- ಕಳೆದ ವರ್ಷ ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದ 1,700 ಮಂದಿ ಸಾವು
- ಹವಾಮಾನ ವೈಪರೀತ್ಯ ಪರಿಹಾರಕ್ಕಾಗಿ 2.3 ಬಿಲಿಯನ್ ಡಾಲರ್ ಮೀಸಲು
ಪಾಕಿಸ್ತಾನ ದೇಶದಲ್ಲಿ ಬಿಪರ್‌ಜಾಯ್ ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಿಂದ 25 ಮಂದಿ ಮೃತಪಟ್ಟಿದ್ದಾರೆ ಎಂದು ಭಾನುವಾರ (ಜೂನ್ 11) ವರದಿಯಾಗಿದೆ.
ದೇಶದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು, ಲಕ್ಕಿ ಮಾರ್ವಾಟ್ ಮತ್ತು ಕರಕ್ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ. ಇದರಿಂದ ಮರಗಳು ನೆಲಕ್ಕೆ ಉರುಳಿವೆ. ವಿದ್ಯುತ್ ಕಂಬಗಳು ಬಿದ್ದಿವೆ. ಮನೆಗಳು ನೆಲಸಮಗೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಲಿಕಲ್ಲು ಸಹಿತ ಮಳೆಗೆ 145 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಪಾಕಿಸ್ತಾನದ ನಾನಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿ ಖತೀರ್ ಅಹಮದ್ ತಿಳಿಸಿದರು.
ಬಿಪರ್‌ಜಾಯ್ ಚಂಡಮಾರುತ ಪಾಕಿಸ್ತಾನದ ಕರಾಚಿಗೆ ಅಪ್ಪಳಿಸುವ ಮುನ್ನವೇ ಈ ಅವಘಡ ನಡೆದಿದೆ.
ಕಳೆದ ವರ್ಷ ಪಾಕಿಸ್ತಾನ ಭಾಗದಲ್ಲಿ ಉಂಟಾದ ಮಾನ್ಸೂನ್ ಮಳೆ ಮತ್ತು ಪ್ರವಾಹದಿಂದಾಗಿ 1,700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಇದರಿಂದ ದೇಶದ 3.3 ಕೋಟಿ ಜನರಿಗೆ ತೊಂದರೆಯುಂಟಾಗಿತ್ತು. ಅಲ್ಲದೆ ಸುಮಾರು 80 ಲಕ್ಷ ಮಂದಿ ಬೇರೆಡೆ ವಲಸೆ ಹೋಗಿದ್ದರು.
ಪಾಕಿಸ್ತಾನ ಸರ್ಕಾರ ಶುಕ್ರವಾರ ಮಂಡಿಸಿದ ರಾಷ್ಟ್ರೀಯ ಬಜೆಟ್‌ನಲ್ಲಿ ಹವಾಮಾನ ವೈಪರೀತ್ಯದ ಪರಿಹಾರಕ್ಕಾಗಿ 2.3 ಬಿಲಿಯನ್ ಅಮೆರಿಕ ಡಾಲರ್ ಮೀಸಲಿಟ್ಟಿದೆ.
ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಶರೀಫ್ ಶನಿವಾರ ಮಳೆ ಸಂಬಂಧಿತ ಅವಘಡದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಲಿತರ ಹತ್ಯಾಕಾಂಡ | 42 ವರ್ಷಗಳ ಬಳಿಕ ತೀರ್ಪಿತ್ತ ಕೋರ್ಟ್; ನ್ಯಾಯ ದಕ್ಕಿದ್ದು ಯಾರಿಗೆ?
ಬಿಪರ್‌ಜಾಯ್ ಚಂಡಮಾರುತ ತೀವ್ರ ಸ್ವರೂಪದಲ್ಲಿ ಪಾಕಿಸ್ತಾನಕ್ಕೆ ಅಪ್ಪಳಿಸುವ ಹಿನ್ನೆಲೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಶಹಬಾಜ್ ಶರೀಫ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತೀವ್ರ ಸ್ವರೂದಲ್ಲಿ ಬಿಪರ್‌ಜಾಯ್ ಚಂಡಮಾರುತ ಗಂಟಗೆ 150 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಇದು ದೇಶದ ದಕ್ಷಿಣ ಭಾಗಕ್ಕೆ ಆಗಮಿಸುತ್ತಿದೆ ಎಂದು ಪಾಕಿಸ್ತಾನ ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ.