ಉತ್ತರ ನೈಜೀರಿಯಾದಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡಿದ್ದು, ಕನಿಷ್ಠ 70 ಜನ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ ಎಂಉ ವರದಿಯಾಗಿದೆ.
ನೈಜೀರಿಯಾದ ಸುಲೇಜಾ ಪ್ರದೇಶದ ಬಳಿ ಟ್ಯಾಂಕರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ, ಕೆಲವರು ಜನರೇಟರ್ ಮೂಲಕ ಒಂದು ಟ್ಯಾಂಕರ್‌ನಿಂದ ಇನ್ನೊಂದು ಟ್ಯಾಂಕರ್‌ಗೆ ಪೆಟ್ರೋಲ್ ಸಾಗಿಸಲು ಯತ್ನಿಸುತ್ತಿದ್ದರು. ಆದರೆ, ಟ್ಯಾಂಕರ್ ಸ್ಫೋಟಗೊಂಡು ಬೆಂಕಿಹೊತ್ತಿಕೊಂಡಿದೆ. ಟ್ಯಾಂಕರ್ ಬಳಿ ಇದ್ದವರು ಜೀವಂತವಾಗಿ ಸುಟ್ಟುಹೋಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಪೋಟದ ಬಗ್ಗೆ ನೈಜೀರಿಯಾದ ರಾಷ್ಟ್ರೀಯ ತುರ್ತು ಏಜೆನ್ಸಿ ಮಾಹಿತಿ ನೀಡಿದ್ದು, “ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 15ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ” ಎಂದು ತಿಳಿಸಿದೆ.
“ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪರಿಹಾರ ಕಾರ್ಯಗಳು ಜಾರಿಯಲ್ಲಿವೆ” ಎಂದು ಹೇಳಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನೈಜೀರಿಯಾ ಗವರ್ನರ್ ಮೊಹಮ್ಮದ್ ಬಾಗೊ, “ದುರ್ಘಟನೆಯಲ್ಲಿ ಸುಮಾರು 70 ಮಂದಿ ಸಾವನ್ನಪ್ಪಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸ್ಥಳದಲ್ಲಿ ಉಂಟಾದ ಗೊಂದಲವನ್ನು ಪೊಲೀಸರು ನಿಯಂತ್ರಿಸಿದ್ದಾರೆ” ಎಂದು ಹೇಳಿದ್ದಾರೆ.
2024ರ ಅಕ್ಟೋಬರ್‌ನಲ್ಲಿ ಜಿಗಾವಾ ರಾಜ್ಯದಲ್ಲಿ ಇದೇ ರೀತಿಯ ಸ್ಫೋಟ ಸಂಭವಿಸಿತ್ತು. ಆ ಘಟನೆಯಲ್ಲಿ 147 ಮಂದಿ ಸಾವನ್ನಪ್ಪಿದ್ದರು.