ವಿಶ್ವದ ಅಗ್ರ 10 ತೈಲ ನಿಕ್ಷೇಪಗಳಿರುವ ದೇಶಗಳಲ್ಲಿ ಎಷ್ಟರ ಮೇಲೆ ಅಮೆರಿಕ ದಾಳಿ ನಡೆಸಿವೆ?

Date:

ಜಾಗತಿಕ ರಾಜಕೀಯದಲ್ಲಿ ತೈಲ ನಿಕ್ಷೇಪಗಳು ಪ್ರಮುಖ ಪಾತ್ರವನ್ನು ವಹಿಸಿದೆ. ಇಂದಿಗೂ ತೈಲ ಅಂತಾರಾಷ್ಟ್ರೀಯ ಸಂಘರ್ಷಗಳಿಗೆ ಮೂಲ ಕಾರಣವಾಗಿದೆ. ಇತ್ತೀಚೆಗೆ ಅಮೆರಿಕ ವೆನೆಜುವೆಲಾ ಮೇಲೆ ನಡೆಸಿದ ಆಕ್ರಮಣದ ಮೂಲ ಉದ್ದೇಶವೂ ತೈಲವಾಗಿದೆ.

‘ತೈಲ ನಿಕ್ಷೇಪ’ ಈ ಹಿಂದೆಯೂ ಇಂದಿಗೂ ಮುಂದಿಗೂ ಅಗತ್ಯವಾಗಿರುವುದು. ಈ ನಿಕ್ಷೇಪಕ್ಕಾಗಿಯೇ ಹಲವು ಯುದ್ಧಗಳು ನಡೆದಿವೆ. ಇತ್ತೀಚೆಗೆ ಅಮೆರಿಕ ವೆನೆಜುವೆಲಾ ಮೇಲೆ ನಡೆಸಿದ ದಾಳಿ ಕೂಡಾ ಇದೇ ಕಾರಣದಿಂದ ನಡೆದಿದ್ದು. ವಿಶ್ವದಲ್ಲೇ ಅತ್ಯಧಿಕ ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾ ಮೇಲೆ ತನ್ನ ಹಿಡಿತ ಸಾಧಿಸುತ್ತಾ ಬಂದಿರುವ ಇದೇ ಮೊದಲೇನಲ್ಲ. ವೆನೆಜುವೆಲಾ ಮಾತ್ರವಲ್ಲ ಅಧಿಕ ತೈಲ ನಿಕ್ಷೇಪಗಳನ್ನು ಹೊಂದಿರುವ ದೇಶಗಳ ಮೇಲೆ ಅಮೆರಿಕ ದಾಳಿ, ಆಕ್ರಮಣ ನಡೆಸಿ, ಹತೋಟಿ ಸಾಧಿಸುವ ಯತ್ನ ನಡೆಸಿದೆ.

- Advertisement -

ಇತ್ತೀಚೆಗೆ ಜನವರಿ 3ರಂದು ಅಮೆರಿಕದ ವಿಶೇಷ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಕುಟುಂಬವನ್ನು ಕರಕಾಸ್‌ನಲ್ಲಿ ದಾಳಿ ನಡೆಸಿ ಬಂಧಿಸಿವೆ. ಮಾದಕವಸ್ತು ಕಳ್ಳಸಾಗಣೆ ಆರೋಪದಲ್ಲಿ ವಿಚಾರಣೆಗಾಗಿ ಅಮೆರಿಕಕ್ಕೆ ಕರೆದೊಯ್ದಿದೆ. ಅಮೆರಿಕ ಈ ದಾಳಿಯನ್ನು ಕಾನೂನು ಜಾರಿ ಕಾರ್ಯಾಚರಣೆ ಎಂದು ಕರೆದಿದೆ. ಆದರೆ ಅಂತಾರಾಷ್ಟ್ರೀಯ ತಜ್ಞರುಗಳು ಈ ದಾಳಿಯನ್ನು ಸಾರ್ವಭೌಮ ರಾಷ್ಟ್ರದ ಮೇಲಿನ ಮಿಲಿಟರಿ ಆಕ್ರಮಣ ಎಂದು ಟೀಕಿಸಿದ್ದಾರೆ. ಇದಾದ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾವು ಸುಮಾರು 30 ರಿಂದ 50 ಮಿಲಿಯನ್ ಬ್ಯಾರೆಲ್ ತೈಲವನ್ನು ಅಮೆರಿಕಕ್ಕೆ ಹಸ್ತಾಂತರಿಸಲಿದೆ ಎಂದೂ ಘೋಷಣೆ ಮಾಡಿದ್ದಾರೆ. ಅಂದರೆ ಇವಿಷ್ಟು ನಡೆದಿದ್ದು ತೈಲಕ್ಕಾಗಿ ಅಲ್ಲವೇ? ಅಷ್ಟಕ್ಕೂ ತೈಲಕ್ಕಾಗಿ ದಾಳಿ ನಡೆದಿರುವುದು ಇದು ಮೊದಲೇನಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದನ್ನು ಓದಿದ್ದೀರಾ? ಅಮೆರಿಕದ ಅಡಿಯಲ್ಲೇ ವೆನೆಜುವೆಲಾ ಇರುತ್ತದೆ: ಟ್ರಂಪ್

ತೈಲಕ್ಕಾಗಿ ನಡೆದ ದಾಳಿ, ಯುದ್ಧಗಳಿವು

ಇರಾಕ್-ಇರಾನ್ ಯುದ್ಧ (1980–1988) ಗಡಿ ವಿವಾದದಿಂದ ಆರಂಭವಾದರೂ ತೈಲ ಸಮೃದ್ಧ ಪ್ರದೇಶಗಳ ಮೇಲಿನ ಹಕ್ಕಿನ ವಿಚಾರದಲ್ಲಿ ದೀರ್ಘಕಾಲ ನಡೆದಿದೆ. ಇರಾಕ್ ಕುವೈತ್ ಮೇಲೆ ಆಕ್ರಮ ಮಾಡಿದ ಕೊಲ್ಲಿ ಯುದ್ಧ (1990–1991) ನಡೆದಿದ್ದು ತೈಲ ಸಂಪತ್ತನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದಲೇ. ಈ ಸಂದರ್ಭದಲ್ಲಿ ಅಮೆರಿಕ ನೇತೃತ್ವದ ಪಡೆಗಳು ಇರಾಕ್ ವಿರುದ್ಧ ಯುದ್ಧ ಸಾರಿತ್ತು.

ಅದಾದ ಬಳಿಕ 2003ರಲ್ಲಿ (ಇರಾಕ್ ಯುದ್ಧ) ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಇರಾಕ್ ಮೇಲೆ ದಾಳಿ ನಡೆಸುವುದಕ್ಕೆ ಪ್ರಮುಖ ಕಾರಣ ತೈಲ ರಾಜಕೀಯ ಮತ್ತು ಇರಾಕ್‌ನ ತೈಲ ನಿಕ್ಷೇಪಗಳ ಮೇಲೆ ಪ್ರಭಾವ ಬೀರುವುದು ಆಗಿತ್ತು. 1932–1935ರಲ್ಲಿ ಪೆರಗ್ವೆ ಮತ್ತು ಬೊಲಿವಿಯಾ ದೇಶಗಳ ನಡುವೆ ನಡೆದ ಚಾಕೋ ಯುದ್ಧಕ್ಕೂ ತೈಲ ನಿಕ್ಷೇಪಗಳೇ ಕಾರಣ. ಗ್ರ್ಯಾನ್ ಚಾಕೋ ಪ್ರದೇಶದಲ್ಲಿ ತೈಲ ನಿಕ್ಷೇಪಗಳಿವೆ ಎಂಬ ಕಾರಣಕ್ಕೆ ಈ ಯುದ್ಧ ನಡೆದಿತ್ತು. 2011ರಲ್ಲಿ ಲಿಬಿಯಾ ಅಂತರ್ಯುದ್ಧದಲ್ಲಿಯೂ ತೈಲ ಸಂಪನ್ಮೂಲಗಳ ಮೇಲಿನ ನಿಯಂತ್ರಣ ಕಾರಣವಾಗಿತ್ತು.

ಹೀಗೆ ಜಾಗತಿಕ ರಾಜಕೀಯದಲ್ಲಿ ತೈಲ ನಿಕ್ಷೇಪಗಳು ಪ್ರಮುಖ ಪಾತ್ರವನ್ನು ವಹಿಸಿದೆ. ಇಂದಿಗೂ ತೈಲ ಅಂತಾರಾಷ್ಟ್ರೀಯ ಸಂಘರ್ಷಗಳಿಗೆ ಮೂಲ ಕಾರಣವಾಗಿದೆ. ಇತ್ತೀಚೆಗೆ ಅಮೆರಿಕ ವೆನೆಜುವೆಲಾ ಮೇಲೆ ನಡೆಸಿದ ಆಕ್ರಮಣದ ಮೂಲ ಉದ್ದೇಶವೂ ತೈಲವಾಗಿದೆ. “ವೆನೆಜುವೆಲಾದ ತೈಲ ನಿಕ್ಷೇಪದ ಮೇಲೆ ಸಂಪೂರ್ಣ ಹತೋಟಿ ನಮ್ಮದಾಗಿರುತ್ತದೆ” ಎಂದು ಹೇಳುವ ಮೂಲಕ ಈ ಆಕ್ರಮಣದ ಉದ್ದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅಮೆರಿಕ ತೈಲಕ್ಕಾಗಿ ಆಕ್ರಮಣ ಮಾಡಿದ ದೇಶ ವೆನೆಜುವೆಲಾ ಮಾತ್ರವಲ್ಲ.

ಅಮೆರಿಕ ತೈಲಕ್ಕಾಗಿ ಆಕ್ರಮಿಸಿದ ದೇಶಗಳು

ವಿಶ್ವದಲ್ಲೇ ಅತಿ ಅಧಿಕ ತೈಲ ನಿಕ್ಷೇಪಗಳಿರುವ ದೇಶ ವೆನೆಜುವೆಲಾ. ಸುಮಾರು 303 ಬಿಲಿಯನ್ ಬ್ಯಾರೆಲ್ ನಿಕ್ಷೇಪಗಳೊಂದಿಗೆ ವೆನೆಜುವೆಲಾ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವ ಸೌದಿ ಅರೇಬಿಯಾ 267 ಬಿಲಿಯನ್ ಬ್ಯಾರೆಲ್‌ ತೈಲ ನಿಕ್ಷೇಪ ಹೊಂದಿದ್ದು, ಮಧ್ಯಪ್ರಾಚ್ಯದ ಅತಿದೊಡ್ಡ ತೈಲ ಶಕ್ತಿಯಾಗಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಇರಾನ್, ಕೆನಡಾ, ಇರಾಕ್, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಕುವೈತ್, ರಷ್ಯಾ, ಯುಎಸ್‌ಎ(ಅಮೆರಿಕ), ಲಿಬಿಯಾ ಇದೆ.

oil reserve
ಸಂಜು ಎನ್‌ ಜೆ: ‘ಈ ದಿನ’ ಸಂಶೋಧನಾ ತಂಡ
oil reserve1
ಸಂಜು ಎನ್‌ ಜೆ: ‘ಈ ದಿನ’ ಸಂಶೋಧನಾ ತಂಡ

ಇದನ್ನು ಓದಿದ್ದೀರಾ? ವೆನೆಜುವೆಲಾ | ಅಧ್ಯಕ್ಷೀಯ ಭವನದ ಮೇಲೆ ಡ್ರೋನ್ ಹಾರಾಟ, ಗುಂಡಿನ ಚಕಮಕಿ; ಕಾರಕಾಸ್‌ನಲ್ಲಿ ಆತಂಕ

ಇರಾಕ್ ಮೇಲೆ ದಾಳಿ: ಈ ಅಗ್ರ ಹತ್ತು ದೇಶಗಳ ಪೈಕಿ ಈಗಾಗಲೇ ಅಮೆರಿಕ ತೈಲಕ್ಕಾಗಿ ಐದು ದೇಶಗಳ ಮೇಲೆ ದಾಳಿ ನಡೆಸಿದೆ. ಅದರಲ್ಲಿ ಮುಖ್ಯವಾಗಿ ಇರಾಕ್ ಮೇಲೆ ನಡೆಸಿದ ದಾಳಿ ಜಾಗತಿಕ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು. ಅಮೆರಿಕ ಈ ದಾಳಿಯನ್ನು ವಿನಾಶಕಾರಿ ಶಸ್ತ್ರಾಸ್ತ್ರಗಳ ನಾಶಕ್ಕಾಗಿ ಮತ್ತು ಭಯೋತ್ಪಾದನೆಯ ವಿರುದ್ಧವಾಗಿ ನಡೆಸಲಾಗಿದೆ ಎಂದು ಹೇಳಿದ್ದರೂ, ಇರಾಕ್‌ನ ತೈಲ ನಿಕ್ಷೇಪದ ಮೇಲೆ ಹತೋಟಿ ಸಾಧಿಸುವುದೇ ಇದರ ಹಿಂದಿರುವ ಮುಖ್ಯ ಉದ್ದೇಶ ಎಂಬುದು ಸ್ಪಷ್ಟ. 1972ರಲ್ಲಿ ಇರಾಕ್ ತನ್ನ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಿ ಅಮೆರಿಕದ ಕಂಪನಿಗಳನ್ನು ಹೊರಹಾಕಿತ್ತು. ಆದರೆ 2003ರ ದಾಳಿಯ ನಂತರ ಎಕ್ಸಾನ್ ಮೊಬಿಲ್ (ExxonMobil), ಶೆಲ್ (Shell) ಮತ್ತು ಬಿಪಿ (BP) ನಂತಹ ಪಾಶ್ಚಿಮಾತ್ಯ ಕಂಪನಿಗಳು ಮತ್ತೆ ಇರಾಕ್‌ನ ತೈಲ ಮಾರುಕಟ್ಟೆಯನ್ನು ಪ್ರವೇಶಿಸಿರುವುದು ಉದ್ದೇಶವನ್ನು ಸಾಬೀತುಪಡಿಸಿದೆ.

ವೆನೆಜುವೆಲಾ ದಾಳಿ: ಅದಾದ ಬಳಿಕ ವೆನೆಜುವೆಲಾದಲ್ಲಿ ನಡೆದಿರುವ ಬೆಳವಣಿಗೆಗಳು ನಿಮಗೆ ತಿಳಿದಿದೆ. ಅಮೆರಿಕವು ವೆನೆಜುವೆಲಾದ ತೈಲ ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳುವ ಮತ್ತು ತೈಲ ವಿತರಣೆಯ ಮೇಲೆ ನಿಯಂತ್ರಣ ಹೇರುವ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.

ಲಿಬಿಯಾದ ಮೇಲೆ ದಾಳಿ: 2011ರಲ್ಲಿ ಲಿಬಿಯಾದ ಮೇಲೆ ಅಮೆರಿಕ ಮತ್ತು ನ್ಯಾಟೋ (NATO) ಪಡೆಗಳು ದಾಳಿ ನಡೆಸಿದ್ದು, ಇದು ತೈಲ ರಾಜಕೀಯದ ಇತಿಹಾಸದಲ್ಲೇ ಪ್ರಮುಖವಾದುದ್ದು. ಮಾನವ ಹಕ್ಕುಗಳ ರಕ್ಷಣೆಗಾಗಿ ಈ ದಾಳಿ ನಡೆಸಲಾಗುತ್ತಿದೆ ಎಂದು ಅಮೆರಿಕ ಘೋಷಿಸಿಕೊಂಡಿದ್ದರೂ, ಇದರ ಹಿಂದೆ ಇದ್ದದ್ದು ತೈಲ ನಿಕ್ಷೇಪದ ಮೇಲಿನ ಕಣ್ಣು. ಅಂದಿನ ಲಿಬಿಯಾ ನಾಯಕ ಮುಅಮ್ಮರ್ ಗಡಾಫಿ ಆಫ್ರಿಕನ್ ದೇಶಗಳಲ್ಲಿ ಗೋಲ್ಡ್ ದಿನಾರ್ ಎಂಬ ಹೊಸ ಕರೆನ್ಸಿ ಪರಿಚಯಿಸಿ, ತೈಲ ವ್ಯಾಪಾರವನ್ನು ಅಮೆರಿಕನ್ ಡಾಲರ್ ಬದಲಿಗೆ ಈ ಕರೆನ್ಸಿಯಲ್ಲಿ ನಡೆಸುವ ಯೋಜನೆ ರೂಪಿಸಿದ್ದರು. ಆದರೆ ಇದು ಅಮೆರಿಕದ ಡಾಲರ್ ಪ್ರಾಬಲ್ಯಕ್ಕೆ ಬೆದರಿಕೆಯಾಗಿತ್ತು. ಅದಾಗುತ್ಲಲೇ ಅಮೆರಿಕ ಲಿಬಿಯಾದ ಮೇಲೆ ದಾಳಿ ನಡೆಸಿತ್ತು. ಇದರಿಂದ ಗಡಾಫಿ ಆಡಳಿತ ಪತನವಾಯಿತು, ಇಟಲಿಯ ಎನಿ (Eni) ಮತ್ತು ಬ್ರಿಟನ್‌ನ ಬಿಪಿ (BP) ಯಂತಹ ಪಾಶ್ಚಿಮಾತ್ಯ ಕಂಪನಿಗಳು ಲಿಬಿಯಾದಲ್ಲಿ ಮತ್ತೆ ತಮ್ಮ ಚಟುವಟಿಕೆಗಳನ್ನು ಆರಂಭಿಸಿತು.

ಕುವೈತ್ ಮೇಲೆ ದಾಳಿ: ಅಮೆರಿಕವು ಕುವೈತ್ ಮೇಲೆ ನೇರವಾಗಿ ತೈಲ ವಶಪಡಿಸಲು ದಾಳಿ ನಡೆಸಿಲ್ಲದಿದ್ದರೂ, ಇರಾಕ್‌ನಿಂದ ಕುವೈತ್ ಅನ್ನು ಮುಕ್ತಗೊಳಿಸಲು ಅಮೆರಿಕ ನಡೆಸಿದ ಮಧ್ಯಪ್ರವೇಶದಲ್ಲಿ ತೈಲ ರಾಜಕಾರಣವಿತ್ತು. ಕುವೈತ್ ತನ್ನ ತೈಲವನ್ನು ಕದಿಯುತ್ತಿದೆ ಎಂದು ಆರೋಪಿಸಿ ಆಗಸ್ಟ್ 1990ರಲ್ಲಿ ಸದ್ದಾಂ ಹುಸೇನ್ ನೇತೃತ್ವದ ಇರಾಕ್ ಸೇನೆಯು ಕುವೈತ್ ಅನ್ನು ಆಕ್ರಮಿಸಿತ್ತು. ಈ ವೇಳೆ ಇರಾಕ್ ಕುವೈತ್ ಅನ್ನು ವಶಪಡಿಸಿಕೊಂಡರೆ, ವಿಶ್ವದ ತೈಲ ನಿಕ್ಷೇಪದ ಶೇ. 20ರಷ್ಟು ಭಾಗ ಸದ್ದಾಂ ಹುಸೇನ್ ಹತೋಟಿಗೆ ಹೋಗುತ್ತಿತ್ತು. ಇದರಿಂದಾಗಿ ಅಮೆರಿಕದ ಇಂಧನ ಭದ್ರತೆಗೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿಯುತ್ತಿದ್ದಂತೆ ಅಮೆರಿಕ ಮಧ್ಯಪ್ರವೇಶಿಸಿತ್ತು.

ಇರಾನ್ ಮೇಲೆ ದಾಳಿ: ಅಮೆರಿಕವು ಇರಾನ್ ಮೇಲೆ ನೇರವಾಗಿ ಸೇನಾ ದಾಳಿ ನಡೆಸಿದ್ದಕ್ಕಿಂತ ಅಧಿಕವಾಗಿ ತೈಲ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ದಶಕಗಳಿಂದ ಆರ್ಥಿಕ ನಿರ್ಬಂಧಗಳು ಮತ್ತು ರಹಸ್ಯ ಕಾರ್ಯಾಚರಣೆಗಳನ್ನು ನಡೆಸುತ್ತಲಿದೆ. 1953ರಲ್ಲಿ ಇರಾನ್‌ನ ಪ್ರಧಾನಿ ಮೊಹಮ್ಮದ್ ಮೊಸಾದೆಕ್ ಅವರು ಇರಾನ್‌ನ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಿದಾಗ ಅಮೆರಿಕದ ಸಿಐಎ (CIA) ಮತ್ತು ಬ್ರಿಟನ್ ರಹಸ್ಯ ಕಾರ್ಯಾಚರಣೆಗೊಳಿಸಿ ಮೊಸಾದೆಕ್ ಅವರನ್ನು ಪದಚ್ಯುತಗೊಳಿಸಿತು. ಹಾಗೆಯೇ ಇತ್ತೀಚೆಗೆ ಅಮೆರಿಕವು ಇರಾನ್‌ನ ತೈಲ ರಫ್ತಿನ ಮೇಲೆ ತೀವ್ರವಾದ ನಿರ್ಬಂಧಗಳನ್ನು ಹೇರಿದೆ. ಇರಾನ್‌ನ ಆರ್ಥಿಕತೆಯನ್ನು ಕುಗ್ಗಿಸುವ, ತೈಲ ಆದಾಯವನ್ನು ತಡೆಯುವ ಉದ್ದೇಶದಿಂದಲೇ ಈ ನಿರ್ಬಂಧವನ್ನು ಹೇರಿದೆ.

ಜೆ.ಪಿ. ಮಾರ್ಗನ್ ವಿಶ್ಲೇಷಕರ ಪ್ರಕಾರ, ವೆನೆಜುವೆಲಾ, ಗಯಾನಾ ಮತ್ತು ಅಮೆರಿಕದ ಸ್ವಂತ ನಿಕ್ಷೇಪಗಳು ಸೇರಿದರೆ ವಿಶ್ವದ ಒಟ್ಟು ತೈಲ ನಿಕ್ಷೇಪದ ಶೇಕಡ 30ರಷ್ಟು ಭಾಗ ಅಮೆರಿಕದ ಪ್ರಭಾವದ ಅಡಿಯಲ್ಲಿದೆ. ಇದರಿಂದಾಗಿ ಮಾರುಕಟ್ಟೆಯನ್ನು ನಿಯಂತ್ರಿಸಲು ಅಮೆರಿಕ ಅಧಿಕ ಶಕ್ತಿ ಹೊಂದಿರುವ ದೇಶವೆನಿಸಿಕೊಂಡಿದೆ.

ಈಗಾಗಲೇ ಅಮೆರಿಕ ತೈಲದ ವಿಚಾರದಲ್ಲಿ ಎಷ್ಟೊಂದು ರಾಜಕೀಯ ನಡೆಸುತ್ತಿದೆಯೆಂದರೆ, ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇಕಡ 500ರಷ್ಟು ಸುಂಕ ಹೇರುವ ಮಸೂದೆ ಜಾರಿಗೆ ತರುತ್ತಿದೆ. ಈಗಾಗಲೇ ರಷ್ಯಾದಿಂದ ತೈಲ ಖರೀದಿಸುವ ಕಾರಣಕ್ಕೆ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಿದೆ. ಈ ಮಸೂದೆ ಜಾರಿಗೆ ತರುವ ಮೂಲಕ ಇನ್ನಷ್ಟು ಪರೋಕ್ಷ ಒತ್ತಡ ಹೇರುವ ತಂತ್ರವನ್ನು ಟ್ರಂಪ್ ನಡೆಸುತ್ತಿದ್ದಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಂತು ಟ್ರಂಪ್‌ನ ಮಾತಿಗೆ ಮರು ಉತ್ತರ ನೀಡದೆ ಸುಮ್ಮನಿರುವಾಗ ಮುಂದೊಂದು ದಿನ ಭಾರತವೂ ಅಮೆರಿಕದ ತೈಲ ರಾಜಕೀಯದಿಂದ ಹೊರಬರಲಾಗದ ಇಕ್ಕಟ್ಟಿಗೆ ಸಿಲುಕುವುದು ಖಚಿತ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಟಾರ್ಕ್ಟಿಕದಲ್ಲಿ ಪೆಂಗ್ವಿನ್ ಎಣಿಸುವ ಅಪರೂಪದ ಉದ್ಯೋಗ: ಲಕ್ಷಗಳ ಸಂಭಾವನೆ, ಹೇಗಿರುತ್ತದೆ ಹಿಮದ ನಾಡಿನ ಬದುಕು?

ಜನಜಂಗುಳಿ, ಟ್ರಾಫಿಕ್ ಕಿರಿಕಿರಿ ಹಾಗೂ ದೈನಂದಿನ ಯಾಂತ್ರಿಕ ಬದುಕಿನಿಂದ ದೂರ ಸರಿದು,...

ಯಮೆನ್ ರಾಷ್ಟ್ರಪತಿ ಭವನದ ಮೇಲೆ ಹೂತಿಗಳ ಕ್ಷಿಪಣಿ ದಾಳಿ: ಐವರ ಸಾವು

ಯಮೆನ್‌ನ ದಕ್ಷಿಣ ಭಾಗದ ಪ್ರಮುಖ ನಗರವಾದ ಅದನ್‌ನಲ್ಲಿರುವ ಅಲ್-ಮಾಶಿಕ್ ರಾಷ್ಟ್ರಪತಿ ಭವನದ...

ಭಾರತದ ಮೇಲೆ ಶೇ.100 ಸುಂಕ: 10 ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅಂತಿಮ ತೀರ್ಮಾನ!

ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ. 100ರಷ್ಟು ಭಾರಿ ಆಮದು...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ – ಜಯಂತ್‌ ಪರ್ಮಾರ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ...