ಯಕೃತ್ತಿನ ಕಸಿ ಚಿಕಿತ್ಸೆ ಪಡೆಯುವುದಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಂಗ್ಲಾದೇಶದ ಖ್ಯಾತ ಚಿತ್ರ ನಿರ್ದೇಶಕ, ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ನಿರ್ದೇಶಕ ಝಾಹಿದುರ್ ರಹೀಮ್ ಅಂಜನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ನಿಧನರಾಗಿದ್ದಾರೆ.
ಅವರಿಗೆ 60 ವರ್ಷ ವಯಸ್ಸಾಗಿತ್ತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಾದ ನಿರ್ದೇಶಕ ಝಾಹಿದುರ್ ರಹೀಮ್ ಅಂಜನ್, ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಸಿ ಚಿಕಿತ್ಸೆ ಪಡೆಯುವುದಕ್ಕೆ ಬೆಂಗಳೂರಿನ ಯಶವಂತಪುರದಲ್ಲಿರುವ ಸ್ಪರ್ಶ್ ಖಾಸಗಿ ಆಸ್ಪತ್ರೆಗೆ ಕಳೆದ ಕೆಲವು ತಿಂಗಳುಗಳ ಹಿಂದೆ ದಾಖಲಾಗಿದ್ದರು.
ಕಳೆದ ಮಂಗಳವಾರ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಕೂಡ ನಡೆಸಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಚಿಕಿತ್ಸೆಗೆ ಸ್ಪಂದಿಸಿದ್ದ ಅಂಜನ್ ಅವರು, ಸೋಮವಾರ ಚಿಕಿತ್ಸೆಗೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಸದ್ಯ ಬೆಂಗಳೂರಿನಲ್ಲಿರುವ ಝಹೀದುರ್ ರಹೀಮ್ ಅಂಜನ್ ಅವರ ಸಹೋದರ ಸಜ್ಜಾದುರ್ ರಹೀಮ್ ಪಾಂಥ ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದ್ದಾರೆ.
Bangaldesh National Film Award winning director Zahidur Rahim Anjan is no more. He breathed his last on Monday night at 8:30 pm while undergoing treatment in Bangalore, India (Inna Lillahi wa Inna Ilaihi Rajiun). He was 60 years old. pic.twitter.com/8KmAeCgDpn
— Irshad Venur (@irshad_venur) February 25, 2025
“ಸದ್ಯ ಇನ್ನೂ ಕೂಡ ಮೃತದೇಹವು ಆಸ್ಪತ್ರೆಯಲ್ಲೇ ಇದೆ. ಚೆನ್ನೈನಲ್ಲಿರುವ ಬಾಂಗ್ಲಾದೇಶದ ರಾಯಭಾರ ಕಚೇರಿಯಿಂದ ದಾಖಲೆಗಳು ಹಾಗೂ ಕೆಲವೊಂದು ಪ್ರಕ್ರಿಯೆಗಳು ನಡೆಯಲಿಕ್ಕಿದೆ. ಆ ಬಳಿಕ ವಿಮಾನದ ಮೂಲಕ ಬಾಂಗ್ಲಾದೇಶಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆಯ ಪ್ರಕ್ರಿಯೆಗಳು ನಡೆಯಲಿದೆ” ಎಂದು ಸಜ್ಜಾದುರ್ ರಹೀಮ್ ಪಾಂಥ ಈದಿನ ಡಾಟ್ ಕಾಮ್‌ಗೆ ತಿಳಿಸಿದ್ದಾರೆ.
ಝಾಹಿದುರ್ ರಹೀಮ್ ಅಂಜನ್ ಅವರು ತಮ್ಮ ಮೊದಲ ನಿರ್ದೇಶನದ ‘ಮೇಘಮಲ್ಹಾರ್’ ಚಿತ್ರಕ್ಕಾಗಿ 2015 ರಲ್ಲಿ ಅತ್ಯುತ್ತಮ ನಿರ್ದೇಶನ ಮತ್ತು ಅತ್ಯುತ್ತಮ ಸ್ಕ್ರಿಪ್ಟ್‌ಗಾಗಿ ಬಾಂಗ್ಲಾದೇಶದ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದರು. ಬರಹಗಾರ ಅಖ್ತರುಜ್ಜಮಾನ್ ಇಲ್ಯಾಸ್ ಅವರ ‘ರೇನ್‌ಕೋಟ್’ ಕಥೆಯನ್ನು ಆಧರಿಸಿ ಅಂಜನ್ ‘ಮೇಘಮಲ್ಲರ್’ ಎಂಬ ಚಲನಚಿತ್ರವನ್ನು ನಿರ್ಮಿಸಿ, ಡಿಸೆಂಬರ್ 2014ರಲ್ಲಿ ಬಿಡುಗಡೆಗೊಳಿಸಿದ್ದರು.
ಅವರ ಇತ್ತೀಚಿನ ನಿರ್ಮಾಣ ‘ಚಂದರ್ ಅಮವಾಸ್ಯೆ’ಗೆ ಸರ್ಕಾರದಿಂದ ಹಣಕಾಸು ನೆರವು ದೊರೆತಿತ್ತು. ಚಿತ್ರೀಕರಣ ಮುಗಿದ ನಂತರ ಕಳೆದ ವರ್ಷ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಆದರೆ ಬಾಂಗ್ಲಾದೇಶದಲ್ಲಿ ನಡೆದ ಕ್ಷಿಪ್ರ ರಾಜಕೀಯ ಪರಿಸ್ಥಿತಿ ಮತ್ತು ಅವರ ಅನಾರೋಗ್ಯದ ಕಾರಣದಿಂದಾಗಿ ಅವರು ಅದನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರವನ್ನು ಶೀಘ್ರದಲ್ಲೇ ಪ್ರೇಕ್ಷಕರಿಗೆ ತಲುಪಿಸುತ್ತೇನೆ ಎಂದು ತಿಳಿಸಿದ್ದರು. ಅಂಜನ್ ಅವರು ಮಹಾರಾಷ್ಟ್ರದ ಪುಣೆಯಲ್ಲಿರುವ ಚಲನಚಿತ್ರ ಸಂಸ್ಥೆಯಿಂದ ಚಲನಚಿತ್ರದಲ್ಲಿ ಪದವಿ ಪಡೆದಿದ್ದು, ಸ್ಟ್ಯಾಮ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳಕ್ಕೆ ತೆರಳಿದ್ದ ವೇಳೆ ಅಪಘಾತ; ಬೀದರ್ ಜಿಲ್ಲೆಯ 6 ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ
ಮೃತರಾಗಿರುವ ನಿರ್ದೇಶಕ ಝಹೀದುರ್ ರಹೀಮ್ ಅಂಜನ್ ಅವರು ಪತ್ನಿ, ಬಾಂಗ್ಲಾದ ಲೇಖಕಿಯಾಗಿರುವ ಶಾಹೀನ್ ಅಖ್ತರ್, ಇಬ್ಬರು ಸಹೋದರರು, ಒಬ್ಬ ಸಹೋದರಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಝಾಹಿದುರ್ ರಹೀಮ್ ಅಂಜನ್ ಅವರು ಭಾಷಾಶಾಸ್ತ್ರಜ್ಞರಾಗಿದ್ದ ಮಿಜಾನೂರ್ ರಹೀಮ್ ಅವರ ಪುತ್ರರಾಗಿದ್ದಾರೆ.
ಝಹೀದುರ್ ರಹೀಮ್ ಅಂಜನ್ ಅವರ ನಿಧನಕ್ಕೆ ಬಾಂಗ್ಲಾದ ನಿರ್ಮಾಪಕರಾದ ಅಮಿತಾಬ್ ರೆಜಾ, ಗಿಯಾಸ್ ಉದ್ದೀನ್ ಸೆಲಿಮ್, ಅಕ್ರಮ್ ಖಾನ್ ಮತ್ತು ಇತರ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ.
