ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ‘ಪಕ್ಷದ್ರೋಹ’ ಎಂಬ ಹಣೆಪಟ್ಟಿ ಕಟ್ಟಿ ಮುಸ್ಲಿಂ ನಾಯಕರ ಮೇಲೆ ತೆಗೆದುಕೊಂಡ ಕ್ರಮಗಳು ʼಶಿಸ್ತು ಕ್ರಮವೋ ರಾಜಕೀಯ ತಂತ್ರವೋʼ ಎನ್ನುವ ಪ್ರಶ್ನೆಯನ್ನು ಎಬ್ಬಿಸಿದೆ. ಚುನಾವಣೆ ಫಲಿತಾಂಶ ಬರುವುದಕ್ಕೂ ಮುನ್ನಾ, ಈ ರೀತಿಯಾಗಿ ಶಿಸ್ತು ಕ್ರಮದ ಹೆಸರಿನಲ್ಲಿ ಅಧಿಕಾರದ ಪರಮಾವಧಿಯನ್ನು ತೋರಿಸುವುದು ಎಷ್ಟರ ಮಟ್ಟಿಗೆ ಸರಿ?
ಕರ್ನಾಟಕ ಕಾಂಗ್ರೆಸ್‌ನಲ್ಲಿನ ಇತ್ತೀಚಿನ ಬೆಳವಣಿಗೆ ಗಮನಿಸಿದರೆ, “ಮುಸ್ಲಿಮರಷ್ಟೇ ಪಕ್ಷದ್ರೋಹ ಬಗೆದಿದ್ದಾ? ಮುಸ್ಲಿಮ್ ನಾಯಕರ ವಜಾ, ರಾಜೀನಾಮೆ, ಅಮಾನತುಗಳ ಹಿಂದೆ ರಾಜಕೀಯ ದುರುದ್ದೇಶವಿದೆಯೇ” ಎನ್ನುವ ಪ್ರಶ್ನೆ ಮೂಡುತ್ತದೆ.
ದಾವಣಗೆರೆ ಉಪಚುನಾವಣೆಯ ಸಂದರ್ಭದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕೆ ಬಂದಿಲ್ಲ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ನೆಪ ನೀಡಿ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹುದ್ದೆಯಿಂದ ನಸೀರ್ ಅಹ್ಮದ್ ಅವರ ವಜಾಗೊಳಿಸಿದ್ದು, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನದಿಂದ ಜಬ್ಬಾರ್ ಅಹ್ಮದ್ ಅವರ ರಾಜೀನಾಮೆ, ಅಲ್ಪ ಸಂಖ್ಯಾತ ಘಟಕ ವಿಸರ್ಜನೆ, ಕಾಂಗ್ರೆಸ್ ಪಕ್ಷದ ಸದಸ್ಯತ್ವದಿಂದಲೇ ಜಬ್ಬಾರ್ ಅವರ ಅಮಾನತುಗೊಳಿಸಿರುವುದೆಲ್ಲಾ ಕರ್ನಾಟಕ ರಾಜಕಾರಣದಲ್ಲಿ ಈಗ ತೀವ್ರ ಚರ್ಚೆಗೆ ಗ್ರಾಸವಾಗಿವೆ. “ಕೇವಲ ಮುಸ್ಲಿಂ ನಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆಯೇ?” ಎನ್ನುವ ಪ್ರಶ್ನೆ ಈಗ ಕರ್ನಾಟಕ ಕಾಂಗ್ರೆಸ್ ರಾಜಕೀಯದ ಕೇಂದ್ರಬಿಂದುವಾಗಿದೆ.
‘ಪಕ್ಷದ್ರೋಹ’ದ ಹಣೆಪಟ್ಟಿ ಮತ್ತು ಮುಸ್ಲಿಂ ನಾಯಕರ ರಾಜಕೀಯ ಭವಿಷ್ಯ
ದಾವಣಗೆರೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಕಾಂಗ್ರೆಸ್ ನಿಲುವು-ಒಲವು ಏನೆಂಬುವುದನ್ನು ತೋರಿಸಿದೆ. ಉಪಚುನಾವಣೆಯ ಸುತ್ತ ಕಾಂಗ್ರೆಸ್‌ನಲ್ಲಿ ನಡೆದ ರಾಜಕೀಯ ವಿದ್ಯಮಾನಗಳು ಕಾಂಗ್ರೆಸ್‌ನಿಂದ ಅಲ್ಪ ಸಂಖ್ಯಾತ ಮತದಾರರು ವಿಮುಖವಾಗುವ ಲಕ್ಷಣವನ್ನು ತೋರಿಸುತ್ತಿದೆ.
ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ‘ಪಕ್ಷದ್ರೋಹ’ ಎಂಬ ಹಣೆಪಟ್ಟಿ ಕಟ್ಟಿ ಮುಸ್ಲಿಂ ನಾಯಕರ ಮೇಲೆ ತೆಗೆದುಕೊಂಡ ಕ್ರಮಗಳು ʼಶಿಸ್ತು ಕ್ರಮವೋ ರಾಜಕೀಯ ತಂತ್ರವೋʼ ಎನ್ನುವ ಪ್ರಶ್ನೆಯನ್ನು ಎಬ್ಬಿಸಿದೆ. ಚುನಾವಣೆ ಫಲಿತಾಂಶ ಬರುವುದಕ್ಕೂ ಮುನ್ನಾ, ಈ ರೀತಿಯಾಗಿ ಶಿಸ್ತು ಕ್ರಮದ ಹೆಸರಿನಲ್ಲಿ ಅಧಿಕಾರದ ಪರಮಾವಧಿಯನ್ನು ತೋರಿಸುವುದು ಎಷ್ಟರ ಮಟ್ಟಿಗೆ ಸರಿ?
ಪಕ್ಷದ ಸೋಲಿಗೆ ಅಥವಾ ಹಿನ್ನಡೆಗೆ ಕೇವಲ ಮುಸ್ಲಿಂ ನಾಯಕರೇ ಕಾರಣವೇ? ಪಕ್ಷದ ಪ್ರಚಾರದ ಕಾರ್ಯತಂತ್ರ ಹಾಗೂ ಮತದಾರರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಕೂಡ ಕಾರಣ ಅಲ್ಲವೇ? ಇಲ್ಲಿ, ಹಿರಿಯ ನಾಯಕರ(ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್)ನಡುವಿನ ಶೀತಲ ಸಮರಕ್ಕೆ ಅಲ್ಪಸಂಖ್ಯಾತ ನಾಯಕರನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಭಾವನೆ ಅಲ್ಪಸಂಖ್ಯಾತ ಮತದಾರರಲ್ಲಿ ಮೂಡಿದೆ. “ನಮ್ಮ ಗೌರವಕ್ಕೆ ಧಕ್ಕೆಯಾದಾಗ ನಾವು ಅಧಿಕಾರಕ್ಕೆ ಅಂಟಿಕೊಳ್ಳುವುದಿಲ್ಲ” ಎಂಬ ಸಂದೇಶವೂ ಅದರಲ್ಲಿ ಅಡಗಿದೆ ಎನ್ನುವುದನ್ನು ಕಾಂಗ್ರೆಸ್ ನಾಯಕತ್ವ ಅರ್ಥ ಮಾಡಿಕೊಳ್ಳಬೇಕಿದೆ.
“ದಶಕಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರನ್ನು ಏಕಾಏಕಿ ಹೊರಹಾಕುವುದು ʼಕೃತಘ್ನತೆʼಯ ಪರಮಾವಧಿ. ಇದು, ಮುಸ್ಲಿಂ ಮತಗಳು ಬೇಕು, ಆದರೆ ಮುಸ್ಲಿಂ ನಾಯಕತ್ವ ಬೇಡ ಎನ್ನುವ ಧೋರಣೆಯನ್ನು ಕಾಂಗ್ರೆಸ್ ತೋರೆದ್ದೇ? ಎನ್ನುವ ಪ್ರಶ್ನೆಯನ್ನು ಮೂಡಿಸದೇ ಇರುವುದಿಲ್ಲ.
ಇದನ್ನೂ ಓದಿ : ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾದರಿ ಯುವ ಸೇನಾನಿ- ಎಂ.ಬಿ.ಪ್ರೀತಿ
ಈ ಬೆಳವಣಿಗೆಗಳ ಹಿಂದೆ ಸ್ಪಷ್ಟವಾದ ರಾಜಕೀಯ ದುರುದ್ದೇಶವಿದೆ ಎಂಬ ವಾದಕ್ಕೆ ಪುಷ್ಟಿ ನೀಡುವ ಕೆಲವು ಅಂಶಗಳನ್ನು ಗಮನಿಸುವುದಾದರೇ, ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಬೆಳೆಯುತ್ತಿರುವ ನಾಯಕತ್ವವನ್ನು ಹತ್ತಿಕ್ಕಲು ಈ ಉಪಚುನಾವಣೆಯನ್ನು ಒಂದು ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ ಎನ್ನುವ ವಿಷಯ ಒಂದಾದರೇ, ಮುಸ್ಲಿಂ ನಾಯಕರನ್ನು ದೂರವಿಡುವುದರಿಂದ ಬಹುಸಂಖ್ಯಾತ ಮತಗಳನ್ನು ಧ್ರುವೀಕರಣಗೊಳಿಸಬಹುದು ಎಂಬ ಲೆಕ್ಕಾಚಾರವೂ ಇದರ ಹಿಂದೆ ಇರಬಹುದು. ಈ ಬೆಳವಣಿಗೆ ಮುಂಬರುವ ಸಾರ್ವತ್ರಿಕ ಚುನಾವಣೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮಾತ್ರವಲ್ಲದೆ, ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಆಗಿರುವ ಮುಸ್ಲಿಂ ಮತಗಳು ಜೆಡಿಎಸ್ ಅಥವಾ ಎಸ್‌ಡಿಪಿಐನಂತಹ ಪಕ್ಷಗಳತ್ತ ವಾಲುವ ಸಾಧ್ಯತೆ ದಟ್ಟವಾಗಿದೆ. ಇದು, ಪ್ರಭಾವಿ ನಾಯಕರನ್ನು ಕಳೆದುಕೊಂಡರೆ ಪಕ್ಷಕ್ಕೆ ಸಮುದಾಯವಾರು ಮತ್ತು ಸಂಘಟನಾತ್ಮಕವಾಗಿ ಹಿನ್ನಡೆಯಾಗಲಿದೆ ಎನ್ನುವ ಕನಿಷ್ಠ ಯೋಚನೆಯಿಲ್ಲದೆ ತೆಗೆದುಕೊಂಡ ಕ್ರಮದಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಪಕ್ಷ ಮತ್ತು ಸಮುದಾಯದ ನಡುವಿನ ನಂಬಿಕೆಯ ಸೇತುವೆ ಕುಸಿದಿದೆ. ಇದನ್ನು ಸರಿಪಡಿಸುವುದು ಹೈಕಮಾಂಡ್‌ಗೆ ದೊಡ್ಡ ಸವಾಲಾಗಲಿದೆ.
ಯಾವುದೇ ಪಕ್ಷಕ್ಕೆ ಶಿಸ್ತು ಮುಖ್ಯ, ಆದರೆ ಆ ಶಿಸ್ತು ಕ್ರಮ ಪೂರ್ವಾಗ್ರಹ ಪೀಡಿತವಾಗಿರಬಾರದು. ದಾವಣಗೆರೆ ಉಪ ಚುನಾವಣೆಯ ಸುತ್ತ ನಡೆಯುತ್ತಿರುವ ಈ ರಾಜಕೀಯ ಬೆಳವಣಿಗೆಗಳು ಕೇವಲ ಮುಸ್ಲಿಂ ನಾಯಕರ ವಿರುದ್ಧದ ಕ್ರಮವಾಗಿ ಕಾಣದೆ, ಒಂದು ನಿರ್ದಿಷ್ಟ ಸಮುದಾಯದ ಧ್ವನಿಯನ್ನು ಅಡಗಿಸುವ ಪ್ರಯತ್ನವಾಗಿ ಬಿಂಬಿತವಾಗುತ್ತಿದೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಮತ್ತು ಸುದೀರ್ಘ ಕಾಲದ ರಾಜಕೀಯ ಹಿತಾಸಕ್ತಿಯ ದೃಷ್ಟಿಯಿಂದ ಪಕ್ಷಕ್ಕೆ ಮಾರಕವಾಗಬಹುದು. ರಾಜಕೀಯ ಪಕ್ಷಗಳು ಕೇವಲ ಚುನಾವಣಾ ಲೆಕ್ಕಾಚಾರಕ್ಕಾಗಿ ನಾಯಕರನ್ನು ‘ಬಳಸಿ ಬಿಸಾಡುವ’ ಸಂಸ್ಕೃತಿಯನ್ನು ಕೈಬಿಡದಿದ್ದರೆ, ದಾವಣಗೆರೆಯ ಈ ಕಿಡಿ ರಾಜ್ಯಾದ್ಯಂತ ವ್ಯಾಪಿಸುವ ಅಪಾಯವಿದೆ.
