ಸುಮಾರು ಒಂಬತ್ತು ತಿಂಗಳ ನಂತರ, ಮಾಲ್ಡೀವ್ಸ್ ಸರ್ಕಾರವು ತನ್ನ ಭಾರತ ವಿರೋಧಿ ನಿಲುವಿನಿಂದ ಹಿಂದೆ ಸರಿದಿದೆ. ಭಾರತವು ಉಡುಗೊರೆಯಾಗಿ ನೀಡಿದ್ದ ಡಾರ್ನಿಯರ್ ವಿಮಾನವನ್ನು ವೈದ್ಯಕೀಯ ಸಮಯಕ್ಕಾಗಿ ಬಳಲಾಗುವುದು ಎಂದು ಘೋಷಿಸುವುದರಿಂದ ಹಿಡಿದು, ಭಾರತೀಯ ಪ್ರವಾಸಿಗರನ್ನು ಸೆಳೆಯಲು ಭಾರತದಲ್ಲಿ ‘ವೆಲ್‌ಕಮ್ ಇಂಡಿಯಾ’ ಶೀರ್ಷಿಕೆಯ ರೋಡ್‌ಶೋಗಳನ್ನು ನಡೆಸುವವರೆಗೆ ಗಮನಾರ್ಹ ಬದಲಾವಣೆಗಳು ಮಾಲ್ಡೀವ್ಸ್‌ನಿಂದ ಕಂಡುಬಂದಿವೆ.
ಮಾಲ್ಡೀವ್ಸ್ ಮಾರ್ಕೆಟಿಂಗ್ ಅಂಡ್ ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಷನ್, ಮಾಲ್ಡೀವ್ಸ್ ಅಸೋಸಿಯೇಶನ್ ಆಫ್ ಟ್ರಾವೆಲ್ ಏಜೆಂಟ್ಸ್ ಅಂಡ್ ಟೂರ್ ಆಪರೇಟರ್ಸ್ ಹಾಗೂ ಮಾಲ್ಡೀವ್ಸ್‌ನ ನ್ಯಾಷನಲ್ ಹೋಟೆಲ್‌ಗಳು ಮತ್ತು ಗೆಸ್ಟ್‌ಹೌಸ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ಮುಂಬೈ ಮತ್ತು ಬೆಂಗಳೂರಿನಲ್ಲಿ ‘ವೆಲ್‌ಕಮ್ ಇಂಡಿಯಾ’ ಶೀರ್ಷಿಕೆಯ ರೋಡ್‌ಶೋಗಳನ್ನು ಮಾಲ್ಡೀವ್ಸ್ ನಡೆಸುತ್ತಿದೆ.
ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು ಮುಂದಿನ ವಾರಾಂತ್ಯದಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದಾರೆ. “ಜೈಶಂಕರ್ ಅವರು ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಜ್ಜು ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಅಲ್ಲದೆ, ಭಾರತದ ಬೆಂಬಲದೊಂದಿಗೆ ಕೈಗೊಳ್ಳಲಾಗುತ್ತಿರುವ ಮೂರು ಯೋಜನೆಗಳನ್ನು (ಉತ್ತರ ಹನಿಮಾಧುದಲ್ಲಿ ವಿಮಾನ ನಿಲ್ದಾಣ ಯೋಜನೆ, ಗ್ಯಾನ್‌ನಲ್ಲಿ ವಿಮಾನ ನಿಲ್ದಾಣ ಯೋಜನೆ ಮತ್ತು ಗ್ರೇಟರ್ ಮ್ಯಾಲೆ ಪ್ರದೇಶದ ಸೇತುವೆ ಸಂಪರ್ಕ) ಜೈಶಂಕರ್ ಪರಿಶೀಲಿಸಲಿದ್ದಾರೆ” ಎಂದು ಮೂಲಗಳು ತಿಳಿಸಿವೆ.
ಮಾಲ್ಡೀವಿಯನ್ ಧೋರಣೆಯಲ್ಲಿನ ಬದಲಾವಣೆಯು ಪ್ರಾಥಮಿಕವಾಗಿ ಆರ್ಥಿಕ ಕಾರಣಗಳಿಂದಾಗಿದೆ. ಮಾಲ್ಡೀವ್ಸ್‌ಗೆ ಭಾರತೀಯ ಪ್ರವಾಸಿಗರ ಭೇಟಿಯು ಕಡಿಮೆಯಾಗಿದೆ.
ಮುಯಿಝು ಅವರು ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ದಿನವೇ ಭಾರತೀಯ ಸೈನಿಕರನ್ನು ತಮ್ಮ ದೇಶದಿಂದ ಹೊರಕ್ಕೆ ಕಳುಹಿಸುವುದಾಗಿ ಹೇಳಿದ್ದರು. ಮಾಲ್ಡೀವ್ಸ್‌ನಲ್ಲಿ 88 ಭಾರತೀಯ ಸೈನಿಕರಿದ್ದರು. ಅವರು ಎರಡು ಡಾರ್ನಿಯರ್ ವಿಮಾನ ಮತ್ತು ಒಂದು ಹೆಲಿಕಾಪ್ಟರ್‌ಅನ್ನು ನಿರ್ವಹಿಸುತ್ತಿದ್ದರು. ಈಗ ಸೇನಾ ಸಿಬ್ಬಂದಿಯ ಬದಲಾಗಿ, ಭಾರತದ ನಾಗರಿಕರು ಅವುಗಳನ್ನು ನಿರ್ವಹಿಸುತ್ತಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುವ ಪ್ರಮುಖ ದೇಶ ಭಾರತವಾಗಿದೆ. ಆದರೆ, ಕಳೆದ ವರ್ಷ ಮಾಲ್ಡೀವ್ಸ್ ಶಾಸಕರೊಬ್ಬರು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ಕೆಲ ಭಾರತೀಯರು ‘ಬಾಯ್‌ಕಾಟ್ ಮಾಲ್ಡೀವ್ಸ್’ ಅಭಿಯಾನ ಆರಂಭಿಸಿದ್ದರು. 2024ರ ಜೂನ್ ಹೊತ್ತಿಗೆ, ಸುಮಾರು 63,451 ಪ್ರವಾಸಿಗರು ಆ ದೇಶಕ್ಕೆ ಭೇಟಿ ನೀಡಿದ್ದಾರೆ. ಇದು ಸಾಮಾನ್ಯವಾಗಿ ಆ ದೇಶಕ್ಕೆ ಭೇಟಿ ನೀಡುವ ಭಾರತೀಯರ ಪೈಕಿ ಕೇವಲ ಸುಮಾರು 6.2% ಆಗಿದೆ.
ಹೀಗಾಗಿ, ಇದೀಗ ಕುತೂಹಲಕಾರಿಯಾಗಿ, ಮಾಲ್ಡೀವಿಯನ್ನರು ಭಾರತೀಯ ಪ್ರವಾಸಿಗರನ್ನು ಓಲೈಸುತ್ತಿದ್ದಾರೆ. ‘ವೆಲ್‌ಕಮ್ ಇಂಡಿಯಾ’ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.