ಬ್ರೆಜಿಲ್‌ನಲ್ಲಿ ಅಕ್ಟೋಬರ್ 25ರಂದು ಎರಡನೇ ಸುತ್ತಿನ ಮತದಾನ ನಡೆಯಲಿದೆ. ಜಗತ್ತಿನ ಗಮನ ಈಗ ಬ್ರೆಜಿಲ್‌ನತ್ತ ನೆಟ್ಟಿದೆ. ಅಕ್ಟೋಬರ್ 4ರಂದು ಮೊದಲ ಸುತ್ತಿನ ಮತದಾನ ನಡೆದಿತ್ತು. ಫ್ಲಾವಿಯೊ ಬೋಲ್ಸನಾರೊ ಶೇ.47.03ರಷ್ಟು ಮತ ಪಡೆದಿದ್ದರು. ಲೂಲಾ ಅವರಿಗೆ ಶೇ.45.15ರಷ್ಟು ಮತ ದೊರೆತಿತ್ತು.
ದಕ್ಷಿಣ ಅಮೆರಿಕದ ಅತಿದೊಡ್ಡ ರಾಷ್ಟ್ರ ಬ್ರೆಜಿಲ್‌ನಲ್ಲಿ ಚುನಾವಣಾ ತಾಪ ತಾರಕಕ್ಕೆ ಏರಿದೆ. ಅಧ್ಯಕ್ಷೀಯ ಚುನಾವಣೆಯ ಎರಡನೆಯ ಸುತ್ತಿನ ಮತದಾನ ಸಮೀಪಿಸಿದೆ. ರಾಜಕೀಯ ಸಂಘರ್ಷ ಉತ್ತುಂಗ ತಲುಪಿದೆ. ಮೊದಲ ಸುತ್ತಿನಲ್ಲಿ ಬೋಲ್ಸನಾರೊ ಮುನ್ನಡೆ ಪಡೆದಿದ್ದರು. ಎರಡನೇ ಸುತ್ತಿನಲ್ಲಿ ಲೂಲಾ ಬೆಂಬಲಿಗರು ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಈ ಪ್ರಚಾರ ಮತಗಳಾಗಿ ಪರಿವರ್ತನೆಯಾಗಲಿದೆಯೇ ಎಂಬದನ್ನು ಕಾದು ನೋಡಬೇಕಿದೆ.
ಒಂದೆಡೆ ಹಾಲಿ ಅಧ್ಯಕ್ಷ, ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡ ಸಿಲ್ವ. ಅವರ ಎದುರಾಳಿಯಾಗಿ ತೀವ್ರ ಬಲಪಂಥೀಯ ನಾಯಕ ಫ್ಲಾವಿಯೊ ಬೋಲ್ಸನಾರೊ.
ಇದು ಸರ್ವೇಸಾಮಾನ್ಯ ಅಧಿಕಾರದ ಹೋರಾಟವಲ್ಲ. ಬ್ರೆಜಿಲ್ ಜನತಂತ್ರದ ಭವಿಷ್ಯವನ್ನು ತೀರ್ಮಾನಿಸುವ ಚುನಾವಣೆ. ದೇಶದ ಆರ್ಥಿಕ ಸಾರ್ವಭೌಮತ್ವ, ನೈಸರ್ಗಿಕ ಸಂಪನ್ಮೂಲಗಳು ಮತ್ತು ವಿದೇಶಾಂಗ ನೀತಿಯ ದಿಕ್ಕು ದೆಸೆಗಳನ್ನು ನಿರ್ಧರಿಸುವ ಚುನಾವಣೆ.
ಚುನಾವಣೆಯ ನಡುವೆ ಹಲವು ಪ್ರಶ್ನೆಗಳು ರಾಜಕೀಯದಲ್ಲಿ ಸಂಚಲನ ಮೂಡಿಸಿವೆ; ಸಾಮಾಜಿಕ ಮಾಧ್ಯಮಗಳ ಮೂಲಕ ಬ್ರೆಜಿಲ್ ಚುನಾವಣೆಯ ಮೇಲೆ ಪ್ರಭಾವ ಬೀರುವ ಸನ್ನಾಹ ನಡೆಯುತ್ತಿದೆಯೇ? ಅಮೆರಿಕ ರಾಜಕೀಯ ಹಸ್ತಕ್ಷೇಪ ನಡೆಸಿದೆಯೇ? ಧಾರ್ಮಿಕ ಸಂಘಟನೆಗಳು ಮತ್ತು ಕಾರ್ಪೊರೇಟ್ ಶಕ್ತಿಗಳು ಯಾರ ಪರ ನಿಂತಿವೆ?
ಬ್ರೆಜಿಲ್‌ನಲ್ಲಿ ಅಕ್ಟೋಬರ್ 25ರಂದು ಎರಡನೇ ಸುತ್ತಿನ ಮತದಾನ ನಡೆಯಲಿದೆ. ಜಗತ್ತಿನ ಗಮನ ಈಗ ಬ್ರೆಜಿಲ್‌ನತ್ತ ನೆಟ್ಟಿದೆ. ಅಕ್ಟೋಬರ್ 4ರಂದು ಮೊದಲ ಸುತ್ತಿನ ಮತದಾನ ನಡೆದಿತ್ತು. ಫ್ಲಾವಿಯೊ ಬೋಲ್ಸನಾರೊ ಶೇ.47.03ರಷ್ಟು ಮತ ಪಡೆದಿದ್ದರು. ಲೂಲಾ ಅವರಿಗೆ ಶೇ.45.15ರಷ್ಟು ಮತ ದೊರೆತಿತ್ತು.
ಶೇ.50ಕ್ಕಿಂತ ಹೆಚ್ಚು ಮತ ಇಬ್ಬರಲ್ಲಿ ಒಬ್ಬರಿಗೂ ಸಿಗಲಿಲ್ಲ. ಹೀಗಾಗಿ ಎರಡನೇ ಸುತ್ತಿನ ಚುನಾವಣೆ ಅನಿವಾರ್ಯವಾಯಿತು.
ಮೊದಲ ಸುತ್ತಿನಲ್ಲಿ ಹಿನ್ನಡೆ; ಲೂಲಾ ಪರ ಬೀದಿಗಿಳಿದ ಜನಸಾಗರ
ಮೊದಲ ಸುತ್ತಿನ ಚುನಾವಣೆಗೆ ಮುನ್ನ ಲೂಲಾ ಗೆಲುವಿನ ನಿರೀಕ್ಷೆ ಇತ್ತು. ಹಲವು ಸಮೀಕ್ಷೆಗಳು ಅವರ ಮುನ್ನಡೆಯನ್ನು ಸೂಚಿಸಿದ್ದವು. ಆದರೆ ಫ್ಲಾವಿಯೊ ಬೋಲ್ಸನಾರೊ ಮುನ್ನಡೆ ಪಡೆದರು. ಎಡಪಂಥೀಯ ರಾಜಕೀಯ ವಲಯಕ್ಕೆ ಇದು ಅನಿರೀಕ್ಷಿತ ಹೊಡೆತವಾಗಿತ್ತು. ಬಳಿಕ ಬ್ರೆಜಿಲ್‌ನಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.
ರಿಯೋ ಡಿ ಜನೈರೊ, ಸಾವೊ ಪಾಲೊ, ಬೆಲೊ ಹೊರಿಜೊಂಟೆ ಹಾಗೂ ಸಾಲ್ವಡಾರ್ ನಗರಗಳಲ್ಲಿ ಲೂಲಾ ಬೆಂಬಲಿಗರು ಬೀದಿಗಿಳಿದಿದ್ದಾರೆ. ಆದಿವಾಸಿಗಳು, ಆಫ್ರಿಕನ್ ಮೂಲದ ಬ್ರೆಜಿಲಿಯನ್ನರು, ಕಾರ್ಮಿಕ ಸಂಘಟನೆಗಳು, ಕಲಾವಿದರು ಹಾಗೂ ವಿದ್ಯಾರ್ಥಿಗಳು ಲೂಲಾ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ಬಾರಿಯ ಚಳವಳಿಗೆ ಮತ್ತೊಂದು ವಿಶೇಷತೆಯಿದೆ. ಜನಸಾಮಾನ್ಯರು ಸ್ವಯಂಪ್ರೇರಿತರಾಗಿ ಬೀದಿಗಿಳಿದಿದ್ದಾರೆ. ಸಾಮಾಜಿಕ ಸಂಘಟನೆಗಳೂ ಪ್ರಚಾರದಲ್ಲಿ ತೊಡಗಿವೆ.
ಮೂರನೆಯ ಅಭ್ಯರ್ಥಿಯಾಗಿ ಸಾಮಾಜಿಕ ಮಾಧ್ಯಮಗಳು?
ಬ್ರೆಜಿಲ್ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರವೂ ವಿವಾದಕ್ಕೆ ಕಾರಣವಾಗಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ಮಾತೃಸಂಸ್ಥೆ ಮಾರ್ಕ್ ಝೂಕರ್ ಬರ್ಗ್ ಅವರ ಮೆಟಾ ವಿರುದ್ಧ ಪಕ್ಷಪಾತದ ಆರೋಪ ಕೇಳಿಬಂದಿದೆ.
ಮೆಟಾ ಕಂಪನಿ ಫ್ಲಾವಿಯೊ ಬೋಲ್ಸನಾರೊ ಅವರಿಗೆ ಅನುಕೂಲವಾಗುವಂತೆ ವರ್ತಿಸುತ್ತಿದೆ.ಲೂಲಾ ಪರ ವಿಷಯಗಳ ಪ್ರಸಾರಕ್ಕೆ ಅಡ್ಡಿಯಾಗುತ್ತಿದೆ. ಬೋಲ್ಸನಾರೊ ಪೂರಕ ವಿಷಯಗಳಿಗೆ ಹೆಚ್ಚಿನ ಪ್ರಚಾರ ಸಿಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಸಾಮಾಜಿಕ ಮಾಧ್ಯಮಗಳ ಅಲ್ಗಾರಿದಮ್‌ಗಳು ರಾಜಕೀಯ ಅಭಿಪ್ರಾಯಗಳನ್ನು ರೂಪಿಸುವ ಪ್ರಬಲ ಸಾಧನಗಳಾಗಿರುವುದು ವಾಸ್ತವ. ಅವು ಕೇವಲ ಪ್ರಚಾರ ವೇದಿಕೆಗಳಾಗಿ ಉಳಿದಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಯಾವ ಸುದ್ದಿ ಹೆಚ್ಚು ಜನರನ್ನು ತಲುಪಬೇಕು ಮತ್ತು ಯಾವ ರಾಜಕೀಯ ನಾಯಕ ಹೆಚ್ಚು ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕು ಎಂಬುದನ್ನೂ ಪ್ರಭಾವಿಸತೊಡಗಿವೆ.
ಈ ಲೇಖನ ಓದಿದ್ದೀರಾ?: ಯೂರೋಪ್ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!
ಈ ವಿವಾದ ಚುನಾವಣಾ ನ್ಯಾಯಾಲಯದ ಮೆಟ್ಟಿಲೇರಿದೆ. ಲೂಲಾ ಅವರ ಪ್ರಚಾರ ತಂಡ ಮೆಟಾ ವಿರುದ್ಧ ದೂರು ನೀಡಿದೆ. ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಆದರೆ ತನ್ನ ಮೇಲಿನ ಆರೋಪಗಳನ್ನು ಮೆಟಾ ನಿರಾಕರಿಸಿದೆ.
ರಾಷ್ಟ್ರಧ್ವಜ, ಫುಟ್‌ಬಾಲ್ ಜೆರ್ಸಿಗಾಗಿ ರಾಜಕೀಯ ಪೈಪೋಟಿ!
ಬ್ರೆಜಿಲ್‌ನಲ್ಲಿ ರಾಷ್ಟ್ರೀಯ ಸಂಕೇತಗಳ ಬಳಕೆಯಲ್ಲೂ ರಾಜಕೀಯ ಪೈಪೋಟಿ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ರಾಷ್ಟ್ರಧ್ವಜದ ಬಣ್ಣಗಳು ಮತ್ತು ರಾಷ್ಟ್ರೀಯ ಫುಟ್‌ಬಾಲ್ ತಂಡದ ಹಳದಿ ಜೆರ್ಸಿ ಬೋಲ್ಸನಾರೊ ಬೆಂಬಲಿಗರ ರಾಜಕೀಯ ಗುರುತುಗಳಾಗಿದ್ದವು.
ಈಗ ಲೂಲಾ ಬೆಂಬಲಿಗರೂ ಅದೇ ಜೆರ್ಸಿ ಧರಿಸುತ್ತಿದ್ದಾರೆ. ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುತ್ತಿದ್ದಾರೆ. ಈ ಅಭಿಯಾನ ನೀಡುತ್ತಿರುವ ಸಂದೇಶ ನಿಚ್ಚಳ- ರಾಷ್ಟ್ರಧ್ವಜ ಯಾವುದೇ ಒಂದು ಪಕ್ಷದ ಆಸ್ತಿಯಲ್ಲ. ರಾಷ್ಟ್ರೀಯ ಸಂಕೇತಗಳ ಮೇಲೆ ಯಾರಿಗೂ ಏಕಸ್ವಾಮ್ಯವಿಲ್ಲ.
ದೇಶಪ್ರೇಮವೆಂದರೆ ಒಬ್ಬ ನಾಯಕನಿಗೆ ಅಥವಾ ಒಂದು ಸಿದ್ಧಾಂತಕ್ಕೆ ನಿಷ್ಠೆ ತೋರುವುದಲ್ಲ ಎಂಬ ಸಂದೇಶವನ್ನು ಎಡಪಂಥೀಯರು ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ.
ಬಲಪಂಥೀಯರಿಗೆ ಬಲ ತುಂಬುತ್ತಿರುವ ಧಾರ್ಮಿಕ ಸಂಘಟನೆಗಳು
ಬ್ರೆಜಿಲ್ ರಾಜಕೀಯದಲ್ಲಿ ಧಾರ್ಮಿಕ ಸಂಘಟನೆಗಳ ಪ್ರಭಾವ ದೊಡ್ಡದು. ವಿಶೇಷವಾಗಿ, ಕೆಲವು ನಿಯೋ-ಪೆಂಟೆಕೋಸ್ಟಲ್ ಕ್ರೈಸ್ತ ಸಂಘಟನೆಗಳ ನಾಯಕರು ಬಲಪಂಥೀಯ ರಾಜಕೀಯದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.
1964ರಿಂದ 1985ರವರೆಗೆ ಬ್ರೆಜಿಲ್‌ನಲ್ಲಿ ಸೇನೆಯ ಸರ್ವಾಧಿಕಾರವಿತ್ತು. ಆ ಅವಧಿಯಲ್ಲಿ ಕ್ಯಾಥೊಲಿಕ್ ಚರ್ಚ್‌ನ ಪ್ರಗತಿಪರ ವಿಭಾಗಗಳು ಬಡವರ ಪರ ನಿಂತಿದ್ದವು. ಭೂರಹಿತ ರೈತರು ಮತ್ತು ಶೋಷಿತ ಸಮುದಾಯಗಳ ಹೋರಾಟಗಳಿಗೆ ಬೆಂಬಲ ನೀಡಿದ್ದವು. ಈ ಚಳವಳಿಗೆ ‘ಲಿಬರೇಷನ್ ಥಿಯಾಲಜಿ’ ಅಥವಾ ವಿಮೋಚನಾ ದೇವತಾಶಾಸ್ತ್ರ ಎಂದು ಹೆಸರಿತ್ತು. ಲ್ಯಾಟಿನ್ ಅಮೆರಿಕದ ಸಾಮಾಜಿಕ ನ್ಯಾಯದ ಹೋರಾಟಗಳಿಗೆ ಇದು ಪ್ರೇರಣೆಯಾಗಿತ್ತು. ಆದರೆ ನಂತರ ಪರಿಸ್ಥಿತಿ ಬದಲಾಯಿತು.
