahdism) ಎಂಬ ಇಸ್ಲಾಮಿಕ್ ಸಿದ್ಧಾಂತದಿಂದ ಪ್ರೇರಿತವಾಗಿದೆ. ಇರಾನ್ನ ಕಟ್ಟರ್ವಾದಿಗಳ ಆಧ್ಯಾತ್ಮಿಕ ಪಿತಾಮಹ ಅಯತೊಲ್ಲಾ ಮೊಹಮ್ಮದ್ ತಾಘಿ ಮೆಸ್ಬಾ ಯಜ್ಡಿ ಅವರು ಈ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಇರಾನ್ನ ಶತ್ರುಗಳನ್ನು, ವಿಶೇಷವಾಗಿ ಇಸ್ರೇಲ್ ಅನ್ನು ನಾಶಪಡಿಸುವುದರಿಂದ ಜಗತ್ತಿಗೆ ಶಾಂತಿ ತರುವ ‘ಇಮಾಮ್ ಮಹ್ದಿ’ಯ ಆಗಮನ ತ್ವರಿತವಾಗುತ್ತದೆ ಎಂಬುದು ಇವರ ಬಲವಾದ ನಂಬಿಕೆ. ಐಆರ್ಜಿಸಿಯ ಹೊಸ ನೇಮಕಾತಿಗಳ ಆರು ತಿಂಗಳ ತರಬೇತಿಯಲ್ಲಿ ಶೇಕಡಾ 50 ರಷ್ಟು ಸಮಯವನ್ನು ಈ ಸೈದ್ಧಾಂತಿಕ ಬೋಧನೆಗೆ ಮತ್ತು ಕಡ್ಡಾಯ ಓದುವಿಕೆಗೆ ಮೀಸಲಿಡಲಾಗಿದೆ. ಹಿರಿಯ ಕಮಾಂಡರ್ ಹುಸೇನ್ ಯೆಕ್ತಾ ಅವರು ತಾಯಂದಿರಿಗೆ ತಮ್ಮ ಮಕ್ಕಳನ್ನು ಮಹ್ದಿಯ ಹೆಸರಿನಲ್ಲಿ ಯುದ್ಧಕ್ಕೆ ಕಳುಹಿಸುವಂತೆ ಬಹಿರಂಗವಾಗಿಯೇ ಕರೆ ನೀಡುತ್ತಿದ್ದಾರೆ.
ಒಮ್ಮೆ ಅಂಚಿನಲ್ಲಿದ್ದ ಈ ಸಿದ್ಧಾಂತ, ಇಂದು ಇಸ್ಲಾಮಿಕ್ ಗಣರಾಜ್ಯದ ಮತ್ತು ಐಆರ್ಜಿಸಿಯ ಕೇಂದ್ರಬಿಂದುವಾಗಿದೆ. ಈ ಕುರಿತು ಎಚ್ಚರಿಕೆ ನೀಡುವ ಐಆರ್ಜಿಸಿಯ ಮಾಜಿ ಅಧಿಕಾರಿ ಹಾಗೂ ಖಮೇನಿ ಅವರೊಂದಿಗೆ ಧಾರ್ಮಿಕ ಅಧ್ಯಯನ ಮಾಡಿದ್ದ ಜಬೇರ್ ರಜಾಬಿ, “ಮೊಜ್ತಬಾ ಕೇವಲ ಇಸ್ರೇಲ್ ಅನ್ನು ಮಾತ್ರವಲ್ಲ, ಸುನ್ನಿ ಅರಬರನ್ನೂ ಶತ್ರುಗಳೆಂದು ಪರಿಗಣಿಸುವ ತೀವ್ರವಾದಿ. ಆತ ತನ್ನನ್ನು ತಾನು ಪ್ರವಾದಿತ ನಾಯಕ ‘ಖೊರಾಸಾನಿ’ ಎಂದು ನಂಬಿದ್ದಾನೆ. ಯಾರಾದರೂ ಇರಾನ್ ಮತ್ತು ಈ ಪ್ರದೇಶಕ್ಕೆ ಸಂಭವಿಸಬಹುದಾದ ಅತ್ಯಂತ ಅಪಾಯಕಾರಿ ಘಟನೆ ಯಾವುದು ಎಂದು ಕೇಳಿದರೆ, ಅದಕ್ಕೆ ಒಂದೇ ಉತ್ತರ: ಮೊಜ್ತಬಾ ಖಮೇನಿ” ಎನ್ನುತ್ತಾರೆ. ಅಮೆರಿಕ ಮತ್ತು ಇಸ್ರೇಲ್ನ ಆಡಳಿತ ಬದಲಾವಣೆಯ ತಂತ್ರವು ಇದೀಗ ಇಡೀ ಮಧ್ಯಪ್ರಾಚ್ಯವನ್ನು ಮತ್ತೊಂದು ಭೀಕರ ಪ್ರಪಾತದಂಚಿಗೆ ತಳ್ಳಿದೆ.




