ಸಾಲಬಾಧೆ ಹಾಗೂ ಬೆಳೆ ನಷ್ಟದಿಂದಾಗಿ ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಕಮಲನಗರ ತಾಲ್ಲೂಕುಗಳಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರತ್ಯೇಕ ಘಟನೆಗಳು ಬುಧವಾರ ನಡೆದಿವೆ.
ಭಾಲ್ಕಿ ತಾಲ್ಲೂಕಿನ ಕೊಂಗಳಿ ಗ್ರಾಮದ ಅಮೋಲ್ ಶಿವಾಜಿರಾವ್ ಅಟ್ಟರಗೆ (34) ಅವರು ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಳೆಯ ಕೊರತೆಯಿಂದ ಕಬ್ಬಿನ ಬೆಳೆ ಒಣಗಿ ನಷ್ಟವಾಗಿತ್ತು. ಕೃಷಿಯಿಂದ ನಿರೀಕ್ಷಿತ ಆದಾಯ ಬಾರದೆ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು ಎಂದು ಮೃತರ ತಾಯಿ ಸಾವಿತ್ರಿಬಾಯಿ ಶಿವಾಜಿರಾವ್ ಅಟ್ಟರಗೆ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪತಿಯ ಹೆಸರಿನಲ್ಲಿ ₹40 ಸಾವಿರ ಹಾಗೂ ತಮ್ಮ ಹೆಸರಿನಲ್ಲಿ ₹23,500 ಸಾಲವಿತ್ತು. ಅಲ್ಲದೆ, ಖಾಸಗಿ ವ್ಯಕ್ತಿಗಳಿಂದ ಸುಮಾರು ₹2 ಲಕ್ಷ ಮತ್ತು ಎಲ್ ಆ್ಯಂಡ್ ಟಿ ಫೈನಾನ್ಸ್‌ನಲ್ಲಿ ₹1 ಲಕ್ಷ ಸಾಲ ಪಡೆದಿದ್ದರು. ಈ ಸಾಲಗಳ ಕಂತುಗಳನ್ನು ಅಮೋಲ್ ಪಾವತಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಮಲನಗರ ಪಟ್ಟಣದ ರೈತ ದಿಲೀಪ್ ಶಿವರಾಜ ಸಂಗಮೆ (50) ಅವರು ಸಾಲಬಾಧೆಯಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ನಸುಕಿನ ಜಾವ ಈ ಘಟನೆ ನಡೆದಿದೆ.
ಈ ಬಾರಿ ಮಳೆಯ ಕೊರತೆಯಿಂದ ಬೆಳೆ ಕೈಕೊಟ್ಟಿದ್ದು, ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಅವರು ಇದ್ದರು ಎನ್ನಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಸೇರಿದಂತೆ ಖಾಸಗಿ ವ್ಯಕ್ತಿಗಳಿಂದಲೂ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : ಬಿಜೆಪಿ-ಕಾಂಗ್ರೆಸ್ ತೀವ್ರ ಪೈಪೋಟಿ, ಗೆಲುವು ಯಾರಿಗೆ?






