ಕಲಬುರಗಿ ಸೀಮೆಯ ಕನ್ನಡ | ಈ ಪದ್ದತಿಗಳು ಹೆಂಗಸರಿಗಿ ಜೀವಾ ತಿಂತಾವ ನೋಡ್ರೀ…

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)

“ಅಲ್ರೀ ಅಕ್ಕೋರೇ… ದೂರ ಊರಾಗ ಅವರ ಮನ್ಯಾಗ ಸತ್ರೂ ಈ ಮಂದಿ ಇಲ್ಲೆಲ್ಲ ತೊಳೆದು ಬಳ್ಯಾದು ಮಡತಾರಲ್ಲ! ಅವರತ್ತಿ ಅವರ ಊರಾಗ ಸತ್ತಾರ. ಅಲ್ಲೆಲ್ಲ ಮಾಡತಾರ; ಇಲ್ಲಿನೂ ಒಗ್ಯಾದು ಬೆಳಗದು ಮಾಡಬೇಕಾ? ಮೊನ್ನೆ ದಸರಿಗಿ ಸುಣ್ಣ-ಬಣ್ಣ ಎಲ್ಲಾ ಮಾಡ್ಯಾಳ. ಮತ್ತ ಎಲ್ಲಾ ಮಾಡದಂದ್ರ ಒಣ ಹೈರಾಣ…”

ಮಳಿಗಾಲ ಮುಗದು ಚಳಿಗಾಲ ಶುರುವಾದ್ರೂ ಈ ಸಲ ಈ ಧಗಿ ಕಡಿಮೆಯಾಗೋ ಮಾತೆ ಇಲ್ಲ ನೋಡ್ರಿ. ನೀರಿಲ್ಲದೆ ಗಿಡಗಳೆಲ್ಲ ಒಣಗಲತಾವ. ಸಂಜಿ ಮುಂದ ಗಿಡಗಳಿಗಿ ನೀರು ಹಾಕತ ನಿಂತಾಗ ಬಾಜು ಮನಿ ಅಕ್ಕೋರು ಎಲ್ಲಿಂದೊ ಬರಲತಿರು.

“ಏನ್ರಿ ಜ್ಯೋತಿ… ಚಾ ಆಯತೆನ್ರಿ?” ಅಂತ ಕೇಳದ್ರೂ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಹೂ ಅಯ್ತರಿ ಅಕ್ಕೋರೇ… ಬರ್ರಿ ಒಳಗ. ಇಬ್ಬರೂ ಎಲ್ಲಿಗೋ ಹೊಂಟಂಗದ…?”

“ಇಜಮಕ್ಕ ದೀಪಾವಳಿಗಿ ಹೋಸ ಸೀರಿ ತರತೀನಿ ನೋಡಲಕ ಬರ್ರಿ ಅಂತ ಪೋನ್ ಮಾಡಿಳು. ಅಲ್ಲಿಗೆ ಹೋಗಿ ಬರಲತೀರೇನು? ಕರದ್ರ ನಾನೂ ಬರತಿದ್ದ… ಸೀರಿ ನೊಡಲಕ,” ಅನ್ನಕೋತ ಗೇಟ್ ಹೊರಗ ಹೋದ.

“ಬರ್ರಿ ಇಲ್ಲೆ ಕೂಡರಿ… ರಾತ್ರಿಗಿ ಅಡಗಿ ಮಾಡಬೇಕೇನು?” ಅನ್ನಕೊಂತ ಎಲ್ಲರೂ ಗೇಟಿನ ಹೊರಗ ಮೆಟ್ಟಿಲ ಮ್ಯಾಲ ಕೂತೇವು.

ಅಕ್ಕೋರು, “ಸುನೀತಾನ ಅತ್ತಿ ಸತ್ತಳಾ ಅಲಾ, ಅದಕ್ಕ ಮಾತಾಡಸಕ ಹೋಗಿವ್ರಿ,” ಅಂದರು. “ನೀವು ಅವತ್ತೆ ಹೋಗಿಬಂದಿರಬೇಕು,” ಅಂದಾಗ, “ಹೂಂ, ಹೋಗಿದ್ದೆವು… ವಯಸ್ಸಾಗಿತ್ತು. ಇರೋ ತನ ಮಕ್ಕಳು ಸೊಸಿದೀರ ಜೋಡಿ ಚಂದ ಬದಿಕಿದ್ರೂ. ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಕಂಡ ಸತ್ರೂ. ಈಗೀನ ಕಾಲಕ್ಕ ಇಷ್ಟ ವರ್ಷ ಬದುಕೋದು ಪುಣ್ಯನೇ ನೋಡ್ರಿ,” ಅಂದೆ.

“ಹೌದರಿ… ವಯಸ್ಸಾದ ಮ್ಯಾಲ್ ಶಿವಾ ಅಂತ ಹೋಗೋದೆ ಛಲೋ. ಆದ್ರ, ಸಾವು ಯಾರ ಕೈಯಾಗಿನ ಮಾತದ. ಬಾ ಅಂದ್ರ ಬರಲ್ಲ, ಬ್ಯಾಡಂದ್ರ ಬಿಡಲ್ಲ. ಇರೋ ತನಕ ಇಟ್ಟಂಗ ಇರಬೇಕು ಅಷ್ಟೇ ನೋಡ್ರೀ…” ಅಂದರು.

“ಒಳಗ ಬರ್ರಿ ಚಾ ಕುಡಿಯೋಣು…” ಅಂತ ಕರದೆ.

“ಇಲ್ರೀ… ಈಗ ಸುನೀತಾನ ಮನ್ಯಾಗ ಚಾ ಕುಡದೆ ಹೊಂಟೀವಿ. ಆಕೀನು ಬಟ್ಟಿ-ಬರಿ ಒಗ್ಯಾದು ಮಾಡಲತಾಳ. ಸೂತಕದ ಮನಿ ಸ್ವಚ್ಚ ಮಾಡಿ ನಾಲ್ಕ ಮಂದಿ ಐಗಳ ಕೈ ತೋಳಿಬೇಕಲ್ಲ…” ಅಂದ್ರೂ.

“ಅಲ್ರೀ ಅಕ್ಕೋರೇ… ದೂರ ಊರಾಗ ಅವರ ಮನ್ಯಾಗ ಸತ್ರೂ ಈ ಮಂದಿ ಇಲ್ಲೆಲ್ಲ ತೊಳೆದು ಬಳ್ಯಾದು ಮಡತಾರಲ್ಲ! ಅವರತ್ತಿ ಅವರ ಊರಾಗ ಸತ್ತಾರ. ಅಲ್ಲೆಲ್ಲ ಮಾಡತಾರ; ಇಲ್ಲಿನೂ ಒಗ್ಯಾದು ಬೆಳಗದು ಮಾಡಬೇಕಾ? ಮೊನ್ನೆ ದಸರಿಗಿ ಸುಣ್ಣ-ಬಣ್ಣ ಎಲ್ಲಾ ಮಾಡ್ಯಾಳ. ಮತ್ತ ಎಲ್ಲಾ ಮಾಡದಂದ್ರ ಒಣ ಹೈರಾಣ. ಈ ಪದ್ದತಿಗಳು ಹೆಂಗಸರಿಗಿ ಜೀವಾ ತಿಂತಾವ ನೋಡ್ರೀ. ಬ್ಯಾಡ ಅಂದ್ರೂ ನಮ್ಮ ಹೆಣ್ಣಮಕ್ಕಳು ಕೇಳಲ್ಲ ಬಿಡ್ರೀ. ಮಾಡಿ-ಮಾಡಿ ಹೈರಾಣ ಆಗತಾರ,” ಅಂದೆ.

“ಐ… ಹಂಗಂದ್ರ ಹ್ಯಾಂಗ್ರಿ! ಸೂತಕದ ಮನಿ ಸುಣ್ಣ-ಬಣ್ಣ ಮಾಡಿಲ್ಲಂದ್ರ ಹ್ಯಾಂಗ್? ಆಜುಬಾಜು ಮಂದಿ ಸುಮ್ನ ಇರತಾರೇನು? ಜನಕ್ಕಂಜರ ಮಾಡಬೇಕಾಗತದ. ಹುಟ್ಟಿದ್ದು, ಸತ್ತದ್ದು, ಮೈ ನೆರದದ್ದು ಮೈಲಿಗಿ ಬಾಳ ಇರತದ. ಹಿಂದಿನವರು ಹಚ್ಚಿಟ್ಟ ಪದ್ದತಿ ಬಿಡಬಾರದು. ಎಲ್ಲರಿಗೂ ಚಂದ ಆಗಬೇಕ ನೋಡ್ರಿ,” ಅಂದರು ಅಕ್ಕೋರು.

“ಏನೋರಿ… ಈ ಮಡಿ ಮೈಲಿಗಿ ವಿಷಯ ನಾನು ಜಾಸ್ತಿ ತಲಿ ಕೆಡಿಸಿಕೊಳ್ಳಲ್ಲ. ನನಗ ಎಲ್ಲಾ ಸ್ವಚ್ಚ ಇರಬೇಕು ಅಷ್ಟ. ಮಡಿ ಅಂತ ಒಗದದ್ದೆ ಒಗೇಯೋದು. ಮುಟ್ಟಿದ್ರ ಮೈ ತೋಳಕೊಳ್ಳೊದು. ರಕ್ತ ಸಂಬಂದಿಕರು ಅವರ ಊರಾಗ ಸತ್ರ ಇಲ್ಲಿ ಸೂತಕ ಪಾಲಿಸೋದು…” ಇವೆಲ್ಲ ನಾ ನಂಬಂಗಿಲ್ಲ. ಹೋದವ್ರು ಹೋದ್ರೂ… ಇರೋರು ಇಂತವೆಲ್ಲ ಮಾಡಕೊಂತ ಹೈರಾಣ ಆಗಬೇಕು. ದಂಢದಾಗಿನ ಜೀವ ಹೋಗದೇ ತಡ ಆ ದೇಹ ಎಷ್ಟು ಸೂತಕ ಆಗಿ ಬಿಡತದರಿ! ಅದು ಮನ್ಯಾಗಿಂದ ಹೊರಗ ಹೋಗದೇ ತಡ, ಈ ಕಡಿ ಎಲ್ಲರಿಗೂ ತೊಳೆದು ಬಳ್ಯಾದು ಒಗ್ಯಾದೆ ಚಿಂತಿ. ಹೋದವರಿಗಾಗಿ ಬಡಕೊಳ್ಳೊದಕ್ಕಿಂತ ತಮಗಾಗಿ ಬಡಕೊಳ್ಳೋದೆ ಹೆಚ್ಚು. ಸುಮ್ನ ಆ ಹೋದ ಜೀವದ ನೇವಾ ಮಾಡಿಕೊಂಡು ಅದೆಷ್ಟು ಆಚರಣೆಗಳು!” ಎಂದೆ, ನಿಟ್ಟುಸಿರು ಬಿಡುತ್ತ.

“ಅಕ್ಕೋರೆ… ಈ ಅಂತ್ಯಕ್ರಿಯೆಗಳು ಈಗೀಗ ಬಾಳ ಅಡಂಬರ ಆಗಲತಾವ. ದುಡ್ಡ ಇದ್ದವ್ರು ಮದಿಗಿ ಖರ್ಚು ಮಾಡಿದಂಗೆ ಮಣ್ಣಿಗೂ ಖರ್ಚ ಮಾಡಲತಾರ್ರಿ! ಅದೆಷ್ಟು ಕುಣಿತ, ಕುಡಿತ! ನಮ್ಮ ಹೆಣ್ಣಮಕ್ಕಳಿಗಂತೂ ಸತ್ತಲ್ಲಿ ಹೋಗಿ ಕೂಡಾದು ಒಂದು ಟೈಮ್ ಪಾಸ್ ಕೆಲಸ ಆದಂಗ ಅದಾ. ಯಾರು ಅತ್ರೂ ಯಾರೂ ಅತ್ತಿಲ್ಲ, ಯಾರು ಬಂದ್ರೂ , ಯಾರು ಬಂದಿಲ್ಲ. ಯಾರ ಎನೇನು ಅಂದು ಅತ್ರೂ, ಹೋಗಿಬರವಾಗ ಹೋದವರ ಬಗ್ಗಿ ಬಿಟ್ಟು ಬ್ಯಾರೆ ಎಲ್ಲಾ ಮಾತಾಡತಾರ ನೋಡ್ರೀ…” ಅಂದೆ.

ಅಕ್ಕೋರು ಅಸಮಾಧಾನದಿಂದ, “ಹಂಗದ್ರ ಹ್ಯಾಂಗ್ರಿ? ನಮ್ಮೋರು ತಮ್ಮೋರು ಅನ್ನೊವರ ಬಲ್ಲೆ ಹೋಗತೀವಿ. ಸುಮ್ನ ಯಾರು ಸತ್ರೂ ಹೋಗಲಕ ಆಗತದೇನು? ನಾವ ಹೋಗಲಿಲ್ಲ ಅಂದ್ರ ನಾವ ಸತ್ರ ಯಾರು ಬರತಾರ? ಮೊನ್ನೆ ಆ ಹಿಂದಿನ ಮನಿ ಅಜ್ಜ ಸತ್ತಾಗ ನೋಡಿರಿಲ್ಲ… ಒಂದ್ ನಾಲ್ಕ ಜನ ಇದ್ದಿಲ್ಲ. ಎಷ್ಟ ಗಳಸರ ಎದಕ ಬಂತು – ಸತ್ರ ನಾಲ್ಕ ಜನ ಬರಲಿಲ್ಲ ಅಂದ್ರ…” ಅಂದರು.

“ನಾಲ್ಕಲ್ಲ ನಾಲ್ಕು ಸಾವಿರ ಜನ ಬಂದ್ರೂ, ಹೋದವರೇನು ಎದ್ದು ನೋಡತಾರೇನು? ಇದ್ದಾಗ ಒಂದು ಒಳ್ಳೆ ಮಾತಾಡದವ್ರು ಸತ್ತಾಗ ಬಂದು ಅದೇನು ಸಾಧಿಸತಾರೊ! ಅದರಾಗ ಬಹಳಷ್ಟು ಜನ ಕಾಟಚಾರಕ್ಕ ಬಂದವ್ರೇ. ಹೋಗಲಿಲ್ಲಂದ್ರ ಎನಂದುಕೊತಾರೋ ಅಂದಕೊಂಡು ಹೋಗೋರೆ ನೋಡ್ರೀ ಎಲ್ಲರೂ. ಹೆಣ ಎತ್ತಲಾಕ ತಡ ಆದ್ರ ನೋಡಬೇಕು ಅವರ ಚಡಪಡಿಕಿ. ಮನಿಯವ್ರೀಗಿ ಅದೇಟು ಬೈಕೋತಾರೋ ಏನೋ…” ಅಂದಾಗ ಎಲ್ಲರಿಗೂ ನಗು ಬರದೆ ಇರಲಿಲ್ಲ.

“ಆದ್ರೂ ಅಕ್ಕೋರೆ… ಇದ್ದಾಗ ಮಾಡಿದ್ದೆ ಒಂದು ಸಾರ್ಥಕ ನೋಡ್ರೀ. ನಮ್ಮ ಆಪ್ತರಿಗಿ ಆರಾಮ ಇರಲಿಲ್ಲಂದ್ರ ಹೋಗಿ ಒಂದೆರಡು ಮಾತು ಆಡಿಬರಬೇಕು. ಹೋದ ಮ್ಯಾಲ್ ತೋರಿಕಿಗಿ ಹೋಗಿ ಬರೋದು ನನಗಂತೂ ಯಾಕೋ ಸರಿ ಅನಸ್ತಿಲ್ಲ ನೋಡ್ರೀ. ಇಂತಹ ಸಂದರ್ಭಗಳಿಗಿ ಹೋಗಲೇಬೇಕು ಅಂಬೋ ಆಸಕ್ತಿ ನನಗ ಇಲ್ಲ. ಇನ್ನ ನಾ ಹೋಗಿಲ್ಲಂದ್ರ ನಾವು ಸತ್ತಾಗ ಯಾರು ಬರತಾರ ಅಂತ ನಾ ಯೋಚನಿ ಮಾಡಲ್ಲ. ಯಾರು ಬರದೇ ಇದ್ರೆ ನನ್ನ ಆತ್ಮಕ್ಕ ಸಮಾಧಾನ ಆಗತದ. ಯಾಕಂದ್ರ ಇರೋ ತನಕ ಬೇಟಿಯಾಕ್ಕೊಂತ ಇರಬೇಕು, ಹೋದ ಮ್ಯಾಲ್ ಕಾಟಚಾರಕ್ಕ ಬಂದು ಯಾರೂ ಹೈರಾಣ ಆಗೋದು ಬ್ಯಾಡ. ಹಂಗ ನೋಡಿದ್ರ ಎಲ್ಲಿ ಜೀವಾ ಹೋಗತದೋ ಅಲ್ಲೆ ಮೋಕ್ಷ ಮಾಡಿಬಿಡಬೇಕು. ಆದ್ರ ಯಾರು ಕೇಳತಾರ! ಈ ಊರು ಹೊಲ ಮನಿ ಅಂಬೋ ಮೋಹ ನಮ್ಮ ಮಂದಿಗಿ ಬಿಡವಲ್ದು. ನಮ್ಮ ಜೀವನ ಹ್ಯಾಂಗ್ ಕೊನೆಯಾಗಬೇಕಂದ್ರ,  ಒಂದು ಗಿಡದ ಹಣ್ಣಾದ ಎಲಿ ಸದ್ದಿಲ್ಲದೆ ಹ್ಯಾಂಗ ಭೂಮಿಗಿ ಬಿದ್ದು ಗೊಬ್ಬರ ಆಗತದೋ ಹಂಗ… ಬಿದ್ದು ಮರೆಯಾದ್ರೂ ಮತ್ತೊಬ್ಬರಿಗಿ ಅದರಿಂದ ಕಿಂಚಿತ್ ತೊಂದರೆ ಆಗಬಾರದೂ…”

ಎಲ್ಲರೂ ಗಳಿಗಿ ಮೌನ ಆದೆವು – ವಿಷಯ ಯಾಕೋ ಗಂಭಿರ ಸ್ವರೂಪ ಪಡಿಲತದ ಅನಿಸಿ…

“ಹೋಗ್ಲಿ ಬಿಡ್ರೀ… ಇರೋ ತನಕ ಒಬ್ಬರಿಗೊಬ್ಬರು ಭೇಟಿ ಆಕ್ಕೊಂತ, ನಕ್ಕೊಂತ ಇರರಿ…”

“ಬರ್ರೀ… ಅಲ್ಲೆ ಅಡಗಿ ಮನ್ಯಾಗ ಮಾತಾಡತ ಚಾ ಮಾಡತಿನಿ,” ಅಂದಾಗ, ಮತ್ತ ನಮ್ಮ ಕಲಕಲ ಮಾತು, ನಗುವಿನಿಂದ ಜೀವಾ, ಸುತ್ತಲಿನ ಪರಿಸರ ಚೇತೋಹಾರಿ ಆಯಿತು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಜ್ಯೋತಿ ಡಿ ಬೊಮ್ಮಾ
ಜ್ಯೋತಿ ಡಿ ಬೊಮ್ಮಾ
ಚಿಂಚೋಳಿ ತಾಲೂಕಿನವರು. ಸದ್ಯ ಕಲಬುರಗಿ ನಿವಾಸಿ. ಗೃಹಿಣಿ. ಓದು, ಬರಹ, ಪ್ರವಾಸವೆಂದರೆ ಪ್ರೀತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...