ಹೊಸಿಲ ಒಳಗೆ-ಹೊರಗೆ | ಸೀರೆಯೂ ಸ್ತ್ರೀವಾದವೂ ‘ಸೀರೆ ರಾಜಕೀಯ’ವೂ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಸರಳಾ ತಕ್ರಾಲ್, ಭಾರತದ ಮೊದಲ ಪೈಲೆಟ್; 1936ರಲ್ಲಿ ವಿಮಾನ ಹಾರಿಸಲು ಹೊರಟಾಗ ಸೀರೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾಳೆ. ನಾವು ಯಾಕೆ ಗಂಡಸರನ್ನು ಅನುಕರಿಸಬೇಕು. ಅದನ್ನು ಪುರುಷ ಜಗತ್ತಾಗಿ ಯಾಕೆ ನೋಡಬೇಕು. ನಾನೊಬ್ಬ ಹೆಣ್ಣಾಗಿಯೇ, ಸೀರೆ ಉಟ್ಟುಕೊಂಡೇ ಈ ಕೆಲಸ ಮಾಡಬಲ್ಲೆ ಎಂಬುದು ಅವಳ ನಿಲುವಾಗಿತ್ತು. ಆದರೆ…

ಕಾಲೇಜು ಮೆಟ್ಟಲು ಏರುತ್ತಿದ್ದಂತೆಯೇ ಸೀರೆ ಉಡುವುದು ಅಭ್ಯಾಸವಾಗಿತ್ತು. ಹಗಲೂ ರಾತ್ರಿ ಸೀರೆಯೇ ಉಟ್ಟುಕೊಳ್ಳುತ್ತಿದ್ದೆ – ವಿಶೇಷವೇನಲ್ಲ; ನಮ್ಮ ಅಮ್ಮ, ಅಜ್ಜಿ ಅತ್ತೆಯಂದಿರು ಎಲ್ಲರೂ ಉಡುವ ಹಾಗೇ. ಆದರೆ ಕಾಲ ಬದಲಾಗತೊಡಗಿತ್ತು. ನೈಟಿಯೆಂಬ ಒಂದು ಸಡಿಲವಾದ ಮನೆಯುಡುಗೆ, ಚೂಡಿದಾರ್ ಎಂಬ ಉಡುಗೆ ಮಾರುಕಟ್ಟೆಯಲ್ಲಿ ಕಣ್ಣು ಸೆಳೆಯತೊಡಗಿತ್ತು. “ಸೀರೆ ಉಟ್ಟರೆ ಚಂದ ಕಾಣುತ್ತದೆ,” ಅಂತ ಸುತ್ತುಮುತ್ತಲಿನ ಎಲ್ಲರೂ ಎಷ್ಟರಮಟ್ಟಿಗೆ ಹೇಳಿದ್ದರು ಅಂದರೆ, ಈ ಹೊಸ ಉಡುಪುಗಳು ನನ್ನನ್ನು ಸೆಳೆದಿರಲಿಲ್ಲ. ಅಪ್ಪಿತಪ್ಪಿ ಏನೋ ಬೇರೆ ಉಡುಪು ಹಾಕಿಕೊಂಡಾಗ, “ನಿನಗೆ ಸೀರೆ ತುಂಬಾ ಒಪ್ಪುತ್ತದೆ,” ಅಂತ ಹೇಳುವ ಮೂಲಕ ‘ಇದು ಚೆನ್ನಾಗಿಲ್ಲ’ ಅಂತ ಸೂಚನೆ ಸಿಗುತ್ತಿತ್ತು. “ನನಗೆ ಯಾವಾಗಲೂ ಚಂದ ಕಾಣುತ್ತಲೇ ಇರಬೇಕಾಗಿಲ್ಲ, ಇದು ನನಗೆ ಇಷ್ಟ, ಆರಾಮ ಅನಿಸುತ್ತದೆ, ಇದುವೇ ಚಂದ ಅನಿಸುತ್ತದೆ,” ಅಂತ ಗುರುತಿಸಿಕೊಳ್ಳುವುದಕ್ಕೆ ಮತ್ತು ವ್ಯಕ್ತಪಡಿಸುವುದಕ್ಕೆ ವರುಷಗಳೇ ಹಿಡಿದಿದ್ದವು.

