ಬ್ರೆಜಿಲ್‌ನಲ್ಲಿ ಭಾನುವಾರ ನಡೆದ ತೀವ್ರ ಕುತೂಹಲಕಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ, ಎಡಪಂಥೀಯ ನಾಯಕ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಆಪ್ತ ಫ್ಲಾವಿಯೊ ಬೊಲ್ಸೊನಾರೊ ಭೀಕರ ಸೋಲುಂಡಿದ್ದಾರೆ.
ಚುನಾವಣಾ ಪ್ರಾಧಿಕಾರವು ಮತಗಳ ಎಣಿಕೆಯನ್ನು ಖಚಿತಪಡಿಸುವ ಮುನ್ನವೇ ದೇಶದ ಪ್ರಮುಖ ‘ಡೇಟಾಫೋಲ್ಹಾ’ ಜನಾಭಿಪ್ರಾಯ ಸಂಸ್ಥೆಯು ಲುಲಾ ಅವರ ಗೆಲುವನ್ನು ಮುನ್ಸೂಚಿಸಿತ್ತು. ಮತ ಎಣಿಕೆಯಲ್ಲಿ 78% ಕ್ಕಿಂತಲೂ ಹೆಚ್ಚು ಮತಗಳ ಎಣಿಕೆ ಪೂರ್ಣಗೊಂಡಾಗ, ಲುಲಾ ಡಾ ಸಿಲ್ವಾ ಅವರು 51.21% ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದರು. ಅವರ ಎದುರಾಳಿ ಫ್ಲಾವಿಯೊ ಬೊಲ್ಸೊನಾರೊ 48.79% ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದರು.
ಈ ಚುನಾವಣಾ ಫಲಿತಾಂಶವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಲ್ಯಾಟಿನ್ ಅಮೆರಿಕದ ರಾಜಕೀಯ ಮಿತ್ರರಿಗೆ ದೊಡ್ಡ ಹಿನ್ನಡೆ ಉಂಟುಮಾಡಿದೆ. ಚುನಾವಣೆಯಲ್ಲಿ ಫ್ಲಾವಿಯೊ ಬೊಲ್ಸೊನಾರೊ ಅವರು ಅಮೆರಿಕ ಜತೆ ನಿಕಟ ಬಾಂಧವ್ಯ ಹೊಂದುವುದಾಗಿಯೂ, ಟ್ರಂಪ್ ಆಡಳಿತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದಾಗಿಯೂ ಪ್ರಚಾರ ನಡೆಸಿದ್ದರು. ಮಾತ್ರವಲ್ಲದೆ, ಬ್ರೆಜಿಲ್‌ನಲ್ಲಿ ವಿಶ್ವದಲ್ಲೇ ಎರಡನೇ ಅತಿಹೆಚ್ಚು (ಸುಮಾರು 2.1 ಕೋಟಿ ಟನ್‌ಗಳಷ್ಟು) ಅಪರೂಪದ ಖನಿಜ ಸಂಪತ್ತಿದ್ದು, ಈ ಖನಿಜ ಗಣಿಗಾರಿಕೆಯಲ್ಲಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾಗಿ ಫ್ಲಾವಿಯೊ ಬೊಲ್ಸೊನಾರೊ ಹೇಳಿಕೊಂಡಿದ್ದರು.
ಇನ್ನೊಂದೆಡೆ, ಲುಲಾ ಅವರು ಬ್ರೆಜಿಲ್‌ನ ರಫ್ತುಗಳ ಮೇಲೆ ಅಮೆರಿಕ ವಿಧಿಸಿದ್ದ ಸುಂಕಗಳು ಮತ್ತು ಅಮೆರಿಕದ ಬ್ರಿಜಿಲ್ ವಿರೋಧಿ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದರು.
