- ಘಟನೆಯಲ್ಲಿ 12 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಮೃತ್ಯು
- ಪ್ರವಾಸಿ ಪಟ್ಟಣವಾದ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ನಡೆದ ಅಪಘಾತ
ಬ್ರೆಝಿಲ್ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲ 14 ಮಂದಿ ಸಾವನ್ನಪ್ಪಿದ್ದಾರೆ.
ಬ್ರೆಝಿಲ್ನ ಜನಪ್ರಿಯ ಪ್ರವಾಸಿ ಪಟ್ಟಣವಾದ ಬಾರ್ಸೆಲೋಸ್ನಲ್ಲಿ ಬಿರುಗಾಳಿ ಇದ್ದ ವೇಳೆ ಇಳಿಯಲು ಪ್ರಯತ್ನಿಸುತ್ತಿದ್ದಾಗ ಉತ್ತರ ಅಮೆಜಾನ್ನಲ್ಲಿ ಕೆಳಕ್ಕೆ ಉರುಳಿದೆ. ಈ ಸಂದರ್ಭದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯದ ಗವರ್ನರ್ ವಿಲ್ಸನ್ ಲಿಮಾ ಘೋಷಿಸಿದ್ದಾರೆ.
ಈ ವಿಮಾನದ ಪೈಲಟ್ ಭಾರೀ ಮಳೆಯಲ್ಲಿ, ಸರಿಯಾಗಿ ಕಾಣದಿದ್ದ ಸಂದರ್ಭದಲ್ಲಿ ಪಟ್ಟಣವನ್ನು ಸಮೀಪಿಸುತ್ತಿದ್ದರು ಮತ್ತು ಅಜಾಗರೂಕತೆಯಿಂದ ರನ್ವೇ ಮಧ್ಯದಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದರು ಎಂದು ರಾಜ್ಯ ಭದ್ರತಾ ಕಾರ್ಯದರ್ಶಿ ವಿನಿಶಿಯಸ್ ಅಲ್ಮೇಡಾ ಮಾಹಿತಿ ಹಂಚಿಕೊಂಡಿದ್ದಾರೆ.
Fourteen people killed in plane crash in Brazil’s Amazonas state https://t.co/7cmhcP1B4J pic.twitter.com/eguXSmwgje
— Guardian Weekly (@guardianweekly) September 17, 2023
ವಿಮಾನವು ಲ್ಯಾಂಡಿಂಗ್ ಪ್ರದೇಶದಿಂದ ಹೊರಬಂದ ನಂತರ ಪತನಗೊಂಡಿದ್ದು, ಘಟನೆಯಲ್ಲಿ 12 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸಾವನ್ನಪ್ಪಿದರು ಎಂದು ಅವರು ಹೇಳಿದರು.
ಪ್ರಾಥಮಿಕ ತನಿಖೆಯ ಪ್ರಕಾರ ಪ್ರಯಾಣಿಕರೆಲ್ಲರೂ ಬ್ರೆಝಿಲಿಯನ್ ಮೀನುಗಾರಿಕೆ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದರು ಎಂದು ಅಲ್ಲಿನ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯದ ರಾಜಧಾನಿ ಮನೌಸ್ನಿಂದ ಸುಮಾರು 400 ಕಿಮೀ ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ಈ ಅಪಘಾತ ಸಂಭವಿಸಿದೆ. ವಿಮಾನವು ರಾಜ್ಯದ ರಾಜಧಾನಿ ಮನೌಸ್ನಿಂದ ಬಾರ್ಸೆಲೋಸ್ಗೆ ಸುಮಾರು 90 ನಿಮಿಷಗಳ ಹಾರಾಟದ ಹಾದಿಯಲ್ಲಿತ್ತು.