ಚೀನಾದ ಸಂಸ್ಥೆಯೊಂದು ಪಡೆದ ಟೆಂಡರ್‌ಅನ್ನು ರದ್ದುಗೊಳಿಸಿರುವ ಶ್ರೀಲಂಕಾ, ಮೂರು ಸೌರ ಮತ್ತು ಪವನ ಶಕ್ತಿಯಿಂದ ಹೈಬ್ರಿಡ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣದ ಟೆಂಡರ್‌ಅನ್ನು ಭಾರತೀಯ ಕಂಪನಿಗೆ ನೀಡಿದೆ.
ಭಾರತವು ತನ್ನ ಪ್ರಭಾವದ ವ್ಯಾಪ್ತಿ ಹಾಗೂ ಪ್ರಮುಖ ಜಾಗತಿಕ ಹಡಗು ಮಾರ್ಗಗಳ ಬಳಿ ಇರುವ ಶ್ರೀಲಂಕಾದಲ್ಲಿ ಚೀನೀ ಪ್ರಭಾವ ಬೆಳೆಯುತ್ತಿರುವ ಬಗ್ಗೆ ಭಾರತ ಹಿಂದಿನಿಂದಲೂ ಚಿಂತಿಸುತ್ತಿದೆ. ಎರಡು ವರ್ಷಗಳ ಹಿಂದೆ, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ (ಎಡಿಬಿ) ಸಾಲ ಪಡೆದು ವಿದ್ಯುತ್ ಘಟಕ ನಿರ್ಮಾಣ ಯೋಜನೆಯನ್ನು ಚೀನಾ ಕಂಪನಿಗೆ ಶ್ರೀಲಂಕಾ ಟೆಂಡರ್ ನೀಡಿತ್ತು. ಈ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು. ಆದರೆ, ಇತ್ತೀಚೆಗೆ ಆ ಟೆಂಡರ್‌ಅನ್ನು ರದ್ದುಪಡಿಸಿದ್ದ ಶ್ರೀಲಂಕಾ, ಯೋಜನೆಯನ್ನು ಸ್ಥಗಿತಗೊಳಿಸಿತ್ತು.
ಈಗ, ಆ ಯೋಜನೆಯನ್ನು ಪುನರುಜ್ಜೀವನಗೊಳಿಸಿದೆ. ಭಾರತದ ಕಂಪನಿಗೆ ಟೆಂಡರ್ ನೀಡಿದೆ. ಯೋಜನೆಗೆ 11 ದಶಲಕ್ಷ ಡಾಲರ್‌ನಷ್ಟು ಹಣವನ್ನು ಭಾರತ ಸರ್ಕಾರದ ಅನುದಾನದಿಂದ ನೀಡಲಾಗಿದೆ ಎಂದು ಶ್ರೀಲಂಕಾದ ಇಂಧನ ಸಚಿವಾಲಯ ಶುಕ್ರವಾರ ತಿಳಿಸಿದೆ.
ಭಾರತದ ಟೆಕ್ ಹಬ್ ಎಂದೇ ಹೆಸರಾಗಿರುವ ಬೆಂಗಳೂರು ಮೂಲದ ‘ಯು-ಸೋಲಾರ್’ ಕಂಪನಿಗೆ ಕಟ್ಟಡದ ಗುತ್ತಿಗೆ ನೀಡಲಾಗಿದೆ ಎಂದು ಅದು ಹೇಳಿದೆ.
“ಭಾರತದ ನೆರವು ದ್ವಿಪಕ್ಷೀಯ ಇಂಧನ ಪಾಲುದಾರಿಕೆಗೆ ಹೊಸ ಮಹತ್ವ ನೀಡುತ್ತದೆ” ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ?: ನ್ಯೂಸ್ ಚಾನೆಲ್‌ಗಳಲ್ಲಿ ಕೋಮು ದ್ವೇಷ ಪ್ರಸಾರ: ಟೈಮ್ಸ್ ನೌ, ನ್ಯೂಸ್18ಗೆ ದಂಡ; ಆಜ್ ತಕ್‌ಗೆ ಎಚ್ಚರಿಕೆ
ಮೂರು ಹೈಬ್ರಿಡ್ ವಿದ್ಯುತ್ ಉತ್ಪಾದನಾ ಘಟಕಗಳ ಮೂಲಕ 2,230 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಶ್ರೀಲಂಕಾ ಹೊಂದಿದೆ. ಈ ಘಟಕಗಳನ್ನು ಶ್ರೀಲಂಕಾದ ಜಾಫ್ನಾ ನಗರದ ಸಮೀಪದ ದ್ವೀಪಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಚೀನಾ ಮತ್ತು ಭಾರತವು ಶ್ರೀಲಂಕಾದಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳ ಒಪ್ಪಂದಗಳಿಗಾಗಿ ಪೈಪೋಟಿ ನಡೆಸುತ್ತಿವೆ. ಆದರೆ, ಶ್ರೀಲಂಕಾ 1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಪ್ರಸ್ತುತದ ದಿನಗಳಲ್ಲಿ ಎದುರಿಸುತ್ತಿದ್ದು, ಬಿಕ್ಕಟ್ಟಿನಿಂದ ಹೊರ ಬರಲು ಯತ್ನಿಸುತ್ತಿದೆ.