ಚುನಾವಣೆಯಲ್ಲಿ ಅಮೆರಿಕದೊಂದಿಗಿನ ಸಂಬಂಧ, ಅಪರಾಧ ತಡೆ, ಹವಾಮಾನ ನೀತಿ ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳ ವಿಚಾರದಲ್ಲಿ ಈ ಇಬ್ಬರು ನಾಯಕರ ನಿಲುವುಗಳು ಸ್ಪಷ್ಟವಾಗಿ ಗೋಚರಿಸಿದ್ದವು. ಬೊಲ್ಸೊನಾರೊ ಅವರು ಅಪರಾಧಗಳ ವಿರುದ್ಧ ಕಠಿಣ ಕ್ರಮ ಮತ್ತು ಆಹಾರ ಧಾನ್ಯಗಳ ಬೆಲೆ ಇಳಿಕೆಯ ಭರವಸೆ ನೀಡಿದ್ದರೆ, ಲುಲಾ ಅವರು ಬಡಜನರಿಗೆ ಧನಸಹಾಯ ಮತ್ತು ಸಾಮಾಜಿಕ ಭದ್ರತೆಯ ಭರವಸೆ ನೀಡಿದ್ದರು.
ಬ್ರೆಜಿಲ್‌ನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಅಪರಾಧ ಕೃತ್ಯಗಳ ಹಾವಳಿ ಹಾಗೂ ಭ್ರಷ್ಟಾಚಾರದ ಆರೋಪಗಳಿಂದಾಗಿ ಲುಲಾ ಅವರಿಗೆ ಗೆಲುವು ಸುಲಭವಾಗಿರಲಿಲ್ಲ. ಲುಲಾ ಅವರು ಹಿಂದೆ ಜೈಲು ಶಿಕ್ಷೆ ಅನುಭವಿಸಿದ್ದು, ನಂತರ ಆ ಶಿಕ್ಷೆಯನ್ನು ರದ್ದುಗೊಳಿಗೊಂಡಿತ್ತು. ಅಂತೆಯೇ, ಬೊಲ್ಸೆನಾರೋ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿದ್ದವು.
ಇದೆಲ್ಲದರ ನಡುವೆ, ಬ್ರೆಜಿಲ್ ಮತದಾರರು ಅಮೆರಿಕದ ಪ್ರಭಾವವನ್ನು ವಿರೋಧಿಸಿ, ಲುಲಾ ಅವರಿಗೆ ಬೆಂಬಲ ನೀಡಿದ್ದಾರೆ. ಈ ಗೆಲುವಿನ ಮೂಲಕ ಲುಲಾ ಅವರು ನಾಲ್ಕನೇ ಅವಧಿಗೆ ದೇಶವನ್ನು ಮುನ್ನಡೆಸಲಿದ್ದಾರೆ.
ಈ ಲೇಖನ ಓದಿದ್ದೀರಾ?: ಗಡಿಯಲ್ಲಿ ಚೀನಾ ಅತಿಕ್ರಮಣ; ಮೌನಕ್ಕೆ ಸರಿದ 56 ಇಂಚಿನ ಎದೆಯ ಮೋದಿ!
ಚುನಾವಣಾ ಫಲಿತಾಂಶದಲ್ಲಿ ಎಡರಂಗದ ಮುನ್ನಡೆ ಸ್ಪಷ್ಟವಾಗುತ್ತಿದ್ದಂತೆ ಲುಲಾ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ರಿಯೊ ಡಿ ಜನೈರೊದ ಲಾರಾಂಜೆರಾಸ್ ಪ್ರದೇಶದಲ್ಲಿ ಜನರು ಬಾರ್‌ಗಳಲ್ಲಿ ಸೇರಿ ಎಣಿಕೆಯನ್ನು ವೀಕ್ಷಿಸುತ್ತಾ, ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸಿದ್ದಾರೆ. ತಂತ್ರಜ್ಞಾನ ವಲಯದಲ್ಲಿ ಕೆಲಸ ಮಾಡುವ ಜೂಲಿಯಾ ಬ್ಯೂನೊ ಸೇರಿದಂತೆ ಹಲವು ಯುವಜನರು ಲುಲಾ ಅವರ ಜನಪರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿ ಸಂಭ್ರಮಿಸಿದ್ದಾರೆ.





