ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಗೆ ಕೆಲ ದಿನಗಳಷ್ಟೇ ಬಾಕಿ ಇರುವಾಗ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರದ ವಿರುದ್ಧ ಶನಿವಾರ ತೆಲ್ ಅವೀವ್‌ನಲ್ಲಿ ಸಾವಿರಾರು ಇಸ್ರೇಲಿ ನಾಗರಿಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ಚುನಾವಣೆಯನ್ನು ನೆತನ್ಯಾಹು ಅವರ ಆಡಳಿತಾವಧಿಯ ಮೇಲಿನ ನಿರ್ಣಾಯಕ ‘ಜನಮತಸಂಗ್ರಹ’ ಎಂದೇ ವಿಶ್ಲೇಷಿಸಲಾಗುತ್ತಿದೆ.
2023ರ ಅಕ್ಟೋಬರ್ 7ರಂದು ಪ್ಯಾಲೆಸ್ತೀನ್ ಉಗ್ರರು ನಡೆಸಿದ ದಾಳಿಯಲ್ಲಿ ಸಂತ್ರಸ್ತರಾದವರು ಹಾಗೂ ಅಪಹರಣಕ್ಕೊಳಗಾದ (ಹೋಸ್ಟೇಜ್) ಸಂತ್ರಸ್ತರ ಕುಟುಂಬಸ್ಥರು ಸೇರಿ ಸ್ಥಾಪಿಸಿರುವ ‘ಅಕ್ಟೋಬರ್ ಕೌನ್ಸಿಲ್’ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಗಾಜಾ ಯುದ್ಧಕ್ಕೆ ಕಾರಣವಾದ ಹಮಾಸ್ ದಾಳಿಯನ್ನು ತಡೆಯುವಲ್ಲಿ ವಿಫಲರಾದ ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನಿಸುವುದು ಈ ಸಂಘಟನೆಯ ಮುಖ್ಯ ಉದ್ದೇಶವಾಗಿತ್ತು.
ರ್ಯಾಲಿಗೂ ಮುನ್ನ ಎಕ್ಸ್ (X) ತಾಣದಲ್ಲಿ ಪೋಸ್ಟ್ ಮಾಡಿದ್ದ ಕೌನ್ಸಿಲ್, “ಚುನಾವಣೆಗೆ ಮೂರು ದಿನಗಳ ಮುನ್ನ, ಸತ್ಯವನ್ನು ಹೊರತರುವ, ಸರ್ಕಾರದ ಹೊಣೆಗಾರಿಕೆಯನ್ನು ನಿಗದಿಪಡಿಸುವ ಮತ್ತು ಸ್ವತಂತ್ರ ರಾಜ್ಯ ತನಿಖಾ ಆಯೋಗವನ್ನು ರಚಿಸುವಂತೆ ಆಗ್ರಹಿಸಿ ಕಳೆದ ಮೂರು ವರ್ಷಗಳಿಂದ ನಾವು ನಡೆಸುತ್ತಿರುವ ಸುದೀರ್ಘ ಹೋರಾಟದ ಪರಮೋಚ್ಛ ಘಟ್ಟ ಇದಾಗಿದೆ” ಎಂದು ಹೇಳಿತ್ತು.
