ಪ್ರಾನ್ಸ್‌ನ ನೂತನ ಪ್ರಧಾನಿಯಾಗಿ 34 ವರ್ಷದ ಗೇಬ್ರಿಯಲ್ ಅಟ್ಟಲ್ ಇಂದು ನೇಮಕವಾಗಿದ್ದಾರೆ. ಅಧ್ಯಕ್ಷ ಇಮ್ಯಾನುವಲ್ ಮಾಕ್ರೋನ್ ಗೇಬ್ರಿಯಲ್ ಅವರನ್ನು ನೇಮಿಸಿದ್ದು, ಫ್ರಾನ್ಸ್‌ನ ಅತೀ ಕಿರಿಯ ಹಾಗೂ ಬಹಿರಂಗವಾಗಿ ಹೇಳಿಕೊಂಡ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಪ್ರಧಾನಿ ಎಂಬ ಹೆಗ್ಗಳಿಕೆ ಗೇಬ್ರಿಯಲ್ ಅವರದು.
62 ವರ್ಷ ವಯಸ್ಸಿನ ಪ್ರಧಾನಿ ಎಲಿಜಬೆತ್ ಬೋರ್ನ್ ರಾಜೀನಾಮೆ ಬಳಿಕ, ಗೇಬ್ರಿಯಲ್ ಅಟ್ಟಲ್ ಅವರನ್ನು ಘೋಷಿಸಲಾಗಿದೆ.
ಗೇಬ್ರಿಯಲ್ ಅಟ್ಟಲ್ ಅವರು ಇಮ್ಯಾನುವಲ್ ಮಾಕ್ರೋನ್ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದರು. 1984ರಲ್ಲಿ ಲಾರೆಂಟ್ ಫೇಬಿಯಸ್ ಫ್ರಾನ್ಸ್‌ನ ಪ್ರಧಾನಿಯಾಗಿದ್ದಾಗ ಅವರಿಗೆ 37 ವರ್ಷ ವಯಸ್ಸಾಗಿತ್ತು. ಗೇಬ್ರಿಯಲ್ ಅವರು ಲಾರೆಂಟ್ ದಾಖಲೆ ಸರಿಗಟ್ಟಿ ಅತೀ ಕಿರಿಯ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ನೂತನ ಪ್ರಧಾನಿಯ ನೇಮಕ ಸರ್ಕಾರಕ್ಕೆ ಹೆಚ್ಚು ಅನುಕೂಲ ತಂದುಕೊಡದಿದ್ದರೂ ಇಮ್ಯಾನುವಲ್ ಮಾಕ್ರೋನ್ ಅವರು ಕಳೆದ ವರ್ಷ ಜಾರಿಗೊಳಿಸಿದ ಅಷ್ಟೇನು ಜನಪ್ರಿಯವಲ್ಲದ ಪಿಂಚಣಿ ವ್ಯವಸ್ಥೆ, ವಲಸಿಗರ ಸುಧಾರಣೆಗಳು ಮುಂದಿನ ಚುನಾವಣೆಯಲ್ಲಿ ಆಡಳಿತ ಪಕ್ಷ ‘ಎಲ್‌ಆರ್‌ಇಎಂ’ಗೆ ಅನುಕೂಲಕರ ವಾತಾವರಣ ಉಂಟುಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ಸಮೀಕ್ಷಾ ವರದಿಗಳ ಪ್ರಕಾರ ಪ್ರಸ್ತುತ ವಿರೋಧ ಪಕ್ಷದ ನಾಯಕಿಯಾಗಿರುವ ಬಲಪಂಥೀಯ ನಾಯಕಿ ಮರೀನ್ ಲೆ ಪೆನ್ ಮುಂದೆ ಜೂನ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಶೇಕಡಾವಾರು 8 ರಿಂದ 10 ಹೆಚ್ಚು ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ದೇಶದ ಜನಾಭಿಪ್ರಾಯ ಸಮೀಕ್ಷೆಯಲ್ಲಿ ನೂತನ ಪ್ರಧಾನಿ ಗೇಬ್ರಿಯಲ್ ಅಟ್ಟಲ್ ಫ್ರಾನ್ಸ್‌ನ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಕೋವಿಡ್ ಸಂದರ್ಭದಲ್ಲಿ ಇವರು ಮಾಡಿದ ಕೆಲಸ ಹೆಚ್ಚು ಪ್ರಚಾರ ಪಡೆದುಕೊಂಡಿತ್ತು.
ಫ್ರಾನ್ಸ್‌ನ ಶಿಕ್ಷಣ ಸಚಿವರಾಗಿದ್ದ ವೇಳೆ ಗೇಬ್ರಿಯಲ್ ಅಟಲ್ ಅವರು ಮುಸ್ಲಿಂ ಮಹಿಳೆಯರು ಮತ್ತು ಯುವತಿಯರು ಧರಿಸುತ್ತಿದ್ದ ಅಬಯಾ ಉಡುಪನ್ನು ಫ್ರೆಂಚ್ ಸರ್ಕಾರಿ ಶಾಲೆಗಳಲ್ಲಿ ಧರಿಸುವಂತಿಲ್ಲ ಎಂದು ವಿವಾದಾತ್ಮಕ ಆದೇಶ ಹೊರಡಿಸಿದ್ದರು. ಇದರಿಂದಲೂ ಕೂಡ ವಿಶ್ವದಾದ್ಯಂತ ಸುದ್ದಿಯಾಗಿದ್ದರು.
ನೂತನ ಪ್ರಧಾನಿಯ ಆಯ್ಕೆಯಿಂದ ದೇಶದ ಆಡಳಿತ ಸುಧಾರಣೆಯಲ್ಲಿ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ.