ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ ಫೆಬ್ರವರಿ 24ಕ್ಕೆ ಮೂರು ವರ್ಷಗಳಾಗಲಿವೆ. ಮೂರು ವರ್ಷಗಳ ಭೀಕರ ಯುದ್ಧದ ನಡುವೆ ಭಾನುವಾರ ಉಕ್ರೇನ್ ಮೇಲೆ ರಷ್ಯಾ 267 ಡ್ರೋನ್ಗಳಿಂದ ದಾಳಿ ನಡೆದಿದೆ. ಆದಾಗ್ಯೂ, ರಷ್ಯಾದ ಡ್ರೋನ್ಗಳನ್ನು ಖಾರ್ಕಿವ್, ಪೋಲ್ಟವಾ, ಸುಮಿ, ಕೈವ್, ಚೆರ್ನಿಹಿವ್, ಮೈಕೊಲೈವ್ ಹಾಗೂ ಒಡೆಸಾ ಸೇರಿದಂತೆ ಕನಿಷ್ಠ 13 ಪ್ರದೇಶಗಳಲ್ಲಿ ತಡೆಯಲಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
“ರಷ್ಯಾದಿಂದ ಹಾರಿದ ಡ್ರೋನ್ಗಳಲ್ಲಿ ಸುಮಾರು 148 ಡ್ರೋನ್ಗಳನ್ನು ತಡೆಹಿಡಲಾಗಿದೆ. ಅಲ್ಲದೆ, ಯಾವುದೇ ಹಾನಿಯಾಗದಂತೆ ಜಾಮ್ ಮಾಡಿದ ಬಳಿಕ 119 ಡ್ರೋನ್ಗಳು ಕಣ್ಮರೆಯಾಗಿವೆ. ರಷ್ಯಾ ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಹ ಉಡಾಯಿಸಿದೆ. ಪರಿಣಾಮ, ಉಕ್ರೇನ್ನ ಐದು ಪ್ರದೇಶಗಳಲ್ಲಿ ಹಾನಿಗಳಾಗಿವೆ” ಎಂದು ಉಕ್ರೇನ್ ವಾಯುಪಡೆಯ ಕಮಾಂಡ್ ವಕ್ತಾರ ಯೂರಿ ಇಗ್ನಾಟ್ ಹೇಳಿದ್ದಾರೆ.
“ಹಲವು ತಿಂಗಳುಗಳಿಂದ ಉಕ್ರೇನ್ ಮೇಲೆ ರಷ್ಯಾ ಸಾಮೂಹಿಕ ಡ್ರೋನ್ ದಾಳಿಗಳನ್ನು ನಡೆಸುತ್ತಿದೆ. ಉಕ್ರೇನ್ನ ವಾಯು ರಕ್ಷಣೆಯನ್ನು ನಾಶಗೊಳಿಸಲು ಯತ್ನಿಸುತ್ತಿದೆ. ಆದರೆ, ಅದರ ಪ್ರಯತ್ನಗಳು ವಿಫಲವಾಗಿವೆ” ಎಂದು ಅವರು ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, “ರಷ್ಯಾ ಶನಿವಾರ-ಭಾನುವಾರ ರಾತ್ರಿ ಸುಮಾರು 200ಕ್ಕೂ ಹೆಚ್ಚು ಡ್ರೋನ್ಗಳನ್ನು ಹಾರಿಸಿದೆ. ಇದು ಕಳೆದ 3 ವರ್ಷಗಳಲ್ಲಿ ಅತಿದೊಡ್ಡ ದಾಳಿಯಾಗಿದೆ. ಇದು ರಷ್ಯಾದ ವೈಮಾನಿಕ ಭಯೋತ್ಪಾದನೆಯಾಗಿದೆ” ಎಂದು ಹೇಳಿದ್ದಾರೆ. ನ್ಯಾಯಯುತ ಮತ್ತು ಶಾಶ್ವತ ಶಾಂತಿಗಾಗಿ ಉಕ್ರೇನ್ನ ಮಿತ್ರರಾಷ್ಟ್ರಗಳು ಒಗ್ಗಟ್ಟಿನಿಂದ ಇರಬೇಕೆಂದು ಕರೆ ಕೊಟ್ಟಿದ್ದಾರೆ.
“ಕಳೆದ ಒಂದು ವಾರದೊಳಗೆ ರಷ್ಯಾ ಒಟ್ಟು ಸುಮಾರು 1,150 ದಾಳಿ ಡ್ರೋನ್ಗಳು, 1,400ಕ್ಕೂ ಹೆಚ್ಚು ವೈಮಾನಿಕ ಬಾಂಬ್ಗಳು ಹಾಗೂ ವಿವಿಧ ರೀತಿಯ 35 ಕ್ಷಿಪಣಿಗಳನ್ನು ಉಕ್ರೇನ್ ವಿರುದ್ಧ ಉಡಾಯಿಸಿದೆ” ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ.