ತಾವು ಬಿಜೆಪಿಯ ಸದಸ್ಯರಲ್ಲ, ಕೇವಲ ಅಂಬೇಡ್ಕರ್‌ವಾದಿ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೀಡಿರುವ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಕಾಂಗ್ರೆಸ್ ಸ್ಪಂದಿಸದ ಕಾರಣಕ್ಕೆ ಎನ್‌ಡಿಎ ಸೇರಿದೆ ಎನ್ನುತ್ತಾರೆ ಅಠಾವಳೆ. ಆದರೆ, ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ದಲಿತ ಸಮುದಾಯಕ್ಕೆ ನಿಜಕ್ಕೂ ನ್ಯಾಯ ಸಿಕ್ಕಿದೆಯೇ?
ದೇಶದ ರಾಜಕಾರಣದಲ್ಲಿ ದಲಿತ ನಾಯಕರ ನಿಲುವುಗಳು ಮತ್ತು ಮೈತ್ರಿಕೂಟಗಳ ಬದಲಾವಣೆ ಯಾವಾಗಲೂ ಕುತೂಹಲಕಾರಿಯಾಗಿಯೇ ಉಳಿದುಕೊಂಡಿದೆ. ಇತ್ತೀಚೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI-A) ಅಧ್ಯಕ್ಷ ರಾಮದಾಸ್ ಅಠಾವಳೆ ಅವರು ನೀಡಿರುವ ಹೇಳಿಕೆಯೊಂದು ಇದೇ ರೀತಿ ಕೂತೂಹಲ ಕೆರಳಿಸಿದೆ, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ, ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
“ನಾನು ಬಿಜೆಪಿಯ ಗುಲಾಮನಲ್ಲ, ನಾನೊಬ್ಬ ಅಂಬೇಡ್ಕರ್ ವಾದಿ. ನನ್ನ ಬೇಡಿಕೆಗಳಿಗೆ ಕಾಂಗ್ರೆಸ್ ಸ್ಪಂದಿಸದ ಕಾರಣಕ್ಕೆ ಎನ್‌ಡಿಎ ಜತೆಗೆ ಕೈಜೋಡಿಸಿದ್ದೇನೆಯೇ ಹೊರತು ನಾನು ಬಿಜೆಪಿ ಸದಸ್ಯನಲ್ಲ” ಎಂಬುದು ಅಠಾವಳೆ ಹೇಳಿಕೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು, ಮುಂಬರುವ ಚುನಾವಣೆಗಳ ನಡುವೆ ಅಠಾವಳೆ ಈ ಹೇಳಿಕೆಗೆ ಹೆಚ್ಚಿನ ಮಹತ್ವವಿದೆ.
ಕಳೆದ ಒಂದು ದಶಕದಿಂದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಅಠಾವಳೆ ಅವರು ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಆಗಾಗೇ ತಮ್ಮ ಪಕ್ಷದ ಸ್ವತಂತ್ರ ಅಸ್ತಿತ್ವ ಮತ್ತು ಅಂಬೇಡ್ಕರ್ ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆ ಅಥವಾ ಸಚಿವ ಸಂಪುಟದಲ್ಲಿ ತಮ್ಮ ಪಕ್ಷಕ್ಕೆ ಸಿಗಬೇಕಾದ ಪ್ರಾತಿನಿಧ್ಯ ಸಿಗದೆ ಅಸಮಾಧಾನಗೊಂಡಾಗಲೆಲ್ಲಾ ಇಂತಹ ಹೇಳಿಕೆಗಳು ಅಠಾವಳೆ ನೀಡುವುದು ಸಾಮಾನ್ಯ. ಆದರೆ ಚುನಾವಣೆ ಹೊಸ್ತಿಲಲ್ಲಿ ನೀಡಿರುವ ಈ ಹೇಳಿಕೆಯು ಅಠಾವಳೆ ಎನ್‌ಡಿಎ ತೊರೆದು ಇಂಡಿಯಾ ಸೇರುತ್ತಾರಾ? ಅಷ್ಟಕ್ಕೂ ದಲಿತರಿಗಾಗಿ ಅಠಾವಳೆ ಎನ್‌ಡಿಎ ಸೇರಿದ್ದರೆ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ದಲಿತ ಸಮುದಾಯಕ್ಕೆ ನಿಜಕ್ಕೂ ನ್ಯಾಯ ಸಿಕ್ಕಿದೆಯೇ- ಹೀಗೆ ಹಲವು ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.
ಇದನ್ನೂ ಓದಿ: ಗರ್ಬಾ ಕಾರ್ಯಕ್ರಮಕ್ಕೆ ಮುಸ್ಲಿಮರ ಪ್ರವೇಶ ನಿಷೇಧ ಸಂವಿಧಾನ ವಿರೋಧಿ: ವಿಎಚ್‌ಪಿ ಫರ್ಮಾನು ವಿರುದ್ಧ ಸಚಿವ ಅಠಾವಳೆ ಆಕ್ರೋಶ
‘ಇಂಡಿಯಾ’ ಒಕ್ಕೂಟದತ್ತ ಮುಖ ಮಾಡುತ್ತಾರಾ ಅಠಾವಳೆ?
ನಾವು ರಾಮದಾಸ್ ಅಠಾವಳೆ ಅವರ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಅವರು ಆಯಾ ಕಾಲಘಟ್ಟದ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಮೈತ್ರಿಗಳನ್ನು ಬದಲಾಯಿಸುತ್ತಾ ಬಂದಿರುವವರು. ಈ ಹಿಂದೆ ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೂ ಗುರುತಿಸಿಕೊಂಡಿದ್ದರು. ಈಗ ಅವರು “ಕಾಂಗ್ರೆಸ್ ಸ್ಪಂದಿಸಲಿಲ್ಲ, ಅದಕ್ಕೆ ಎನ್‌ಡಿಎ ಸೇರಿದೆ” ಎಂದು ಹೇಳಿರುವುದು, ಒಂದು ವೇಳೆ ಇಂಡಿಯಾ ಒಕ್ಕೂಟ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿದರೆ ಆ ಕಡೆಗೂ ವಾಲಬಹುದು ಎಂಬ ಪರೋಕ್ಷ ಸಂದೇಶವನ್ನು ರವಾನಿಸಿದಂತಿದೆ.
ಬಿಜೆಪಿ ಹೇಗೋ ಕುತಂತ್ರ ನಡೆಸಿ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಇಬ್ಬಾಗಗೊಳಿಸಿತು. ಅದಾದ ಬಳಿಕ, ದಲಿತ ಮತಗಳನ್ನು ಸೆಳೆಯಲು ಕಸರತ್ತು ನಡೆಸುವ ಪಕ್ಷಗಳ ಸಂಖ್ಯೆ ಹೆಚ್ಚಾಗಿದೆ. ಇನ್ನೊಂದೆಡೆ ಸಾಮಾನ್ಯವಾಗಿ ಸಮ್ಮಿಶ್ರ ಸರ್ಕಾರ ಅಥವಾ ಮೈತ್ರಿಕೂಟದಲ್ಲಿರುವ ಒಂದು ಸಣ್ಣ ಪಕ್ಷವು, ತನ್ನ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಅಥವಾ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದ್ದಾಗ, ತನಗೆ ಬೇಕಾದ ಸಚಿವ ಸ್ಥಾನಗಳು ಅಥವಾ ಕ್ಷೇತ್ರಗಳನ್ನು ಕೇಳಿ ಪಡೆಯುವಂತಹ ‘ಚೌಕಾಸಿ ಶಕ್ತಿ’ಯನ್ನು ಹೆಚ್ಚಿಸಿಕೊಳ್ಳಲು ಅಠಾವಳೆ ಮುಂದಾಗಿರುವ ಸಾಧ್ಯತೆಯೂ ಇದೆ. ಆದಾಗ್ಯೂ, ಸದ್ಯಕ್ಕೆ ಅವರು ಎನ್‌ಡಿಎ ತೊರೆಯುವ ಯಾವುದೇ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಹಲವು ಬಾರಿ ಬೆಂಬಲಿಸಿದ್ದಾರೆ.
ಆದರೆ ಬಿಜೆಪಿ ಆಡಳಿತದಲ್ಲಿ ದಲಿತರ ಅಭಿವೃದ್ಧಿಯಾಗಿದೆಯೇ?
ತಾವು ಅಂಬೇಡ್ಕರ್‌ವಾದಿ ಎಂದು ಹೇಳಿಕೊಳ್ಳುವ ಅಠವಾಳೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಭಾಗವಾಗಿರುವ ಕಾರಣ ಈ ಸರ್ಕಾರದ ಅವಧಿಯಲ್ಲಿ ದಲಿತ ಸಮುದಾಯದ ಉದ್ಧಾರವಾಗಿದೆಯೇ ಎಂಬ ಪ್ರಶ್ನೆಯನ್ನೂ ನಾವು ಅಠವಾಳೆ ಮುಂದಿಡಬೇಕಾಗುತ್ತದೆ. ಸರ್ಕಾರ ನಾವು ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದು ಹೇಳಿಕೊಂಡರೂ ಅದು ದಲಿತರಿಗೆ ಸಹಾಯವಾಗಿದೆಯೇ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗದು.
ಇದನ್ನೂ ಓದಿ: ಮುಂಬೈ ಗರ್ಬಾ ಉತ್ಸವಕ್ಕೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧ: ತಿಲಕ, ಆಧಾರ್ ಕಾರ್ಡ್ ಹಾಗೂ ಕುಟುಂಬ ಸಮೇತ ಆಗಮನ ಕಡ್ಡಾಯ!
ಸಾರ್ವಜನಿಕ ವಲಯದ ಉದ್ದಿಮೆಗಳ (PSUs) ಖಾಸಗೀಕರಣದಿಂದಾಗಿ ದಲಿತರಿಗೆ ಸಂವಿಧಾನಬದ್ಧವಾಗಿ ಸಿಗಬೇಕಿದ್ದ ಮೀಸಲಾತಿ ಅವಕಾಶಗಳು ಕಡಿತಗೊಳ್ಳುತ್ತಿವೆ. ಬಜೆಟ್‌ನಲ್ಲಿ ಪರಿಶಿಷ್ಟ ಜಾತಿಗಳ ಉಪಯೋಜನೆಗೆ (SCSP) ಮೀಸಲಿಡುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಹುದ್ದೆಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳನ್ನು ದಲಿತ ಚಿಂತಕರು ಆಗಾಗ ಮಾಡುತ್ತಿದ್ದಾರೆ. ಇದರೊಂದಿಗೆ ಸಂವಿಧಾನ ಮತ್ತು ಮೀಸಲಾತಿಯನ್ನು ಬದಲಾಯಿಸುವ ಬಗ್ಗೆ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳು ಈಗಾಗಲೇ ದಲಿತ ಸಮುದಾಯದಲ್ಲಿ ಅಭದ್ರತೆಯನ್ನು ಮೂಡಿಸಿವೆ.
ಎನ್‌ಡಿಎ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ!
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳ (ಎಸ್‌ಸಿ) ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. 2014ರಲ್ಲಿ ದೇಶಾದ್ಯಂತ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸುಮಾರು 40,401 ಪ್ರಕರಣಗಳು ದಾಖಲಾಗಿದ್ದವು. ನಂತರದ ವರ್ಷಗಳಲ್ಲಿ ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಾ ಸಾಗಿದೆ.
2018ರಲ್ಲಿ 42,793 ಪ್ರಕರಣಗಳು, 2019ರಲ್ಲಿ 45,935 ಪ್ರಕರಣಗಳು, 2020ರಲ್ಲಿ 50,291 ಪ್ರಕರಣಗಳು, 2021ರಲ್ಲಿ 50,900 ಪ್ರಕರಣಗಳು ಮತ್ತು 2022ರಲ್ಲಿ ದಾಖಲೆಯ 57,582 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆಯಾಗಿ 2014ರಿಂದ 2022ರ ಅವಧಿಯಲ್ಲಿ ದೇಶದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ದಲಿತ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.
ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಸರಳವಾಗಿರುವುದರಿಂದ ಮತ್ತು ದಲಿತ ಸಮುದಾಯದಲ್ಲಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಹೆಚ್ಚಾಗಿರುವುದರಿಂದ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂದು ಸರ್ಕಾರದ ಮೂಲಗಳು ಸಮರ್ಥಿಸಿಕೊಳ್ಳುತ್ತವೆ. ಆದರೆ, ಕಾನೂನು ಸುವ್ಯವಸ್ಥೆಯ ವೈಫಲ್ಯ ಮತ್ತು ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆಯಾಗದಿರುವುದು (ಕಡಿಮೆ ಶಿಕ್ಷೆಯ ಪ್ರಮಾಣ) ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಮಾನವ ಹಕ್ಕುಗಳ ಆಯೋಗ ಮತ್ತು ಸಾಮಾಜಿಕ ಕಾರ್ಯಕರ್ತರು ಆತಂಕ ವ್ಯಕ್ತಪಡಿಸುತ್ತಾರೆ. ವಿಶೇಷವಾಗಿ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಎನ್‌ಸಿಆರ್‌ಬಿ ದತ್ತಾಂಶಗಳಿಂದ ಸ್ಪಷ್ಟವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ರಾಮದಾಸ್ ಅಠಾವಳೆ ಅವರ ಹೇಳಿಕೆಯು ಭಾರತೀಯ ರಾಜಕಾರಣದಲ್ಲಿ ದಲಿತ ನಾಯಕರು ಎದುರಿಸುತ್ತಿರುವ ಸೈದ್ಧಾಂತಿಕ ಮತ್ತು ರಾಜಕೀಯ ಸಂದಿಗ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೂ, ತಮ್ಮ ಮೂಲ ಮತಬ್ಯಾಂಕ್ ಆದ ದಲಿತ ಸಮುದಾಯದ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅವರಿಗೆ ಅನಿವಾರ್ಯ. ಹೀಗಿರುವಾಗ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಮತ್ತು ರಾಷ್ಟ್ರ ರಾಜಕಾರಣದ ಸಮೀಕರಣಗಳು ಬದಲಾದರೆ ಅಠಾವಳೆ ಅವರ ನಡೆ ಯಾವ ರೀತಿ ಇರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.