ಭೂರಹಿತ ರೈತ ಚಳವಳಿ: ಎಡಪಂಥೀಯ ಸಂಘಟನಾ ಶಕ್ತಿ
ಬ್ರೆಜಿಲ್‌ನ ಎಡಪಂಥೀಯ ರಾಜಕೀಯದಲ್ಲಿ ಭೂರಹಿತ ರೈತರ ಚಳವಳಿಗೆ ಮಹತ್ವದ ಸ್ಥಾನವಿದೆ. ‘ಮೂವಿಮೆಂಟೊ ಡಾಸ್ ಟ್ರಬಲ್ಯಡೊರೆಸ್ ರುರೈಸ್ ಸೆಮ್ ಟೆರ್ರಾ’ (MST) ದೇಶದ ಪ್ರಮುಖ ಸಾಮಾಜಿಕ ಚಳವಳಿಗಳಲ್ಲಿ ಒಂದು. ಬ್ರೆಜಿಲ್‌ನಲ್ಲಿ ಭಾರೀ ಪ್ರಮಾಣದ ಜಮೀನು ಕೆಲವೇ ದೊಡ್ಡ ಜಮೀನ್ದಾರರ ವಶದಲ್ಲಿದೆ. ಭೂಹಂಚಿಕೆ ಮತ್ತು ಕೃಷಿ ಸುಧಾರಣೆಗಳು ದಶಕಗಳಿಂದ ರಾಜಕೀಯ ಪ್ರಶ್ನೆಗಳಾಗಿವೆ. ಎಂಎಸ್‌ಟಿ ಭೂರಹಿತ ರೈತರಿಗೆ ಕೃಷಿಭೂಮಿ ಒದಗಿಸಲು ಹೋರಾಡುತ್ತಿದೆ. ಸಹಕಾರಿ ಕೃಷಿಗೆ ಉತ್ತೇಜನ ನೀಡುತ್ತಿದೆ. ಪರಿಸರಸ್ನೇಹಿ ಕೃಷಿ ಪದ್ಧತಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಗ್ರಾಮೀಣ ಜನರಿಗೆ ಶಿಕ್ಷಣ ಒದಗಿಸಲು ಪ್ರಯತ್ನಿಸುತ್ತಿದೆ.
ಈ ಚಳವಳಿ ಕೇವಲ ಭೂಹಕ್ಕಿನ ಹೋರಾಟವಲ್ಲ. ಶಾಲೆಗಳು, ಶಿಕ್ಷಣ ಕೇಂದ್ರಗಳು ಮತ್ತು ಕೃಷಿ ಸಹಕಾರ ಸಂಘಗಳನ್ನೂ ಕಟ್ಟುತ್ತಿದೆ. ಈ ಮೂಲಕ ಪರ್ಯಾಯ ಸಾಮಾಜಿಕ ವ್ಯವಸ್ಥೆ ರೂಪಿಸಲು ಪ್ರಯತ್ನಿಸುತ್ತಿದೆ.
ಅಂದಾಕ್ಷಣ ಲೂಲಾ ಸರ್ಕಾರಗಳ ಕಾರ್ಯವೈಖರಿ ಪ್ರಶ್ನಾತೀತ ಏನೂ ಅಲ್ಲ. ಭೂಸುಧಾರಣೆಗೆ ಸಮರ್ಪಕ ಪರಿಹಾರ ನೀಡಿಲ್ಲ. ಲೂಲಾ ಕಲ್ಯಾಣ ಕಾರ್ಯಕ್ರಮಗಳನ್ನು ಬೆಂಬಲಿಸಬಹುದು. ಅದೇ ವೇಳೆ ಸರ್ಕಾರದ ಮಿತಿಗಳನ್ನೂ ಪ್ರಶ್ನಿಸಬೇಕು ಎನ್ನುವವರಿದ್ದಾರೆ.
ಅಮೆರಿಕದ ಹಸ್ತಕ್ಷೇಪ: ಬ್ರೆಜಿಲ್ ಸಾರ್ವಭೌಮತ್ವಕ್ಕೆ ಸವಾಲು?