ನಾಲಕ್ಕು ಹೆಜ್ಜೆ ಇಡುತ್ತಿದ್ದಂತೆಯೇ ಪುಟ್ಟ ಹುಡುಗಿಗೆ ಲಂಗ ಹಾಕಿಸಿ ಚಂದ ನೋಡುವ ಪರಿಪಾಠ ಇಂದಿಗೂ ಇದೆ. ಮುದ್ದು-ಮುದ್ದು ಕಾಣುತ್ತದೆ ಮಗು. ಆದರೆ, ಆ ಉದ್ದ ಲಂಗ ಹಾಕಿಕೊಂಡು ನಡೆಯಲು ಕಷ್ಟಪಡುತ್ತಿರುತ್ತದೆ. ಅದು ಮುದ್ದಾಗಿಯೇ ಕಾಣುತ್ತದೆ. ಆಮೇಲೆ ಎರಡೂ ಕೈಗಳಲ್ಲಿ ಲಂಗ ಎತ್ತಿಕೊಂಡು ನಡೆಯಲು ಹೊರಡುತ್ತದೆ. ಆಗ ಅದೂ ಮುದ್ದಾಗಿಯೇ ಕಾಣುತ್ತದೆ. ಆದರೆ, ಮತ್ತೆ ನಾಲ್ಕಾರು ವರುಷಗಳು ಕಳೆದರೆ ಲಂಗ ಎತ್ತಿ ನಡೆಯುವುದೂ ಅಸಭ್ಯತೆ ಎನಿಸಿಬಿಡುತ್ತದೆ. ಎಷ್ಟು ಸುಂದರವಾಗಿ ಮುದ್ದಾಗಿ ಚಲನವಲನವನ್ನು ಮಿತಿಗೊಳಿಸುತ್ತದೆ ಈ ಅನುಭವ. ಮೊದಲ ಸಾರಿ ಸೀರೆ ಉಡುವ ಸಂಭ್ರಮವಂತೂ ಹೇಳತೀರದು. ಮೊದಲ ಸೀರೆ ಕೂಡ ಬಹಳ ನೆನಪಿನಲ್ಲಿ ಉಳಿಯುವಂತಹುದು. ಸೀರೆ ಉಟ್ಟುಕೊಂಡು ಸರಾಗವಾಗಿ ಓಡಾಡಲಾರದೆ, ವನಪು-ವೈಯ್ಯಾರಗಳು ಅನಿವಾರ್ಯ ಆಗುವ ಹಾಗೆ ಕೂಡ ತೋರಿಸಲಾಗುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸೀರೆ, ಸೀರೆಯ ಸೆರಗು, ತಲೆ ಮೇಲೆ ಸೆರಗು… ಭಾರತೀಯ ಸಂಸ್ಕೃತಿಯ ಸಂಕೇತವಾಗಿದೆ. ಅದು ಸಭ್ಯತೆಯ ಪ್ರತೀಕ, ಗೌರವದ ಪ್ರತೀಕ, ಸೌಂದರ್ಯದ ಪ್ರತೀಕವೂ ಆಗಿಹೋಗಿದೆ. ಅದಕ್ಕಾಗಿ ಮಹಿಳಾ ಶಿಕ್ಷಕರು ಸೀರೆಯೇ ಉಡಬೇಕೆಂಬ ನಿಯಮ, ಒತ್ತಡ ಇದೆ. ಒಬ್ಬ ಮಹಿಳಾ ಅಧಿಕಾರಿ ಒಂದು ಔಪಚಾರಿಕ ಕಾರ್ಯಕ್ರಮಕ್ಕೆ ಚೂಡಿದಾರ್ ಹಾಕಿಕೊಂಡು ಹೋದರು ಎಂಬ ಅಸಮಾಧಾನದ ಮಾತು ಕೇಳಿಬಂದಿತ್ತು. ಆದರೆ ಪುರುಷ ಶಿಕ್ಷಕರಿಗಾಗಲೀ, ಅಧಿಕಾರಿಗಳಿಗಾಗಲೀ ಪಕ್ಕಾ ಭಾರತೀಯ ಉಡುಪು ಎಂದು ಹೇಳಲಾದ ಪಂಚೆ, ಶಲ್ಯ ಹಾಕಬೇಕೆಂಬ ನಿಯಮವಾಗಲೀ, ಸಾಮಾಜಿಕ ಒತ್ತಡವಾಗಲೀ ಯಾಕೆ ಇಲ್ಲ? ಆರಾಮವಾಗಿ ಪ್ಯಾಂಟ್-ಶರಟುಗಳಲ್ಲಿ ಇರುತ್ತಾರಲ್ಲ ಅವರು? ಇದಕ್ಕೂ ಸಂಸ್ಕೃತಿಗೂ ಯಾವುದೇ ಸಂಬಂಧ ಇಲ್ಲವೇ? ಆಯಾಯ ಸ್ಥಳ ಸಂದರ್ಭಗಳಿಗೆ ತಕ್ಕಂತೆ ಉಡುಗೆ-ತೊಡುಗೆ ಇರಬೇಕಾದುದು ಸರಿಯೇ. ಆದರೆ, ಆ ಉಡುಗೆ-ತೊಡುಗೆ ತಾವು ಮಾಡುವ ಕೆಲಸಕ್ಕೆ ಪೂರಕವಾಗಿ, ಆರಾಮವಾಗಿ ಕೂಡ ಇರಬೇಕಾದುದು ಬಹಳ ಮುಖ್ಯವೇ ತಾನೇ?

ಹೊಲ-ಗದ್ದೆಗಳಲ್ಲಿ, ಕಟ್ಟಡ ಕೆಲಸಗಳಲ್ಲಿ ದುಡಿವ ಮಹಿಳೆಯರು ಸೀರೆ ಉಟ್ಟುಕೊಂಡೇ ಬಹಳಷ್ಟು ನಿಭಾಯಿಸುತ್ತಾರೆ. ಯಾವ ಒಪ್ಪ-ಓರಣಗಳಿಗೆ ತಲೆಕೆಡಿಸಿಕೊಳ್ಳದೆ, ತಮಗೆ ಅನುಕೂಲವಾಗುವಂತೆ ಸೆರಗು ಕಟ್ಟಿಕೊಳ್ಳುತ್ತಾರೆ, ಸೀರೆಯನ್ನು ಎತ್ತಿ ಕಟ್ಟಿಕೊಳ್ಳುತ್ತಾರೆ. ಅಲ್ಲಿ ಕಾಣಿಸುತ್ತದೆ-ಇಲ್ಲಿ ಕಾಣಿಸುತ್ತದೆ ಎಂಬ ಗೊಡವೆಗೂ ಹೋಗುವುದಿಲ್ಲ. ಕೆಲಸ ಮಾಡಲು ಅನುಕೂಲವಾಗಬೇಕು ಅಷ್ಟೇ. ಅನೇಕರು ಅದರ ಮೇಲೆ ಒಂದು ಶರಟು ಹಾಕಿಕೊಳ್ಳುವುದೂ ಇದೆ. ಕಾರ್ಖಾನೆ, ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸೀರೆ ಉಟ್ಟುಕೊಂಡೂ ಆರಾಮವಾಗಿ ಇರಲು ಕಲಿತಿರುತ್ತಾರೆ. ಆ ಉಡುಪು ಬಿಟ್ಟು ಇನ್ನು ಏನೇ ತೊಡಬೇಕೆಂದರೆ ಗಲಿಬಿಲಿಯಾಗುತ್ತದೆ. ಅಷ್ಟು ಒಗ್ಗಿಹೋಗಿರುತ್ತಾರೆ ಆ ಉಡುಪಿಗೆ. ಅವರ ಬಳಿ ಯಾಕೆ ಸೀರೆಯೇ ಉಡುತ್ತೀರಿ ಅಂತ ತಲೆ ತಿನ್ನಬೇಕಾಗಿಲ್ಲ. ಆರಾಮವಾಗಿ ಇರುವುದಾದರೆ ಇರಲಿ. ಆದರೆ, ಸೀರೆ ತಮಗೆ ತೊಡಕಾಗುತ್ತದೆ ಅಂತ ಅನ್ನಿಸುವವರ ಮೇಲೆ ಒತ್ತಡ ಹಾಕುವ ಅಗತ್ಯವೇನಿದೆ? ಗೆಳತಿ ಸುನಂದಾ ಕಡಮೆ ತಮ್ಮ ಪುಟ್ಟ ಕವನವೊಂದರಲ್ಲಿ ಈ ತೊಡಕನ್ನು ಸುಂದರವಾಗಿ ವಿವರಿಸಿದ್ದಾರೆ. ಎಲೆಗೊಂದು ಮುಳ್ಳು ಇರುವ ಜಾಡಿನಲ್ಲಿ ಅಮ್ಮನ ಸೆರಗು ಮುಳ್ಳಿಗೆ ಸಿಕ್ಕಿಹಾಕಿಕೊಂಡು ಅಲ್ಲೇ ಉಳಿವಂತಾದರೆ, ಜೀನ್ಸ್ ತೊಟ್ಟ ಮಗಳು ಅದನ್ನು ದಾಟಿ ಮುಂದೆ-ಮುಂದೆ ಸಾಗುತ್ತಾಳೆ. ಇದರ ಜೊತೆಗೆ, ಸೀರೆ ಉಟ್ಟು ಕೆಲಸ ಮಾಡುವಾಗ, ಅಡ್ಡಾಡುವಾಗ – ಚಕ್ರಕ್ಕೆ ಸಿಕ್ಕಿಹಾಕಿಕೊಂಡಿರುವುದು, ಮುಗ್ಗರಿಸಿ ಬಿದ್ದಿರುವುದು, ಬೆಂಕಿ ಹತ್ತಿಕೊಂಡಿರುವುದು… ಮುಂತಾದ ಅಪಘಾತಗಳಾದ ಎಷ್ಟೋ ಘಟನೆಗಳು ನೆನಪಾಗುತ್ತವೆ.

ಸೀರೆ, ಸೆರಗು ಒಂದು ರೀತಿಯಲ್ಲಿ ಮಮತೆಯ ಪ್ರತೀಕವೂ ಹೌದು. ಅಮ್ಮನ ಸೆರಗು (ಅಥವಾ ಬಟ್ಟೆ ತುದಿ) ಮಕ್ಕಳಿಗೆ ಬಹಳ ಸುರಕ್ಷತೆಯ, ಬೆಚ್ಚಗಿನ ಭಾವ ಕೊಡುವುದು ಅಂತ ಹೇಳುತ್ತಾರೆ. ಇನ್ನೊಂದು ರೀತಿಯಲ್ಲಿ ಸೀರೆ, ಸೆರಗು… ಎಲ್ಲವೂ ಬಹಳ ಸೆಕ್ಸಿ ಅಂತ ಕೂಡ ಹೇಳುತ್ತಾರೆ. ‘ಸೆರಗು ಜಾರುವುದು (ಸೆರಗು ಬೀಳಿಸುವುದು)’ ಎಂದರೆ, ಅದು ಒಬ್ಬ ಅಸಭ್ಯ ಹೆಣ್ಣಿನ ಲಕ್ಷಣ ಅನ್ನುವ ಭಾವನೆಯೂ ಗಟ್ಟಿಯಾಗಿದೆ. ಹಾಗಾದರೆ ಏನು? ಸೀರೆ ಎಂಬ ಉಡುಪು ನಮ್ಮನ್ನು ಕಟ್ಟಿಹಾಕುತ್ತದೆ, ಅದನ್ನು ಧಿಕ್ಕರಿಸಿಬಿಡುವುದೇ ಬಿಡುಗಡೆ ಅಂತ ನಾವು ತಿಳಿದುಕೊಳ್ಳಬೇಕೇ? ಖಂಡಿತ ಇಲ್ಲ. ಸೀರೆ ಜೊತೆಗೆ ಅಂಟಿಕೊಂಡಿರುವ ಹಿರಿಮೆಯ ಬಗ್ಗೆ ಯೋಚಿಸಬೇಕು. ಸೀರೆ ಅಂದ ತಕ್ಷಣ ಅದನ್ನುಟ್ಟುಕೊಂಡು ಚಂದದ ದಂತದ ಗೊಂಬೆಗಳ ತರಹ ಇರಬೇಕಾಗಿಯೂ ಇಲ್ಲ. ಅನೇಕ ಉಡುಪುಗಳಲ್ಲಿ ಸೀರೆಯೂ ಒಂದು. ನಮಗೆ ಸೀರೆ ತುಂಬಾ ಇಷ್ಟವಾಗಬಹುದು. ಸೀರೆಯ ನವಿರುತನದೊಂದಿಗೇ ನಮ್ಮದೇ ಗಟ್ಟಿತನವನ್ನು ಕೂಡ ಅನುಭವಿಸಬಹುದು. ಹಾಗೇನೇ ಜೇಬು ಇರುವ ಉಡುಪು ಹಾಕಿಕೊಂಡು ಕೈಬೀಸಿ ನಡೆವ ಸುಖವೂ ಇಷ್ಟವಾಗಬಹುದು.

ಸರಳಾ ತಕ್ರಾಲ್, ಭಾರತದ ಮೊದಲ ಪೈಲೆಟ್; 1936ರಲ್ಲಿ ವಿಮಾನ ಹಾರಿಸಲು ಹೊರಟಾಗ ಸೀರೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾಳೆ. ನಾವು ಯಾಕೆ ಗಂಡಸರನ್ನು ಅನುಕರಿಸಬೇಕು. ಅದನ್ನು ಪುರುಷ ಜಗತ್ತಾಗಿ ಯಾಕೆ ನೋಡಬೇಕು. ನಾನೊಬ್ಬ ಹೆಣ್ಣಾಗಿಯೇ, ಸೀರೆ ಉಟ್ಟುಕೊಂಡೇ ಈ ಕೆಲಸ ಮಾಡಬಲ್ಲೆ ಎಂಬುದು ಅವಳ ನಿಲುವಾಗಿತ್ತು. ಅದು ಹೆಣ್ಣಾಗಿ ತನ್ನ ಅಸ್ಮಿತೆಯ ಒಂದು ಭಾಗ ಅಂತ ಅವಳು ಪ್ರತಿಪಾದಿಸಿದ್ದಳು. ಕೋಟು, ಪ್ಯಾಂಟ್-ಶರಟುಗಳು ರಾರಾಜಿಸುವ ಜಾಗಕ್ಕೆ ಸೀರೆಯಲ್ಲಿ ಹೋಗಿ ಆ ಜಾಗದ ಸಂಪ್ರದಾಯವನ್ನು ಮುರಿದಿದ್ದಳು. ‘ಸೀರೆ’ ಎಂಬ ಒಂದು ವಿಚಾರಕ್ಕೆ ಎಷ್ಟು ವಿಭಿನ್ನ ಬಗೆಯ ಪ್ರತಿಕ್ರಿಯೆಗಳು ಇವೆ ಎಂಬುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ.

ಇದರ ಜೊತೆಗೇ ಗಮನಿಸಬೇಕಾದ ಇನ್ನೊಂದು ಅಂಶ ಇದೆ. ನಮ್ಮ ಮಹಿಳಾ ರಾಜಕೀಯ ಪ್ರತಿನಿಧಿಗಳು, ನಾಯಕರೂ ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಇದು ಅವರ ಆಯ್ಕೆಯೂ ಇರಬಹುದು ಅಥವಾ ಅಂತರಂಗದೊಳಗಿನಿಂದ ಬರುವ ಸಾಮಾಜಿಕ ಒತ್ತಡದ ಪ್ರಭಾವವೂ ಇರಬಹುದು. ಅವರೇನಾದರೂ ಪ್ಯಾಂಟು-ಶರಟನ್ನು ತಮ್ಮ ಉಡುಪಾಗಿಸಿಕೊಂಡರೆ (ಅಪರೂಪಕ್ಕೆ ಕೆಲವರು ಕಾಣಸಿಗುತ್ತಾರೆ) ಹೇಗಿರಬಹುದು? ಎಂತಹ ಪ್ರತಿಕ್ರಿಯೆ ಬರಬಹುದು.

‘ಕ್ವೀರ್ ಫೆಸ್ಟಿವಲ್‍’ಗೆ ಮೊದಲ ಬಾರಿ ಹೋದಾಗ ಹೊಸ ಲೋಕಕ್ಕೆ ಹೋದ ಹಾಗೆ ಅನ್ನಿಸಿತ್ತು. ಮುಖದಲ್ಲಿ ಗಡ್ಡ-ಮೀಸೆ, ಉಟ್ಟಿರೋದು ಚಂದದ ಸೀರೆ. ಅದನ್ನು ಒಪ್ಪಿಕೊಳ್ಳಲು ಒಂದಿಷ್ಟು ಹೊತ್ತು ಹಿಡಿಯಿತು. ಹೀಗೂ ಇರಬಹುದಲ್ಲ ಅಂತ ಅನ್ನಿಸಿತು. ಹೆಣ್ತನದ ಗುರುತಾಗಿ ಒಂದಷ್ಟು ಮಂದಿ ಈ ಉಡುಗೆ-ತೊಡುಗೆಗಳನ್ನು ಸಂಭ್ರಮಿಸಬಹುದಲ್ಲ ಅನ್ನಿಸಿತು. ಹೆಣ್ಣುಮಕ್ಕಳು, ತಮ್ಮ ಸ್ವಾತಂತ್ರ್ಯ ಅನುಭವಿಸುವ ದಾರಿಯಲ್ಲಿ ಜೀನ್ಸ್, ಶರಟು ಮುಂತಾದ ಗಂಡು ಉಡುಗೆಗಳನ್ನು ಹಾಕಿಕೊಳ್ಳುವುದು ಮುಂಚೇನೇ ಬಂದಿತ್ತು. ಇತ್ತೀಚೆಗೆ ಈ ಹೊಸ ಪೀಳಿಗೆಯ ಹುಡುಗರು ಆರಾಮವಾಗಿ ಲಂಗ ಹಾಕಿಕೊಳ್ಳುವುದು, ನೈಟಿ ಹಾಕಿಕೊಳ್ಳುವುದು ನೋಡುವಾಗ ಅವರು ಇವನ್ನೆಲ್ಲ ಉಡುಪಿನ ವೈವಿಧ್ಯವಾಗಿ ನೋಡುತ್ತಾರೆಯೇ ಹೊರತು, ಹೆಂಗಸರ-ಗಂಡಸರ ಉಡುಗೆಯಾಗಿ ನೋಡುವುದಿಲ್ಲವೇನೋ ಅನ್ನಿಸಿತು.

ಏನೇ ಇರಲಿ, ನಮ್ಮ ಬಳಗದ ಅನೇಕ ಸ್ತ್ರೀವಾದಿ ಗೆಳತಿಯರಿಗೂ ಸೀರೆ ತುಂಬಾ ಇಷ್ಟ. ಸೀರೆಯಲ್ಲಿ ಮೆರೆಯುತ್ತೇವೆ. ಮತ್ತೆ ಅನೇಕ ಗೆಳತಿಯರಿಗೆ ಇಷ್ಟವೇ ಇಲ್ಲ. ಎಲ್ಲರೂ ಜೊತೆಯಲ್ಲಿ ಇರುತ್ತೇವೆ. ನಮನಮಗೆ ಇಷ್ಟವಾಗುವ, ಆಯಾಯ ಹೊತ್ತಿಗೆ ಅನುಕೂಲ ಅನಿಸುವ ಉಡುಪು ಬಳಸುತ್ತೇವೆ. ಸೀರೆ ಇರಲಿ, ಆದರೆ ‘ಸೀರೆ ರಾಜಕಾರಣ’ ಬೇಕಾಗಿಲ್ಲ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

1 COMMENT

  1. ಲೇಖನ ಚೆನ್ನಾಗಿದೆ
    ಸೀರೆಯನ್ನು ಸಾಂಪ್ರದಾಯಿಕ ಉಡುಗೆ ಎಂದು ಬಿಂಬಿಸಿರುವುದರಿಂದ ಅದರ ಬಗ್ಗೆ ಬೇರೆ ಬೇರೆ ಭಾವನೆಗಳಿವೆ.. ಎಷ್ಟೋ ಓದಿಕೊಂಡಿರುವ ಸದಾ ಜೀನ್ಸ್ ತೊಡುವ ಹುಡುಗಿಯರೂ ಕೂಡಾ ಅವರ ಮದುವೆ ದಿನ ಸೀರೆ ಉಡುವುದನ್ನು ಕಾಣುತ್ತೇವೆ. ಊಟ ತನ್ನಿಚ್ಚೆ ಎಂದು ಹೇಳುವ ಹಾಗೆ ಉಡುಗೆ ತೋಡುವುದು ಅವರಿಚ್ಚೆ ಅಂದುಕೊಂಡರೆ ಎಷ್ಟು ಚೆಂದ ಅಲ್ಲವೇ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮನಸ್ಸಿನ ಕತೆಗಳು – 20 | ಡಿವೋರ್ಸ್‌ವರೆಗೂ ಮುಂದುವರಿದಿದ್ದ ಗರ್ಭಿಣಿ ಹರಿಣಿಯ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...