ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು AI ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ, ಸಾರ್ವಜನಿಕರೊಬ್ಬರು ಭಾರತದಲ್ಲಿನ ಭಿನ್ನಾಭಿಪ್ರಾಯಗಳ ಹತ್ತಿಕ್ಕುವಿಕೆ ಕುರಿತು ಪ್ರಶ್ನೆ ಕೇಳಿದಾಗ ಕಾರ್ಯಕ್ರಮದಲ್ಲಿ ಕೆಲಕಾಲ ವ್ಯತ್ಯಯ ಉಂಟಾದ ಘಟನೆ ನಡೆದಿದೆ. ಆದರೆ, ಪ್ರಶ್ನೆ ಪೂರ್ಣಗೊಳ್ಳುವ ಮುನ್ನವೇ ಮಧ್ಯಪ್ರವೇಶಿಸಿದ ಆ್ಯಂಕರ್, ಇದು AI ಗೆ ಸಂಬಂಧಿಸಿಲ್ಲದಿರುವುದರಿಂದ ಉತ್ತರಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ.
ಗುರುವಾರ ನಡೆದ ಈ ಸಂವಾದದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಮಹಿಳೆಯೊಬ್ಬರು, “AI ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸುವ ಭಾರತದ ದಾಖಲೆಯ ಬಗ್ಗೆ ಗೌರವಾನ್ವಿತ ನ್ಯಾಯಮೂರ್ತಿಗಳು ಕೆಲವು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ, ಭಾರತದ ಒಳಗಿನ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಾನೂನು ತಜ್ಞರು ಭಾರತದಲ್ಲಿ ಭಿನ್ನಾಭಿಪ್ರಾಯಗಳ ವಿರುದ್ಧ ಹಗೆತನ ಬೆಳೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿರುವುದನ್ನು ನಾವು ಕೇಳುತ್ತಿದ್ದೇವೆ. ಮತ್ತು ಈ ಹಗೆತನವು ಗೌರವಾನ್ವಿತ ನ್ಯಾಯಮೂರ್ತಿಗಳ ಇತ್ತೀಚಿನ ಪ್ರಸಿದ್ಧ…” ಎಂದು ಹೇಳುತ್ತಿದ್ದಂತೆ ನಿರೂಪಕರು ತಡೆದಿದ್ದಾರೆ.
ಮಹಿಳೆಯ ಪ್ರಶ್ನೆ ಪೂರ್ಣಗೊಳ್ಳುವ ಮುನ್ನವೇ ಮಧ್ಯಪ್ರವೇಶಿಸಿದ ನಿರೂಪಕರು, “ಕ್ಷಮಿಸಿ ಮೇಡಂ, ಅತ್ಯಂತ ಗೌರವಪೂರ್ವಕವಾಗಿಯೇ ಹೇಳುತ್ತಿದ್ದೇನೆ, ಇಂದಿನ ವಿಷಯವು ಕೃತಕ ಬುದ್ಧಿಮತ್ತೆ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಈ ಪ್ರಶ್ನೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದರು. ಆದರೂ ಆ ಮಹಿಳೆ ಪ್ರಶ್ನೆ ಕೇಳಲು ಮುಂದಾದಾಗ, “ನಾವು ನಿಮ್ಮ ಮೈಕ್ ಕಟ್ ಮಾಡಬೇಕಾಗುತ್ತದೆ, ಕ್ಷಮೆಯಿರಲಿ” ಎಂದು ಪ್ರತಿಕ್ರಿಯಿಸಿದ್ದಾರೆ. ಕಾರ್ಯಕ್ರಮದ ಮತ್ತೊಂದು ವಿಡಿಯೋ ತುಣುಕಿನಲ್ಲಿ, ಸಭೆಯಲ್ಲಿದ್ದ ಮತ್ತೊಬ್ಬರು “ದಯವಿಟ್ಟು ನಮಗೆ ಸ್ವಲ್ಪ ಗೌರವ ನೀಡಿ” ಎಂದು ಕೂಗುತ್ತಿರುವುದು ಕೇಳಿಸಿದೆ.
ಇದನ್ನೂ ಓದಿ: 4ನೇ ತರಗತಿ ಪಾಸ್ ಆದವರನ್ನು ಪ್ರಧಾನಿ ಮಾಡಿ ದೊಡ್ಡ ತಪ್ಪು ಮಾಡಿದ್ವಿ: ಸಿಜೆಪಿ ಪ್ರತಿಭಟನೆಯಲ್ಲಿ ಪೋಷಕರು
ಈ ಘಟನೆಯ ಕುರಿತು ಶುಕ್ರವಾರ ಪ್ರಕಟಣೆ ಹೊರಡಿಸಿರುವ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್, “ಸಭಿಕರ ಇಂತಹ ಅಸಭ್ಯ ವರ್ತನೆ ಒಪ್ಪಲು ಸಾಧ್ಯವಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದೆ.
“ಕಳೆದ ಜೂನ್ 4ರಂದು ಭಾರತದ ಮುಖ್ಯ ನ್ಯಾಯಮೂರ್ತಿಗಳು ಸಂಘಟಕರ ಆಹ್ವಾನದ ಮೇರೆಗೆ ಲಂಡನ್ ವಿಶ್ವವಿದ್ಯಾಲಯದ ಬಿರ್ಕ್‌ಬೆಕ್‌ಗೆ ಭೇಟಿ ನೀಡಿ, ‘ಕೃತಕ ಬುದ್ಧಿಮತ್ತೆ ಮತ್ತು ಅಂತಾರಾಷ್ಟ್ರೀಯ ಕಾನೂನು’ ಕುರಿತು ಉಪನ್ಯಾಸ ನೀಡಿದ್ದರು. ಅವರ ಭಾಷಣದ ನಂತರ ಅತ್ಯಂತ ಉತ್ಸಾಹಭರಿತ ಚರ್ಚೆ ನಡೆಯಿತು. ಆದರೆ, ಅದರ ಬೆನ್ನಲ್ಲೇ ವ್ಯಕ್ತಿಯೊಬ್ಬರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಸಾರ್ವಜನಿಕ ಚರ್ಚೆಗಳಲ್ಲಿ ಇರಬೇಕಾದ ಪರಸ್ಪರ ಗೌರವದ ನಿಯಮಗಳಿಗೆ ಇಂತಹ ಅಸಭ್ಯ ವರ್ತನೆ ವಿರುದ್ಧವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಅವುಗಳನ್ನು ನಾಗರಿಕ ಮತ್ತು ಗೌರವಾನ್ವಿತ ರೀತಿಯಲ್ಲಿ ವ್ಯಕ್ತಪಡಿಸಬೇಕು” ಎಂದು ಭಾರತೀಯ ಹೈಕಮಿಷನ್ ತಿಳಿಸಿದೆ.