ಬ್ರೆಜಿಲ್ ಚುನಾವಣೆಯಲ್ಲಿ ಅಮೆರಿಕದ ಪಾತ್ರವೂ ಗಂಭೀರ ಚರ್ಚೆಗೆ ಒಳಗಾಗಿದೆ. ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ತನ್ನ ರಾಜಕೀಯ ಮತ್ತು ಆರ್ಥಿಕ ಪ್ರಭಾವ ಉಳಿಸಿಕೊಳ್ಳಲು ಅಮೆರಿಕ ದೀರ್ಘಕಾಲದಿಂದ ಪ್ರಯತ್ನಿಸುತ್ತಿದೆ. ಹೀಗಾಗಿ ಬ್ರೆಜಿಲ್ ಚುನಾವಣೆಯ ಪರಿಣಾಮ ಇಡೀ ಲ್ಯಾಟಿನ್ ಅಮೆರಿಕದ ರಾಜಕೀಯ ಶಕ್ತಿಸಮತೋಲನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಇನ್ನೊಂದೆಡೆ ಬೋಲ್ಸನಾರೊ ಕುಟುಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ನಿಲುವುಗಳಿಗೆ ಹೆಚ್ಚು ಹತ್ತಿರವಾಗಿದೆ. ಬ್ರೆಜಿಲ್‌ನ ಬಲಪಂಥೀಯ ಶಕ್ತಿಗಳಿಗೆ ಅಮೆರಿಕದ ಕೆಲವು ರಾಜಕೀಯ ಮತ್ತು ಹಣಕಾಸು ಗುಂಪುಗಳಿಂದ ನೆರವು ದೊರೆಯುತ್ತಿದೆ ಎಂಬ ಆರೋಪಗಳಿವೆ.
ಬ್ರೆಜಿಲ್‌ನ ಅಪಾರ ಖನಿಜ ಸಂಪತ್ತು- ಅಮೆರಿಕದ ಕಣ್ಣು?
ಬ್ರೆಜಿಲ್‌ನ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣವೂ ಚುನಾವಣೆಯ ಪ್ರಮುಖ ಸಂಗತಿಗಳಲ್ಲೊಂದು. ಅಮೆರಿಕ ಮತ್ತು ಚೀನಾ ನಡುವಿನ ಆರ್ಥಿಕ ಪೈಪೋಟಿಯಲ್ಲಿ ಬ್ರೆಜಿಲ್‌ನ ಖನಿಜ ಸಂಪತ್ತಿಗೆ ಮಹತ್ವ ಉಂಟು.
ಬ್ರೆಜಿಲ್‌ನಲ್ಲಿ ಅಪಾರ ಖನಿಜ ಸಂಪನ್ಮೂಲಗಳಿವೆ. ವಿದ್ಯುತ್ ವಾಹನಗಳು, ಬ್ಯಾಟರಿಗಳು, ನವೀಕರಿಸಬಹುದಾದ ಇಂಧನ ತಂತ್ರಜ್ಞಾನ ಮತ್ತು ರಕ್ಷಣಾ ಉಪಕರಣಗಳ ಉತ್ಪಾದನೆಗೆ ಬೇಕಿರುವ ಖನಿಜಗಳಿವು. ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ಕೈಗಾರಿಕೆಗಳ ಜಾಗತಿಕ ಪೂರೈಕೆ ಸರಪಳಿಯಲ್ಲೂ ಬ್ರೆಜಿಲ್‌ನ ಪಾತ್ರ ಹೆಚ್ಚುತ್ತಿದೆ. ಆದರೆ ಈ ಸಂಪನ್ಮೂಲಗಳ ಮೇಲೆ ವಿದೇಶಿ ಕಂಪನಿಗಳ ಹಿಡಿತ ಹೆಚ್ಚಿದರೆ ಏನಾಗುತ್ತದೆ? ದೇಶದ ಆರ್ಥಿಕ ಸಾರ್ವಭೌಮತ್ವ ಅಪಾಯಕ್ಕೆ ಸಿಲುಕಬಹುದು. ಬೋಲ್ಸನಾರೊ ಅಧಿಕಾರಕ್ಕೆ ಬಂದರೆ ಅಮೆರಿಕದ ಹಿತಾಸಕ್ತಿಗಳಿಗೆ ಅನುಕೂಲವಾಗುವ ಖನಿಜ ನೀತಿಗಳನ್ನು ಜಾರಿಗೊಳಿಸುವ ದಟ್ಟ ಆತಂಕವಿದೆ.