ಸಮಕಾಲೀನ ಕರ್ನಾಟಕ ರಾಜಕೀಯ: ಪ್ರಭಾವಿ ನಾಯಕತ್ವ
ಕರ್ನಾಟಕದ ರಾಜಕೀಯದಲ್ಲಿ, ಕೆಲವು ನಾಯಕರು ತಮ್ಮದೇ ಆದ ವಿಶಿಷ್ಟ ಶೈಲಿಯ ಮೂಲಕ ದಶಕಗಳ ಕಾಲ ಅಧಿಕಾರ ಮತ್ತು ಪ್ರಭಾವವನ್ನು ಉಳಿಸಿಕೊಂಡು ಬಂದಿದ್ದಾರೆ. ಹಿರಿಯ ನಾಯಕ ದಿವಂಗತ ಶಾಮನೂರು ಶಿವಶಂಕರಪ್ಪ ಮತ್ತು ಅವರ ಕುಟುಂಬ ಹಾಗೂ ಡಿ.ಕೆ ಶಿವಕುಮಾರ್ ಅವರು ಈ ನಿಟ್ಟಿನಲ್ಲಿ ಮತ್ತು ಈ ಬೆಳವಣಿಗೆಗಳ ಸುತ್ತದ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಇವರ ರಾಜಕೀಯ ಮಾದರಿ ‘ಊಳಿಗಮಾನ್ಯ’ ಮಾದರಿಯನ್ನು ಹೋಲುತ್ತದೆ ಎಂಬ ಚರ್ಚೆಗಳು ಆಗಾಗ ಕೇಳಿಬರುತ್ತಿರುತ್ತವೆ.
ಈ ಇಬ್ಬರೂ ನಾಯಕರು ಕೇವಲ ರಾಜಕಾರಣಿಗಳಲ್ಲದೆ, ಬಲಿಷ್ಠ ಸಮುದಾಯಗಳ ಮುಖಂಡರಾಗಿ ಮತ್ತು ಆರ್ಥಿಕವಾಗಿ ಸದೃಢರಾದ ಉದ್ಯಮಿಗಳಾಗಿಯೂ ಗುರುತಿಸಿಕೊಂಡಿದ್ದಾರೆ. ಶಾಮನೂರು ಅವರು ವೀರಶೈವ ಲಿಂಗಾಯತ ಮಹಾಸಭಾದ ಮೂಲಕ ಸಮುದಾಯದ ಮೇಲೆ ಹಿಡಿತ ಹೊಂದಿದ್ದರು, ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ನಾಯಕನಾಗಿ ಬೆಳೆದಿದ್ದಾರೆ. ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಕ್ಷೇತ್ರಗಳು ಮತ್ತು ಆರ್ಥಿಕ ಸಂಪನ್ಮೂಲಗಳ ಮೇಲೆ ಇವರಿಗಿರುವ ನಿಯಂತ್ರಣ ರಾಜಕೀಯ ಕ್ಷೇತ್ರದಲ್ಲಿ ಬೃಹತ್ ಪ್ರಭಾವಳಿಯನ್ನು ಸೃಷ್ಟಿಸಿದೆ.
ಊಳಿಗಮಾನ್ಯ ಪದ್ಧತಿಯ ಛಾಯೆ?
ಈ ನಾಯಕರ ಸುತ್ತಲೂ ಒಂದು ದೊಡ್ಡ ಕಾರ್ಯಕರ್ತರ ಪಡೆ ಇದೆ. ಅಲ್ಲಿ ಸಾಂಸ್ಥಿಕ ನಿಷ್ಠೆಗಿಂತ ‘ವೈಯಕ್ತಿಕ ನಿಷ್ಠೆ’ಗೆ ಹೆಚ್ಚು ಆದ್ಯತೆ ಇರುತ್ತದೆ. ಇದು ಹಳೆಯ ಕಾಲದ ಪಾಳೆಗಾರಿಕೆ ಅಥವಾ ಊಳಿಗಮಾನ್ಯ ಪದ್ಧತಿಯ ʼನಾಯಕ-ಅನುಯಾಯಿʼ ಸಂಬಂಧದ ಛಾಯೆಯಾಗಿ ಕಾಣಿಸುತ್ತಿದೆ. ಪಕ್ಷದ ಒಳಗೂ ಇವರು ತೆಗೆದುಕೊಳ್ಳುವ ನಿರ್ಧಾರಗಳು ಅಂತಿಮ ಎಂಬಂತಹ ವಾತಾವರಣವಿರುತ್ತದೆ.
ತಮ್ಮ ಕ್ಷೇತ್ರಗಳಲ್ಲಿ ಇಂತಹ ನಾಯಕರನ್ನು ವಿರೋಧಿಸುವ ಶಕ್ತಿಗಳು ಕ್ಷೀಣಿಸಿರುತ್ತವೆ. ಕ್ಷೇತ್ರದ ಅಭಿವೃದ್ಧಿಗಿಂತ ಹೆಚ್ಚಾಗಿ ನಾಯಕನ ‘ಕೃಪಾಕಟಾಕ್ಷ’ದ ಮೇಲೆ ಎಲ್ಲವೂ ನಡೆಯುತ್ತದೆ ಎಂಬ ಭಾವನೆ ಜನರಲ್ಲಿ ಮೂಡಿರುತ್ತದೆ. ಶಾಮನೂರು ಕುಟುಂಬ ಮತ್ತು ಡಿ.ಕೆ ಶಿವಕುಮಾರ್ ಅವರೇ ಈ ಎಲ್ಲಾ ರಾಜಕೀಯ ಬೆಳವಣಿಗೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ನಿಟ್ಟಿನಲ್ಲಿ ಇವರ ʼರಾಜಕೀಯ ಮಾದರಿʼ ರಾಜಕೀಯ ವಲಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಾತ್ರವಲ್ಲದೇ, ಇದು ಕಾಂಗ್ರೆಸ್ ಭವಿಷ್ಯಕ್ಕೆ ಭಾರಿ ಹೊಡೆತ ನೀಡಲಿದೆ ಎಂದು ಹೇಳಲಾಗುತ್ತಿದೆ.
ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಚಾತುರ್ಯ ಮತ್ತು ಶಾಮನೂರು ಅವರ ಅನುಭವದ ರಾಜಕಾರಣ, ಎರಡರಲ್ಲೂ ‘ಪವರ್ ಪಾಲಿಟಿಕ್ಸ್’ ಪ್ರಧಾನವಾಗಿದೆ. ಸೈದ್ಧಾಂತಿಕ ಬದ್ಧತೆಗಿಂತ ಹೆಚ್ಚಾಗಿ ಪ್ರಾಯೋಗಿಕ ಅಧಿಕಾರ ರಾಜಕಾರಣಕ್ಕೆ ಇವರು ಹೆಚ್ಚು ಒತ್ತು ನೀಡುತ್ತಾರೆ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರೀಕರಣಗೊಳ್ಳಬೇಕು. ಆದರೆ, ಕರ್ನಾಟಕದ ಈ ʼಪ್ರಭಾವಿ ರಾಜಕೀಯʼ ಶೈಲಿ ಅಧಿಕಾರ ಕೇಂದ್ರೀಕರಣದತ್ತ ವಾಲುತ್ತಿರುವಂತಿದೆ. ಇದು ಪಕ್ಷಕ್ಕೆ ತಕ್ಷಣದ ಲಾಭ ತಂದುಕೊಟ್ಟರೂ, ದೀರ್ಘಕಾಲದಲ್ಲಿ ಹೊಸ ನಾಯಕತ್ವದ ಬೆಳವಣಿಗೆಗೆ ಅಡ್ಡಿಯಾಗಬಹುದು ಮತ್ತು ಬೆಂಬಲಿಗರನ್ನು ವಿಮುಖಗೊಳಿಸಬಹುದು ಎನ್ನುವುದರಲ್ಲಿ ಅನುಮಾನವಿಲ್ಲ.




