ತಂತ್ರಜ್ಞಾನದಲ್ಲಿ ಮುಂದುವರಿದಿರುವ ದೇಶವಾಗಿ ಗುರುತಿಸಿಕೊಂಡಿರುವ ಜಪಾನ್‌ನಲ್ಲಿ ಹೊಸ ವರ್ಷದ ಮೊದಲ ದಿನವೇ ಸಂಭವಿಸಿದ ಭಾರೀ ಭೂಕಂಪದಲ್ಲಿ ಈವರೆಗೆ ಒಟ್ಟು 30 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಒಂದೇ ದಿನ 155 ಬಾರಿ ಭೂಮಿ ಕಂಪಿಸಿದ್ದು, ಅಪಾರ ಸಾವು-ನೋವಿಗೆ ಕಾರಣವಾಗಿದೆ. ಈ ನಡುವೆ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಅವಶೇಷಗಳ ಅಡಿಯಲ್ಲಿರುವವರನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜಪಾನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ರಿಕ್ಟರ್ ಮಾಪಕದಲ್ಲಿ 7.4ರಿಂದ 7.6 ರವರೆಗೂ ಭೂಕಂಪನ ಸಂಭವಿಸಿದ್ದು, ಜಪಾನ್ ನ ಈಶಾನ್ಯ ಭಾಗದ ನನಾವೋನಲ್ಲಿ ಭೂ ಕಂಪನದ ಕೇಂದ್ರ ಬಿಂದು ವರದಿಯಾಗಿದೆ. ಈ ಕಂಪನದಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದು, ಮನೆಗಳಿಗೆ ಹಾನಿಯಾದ ಪರಿಣಾಮ 32 ಸಾವಿರಕ್ಕೂ ಅಧಿಕ ಮಂದಿ ಭೂಕಂಪನದಿಂದ ಸಂತ್ರಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.
ಹೊನ್ಶುವಿನ ಮುಖ್ಯ ದ್ವೀಪದಲ್ಲಿರುವ ಇಶಿಕಾವಾ ಪ್ರಾಂತ್ಯದಲ್ಲಿ 7.5 ತೀವ್ರತೆಯ ಭೂಕಂಪವು ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳನ್ನು ಸೃಷ್ಟಿಸಿತ್ತು. ಭೂಕಂಪದ ತೀವ್ರತೆಗೆ ಕಟ್ಟಡಗಳು ನೆಲಕ್ಕುರುಳಿವೆ, ಪ್ರಮುಖ ಬಂದರೊಂದರಲ್ಲಿ ಬೆಂಕಿ ಅವಘಡ ಕೂಡ ಸಂಭವಿಸಿದ್ದು, ರಸ್ತೆಗಳು ಬಿರುಕು ಬಿಟ್ಟಿರುವುದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ.
“ಜಪಾನ್‌ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದಾಗಿ ಹಲವಾರು ಸಾವುನೋವುಗಳು, ಕಟ್ಟಡ ಕುಸಿತಗಳು ಮತ್ತು ಬೆಂಕಿ ಸೇರಿದಂತೆ ಬಹಳ ವ್ಯಾಪಕ ಹಾನಿಯಾಗಿದೆ” ಎಂದು ವಿಪತ್ತು ನಿರ್ವಹಣಾ ಸಭೆಯ ಬಳಿಕ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ತಿಳಿಸಿದ್ದಾರೆ.
ವಾಜಿಮಾ ಬಂದರಿನಲ್ಲಿ ಏಳು ಮಂದಿ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ. ಏರಿಯಲ್ ನ್ಯೂಸ್ ಫೂಟೇಜ್ ಬಂದರಿನಲ್ಲಿ ಭೂಕಂಪದಿಂದ ಬೆಂಕಿ ಅವಘಡ ಸಂಭವಿಸಿತು. ಏಳು ಅಂತಸ್ತಿನ ಕಟ್ಟಡವು ಕುಸಿದಿದೆ. ಈ ಪ್ರದೇಶದಲ್ಲಿ ಸುಮಾರು 45,000 ಕುಟುಂಬಗಳು ವಿದ್ಯುತ್ ಸಮಸ್ಯೆಯಿಂದ ಕತ್ತಲಲ್ಲಿ ಜೀವನ ನಡೆಸುವಂತಾಗಿದೆ ಎಂದು ತಿಳಿಸಿದೆ. ಭೂಕಂಪದ ತೀವ್ರತೆ 7.5ರಷ್ಟಿತ್ತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.
ಹೊಸ ವರ್ಷದ ಶುಭಾಶಯ ಕಾರ್ಯಕ್ರಮ ರದ್ದುಗೊಳಿಸಿದ ಚಕ್ರವರ್ತಿ
ಹೊಸ ವರ್ಷದ ಹಿನ್ನೆಲೆಯಲ್ಲಿ ಜಪಾನಿನ ಚಕ್ರವರ್ತಿ ನರುಹಿಟೊ ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸಲು ಯೋಜಿಸಲಾಗಿದ್ದ ಸಾರ್ವಜನಿಕ ಹೊಸ ವರ್ಷದ ಶುಭಾಶಯ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಸಾರ್ವಜನಿಕರು ಭೂಕಂಪದಿಂದ ಸಂತ್ರಸ್ತರಾದವರೊಂದಿಗೆ ಸಹಕರಿಸುವಂತೆ ಚಕ್ರವರ್ತಿಯ ಕುಟುಂಬ ತಿಳಿಸಿರುವುದಾಗಿ ಎಂದು ಜಪಾನಿನ ಇಂಪೀರಿಯಲ್ ಹೌಸ್ ಹೋಲ್ಡ್ ಏಜೆನ್ಸಿಯು ಮಾಹಿತಿ ನೀಡಿದೆ.