ಬ್ರೆಜಿಲ್‌ನ 1988ರ ಸಂವಿಧಾನಕ್ಕೆ ವಿಶೇಷ ಮಹತ್ವ
ಸೈನಿಕ ಸರ್ವಾಧಿಕಾರ ಅಂತ್ಯಗೊಂಡ ನಂತರ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಂವಿಧಾನ ನೆರವಾಯಿತು. ನಾಗರಿಕ ಹಕ್ಕುಗಳು, ಕಾರ್ಮಿಕರ ಹಕ್ಕುಗಳು ಮತ್ತು ಸಾಮಾಜಿಕ ಕಲ್ಯಾಣಕ್ಕೆ ಆಧಾರ ಒದಗಿಸಿತು. ಪ್ರಜಾಸತ್ತಾತ್ಮಕ ಸಂಸ್ಥೆಗಳ ರಕ್ಷಣೆಯಲ್ಲೂ ಮಹತ್ವದ ಪಾತ್ರ ವಹಿಸಿತು.
ಆದರೆ ಬೋಲ್ಸನಾರೊ ಅಧಿಕಾರಕ್ಕೆ ಬಂದರೆ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾದರೆ ಅಚ್ಚರಿಯಿಲ್ಲ. ಕಾರ್ಮಿಕರ ಹಕ್ಕುಗಳು, ಬಡವರ ಕಲ್ಯಾಣ ಯೋಜನೆಗಳು ಮತ್ತು ಅಲ್ಪಸಂಖ್ಯಾತರ ರಕ್ಷಣೆಯ ಮೇಲೆ ಪರಿಣಾಮ ಉಂಟಾಗಬಹುದು. ಸಾಮಾಜಿಕ ಚಳವಳಿಗಳ ಸ್ವಾತಂತ್ರ್ಯಕ್ಕೂ ಎರವಾಗಬಹುದು.
ಬ್ರೆಜಿಲ್ ಚುನಾವಣೆಯ ಸಂದೇಶವೇನು?
ಬ್ರೆಜಿಲ್ ಚುನಾವಣೆ ಕೇವಲ ಇಬ್ಬರು ನಾಯಕರ ನಡುವಿನ ಪೈಪೋಟಿಯಲ್ಲ. ಇದು ಎರಡು ವಿಭಿನ್ನ ರಾಜಕೀಯ ದೃಷ್ಟಿಕೋನಗಳ ನಡುವಿನ ಸಂಘರ್ಷವೂ ಹೌದು. ಸಾಮಾಜಿಕ ಕಲ್ಯಾಣ ನೀತಿಗಳು, ಕಾರ್ಮಿಕ ಚಳವಳಿಗಳು ಹಾಗೂ ಪ್ರಗತಿಪರ ರಾಜಕೀಯ ಶಕ್ತಿಗಳಿವೆ.
ಮತ್ತೊಂದೆಡೆ ಬಲಪಂಥೀಯ ರಾಷ್ಟ್ರೀಯತಾವಾದವಿದೆ. ಕೆಲವು ಧಾರ್ಮಿಕ ಸಂಘಟನೆಗಳ ರಾಜಕೀಯ ಪ್ರಭಾವವಿದೆ. ಮಾರುಕಟ್ಟೆ ಕೇಂದ್ರಿತ ಆರ್ಥಿಕ ನೀತಿಗಳಿಗೆ ಬೆಂಬಲ ನೀಡುವ ಶಕ್ತಿಗಳಿವೆ.
ಬ್ರೆಜಿಲ್ ತನ್ನ ಪ್ರಜಾಪ್ರಭುತ್ವವನ್ನು ಹೇಗೆ ಉಳಿಸಿಕೊಳ್ಳಲಿದೆ? ಸಾಮಾಜಿಕ ಅಸಮಾನತೆಯನ್ನು ಹೇಗೆ ಎದುರಿಸಲಿದೆ? ವಿದೇಶಿ ಪ್ರಭಾವದ ನಡುವೆ ಸ್ವತಂತ್ರ ನಿರ್ಧಾರಗಳನ್ನು ಹೇಗೆ ಕೈಗೊಳ್ಳಲಿದೆ?
ಈ ಪ್ರಶ್ನೆಗಳಿಗೆ ಬ್ರೆಜಿಲ್ ನೀಡುವ ಉತ್ತರವೇ ಅದರ ಪ್ರಜಾಪ್ರಭುತ್ವದ ನಿಜ ಭವಿಷ್ಯವನ್ನು ನಿರ್ಧರಿಸಲಿದೆ.




