ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವ್ಯಾಟಿಕನ್ನ ಪೋಪ್ ನಡುವಿನ ಸಂಘರ್ಷವು ಮುಂದುವರೆದಿದೆ. ಯುದ್ಧ ಮತ್ತು ಶಾಂತಿ ವಿಚಾರವಾಗಿ ಟ್ರಂಪ್ ಮತ್ತು ಪೋಪ್ 14ನೇ ಲಿಯೋ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಈ ವಾಗ್ವಾದದ ನಡುವೆ ಅತಿರೇಕಕ್ಕೆ ತಲುಪಿರುವ ಟ್ರಂಪ್ ತಮ್ಮನ್ನು ತಾವು ಯೇಸು ಕ್ರಿಸ್ತ ಮತ್ತು ಪೋಪ್ ಎಂದು ಬಿಂಬಿಸಿಕೊಂಡಿದ್ದಾರೆ. ಈ ಸಂಬಂಧ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ AI ಚಿತ್ರ ಹಂಚಿಕೊಂಡಿದ್ದು ಬಳಿಕ ಡಿಲೀಟ್ ಮಾಡಿದ್ದಾರೆ.
ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಯುದ್ಧವನ್ನು ಪೋಪ್ ಲಿಯೋ ಟೀಕಿಸಿದ್ದಾರೆ. ಆದರೆ ಟೀಕೆಯನ್ನು ತೆಗೆದುಕೊಳ್ಳಲಾಗದ ಟ್ರಂಪ್, ಪೋಪ್ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. “ನಾನು ಲಿಯೋ ಅವರ ದೊಡ್ಡ ಅಭಿಮಾನಿಯೇನಲ್ಲ. ಅವರು ಅಪರಾಧದ ವಿಷಯದಲ್ಲಿ ದುರ್ಬಲರು” ಎಂದೆಲ್ಲ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ‘ನಾನು ಜೈವಿಕವಾಗಿ ಜನಿಸಿಲ್ಲ, ಪರಮಾತ್ಮನೇ ನನ್ನನ್ನು ಕಳುಹಿಸಿದ್ದು’ ಎಂದ ಪ್ರಧಾನಿ ಮೋದಿ!
ಅಷ್ಟು ಮಾತ್ರವಲ್ಲದೆ ‘ಟ್ರುತ್ ಸೋಶಿಯಲ್’ (Truth Social) ಖಾತೆಯಲ್ಲಿ AI ಬಳಸಿ ತಯಾರಿಸಿದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಇದು ಜಾಗತಿಕವಾಗಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆ ಚಿತ್ರದಲ್ಲಿ ಟ್ರಂಪ್ ಅವರು ಪೋಪ್ ಧರಿಸುವಂತಹ ಬಿಳಿ ಬಣ್ಣದ ಉಡುಪು ಮತ್ತು ಟೋಪಿಯನ್ನು (Mitre) ಧರಿಸಿದ್ದರು. ಅಂದರೆ ತಾವೇ ಪೋಪ್ ಎಂಬಂತೆ ಅಥವಾ ಪೋಪ್ಗಿಂತ ಹೆಚ್ಚಿನ ಅಧಿಕಾರ ಹೊಂದಿರುವಂತೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.
ಇದಕ್ಕೂ ಮುನ್ನ ಟ್ರಂಪ್ ತಾವೇ ಯೇಸು ಕ್ರಿಸ್ತ ಎಂಬಂತೆ ಬಿಂಬಿಸುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಏಪ್ರಿಲ್ 12ರಂದು ಈಸ್ಟರ್ ದಿನ ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ AI ಮೂಲಕ ಸೃಷ್ಟಿಸಿದ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ಟ್ರಂಪ್ ಬಿಳಿ ಮತ್ತು ಕೆಂಪು ಬಣ್ಣದ ಧಾರ್ಮಿಕ ಉಡುಪು ಧರಿಸಿದ್ದರು. ಅವರು ಒಬ್ಬ ರೋಗಿಯ ತಲೆಯ ಮೇಲೆ ಕೈಯಿಟ್ಟು ಗುಣಪಡಿಸುತ್ತಿರುವಂತೆ ಬಿಂಬಿಸಲಾಗಿತ್ತು. ಒಟ್ಟಾರೆಯಾಗಿ ಯೇಸು ಕ್ರಿಸ್ತ ಎಂಬಂತೆ ಬಿಂಬಿಸಲಾಗಿತ್ತು. ಹಿನ್ನೆಲೆಯಲ್ಲಿ ಅಮೆರಿಕದ ಧ್ವಜ, ಯುದ್ಧ ವಿಮಾನಗಳು ಮತ್ತು ದೇವದೂತರಂತಹ ಆಕೃತಿಗಳಿದ್ದವು.
