ಇಸ್ರೇಲ್ ಸರ್ಕಾರದೊಂದಿಗೆ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಗೂಗಲ್ ಸಂಸ್ಥೆಯ ನಡೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಗೂಗಲ್ ಕಂಪನಿಯ ಒಂಬತ್ತು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಗೂಗಲ್ ಕಚೇರಿಗಳಲ್ಲಿ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದಾರೆ. ಈ 2 ಕಂಪನಿಗಳ ಒಟ್ಟು 9 ಉದ್ಯೋಗಿಗಳನ್ನು ಮಂಗಳವಾರ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ವಾಷಿಂಗ್ಟನ್ ಪೋಸ್ಟ್ನ ವರದಿಯ ಪ್ರಕಾರ, ಎರಡೂ ಕಚೇರಿಗಳಿಂದ ಒಟ್ಟು ಒಂಬತ್ತು ಉದ್ಯೋಗಿಗಳನ್ನು ಬಂಧಿಸಲಾಗಿದೆ. ಪ್ರತಿಭಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಪ್ರತಿಭಟನೆ ನಿಲ್ಲಿಸಲು ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಒಂದು ವೇಳೆ ಪ್ರತಿಭಟನೆ ಕೈಬಿಡದಿದ್ದರೆ, ಸ್ಥಳದಿಂದ ತೆರಳದೇ ಇದ್ದರೆ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಹೇಳಿದ್ದಾರೆ. ಇದಕ್ಕೆ ಪ್ರತಿಭಟನಾ ನಿರತ ಉದ್ಯೋಗಿಗಳು ಒಪ್ಪದ ಕಾರಣ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಸದ್ಯ ಉದ್ಯೋಗಿಗಳನ್ನ ಬಂಧನ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
BREAKING: Google employees were arrested after occupying their boss’s office for more than 8 hours to demand that the company sever ties with Israel.
WATCH: pic.twitter.com/W4WQO8NNgH
— Kassy Akiva (@KassyDillon) April 17, 2024
“ಉಳಿದ ಉದ್ಯೋಗಿಗಳ ಕೆಲಸಕ್ಕೆ ದೈಹಿಕವಾಗಿ ಅಡ್ಡಿಪಡಿಸುವುದು ಗೂಗಲ್ ಕಂಪನಿಯ ನೀತಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ನಾವು ತನಿಖೆ ನಡೆಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ಗೂಗಲ್ ವಕ್ತಾರ ಬೈಲಿ ಟಾಮ್ಸನ್ ಹೇಳಿದ್ದಾರೆ.
“ಈ ಉದ್ಯೋಗಿಗಳನ್ನು ಆಡಳಿತಾತ್ಮಕ ರಜೆಯಲ್ಲಿ ಇರಿಸಲಾಗಿದೆ. ಅವರಿಗೆ ಕಂಪನಿಯ ಆವರಣವನ್ನು ತೊರೆಯಲು ಹಲವು ಬಾರಿ ಮನವಿ ಮಾಡಲಾಗಿದೆ. ಇದಕ್ಕೆ ಅವರು ನಿರಾಕರಿಸಿದ ನಂತರ, ಕಚೇರಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.
ವರದಿಯ ಪ್ರಕಾರ, ಕ್ಲೌಡ್ ಸೇವೆಗಳು ಮತ್ತು ಡೇಟಾ ಕೇಂದ್ರಗಳನ್ನು ಒದಗಿಸಲು ಇಸ್ರೇಲ್ನೊಂದಿಗೆ ಗೂಗಲ್ 1.2 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ನಿಂಬಸ್ ಎಂದು ಕರೆಯಲ್ಪಡುವ ಒಪ್ಪಂದಕ್ಕೆ 2021ರಲ್ಲಿ ಗೂಗಲ್ ಸಹಿ ಮಾಡಿದೆ.
ಕಂಪನಿ ಈ ಒಪ್ಪಂದವನ್ನು ಕೈಬಿಡಬೇಕು ಎಂದು ಅಂದಿನಿಂದಲೂ ಒತ್ತಾಯಿಸುತ್ತಿರುವ ಉದ್ಯೋಗಿಗಳು, ತಮ್ಮ ಬೇಡಿಕೆಯನ್ನು ಪೂರೈಸುವವರೆಗೆ ಅಲ್ಲಿಯೇ ಇರುವುದಾಗಿ ಪ್ರತಿಜ್ಞೆ ಮಾಡಿದ್ದರು. ಹತ್ತಾರು ಗೂಗಲ್ ಉದ್ಯೋಗಿಗಳು ನ್ಯೂಯಾರ್ಕ್, ಸನ್ನಿವೇಲ್ ಮತ್ತು ಸಿಯಾಟಲ್ನಲ್ಲಿರುವ ಕಂಪನಿಯ ಕಚೇರಿಗಳ ಹೊರಗೆ ರ‍್ಯಾಲಿ ನಡೆಸಿದ್ದಾರೆ.
ಪ್ರತಿಭಟನಾಕಾರರ ಒಂದು ಗುಂಪು ಗೂಗಲ್ ಕ್ಲೌಡ್ ಮುಖ್ಯ ಕಾರ್ಯನಿರ್ವಾಹಕ ಥಾಮಸ್ ಕುರಿಯನ್ ಅವರ ಕಚೇರಿಯಲ್ಲಿ ಕುಳಿತು ಸುಮಾರು 10 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದೆ ಎಂದು ವರದಿಯಾಗಿದೆ. ಧರಣಿಯಲ್ಲಿ ಭಾಗವಹಿಸಿದ್ದ ನೌಕರರು ‘ಡ್ರಾಪ್ ಪ್ರಾಜೆಕ್ಟ್ ನಿಂಬಸ್’ ಎಂದು ಬರೆಯಲಾಗಿರುವ ಶರ್ಟ್ಗಳನ್ನು ಧರಿಸಿದ್ದರು.
ಮಾರ್ಚ್ ಆರಂಭದಲ್ಲಿ, ನ್ಯೂಯಾರ್ಕ್ನಲ್ಲಿ ಗೂಗಲ್ ಆಯೋಜಿಸಿದ್ದ ಸಮ್ಮೇಳನದಲ್ಲಿ ಇಸ್ರೇಲ್ನ ಉನ್ನತ ಕಾರ್ಯನಿರ್ವಾಹಕ ಅಧಿಕಾರಿ ಭಾಷಣ ಮಾಡುವಾಗ ಎದ್ದುನಿಂತು ಪ್ರತಿಭಟಿಸಿದ ಸಾಫ್ಟ್ವೇರ್ ಇಂಜಿನಿಯರ್‌ನನ್ನು ಗೂಗಲ್ ಕೆಲಸದಿಂದ ವಜಾಗೊಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಮತದಾನದ ದಿನ ಐಟಿ–ಬಿಟಿ ಸಿಬ್ಬಂದಿಗೆ ರಜೆ ನೀಡಲು ಸೂಚನೆ : ತುಷಾರ್ ಗಿರಿನಾಥ್
ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದ ಬೆನ್ನಲ್ಲೇ ಇಸ್ರೇಲ್ನೊಂದಿಗೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ. ಗೂಗಲ್ನ ಈ ಒಪ್ಪಂದವನ್ನು ನೌಕರರು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.