ನಾಲ್ಕು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಂಗಿದ್ದ ಹೋಟೆಲ್‌ನ ಭದ್ರತೆಯನ್ನು ಭೇದಿಸಿ ಒಳನುಗ್ಗಿದ ವಲಸೆ ವಿರೋಧಿ ಕಾರ್ಯಕರ್ತನೊಬ್ಬ ಪ್ರಧಾನಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಘೋಷಣೆ ಕೂಗಿದ ಘಟನೆ ನಡೆದಿದೆ.
ಬುಧವಾರ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾಗೆ ಬಂದಿಳಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ಪ್ರಧಾನಿ ಅವರು ಹೋಟೆಲ್‌ನ ಲಾಬಿಯಲ್ಲಿದ್ದ ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಬರುತ್ತಿದ್ದಾಗ, ಹ್ಯೂಗೊ ಲೆನ್ನನ್ ಎಂಬ 22 ವರ್ಷದ ಯುವಕ ಮೊದಲ ಮಹಡಿಯ ಬಾಲ್ಕನಿಯಿಂದ ಪ್ರಧಾನಿ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ್ದಾನೆ. ‘ಇದು ಆಸ್ಟ್ರೇಲಿಯಾ. ನಮಗೆ ಇನ್ನು ಮುಂದೆ ಭಾರತೀಯರು ಬೇಡ ಹಾಗೂ ವಲಸಿಗರೂ ಬೇಡ. ಈ ದೇಶ ಆಸ್ಟ್ರೇಲಿಯನ್ನರಿಗೆ ಮಾತ್ರ ಸೇರಿದ್ದು’ ಎಂದು ಆತ ಕೂಗಾಡಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಮಧ್ಯರಾತ್ರಿ 12:30ರ ಸುಮಾರಿಗೆ ಆತನನ್ನು ಅಲ್ಲಿಂದ ಬಲವಂತವಾಗಿ ಹೊರಹಾಕಿದ್ದಾರೆ.
ಆಸ್ಟ್ರೇಲಿಯಾದ ‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ಪತ್ರಿಕೆಯ ವರದಿಯ ಪ್ರಕಾರ, ಈತ ನವ-ನಾಜಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ, ರಿಯಲ್ ಎಸ್ಟೇಟ್ ಉದ್ಯಮದ ಶ್ರೀಮಂತ ಹಿನ್ನೆಲೆಯುಳ್ಳ ಯುವಕನಾಗಿದ್ದಾನೆ. ಈತ ಆನ್‌ಲೈನ್‌ನಲ್ಲಿ ‘ಆಸ್ಪಿಲ್’ ಎಂಬ ಅಡ್ಡಹೆಸರಿನಲ್ಲಿ ಗುರುತಿಸಿಕೊಂಡಿದ್ದಾನೆ. ಅಲ್ಲದೆ, ಕಳೆದ ವರ್ಷ ಆಸ್ಟ್ರೇಲಿಯಾದಾದ್ಯಂತ ಸಾವಿರಾರು ಜನರನ್ನು ಸೇರಿಸಿ ನಡೆಸಲಾಗಿದ್ದ ‘ಮಾರ್ಚ್ ಫಾರ್ ಆಸ್ಟ್ರೇಲಿಯಾ’ ಎಂಬ ವಲಸೆ ವಿರೋಧಿ ಪ್ರತಿಭಟನೆಗಳ ಹಿಂದೆಯೂ ಈತನ ಪ್ರಮುಖ ಪಾತ್ರವಿತ್ತು ಎಂದು ‘ದಿ ಡೈಲಿ ಮೇಲ್’ ವರದಿ ಮಾಡಿದೆ. ಪ್ರಧಾನಿ ಭೇಟಿ ನೀಡುವ ಸ್ಥಳದ ಕುರಿತು ಕೆಲವು ಬಲಪಂಥೀಯ ಇನ್ಫ್ಲುಯೆನ್ಸರ್‌ಗಳು ಆನ್‌ಲೈನ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು ಎನ್ನಲಾಗಿದೆ.
ಈ ಘಟನೆಯ ಮರುದಿನ ಅಂದರೆ ಗುರುವಾರ, ಮೆಲ್ಬರ್ನ್‌ನ ‘ಮಾರ್ವೆಲ್ ಸ್ಟೇಡಿಯಂ’ನಲ್ಲಿ ಆಯೋಜಿಸಲಾಗಿದ್ದ ಭಾರತೀಯ ಸಮುದಾಯದ ಬೃಹತ್ ಕಾರ್ಯಕ್ರಮಕ್ಕೂ ಈತ ತನ್ನ ಬೆಂಬಲಿಗರೊಂದಿಗೆ ಬಂದು ಅಡ್ಡಿಪಡಿಸಲು ಯತ್ನಿಸಿದ್ದಾನೆ. ಗೃಹ ವ್ಯವಹಾರಗಳ ಇಲಾಖೆಯ ಕಚೇರಿಯಿಂದ ಸ್ಟೇಡಿಯಂವರೆಗೆ ಮೆರವಣಿಗೆಯಲ್ಲಿ ಬಂದ ಈ ಗುಂಪು, ಸುಮಾರು ಎರಡು ಗಂಟೆಗಳ ಕಾಲ ‘ಭಾರತೀಯರ ಆಕ್ರಮಣವನ್ನು ನಿಲ್ಲಿಸಿ’ ಹಾಗೂ ‘ಮೋದಿ ಹಿಂತಿರುಗಿ’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಜನಾಂಗೀಯ ನಿಂದನೆಗಳನ್ನು ಮಾಡಿದೆ. ಈ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ ಉಪಸ್ಥಿತರಿದ್ದರು.




