ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ. 100ರಷ್ಟು ಭಾರಿ ಆಮದು ಸುಂಕ ಹೇರಬೇಕೇ ಅಥವಾ ಬೇಡವೇ ಎಂಬುದರ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ 10 ದಿನಗಳ ಒಳಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಅಮೆರಿಕದ ಉತ್ಪನ್ನಗಳಿಗೆ ಭಾರತದಲ್ಲಿ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ ಎಂಬುದು ಟ್ರಂಪ್ ಅವರ ದೀರ್ಘಕಾಲದ ಆರೋಪವಾಗಿದೆ. ವ್ಯಾಪಾರ ಸಮತೋಲನವನ್ನು ಕಾಯ್ದುಕೊಳ್ಳಲು ಭಾರತದ ಮೇಲೆ ಕಠಿಣ ಕ್ರಮ ಅಗತ್ಯ ಎಂಬುದು ಅವರ ಪ್ರತಿಪಾದನೆಯಾಗಿದೆ.
ಇದನ್ನೂ ಓದಿ: ಟ್ರಂಪ್ ಸುಂಕಗಳು ಅಮೆರಿಕ ಸುಪ್ರೀಂನಲ್ಲಿ ರದ್ದು; ಆದರೂ, ಭಾರತ ಸುಂಕ ತೆರಲೇಬೇಕು ಎಂದ ಅಧ್ಯಕ್ಷ
ಮುಂದಿನ 10 ದಿನಗಳಲ್ಲಿ ಟ್ರಂಪ್ ತಮ್ಮ ಆರ್ಥಿಕ ಸಲಹೆಗಾರರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದು, ಈ ಶೇ. 100ರಷ್ಟು ಸುಂಕದ ಕರಡು ಪ್ರಸ್ತಾವನೆಗೆ ಅಂತಿಮ ಮೊಹರು ಒತ್ತುವ ಸಾಧ್ಯತೆಯಿದೆ. ಒಂದು ವೇಳೆ ಈ ದಂಡನಾತ್ಮಕ ಸುಂಕ ಜಾರಿಗೆ ಬಂದರೆ, ಭಾರತದಿಂದ ರಫ್ತಾಗುವ ಆಟೋಮೊಬೈಲ್ ಬಿಡಿಭಾಗಗಳು, ಜವಳಿ, ಔಷಧೀಯ ಉತ್ಪನ್ನಗಳು ಮತ್ತು ಕೃಷಿ ಉತ್ಪನ್ನಗಳ ಮೇಲೆ ತೀವ್ರವಾದ ಆರ್ಥಿಕ ಪೆಟ್ಟು ಬೀಳಲಿದೆ.
ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿದ್ದು, ಯಾವುದೇ ರೀತಿಯ ಹಠಾತ್ ವ್ಯಾಪಾರ ನಿರ್ಬಂಧ ಎದುರಾದರೆ ಅದನ್ನು ತಡೆಯಲು ರಾಜತಾಂತ್ರಿಕ ಹಾಗೂ ಪರ್ಯಾಯ ವ್ಯಾಪಾರ ತಂತ್ರಗಳನ್ನು ಸಿದ್ಧಪಡಿಸಿಕೊಳ್ಳುತ್ತಿದೆ.
ಟ್ರಂಪ್ ಅವರ ಈ ನಡೆ ಬರಿ ಚುನಾವಣಾ ವಿಷಯ ಅಥವಾ ಬೆದರಿಕೆಯೋ ಅಥವಾ ನಿಜವಾಗಿಯೂ ಜಾರಿಯಾಗುವ ನೀತಿಯೋ ಎಂಬುದು ಮುಂದಿನ 10 ದಿನಗಳ ಅವರ ನಡೆ ಹಾಗೂ ಅಧಿಕೃತ ಹೇಳಿಕೆಯಿಂದ ಸ್ಪಷ್ಟವಾಗಲಿದೆ.




