ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳು ಸಿಲುಕಿಕೊಂಡು ನಂತರ ಭೂಮಿಗೆ ಮರಳಿದ ಬಳಿಕ ಗಗನಯಾತ್ರಿ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಬಾಹ್ಯಾಕಾಶದಲ್ಲಿನ ಹಲವಾರು ಕೌತುಕಗಳು, ಸಂಶೋಧನೆಗಳು ಹಾಗೂ ಭೂಮಿ ಕುರಿತ ಅನುಭವಗಳನ್ನು ಸುನೀತಾ ಅವರು ಹಂಚಿಕೊಂಡಿದ್ದಾರೆ. ಈ ವೇಳೆ, ಭಾರತದ ಬಗ್ಗೆಯೂ ಸುನಿತಾ ವಿಲಿಯಮ್ಸ್ ಮಾತನಾಡಿದರು.
ನಾನು ಶೀಘ್ರದಲ್ಲೇ ನನ್ನ ತಂದೆಯ ತಾಯ್ನಾಡಿಗೆ ಭೇಟಿ ನೀಡಲಿದ್ದೇನೆ. ಮುಂದಿನ ಆಕ್ಸಿಯಮ್ ಕಾರ್ಯಾಚರಣೆಯಲ್ಲಿ ಭಾಗವಹಿಸಲಿರುವ ಭಾರತೀಯ ಪ್ರಜೆಗಳನ್ನು ಭೇಟಿ ಮಾಡುತ್ತೇನೆ. ನಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದೆಂದು ನಾನು ಭಾವಿಸುತ್ತೇನೆ ಎಂದು ಸುನಿತಾ ವಿಲಿಯಮ್ಸ್ ತಿಳಿಸಿದ್ದಾರೆ.
ಭಾರತ ಬಾಹ್ಯಾಕಾಶ ಜಗತ್ತಿನಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿದೆ. ನಾನು ಅವರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಬಾಹ್ಯಕಾಶದಿಂದ ಭಾರತ ಅದ್ಭುತವಾಗಿ ಕಾಣುತ್ತದೆ. ನಾವು ಇರುವ ಕಕ್ಷೆಯಿಂದ ಅತ್ಯಂತ ರಂಗು ರಂಗಾಗಿ ಭಾರತ ಗೋಚರಿಸುತ್ತದೆ. ಹಿಮಾಲಯದ ಮೇಲೆ ಹೋದಾಗಲೆಲ್ಲ ಅದ್ಬುತ ಚಿತ್ರಗಳು ಸಿಕ್ಕವು. ಗುಜರಾತ್ ಮತ್ತು ಮುಂಬೈ ದೀಪಗಳ ಜಾಲದಂತೆ ಕಾಣುತ್ತದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭೂಮಿಗೆ ತಲುಪಿದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್: ಹೇಗಿತ್ತು 286 ದಿನಗಳ ರೋಚಕ ಪಯಣ!
ಭಾರತವು ಒಂದು ಮಹಾನ್, ಅದ್ಭುತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅದು ಬಾಹ್ಯಾಕಾಶದಲ್ಲಿ ತನ್ನ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಇಸ್ರೋ 2026 ರ ವೇಳೆಗೆ ಗಗನಯಾತ್ರಿಗಳನ್ನು ಕಕ್ಷೆಗೆ ಕಳುಹಿಸಲು ಸಜ್ಜಾಗಿದೆ. ಇದರಲ್ಲಿ ಭಾಗವಾಗುವ ಮೂಲಕ ನಾವು ಭಾರತಕ್ಕೆ ನೆರವಾಗಲು ಬಯಸುತ್ತೇವೆ. ಶೀಘ್ರ ಭಾರತಕ್ಕೆ ಭೇಟಿ ನೀಡುತ್ತೇನೆ, ಅಲ್ಲಿಯ ಜನರೊಂದಿಗೆ ಸಾಧ್ಯವಾದಷ್ಟು ಅನುಭವವನ್ನು ಹಂಚಿಕೊಳ್ಳುತ್ತೇನೆ ಎಂದು ಸುನಿತಾ ಹೇಳಿದ್ದಾರೆ.
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯುವುದರಿಂದ ದೈಹಿಕ ಸವಾಲುಗಳನ್ನು ಎದುರಿಸುತ್ತಾರೆ ಎಂದು ಸುನಿತಾ ವಿಲಿಯಮ್ಸ್ ಹೇಳಿದರು. ವಿಲ್ಮರ್ ಅವರನ್ನು ಭಾರತಕ್ಕೆ ಕರೆದುಕೊಂಡು ಹೋಗುತ್ತಿರಾ ಎಂಬ ಪ್ರಶ್ನೆಗೆ ಖಂಡಿತವಾಗಿ ಕರೆದುಕೊಂಡು ಹೋಗುತ್ತೇನೆ ಎಂದು ನಗುತ್ತಾ ಸುನೀತಾ ವಿಲಿಯಮ್ಸ್ ಉತ್ತರಿಸಿದರು.
ಸ್ನಾಯು ದೌರ್ಬಲ್ಯ ಮತ್ತು ಮೂಳೆ ನಷ್ಟವನ್ನು ಕಡಿಮೆ ಮಾಡಲು ತಜ್ಞರ ತಂಡವಿದೆ ಎಂದು ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ವಿವರಿಸಿದರು.
ಪ್ರಸ್ತುತ ಯಾತ್ರೆಯಲ್ಲಿ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 121,347,491 ಮೈಲುಗಳಷ್ಟು ಪ್ರಯಾಣಿಸಿದ್ದರು. ಬಾಹ್ಯಾಕಾಶದಲ್ಲಿ 286 ದಿನಗಳನ್ನು ಕಳೆದ ಇವರು ಭೂಮಿಯ ಸುತ್ತ 4,576 ಕಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ.