ಈ ಚಿತ್ರವು ಧರ್ಮನಿಂದನೆ ಎಂಬ ಟೀಕೆಗೆ ಗುರಿಯಾದಾಗ, ಟ್ರಂಪ್ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಅದು ನಾನು ವೈದ್ಯನಂತೆ ಕಾಣುವ ಚಿತ್ರ, ರೆಡ್ ಕ್ರಾಸ್ಗೆ ಸಂಬಂಧಿಸಿದ್ದು ಎಂದು ಭಾವಿಸಿ ಪೋಸ್ಟ್ ಮಾಡಿದ್ದೆ. ನಾನು ಜನರನ್ನು ಗುಣಪಡಿಸುತ್ತೇನೆ. ಅದು ನನ್ನ ಕೆಲಸ” ಎಂಬ ವಿಲಕ್ಷಣ ಸಮರ್ಥನೆ ನೀಡಿದ್ದಾರೆ. ಇನ್ನು ಪೋಪ್ನಂತೆ ಬಿಂಬಿಸುವ ಚಿತ್ರದ ಪೋಸ್ಟ್ಗೂ ವಿರೋಧ ವ್ಯಕ್ತವಾಗುತ್ತಿದ್ದಂತೆ ಟ್ರಂಪ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದರೂ, “ನಾನಿಲ್ಲದಿದ್ದರೆ ಲಿಯೋ ವ್ಯಾಟಿಕನ್ನಲ್ಲಿ ಇರುತ್ತಿರಲಿಲ್ಲ” ಎಂಬ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಅಜೈವಿಕ ಪ್ರಧಾನಿ ಪೇಪರ್ ಲೀಕ್ ಬಗ್ಗೆ ಚರ್ಚೆ ನಡೆಸೋದು ಯಾವಾಗ: ಕಾಂಗ್ರೆಸ್ ವಾಗ್ದಾಳಿ
ಈ ಎಲ್ಲ ಬೆಳವಣಿಗೆ ನಡುವೆ ಪೋಪ್ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಗಂಭೀರ ಎಚ್ಚರಿಕೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. “ಪ್ರಜಾಪ್ರಭುತ್ವಗಳು ಕೇವಲ ಬಹುಮತದ ಆಧಾರದ ಮೇಲೆ ನಡೆಯುವ ‘ಬಹುಸಂಖ್ಯಾತ ದಬ್ಬಾಳಿಕೆ’ಗಳಾಗಿ ಕುಸಿಯುವ ಅಪಾಯವಿದೆ” ಎಂದು ಪೋಪ್ ಎಚ್ಚರಿಸಿದ್ದಾರೆ. ಹಾಗೆಯೇ “ನೈತಿಕ ತಳಹದಿ ಇಲ್ಲದ ಪ್ರಜಾಪ್ರಭುತ್ವವು ಕೇವಲ ಆರ್ಥಿಕ ಅಥವಾ ತಾಂತ್ರಿಕ ಪ್ರಭಾವಿಗಳ ಮುಖವಾಡವಾಗಿ ಬದಲಾಗಬಹುದು. ಈ ಜಾಗತಿಕ ಅಸ್ಥಿರತೆಗೆ ತಾನೇ ಸರ್ವಶಕ್ತನೆಂಬ ಭ್ರಮೆ ಕಾರಣ” ಎಂದು ಪೋಪ್ ಅಭಿಪ್ರಾಯಿಸಿದ್ದಾರೆ.
ಪೋಪ್ ಲಿಯೋ ಮಾತ್ರವಲ್ಲ ಪೋಪ್ ಫ್ರಾನ್ಸಿನ್ ಕೂಡಾ ಡೊನಾಲ್ಡ್ ಟ್ರಂಪ್ ಯುದ್ಧಕೋರತನವನ್ನು, ನೀತಿ, ನಿಲುವುಗಳನ್ನು ಹಲವು ಬಾರಿ ನೇರವಾಗಿ ಮತ್ತು ಪರೋಕ್ಷವಾಗಿ ಟೀಕಿಸಿದ್ದರು. ಟ್ರಂಪ್ ಅವರು ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ದೊಡ್ಡ ಗೋಡೆ ನಿರ್ಮಿಸುವ ಭರವಸೆ ನೀಡಿದಾಗ, ಪೋಪ್ ಫ್ರಾನ್ಸಿಸ್ ಅವರು ಮೆಕ್ಸಿಕೋ ಪ್ರವಾಸ ಮುಗಿಸಿ ಹಿಂದಿರುಗುವಾಗ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ “ಎಲ್ಲೇ ಆಗಲಿ, ಸೇತುವೆಗಳನ್ನು ನಿರ್ಮಿಸುವ ಬದಲು ಕೇವಲ ಗೋಡೆಗಳನ್ನು ನಿರ್ಮಿಸುವ ಬಗ್ಗೆ ಯೋಚಿಸುವ ವ್ಯಕ್ತಿ ಕ್ರಿಶ್ಚಿಯನ್ ಆಗಿರಲು ಸಾಧ್ಯವಿಲ್ಲ” ಎಂದು ಹೇಳಿದ್ದರು.
ಇನ್ನು ‘ಪ್ಯಾರಿಸ್ ಹವಾಮಾನ ಒಪ್ಪಂದ’ ವಿಚಾರದಲ್ಲಿ ಪೋಪ್, ಟ್ರಂಪ್ ಅವರನ್ನು ಪರೋಕ್ಷವಾಗಿ ಟೀಕಿಸಿದ್ದರು. ವಿಜ್ಞಾನಿಗಳು ಪರಿಸರ ನಾಶದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಅದನ್ನು ನಿರ್ಲಕ್ಷಿಸುವುದು ಮೂರ್ಖತನ ಎಂದಿದ್ದರು.




