ಭಾರತದಲ್ಲಿ ರಕ್ಷಣೆ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾಗೆ (ಬಾಂಗ್ಲಾದೇಶ) ವಾಪಸ್ ಕಳಿಸುವಂತೆ ಭಾರತಕ್ಕೆ ಬಾಂಗ್ಲಾದ ಮಧ್ಯಂತರ ಸರ್ಕಾರ ಪತ್ರ ಬರೆದಿದೆ.
ಬಾಂಗ್ಲಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯ ವಿರುದ್ಧ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು. ಹಸೀನಾ ಅವರ ರಾಜನಾಮೆ ಆಗ್ರಹಿಸಿ ವಿದ್ಯಾರ್ಥಿ, ಯುವಜನರು ಹಿಂಸಾತ್ಮಕ ಪ್ರತಿಭಟನೆ ನಡೆಸಲಾರಂಭಿಸಿದ್ದರು. ಹಿಂಸಾಚಾರದಿಂದಾಗಿ ಹಸೀನಾ ಅವರು ಆಗಸ್ಟ್ 5ರಂದು ಬಾಂಗ್ಲಾ ತೊರೆದಿದ್ದು, ಭಾರತದಲ್ಲಿ ಉಳಿದುಕೊಂಡಿದ್ದಾರೆ.
ಇದೀಗ, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಬಾಂಗ್ಲಾ ಆಡಳಿತ ನಡೆಸುತ್ತಿದೆ. ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ನರಮೇಧ ಆರೋಪದ ಮೇಲೆ ಶೇಖ್ ಹಸೀನಾ ಮತ್ತು ಅವರ ಮಂತ್ರಿಗಳು, ಸಲಹೆಗಾರರು ಹಾಗೂ ಮಾಜಿ ಮಿಲಿಟರಿ ಅಧಿಕಾರಿಗಳನ್ನು ಬಂಧಿಸಲು ಬಾಂಗ್ಲಾದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) ವಾರಂಟ್ ಜಾರಿ ಮಾಡಿದೆ. ಹೊರಡಿಸಿದೆ.
ಮಧ್ಯಂತರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹೊಸೈನ್, “ನ್ಯಾಯಾಂಗ ಪ್ರಕ್ರಿಯೆಗಾಗಿ ಹಸೀನಾರನ್ನು ಬಾಂಗ್ಲಾಗೆ ವಾಪಸ್ ಕಳಿಸುವಂತೆ ನಾವು ಭಾರತ ಸರ್ಕಾರಕ್ಕೆ ಮೌಖಿಕ (ರಾಜತಾಂತ್ರಿಕ ಸಂದೇಶ) ಕಳುಹಿಸಿದ್ದೇವೆ” ಎಂದು ಹೇಳಿದ್ದಾರೆ.