ಆರ್.ಎಫ್.ಪಿ (AFP) ವರದಿಗಾರರ ಪ್ರಕಾರ, ಸಾವಿರಾರು ಪ್ರತಿಭಟನಾಕಾರರು ಕೇಂದ್ರ ‘ರಬಿನ್ ಚೌಕ’ದಿಂದ ಆರಂಭಿಸಿ ‘ಹೋಸ್ಟೇಜಸ್ ಸ್ಕ್ವೇರ್’ ಕಡೆಗೆ ಮೆರವಣಿಗೆ ನಡೆಸಿದರು. ಗಾಜಾದಲ್ಲಿ ಒತ್ತೆಯಾಳಾಗಿರುವವರ ಬಿಡುಗಡೆಗೆ ಆಗ್ರಹಿಸಿ ಈ ಹಿಂದೆ ನಡೆದಿದ್ದ ಸರ್ಕಾರದ ವಿರುದ್ಧದ ಪ್ರತಿಭಟನೆಗಳಿಗೂ ಈ ಚೌಕವೇ ಕೇಂದ್ರಬಿಂದುವಾಗಿತ್ತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 68 ವರ್ಷದ ಹದಾಸ್ ಫ್ಯೂಯರ್‌ಸ್ಟೈನ್ ಎಂಬುವವರು ಮಾತನಾಡಿ, “ಕಳೆದ ನಾಲ್ಕು ವರ್ಷಗಳಿಂದ (2022ರ ಕೊನೆಯಲ್ಲಿ ನೆತನ್ಯಾಹು ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ) ನಮ್ಮನ್ನು ಮುನ್ನಡೆಸುತ್ತಿರುವವರು ತೀರಾ ಕೆಟ್ಟ ಕೆಲಸ ಮಾಡಿದ್ದಾರೆ. ಇಸ್ರೇಲ್ ಹಿಂದೆಂದೂ ಇಂತಹ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
ಈ ಪ್ರತಿಭಟನಾ ಸಮಾವೇಶದಲ್ಲಿ ಪ್ರಮುಖ ನಾಲ್ಕು ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಇದರಲ್ಲಿ ನೆತನ್ಯಾಹು ಅವರಿಗೆ ಕಠಿಣ ಸವಾಲೊಡ್ಡಿರುವ ಮತ್ತು ಮತದಾನದ ರೇಸ್‌ನಲ್ಲಿ ಸಮಬಲ ಕಾಯ್ದುಕೊಂಡಿರುವ ಗಡಿ ಐಸೆನ್‌ಕೋಟ್ (Gadi Eisenkot) ಕೂಡ ಪ್ರಮುಖರಾಗಿದ್ದರು.
ಮೆರವಣಿಗೆಯ ಸಂದರ್ಭದಲ್ಲಿ ಆಡಳಿತಾರೂಢ ಮೈತ್ರಿಕೂಟದ ಬೆಂಬಲಿಗರು ಗಲಾಟೆ ಎಬ್ಬಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಕಮಿಷನರ್‌ಗೆ ಅಕ್ಟೋಬರ್ ಕೌನ್ಸಿಲ್ ತುರ್ತು ಪತ್ರ ಬರೆದು ಮುನ್ನೆಚ್ಚರಿಕೆ ನೀಡಿತ್ತು.
ದೇಶದ ಭದ್ರತಾ ವೈಫಲ್ಯದ ಕುರಿತು ಸ್ವತಂತ್ರ ತನಿಖಾ ಆಯೋಗ ರಚಿಸಬೇಕೆಂಬ ವಿಪಕ್ಷಗಳು ಹಾಗೂ ನಾಗರಿಕ ಸಮಾಜದ ಹೋರಾಟವನ್ನು ನೆತನ್ಯಾಹು ಸರ್ಕಾರ ತಿರಸ್ಕರಿಸಿದೆ. ಸಾಮಾನ್ಯವಾಗಿ ಇಂತಹ ದೊಡ್ಡ ಮಟ್ಟದ ರಾಜ್ಯ ವೈಫಲ್ಯಗಳ ತನಿಖೆಗೆ ಸ್ವತಂತ್ರ ಆಯೋಗ ರಚಿಸುವ ಸಂಪ್ರದಾಯ ಇಸ್ರೇಲ್‌ನಲ್ಲಿದೆ. ಆದರೆ ನೆತನ್ಯಾಹು ಸರ್ಕಾರ ಅರ್ಧದಷ್ಟು ಸದಸ್ಯರನ್ನು ಆಡಳಿತ ಪಕ್ಷದಿಂದ ಹಾಗೂ ಉಳಿದರ್ಧ ಸದಸ್ಯರನ್ನು ವಿಪಕ್ಷದಿಂದ ನೇಮಿಸುವ ‘ರಾಜಕೀಯ’ ತನಿಖಾ ಸಮಿತಿಯ ಪ್ರಸ್ತಾಪ ಇಟ್ಟಿತ್ತು. ಆದರೆ ರಾಜಕಾರಣಿಗಳೇ ನೇಮಿಸುವ ಸಮಿತಿಯನ್ನು ಬಹಿಷ್ಕರಿಸುವುದಾಗಿ ವಿಪಕ್ಷಗಳು ಸ್ಪಷ್ಟಪಡಿಸಿವೆ.
