ಚೀನಾ ಹೊಸ ನಕ್ಷೆ ವಿರುದ್ಧ ಭಾರತ ವಿರೋಧಿಸಿದ ನಂತರ ಮತ್ತೆ ನಾಲ್ಕು ರಾಷ್ಟ್ರಗಳು ಕೂಡ ಆಕ್ಷೇಪ ವ್ಯಕ್ತಪಡಿಸಿವೆ. ಫಿಲಿಪೈನ್ಸ್, ಮಲೇಷ್ಯಾ, ವಿಯೆಟ್ನಾಂ ಮತ್ತು ತೈವಾನ್‌ನ ರಾಷ್ಟ್ರಗಳು ಚೀನಾದ ಹೊಸ ರಾಷ್ಟ್ರೀಯ ನಕ್ಷೆಯನ್ನು ತಿರಸ್ಕರಿಸಿವೆ.
ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶ ತನ್ನ ಭೂಭಾಗ ಎಂದು ತೋರಿಸುವ 2023ರ ಸ್ಟ್ಯಾಂಡರ್ಡ್ ನಕ್ಷೆಯನ್ನು ಕೆಲವು ದಿನಗಳ ಹಿಂದೆ ಚೀನಾ ಬಿಡುಗಡೆ ಮಾಡಿತ್ತು. ರಾಜತಾಂತ್ರಿಕ ಮಾರ್ಗಗಳ ಮೂಲಕ ನಾವು ಬಲವಾದ ಪ್ರತಿಭಟನೆಯನ್ನು ದಾಖಲಿಸಿದ್ದೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊಸ ನಕ್ಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.
“ಕೇವಲ ಅಸಂಬದ್ಧ ಹಕ್ಕುಗಳನ್ನು ನೀಡುವುದರಿಂದ ಇತರ ಜನರ ಪ್ರದೇಶಗಳನ್ನು ನಿಮ್ಮದಾಗಿಸಿಕೊಳ್ಳುವುದಿಲ್ಲ” ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಚೀನಾದ ಕ್ರಮಕ್ಕೆ ಪ್ರತಿಕ್ರಿಯಿಸಿದ್ದರು.
ಫಿಲಿಪೈನ್ಸ್ ಸರ್ಕಾರವು ಗುರುವಾರ(ಆಗಸ್ಟ್ 31) ಚೀನಾದ “ಸ್ಟ್ಯಾಂಡರ್ಡ್ ಮ್ಯಾಪ್” ಎಂದು ಕರೆಯಲ್ಪಡುವ 2023 ರ ಆವೃತ್ತಿಯನ್ನು ವಿರೋಧಿಸಿದೆ. ಫಿಲಿಪೈನ್‌ಗೆ ಸೇರಿದ ಪಶ್ಚಿಮ ಫಿಲಿಪೈನ್ಸ್ ಸಮುದ್ರವನ್ನು ತನ್ನ ಪ್ರದೇಶ ಎಂದು ಹೇಳಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ್ ತಿಮ್ಮಯ್ಯ ವಜಾ
“ಫಿಲಿಪೈನ್ಸ್ ಪ್ರದೇಶಗಳು ಮತ್ತು ಕಡಲ ವಲಯಗಳ ಮೇಲೆ ಚೀನಾದ ಉದ್ದೇಶಿತ ಸಾರ್ವಭೌಮತ್ವ ಮತ್ತು ನ್ಯಾಯವ್ಯಾಪ್ತಿಯನ್ನು ಕಾನೂನುಬದ್ಧಗೊಳಿಸುವ ಈ ಇತ್ತೀಚಿನ ಪ್ರಯತ್ನವು ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಯಾವುದೇ ಆಧಾರವನ್ನು ಹೊಂದಿಲ್ಲ” ಎಂದು ಫಿಲಿಪೈನ್ಸ್‌ನ ವಿದೇಶಾಂಗ ವ್ಯವಹಾರಗಳ ವಕ್ತಾರ ಮಾ. ಟೆರೆಸಿಟಾ ದಾಜಾ ತಿಳಿಸಿದ್ದಾರೆ.
ಮಲೇಷ್ಯಾ ಕೂಡ 2023ರ ಹೊಸ ನಕ್ಷೆ ಬಗ್ಗೆ ತೀವ್ರವಾಗಿ ಖಂಡಿಸಿದೆ. ಚೀನಾ ಬಿಡುಗಡೆ ಮಾಡಿರುವ ಹೊಸ ನಕ್ಷೆಯಲ್ಲಿ ಮಲೇಷ್ಯಾದ ಕಡಲ ಪ್ರದೇಶಗಳನ್ನು ಸಹ ಒಳಗೊಂಡಿದೆ. 2013ರಲ್ಲಿಯೇ ಚೀನಾದ ಈ ರೀತಿಯ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಶೀಘ್ರದಲ್ಲೇ ನೆರೆಯ ರಾಷ್ಟ್ರದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತೇವೆ ಎಂದು ವಿದೇಶಾಂಗ ಸಚಿವ ಡಾ.ಜಾಂಬ್ರಿ ಅಬ್ದುಲ್ ಕದಿರ್ ಹೇಳಿದ್ದಾರೆ.
ಚೀನಾದ “2023ರ ಸ್ಟ್ಯಾಂಡರ್ಡ್ ನಕ್ಷೆಯಲ್ಲಿ ವಿಯೆಟ್ನಾಂನ ಹೋಂಗ್ ಸಾ ಮತ್ತು ಟ್ರೂಂಗ್ ಸಾ ಪ್ರದೇಶಗಳನ್ನು ಒಳಗೊಳ್ಳಲಾಗಿದೆ. ನಮ್ಮ ಸಾರ್ವಭೌಮತ್ವ ಹಾಗೂ ಕಡಲ ಹಕ್ಕುಗಳನ್ನು ಆಕ್ರಮಿಸಿಕೊಂಡಿರುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ವಿಯೆಟ್ನಾಂ ಸರ್ಕಾರ ಪ್ರತಿಭಟನೆ ವ್ಯಕ್ತಪಡಿಸಿದೆ.
ತೈವಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೀನಾದ ಹೊಸ ನಕ್ಷೆಯನ್ನು ಖಂಡಿಸಿದೆ. ತೈವಾನ್ ಅನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂದಿಗೂ ಆಳಲಿಲ್ಲ. ತೈವಾನ್ ಚೀನಾಕ್ಕೆ ಅಧೀನವಾಗದ ಸಾರ್ವಭೌಮ ಮತ್ತು ಸ್ವತಂತ್ರ ದೇಶವಾಗಿದೆ. ಸುಳ್ಳಿನಿಂದ ಸತ್ಯವನ್ನು ತಿರುಚುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದೆ.