ಗಾಜಾ ಪಟ್ಟಿಯ ಯಾವ ಜಾಗವೂ ಸೇಫ್ ಆಗಿ ಉಳಿದಿಲ್ಲ. ಸದ್ಯ ಅಲ್ಲಿ ಹೆರಿಗೆಗೆ ಕೂಡ ಸುರಕ್ಷಿತ ಸ್ಥಳ ಲಭ್ಯವಿಲ್ಲ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಜೀವ ಉಳಿಸಿಕೊಳ್ಳಲು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಅಲೆಯುತ್ತಲೇ ಇರುವಂತಾಗಿದೆ. ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರಿಗೆ ಅಗತ್ಯ ವಸ್ತುಗಳು ಯಾವುವೂ ಕನಿಷ್ಠ ಪ್ರಮಾಣದಲ್ಲಿಯೂ ದೊರೆಯುತ್ತಿಲ್ಲ. ಗಾಜಾದಲ್ಲಿ ಈಗ ಎಲ್ಲೆಡೆಯೂ ಮಾನವ ನಿರ್ಮಿತ ದುರಂತವೊಂದರ ಕುರುಹುಗಳೇ ಕಾಣುತ್ತಿವೆ.
ಇಸ್ರೇಲ್ ಪ್ಯಾಲೆಸ್ತೀನ್ ಸಂಘರ್ಷ ಆರಂಭವಾಗಿ ಮೂವತ್ತೈದು ದಿನಗಳಾಗಿವೆ. ಗಾಜಾ ಪಟ್ಟಿ ಈಗ ಯುದ್ಧಭೂಮಿಯ ಕಠೋರ ದೃಶ್ಯಗಳಿಗೆ ಸಾಕ್ಷಿಯಾಗಿದೆ. ಇಸ್ರೇಲ್, ಈಜಿಪ್ಟ್ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವೆ ಇರುವ 41 ಕಿಮೀ ಉದ್ದ ಮತ್ತು 10 ಕಿಮೀ ಅಗಲದ ಗಾಜಾ ಪಟ್ಟಿಯಲ್ಲಿ ಜನ- ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು- ಕೊನೆಯಿಲ್ಲದ ಸಂಕಟಕ್ಕೆ ತುತ್ತಾಗಿದ್ದಾರೆ.
ಇಸ್ರೇಲ್ ಡಿಫೆನ್ಸ್ ಫೋರ್ಸ್ ಯುದ್ಧವಿಮಾನಗಳು ಗಾಜಾ ಮೇಲೆ ಬಾಂಬ್ ದಾಳಿ ಮಾಡುತ್ತಿವೆ ಮತ್ತು ಅದರ ಪಡೆಗಳು ಮತ್ತು ಟ್ಯಾಂಕ್‌ಗಳು ನೆಲದ ಮೇಲೂ ಮುನ್ನಡೆಯುತ್ತ ಆಕ್ರಮಿಸುತ್ತಿವೆ. ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು “ಹಮಾಸ್‌ನ ಮಿಲಿಟರಿ ಮತ್ತು ಆಡಳಿತ ಸಾಮರ್ಥ್ಯಗಳನ್ನು ನಾಶಪಡಿಸುವವರೆಗೆ ವಿರಮಿಸುವುದಿಲ್ಲ” ಎಂದಿದ್ದಾರೆ. ಹಾಗೆಯೇ ʼʼಒತ್ತೆಯಾಳುಗಳನ್ನು ಹಮಾಸ್‌ನಿಂದ ಬಂಧಮುಕ್ತ ಮಾಡುವುದು ತಮ್ಮ ಉದ್ದೇಶ” ಎಂದು ಹೇಳಿದ್ದಾರೆ. ಗಾಜಾದಲ್ಲಿ ಹಮಾಸ್ 242 ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಇಸ್ರೇಲಿನ ವೈಮಾನಿಕ ದಾಳಿಯಿಂದ ಇದುವರೆಗೆ ಕನಿಷ್ಠ 50 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಮತ್ತು ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲಿನ ದಾಳಿಯಲ್ಲಿ ಇನ್ನೂ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಹೇಳುತ್ತಿದೆ.
ಆದರೆ, ಇಸ್ರೇಲ್ ಮತ್ತು ಹಮಾಸ್ ಎರಡೂ ಕದನ ವಿರಾಮಕ್ಕಾಗಿ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಒತ್ತಡವನ್ನು ನಿರಾಕರಿಸಿವೆ. ಹಮಾಸ್ ಒತ್ತೆಯಾಳುಗಳನ್ನು ಮೊದಲು ಬಿಡುಗಡೆ ಮಾಡಬೇಕು ಎಂದು ಇಸ್ರೇಲ್ ಹೇಳಿದೆ. ಗಾಜಾ ಆಕ್ರಮಣಕ್ಕೆ ಒಳಗಾಗಿರುವಾಗ ಅವರನ್ನು ಬಿಡುಗಡೆಗೊಳಿಸುವುದಿಲ್ಲ ಮತ್ತು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹಮಾಸ್ ಪ್ರತಿಪಾದಿಸುತ್ತಿದೆ. ಇವರ ನಡುವೆ ಗಾಜಾ ಪಟ್ಟಿಯ ಜನ ನರಕ ಅನುಭವಿಸುತ್ತಿದ್ದಾರೆ.
ಗಾಜಾ ಪಟ್ಟಿ ವಿಶ್ವದ ಅತಿ ಹೆಚ್ಚು ಜನಸಾಂದ್ರತೆಯುಳ್ಳ ಪ್ರದೇಶ. ಇಲ್ಲಿ ಇರುವವರು ಈಗಾಗಲೇ ನಾನಾ ಕಾರಣಕ್ಕೆ ನೊಂದವರು. ವಿಶ್ವಸಂಸ್ಥೆಯ ಪ್ರಕಾರ, 23 ಲಕ್ಷವಿರುವ ಗಾಜಾದ ಜನಸಂಖ್ಯೆಯ ಶೇ. 75 ಕ್ಕಿಂತ ಹೆಚ್ಚು ಜನ ನೋಂದಾಯಿತ ನಿರಾಶ್ರಿತರು ಅಥವಾ ನಿರಾಶ್ರಿತರ ವಂಶಸ್ಥರು. ಗಾಜಾದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಕ್ಕಳೇ ಇದ್ದಾರೆ ಎನ್ನುವುದು ವಿಶೇಷ. ಪ್ರಸ್ತುತ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಗಾಜಾ ಮಕ್ಕಳ ಮಸಣ ಭೂಮಿಯಾಗಿದೆ ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಾದರೂ ಮಾನವೀಯ ಆಧಾರದಲ್ಲಿ ಕದನ ವಿರಾಮ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ಯಾಲೆಸ್ತೀನಿಯನ್ ಆರೋಗ್ಯ ಅಧಿಕಾರಿಗಳ ಪ್ರಕಾರ ಗಾಜಾದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಇದುವರೆಗೆ 4,237 ಮಕ್ಕಳು ಸೇರಿದಂತೆ ಕನಿಷ್ಠ 10,328 ಜನರು ಸಾವನ್ನಪ್ಪಿದ್ದಾರೆ. ಈ ಅಂಕಿ ಅಂಶದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶಂಕೆ ವ್ಯಕ್ತಪಡಿಸಿದ್ದರು. ನಂತರ ಸತ್ತವರ ವಿವರಗಳನ್ನು ಬಹಿರಂಗಪಡಿಸಲಾಗಿತ್ತು.
ಗಾಜಾದಲ್ಲಿ ಯುದ್ಧದಿಂದ ಅತಿ ಹೆಚ್ಚು ನೋವು ಅನುಭವಿಸುತ್ತಿರುವವರು ಮಹಿಳೆಯರು ಮತ್ತು ಮಕ್ಕಳು. ಯುದ್ಧ ಆರಂಭವಾದ ನಂತರ 1,800 ಮಹಿಳೆಯರು ವಿಧವೆಯರಾಗಿದ್ದಾರೆ. 7,44,000 ಮಹಿಳೆಯರು ಮನೆ ತೊರೆದಿದ್ದಾರೆ. ಅಲ್ಲಿ ಉಳಿದಿರುವ ಜನರ ಬದುಕು ದಾರುಣವಾಗಿದೆ. ಅವರಿಗೆ ದಿನನಿತ್ಯದ ಊಟ, ತಿಂಡಿ, ಕುಡಿಯಲು ನೀರು, ತೊಟ್ಟುಕೊಳ್ಳಲು ಉಡುಪು ಯಾವುದೂ ಅಗತ್ಯ ಪ್ರಮಾಣದಲ್ಲಿಲ್ಲ. ಅಕ್ಟೋಬರ್ 21 ಮತ್ತು ನವೆಂಬರ್ 1ರ ನಡುವೆ ಕೇವಲ 26 ಟ್ರಕ್‌ಗಳಷ್ಟು ನೀರು ಮತ್ತು ನೈರ್ಮಲ್ಯ ಸಾಧನಗಳು ಗಾಜಾ ಪ್ರವೇಶಿಸಿವೆ. ಇದು ಜನಸಂಖ್ಯೆಯ ಉಳಿವಿಗಾಗಿ ಅಗತ್ಯವಾದಷ್ಟು ಪೂರೈಸಲು ಸಾಕಾಗುವುದಿಲ್ಲ. ಒಬ್ಬರಿಗೆ ದಿನಕ್ಕೆ ಕೇವಲ ಒಂದರಿಂದ ಮೂರು ಲೀಟರ್ ನೀರು ಮಾತ್ರ ಲಭ್ಯ. ಇದು ಅಲ್ಲಿನ ಜನರಲ್ಲಿ ನಿರ್ಜಲೀಕರಣ, ಮೂತ್ರಪಿಂಡ ವೈಫಲ್ಯ ಮತ್ತು ಇತರ ನಿರ್ಣಾಯಕ ಆರೋಗ್ಯ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಕಳೆದ ನಾಲ್ಕು ವಾರಗಳಲ್ಲಿ ಯಾವುದೇ ಇಂಧನ ಗಾಜಾವನ್ನು ಪ್ರವೇಶಿಸಿಲ್ಲ. ಸದ್ಯ ಅಲ್ಲಿ ಇಂಧನದ ತೀವ್ರ ಕೊರತೆ ಇದೆ.
ಗಾಜಾದ ಯಾವ ಜಾಗವೂ ಸೇಫ್ ಆಗಿ ಉಳಿದಿಲ್ಲ. ಸದ್ಯ ಅಲ್ಲಿ ಹೆರಿಗೆಗೆ ಕೂಡ ಸುರಕ್ಷಿತ ಸ್ಥಳ ಲಭ್ಯವಿಲ್ಲ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಜೀವ ಉಳಿಸಿಕೊಳ್ಳಲು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಅಲೆಯುತ್ತಲೇ ಇರುವಂತಾಗಿದೆ. ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿರುವವರಿಗೆ ಅಗತ್ಯ ವಸ್ತುಗಳು ಯಾವುವೂ ಸರಿಯಾದ ರೀತಿಯಲ್ಲಿ ದೊರೆಯುತ್ತಿಲ್ಲ. 50 ಸಾವಿರಕ್ಕೂ ಹೆಚ್ಚು ಜನರಿರುವ ಶಿಬಿರಗಳಲ್ಲಿ ನಾಲ್ಕೈದು ಶೌಚಾಲಯಗಳು ಮಾತ್ರವೇ ಇವೆ. ಸುರಕ್ಷಿತ ಶೌಚಾಲಯ ಬಳಕೆ ಮತ್ತು ಸ್ನಾನ ಸೌಲಭ್ಯದ ಕೊರತೆ ಮಹಿಳೆಯರನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ.
ಅದರ ಜೊತೆಗೆ ಮುಟ್ಟಿನ ನೈರ್ಮಲ್ಯ ನಿರ್ವಹಣೆಗಾಗಿ ಅಗತ್ಯವಾದ ನೀರು ಮತ್ತು ಶುದ್ಧ ಒಳ ಉಡುಪುಗಳ ಲಭ್ಯತೆ ಇಲ್ಲ. ಇದರಿಂದಾಗಿ ಗಾಜಾದ ಮಹಿಳೆಯರು ಮತ್ತು ಯುವತಿಯರು ಗಂಭೀರವಾದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕಿಕ್ಕಿರಿದ ಸಂದಣಿಯ ನಡುವೆ ಅವರು ಶೌಚಾಲಯವನ್ನು ಬಳಸಲು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಅದರಿಂದ ಅವರು ಗಂಟೆಗಟ್ಟಲೇ ತಮ್ಮ ಮೂತ್ರವನ್ನು ಹಿಡಿದಿಟ್ಟುಕೊಳ್ಳಬೇಕಾದ ಪರಿಸ್ಥಿತಿಯಿದೆ. ಇನ್ನು ಅವರು ಸ್ನಾನ ಮಾಡಲು ಸಾಧ್ಯವಾಗುವುದು ವಾರಕ್ಕೊಮ್ಮೆ ಮಾತ್ರ. ಹೀಗಾಗಿ ಅಲ್ಲಿನ ಗರ್ಭಿಣಿಯರು ಮತ್ತು ಹಾಲುಣಿಸುವ ಬಾಣಂತಿಯರು ನೀರು ಮತ್ತು ನೈರ್ಮಲ್ಯದ ಕೊರತೆಯಿಂದ ಹಲವು ಅಪಾಯಗಳನ್ನು ಎದುರಿಸುತ್ತಿದ್ದಾರೆ. ಕುಡಿಯಲು ಸಾಕಷ್ಟು ನೀರಿಲ್ಲದೇ ನಿರ್ಜಲೀಕರಣದಿಂದ ಅನೇಕ ಬಾಣಂತಿಯರಲ್ಲಿ ಮಕ್ಕಳಿಗೆ ಕುಡಿಸುವಷ್ಟು ಹಾಲು ಕೂಡ ಸಿಗದಂತಾಗಿದೆ. ಇನ್ನು ಶುದ್ಧ ನೀರಿನ ಅಲಭ್ಯತೆಯಿಂದ ಐದು ವರ್ಷದೊಳಗಿನ ಮಕ್ಕಳು ನೀರಿನಿಂದ ಹರಡುವ ರೋಗಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ: ಗಾಜಾ ಬಿಕ್ಕಟ್ಟು | ನಾಗರಿಕ ರಕ್ಷಣೆಯ ನಿರ್ಣಯಕ್ಕೆ ಸಹಿ ಮಾಡದೇ ದೂರವುಳಿದ ಭಾರತ
ಯುದ್ಧಾನಂತರವೂ ಗಾಜಾದ ಜನ- ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು- ಬಹುಕಾಲ ಈ ಯುದ್ಧದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅವರ ಆರೋಗ್ಯ, ವೈಯಕ್ತಿಕ ಜೀವನ, ಬದುಕಿನ ಸ್ಥಿತಿಗತಿಗಳು ಮತ್ತೆಂದಿಗೂ ಹಿಂದಿನ ಸ್ಥಿತಿಗೆ ಮರಳುವುದಿಲ್ಲ. ಗಾಜಾದಲ್ಲಿ ಈಗ ಎಲ್ಲೆಡೆಯೂ ಮಾನವ ನಿರ್ಮಿತ ದುರಂತವೊಂದರ ಕುರುಹುಗಳೇ ಕಾಣುತ್ತಿವೆ.