ಗಾಜಾ, ಲೆಬನಾನ್ ಹಾಗೂ ಇರಾನ್ ವಿರುದ್ಧದ ಯುದ್ಧ ಹಾಗೂ ವೆಸ್ಟ್ ಬ್ಯಾಂಕ್‌ನಲ್ಲಿ ಹರಡಿರುವ ಹಿಂಸಾಚಾರದಿಂದಾಗಿ ಇಸ್ರೇಲ್ ಜಾಗತಿಕವಾಗಿ ಏಕಾಂಗಿಯಾಗುತ್ತಿದೆ. ವೆಸ್ಟ್ ಬ್ಯಾಂಕ್‌ನಲ್ಲಿ ಪಶ್ಚಿಮ ದಂಡೆಯ ವಸಾಹತುಶಾಹಿಗಳ ದಾಳಿ ಹಾಗೂ ನೆತನ್ಯಾಹು ಸರ್ಕಾರದ ನೂತನ ವಸಾಹತು ನಿರ್ಮಾಣ ಯೋಜನೆಗೆ ಪ್ರತಿಯಾಗಿ ಬ್ರಿಟನ್ ಸೇರಿದಂತೆ ಹಲವು ದೇಶಗಳು ಇಸ್ರೇಲಿ ಸರಕುಗಳ ಮೇಲೆ ನಿರ್ಬಂಧ ವಿಧಿಸಿವೆ.
ಈ ಅಂತಾರಾಷ್ಟ್ರೀಯ ದಿಗ್ಬಂಧನಗಳನ್ನು ನಿಭಾಯಿಸಲು, ಇಸ್ರೇಲ್ ಸ್ವತಂತ್ರ ‘ಪರ್ಯಾಯ ಡಿಜಿಟಲ್ ಆರ್ಥಿಕತೆ’ಯನ್ನು ಅಭಿವೃದ್ಧಿಪಡಿಸಬೇಕಾಗಬಹುದು ಎಂದು ನೆತನ್ಯಾಹು ಸುಳಿವು ನೀಡಿದ್ದರು. ಜೊತೆಗೆ ಅಮೆರಿಕ ನೀಡುವ ಬಿಲಿಯನ್‌ಗಟ್ಟಲೆ ಡಾಲರ್ ಮಿಲಿಟರಿ ನೆರವು ಸದಾ ಸಿಗುವುದಿಲ್ಲ ಎಂದಿದ್ದರು.
ನೆತನ್ಯಾಹು ಪ್ರಸ್ತಾಪಿಸಿದ ಪರ್ಯಾಯ ಡಿಜಿಟಲ್ ನಾಣ್ಯವನ್ನು ನೆತನ್ಯಾಹು ಅವರ ಅಡ್ಡಹೆಸರು ‘ಬಿಬಿ’ ಆಧರಿಸಿ ವ್ಯಂಗ್ಯವಾಗಿ “bbCoin” ಎಂದು ಕರೆದಿದ್ದಾರೆ. “ನೆತನ್ಯಾಹು ಮತ್ತೆ ಅಧಿಕಾರಕ್ಕೆ ಬಂದರೆ ಇಸ್ರೇಲ್ ಜಾಗತಿಕ ಆರ್ಥಿಕತೆಯಿಂದ ಸಂಪೂರ್ಣ ಕಡಿತಗೊಳ್ಳುತ್ತದೆ. ಆನ್‌ಲೈನ್ ಶಾಪಿಂಗ್ ಇರುವುದಿಲ್ಲ, ಹೈಟೆಕ್ ಹೂಡಿಕೆಗಳು ಬಂದ್ ಆಗುತ್ತವೆ ಹಾಗೂ ಭದ್ರತೆಯೂ ಇರುವುದಿಲ್ಲ. ಈ ‘bbCoin’ ಇಸ್ರೇಲ್ ಅನ್ನು ಧ್ವಂಸ ಮಾಡಲು ನಾವು ಬಿಡಬಾರದು” ಎಂದು ಎಕ್ಸ್‌ನಲ್ಲಿ ಗಡಿ ಐಸೆನ್‌ಕೋಟ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಗಾಜಾ ಯುದ್ಧದ ನೆರಳಲ್ಲಿ ನಿರ್ಣಾಯಕ ಸಮರ; ಹೇಗಿರಲಿದೆ ಗೊತ್ತೇ ಇಸ್ರೇಲ್ ಚುನಾವಣೆ?
ಇಸ್ರೇಲ್‌ನ ಚಾನೆಲ್ 12 ಸಂದರ್ಶನದಲ್ಲಿ ಮಾತನಾಡಿ, “ನೆತನ್ಯಾಹು ಅವರು ರಷ್ಯಾ ಅಥವಾ ಇರಾನ್ ದೇಶಗಳಂತೆ ಇಸ್ರೇಲ್ ನಾಗರಿಕರು ಒಂದು ತುಂಡು ರೊಟ್ಟಿಗಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅವರು ಗೆದ್ದರೆ ಇಸ್ರೇಲ್ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧ ಬೀಳಲಿದೆ, ಅಮೆರಿಕದ ಜೊತೆ ಭದ್ರತಾ ಒಪ್ಪಂದ ಇರುವುದಿಲ್ಲ ಮತ್ತು ಆರ್ಥಿಕತೆ ನಶಿಸಿಹೋಗಲಿದೆ” ಎಂದು ಎಚ್ಚರಿಸಿದ್ದಾರೆ.
ಮೊದಲ ಬಾರಿಗೆ ಮತದಾನ ಮಾಡುತ್ತಿರುವ 18 ವರ್ಷದ ನಾಮಾ ಬಿಟರ್‌ಮನ್ ಮಾತನಾಡಿ, ಆಂಟಿ-ನೆತನ್ಯಾಹು ಮೈತ್ರಿಕೂಟ ಗೆಲ್ಲುವ ಭರವಸೆಯಿದೆ ಎಂದಿದ್ದಾರೆ. “ನಾವು ಗೆದ್ದರೆ, ವಿಶ್ವದಾದ್ಯಂತ ಇಸ್ರೇಲ್ ಅನ್ನು ನೋಡುವ ದೃಷ್ಟಿಕೋನವನ್ನು ನಾವು ಸಂಪೂರ್ಣವಾಗಿ ಬದಲಾಯಿಸಬಹುದು” ಎಂದು ಆಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ರಾತ್ರಿಯಿಂದ ಜಾರಿಗೆ ಬಂದಿರುವ ಚುನಾವಣಾ ಸಮೀಕ್ಷೆಗಳ ನಿಷೇಧಕ್ಕೂ ಮುನ್ನ ಬಂದ ಇತ್ತೀಚಿನ ವರದಿಗಳ ಪ್ರಕಾರ, ನೆತನ್ಯಾಹು ಮೈತ್ರಿಕೂಟವಾಗಲಿ ಅಥವಾ ವಿಪಕ್ಷಗಳ ಮೈತ್ರಿಕೂಟವಾಗಲಿ ಇಸ್ರೇಲ್ ಸಂಸತ್ತಿನಲ್ಲಿ ಸುಲಭವಾಗಿ ಬಹುಮತ (61 ಸೀಟುಗಳು) ಪಡೆಯುವುದು ಕಷ್ಟಕರವೆಂದು ತಿಳಿಸಿವೆ.






