ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗಳು ಉಲ್ಟಾ ಹೊಡೆದ ಮಾತ್ರಕ್ಕೆ ದರ್ಶನ್ ಪಾರಾಗಲು ಸಾಧ್ಯವೇ?

Date:

ಪಟ್ಟಣಗೆರೆ ಶೆಡ್‌ನಲ್ಲಿದ್ದ ನಾಲ್ವರು ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿರುವುದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರತ್ಯಕ್ಷದರ್ಶಿಗಳು ಉಲ್ಟಾ ಹೊಡೆದ ಮಾತ್ರಕ್ಕೆ ದರ್ಶನ್‌ಗೆ ಕಾನೂನು ಕುಣಿಕೆಯಿಂದ ಮುಕ್ತಿ ಸಿಗುತ್ತದೆಯೇ? ಪೊಲೀಸರು ಕಲೆಹಾಕಿರುವ ಡಿಎನ್‌ಎ, ಸಿಡಿಆರ್ ಹಾಗೂ ವೈಜ್ಞಾನಿಕ ಸಾಕ್ಷ್ಯಗಳು ಆರೋಪಿಗಳಿಗೆ ಮುಳುವಾಗಲಿವೆಯೇ?

ಸಾವಿರಾರು ಪುಟಗಳ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧ ಸಾವಿರಾರು ಪುಟಗಳ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಆದರೆ ಸದ್ಯ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿರುವ ಈ ಪ್ರಕರಣ ಕುತೂಹಲಕಾರಿ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿ ಸಾಕ್ಷಿಗಳು ನ್ಯಾಯಾಲಯದಲ್ಲಿ ತಮ್ಮ ಮೊದಲಿನ ಹೇಳಿಕೆಗಳಿಂದ ಹಿಂದೆ ಸರಿಯುತ್ತಿದ್ದಾರೆ.

- Advertisement -

ಈ ಹಿಂದೆ ತನಿಖೆಯ ಆರಂಭದಲ್ಲಿ ಪೊಲೀಸರ ಮುಂದೆ ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಆರ್‌ಪಿಸಿ ಸೆಕ್ಷನ್ 164 (ಪ್ರಸ್ತುತ ಬಿಎನ್‌ಎಸ್‌ಎಸ್ ಸೆಕ್ಷನ್ 183) ಅಡಿಯಲ್ಲಿ ನಾಲ್ವರು ಸಾಕ್ಷಿಗಳು ಹೇಳಿಕೆ ನೀಡಿದ್ದರು. ಆದರೆ ಈಗ ಈ ಹಿಂದೆ ದಾಖಲಾಗಿದ್ದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಸಾಕ್ಷಿಗಳು ಮಾತನಾಡಿದ್ದಾರೆ. ಇದು ಪ್ರಾಸಿಕ್ಯೂಷನ್ ಪಾಳಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಯಚೂರು | ಅವ್ಯವಸ್ಥೆಯ ಆಗರವಾದ ವಸತಿ ನಿಲಯ: ಜೀವ...

ಡಾ. ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರವಾಗಿದ್ದು, ವಿದ್ಯಾರ್ಥಿಗಳು ಪ್ರತಿದಿನ ತೊಂದರೆ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕನಿಷ್ಠ ಅಗತ್ಯಗಳ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ...

ರಾಜರ ಆಳ್ವಿಕೆಯ ವಿರೋಧ ಕೇವಲ ಟ್ರಂಪ್‌ಗೆ ಮಾತ್ರ ಸೀಮಿತವಲ್ಲ

2026ರ ಪರಿಸ್ಥಿತಿ ಭಿನ್ನವಾಗಿದೆ. ಈಗ ಪರಮಾಣು ಅಸ್ತ್ರಗಳು ನಮ್ಮಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಕೈಯಲ್ಲಿಲ್ಲ. ಬದಲಾಗಿ ಅವು ಲಾಕ್‌ಹೀಡ್, ಬೋಯಿಂಗ್, ಜನರಲ್ ಡೈನಾಮಿಕ್ಸ್‌ನಂತಹ ಖಾಸಗಿ ಕಂಪನಿಗಳ ಸಿಇಒಗಳ ಸಂಪೂರ್ಣ ನಿಯಂತ್ರಣದಲ್ಲಿವೆ... ನಾನು ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡವನು;...

ಬಸವಣ್ಣನವರಿಂದ ಗಾಂಧಿಯವರೆಗೆ: ಆಯ್ದ ಕಥನಗಳ ಮೂಲಕ ಇತಿಹಾಸವನ್ನು ತಿರುಚುವ...

ಇತಿಹಾಸವನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಇತಿಹಾಸವನ್ನು ತಿರುಚುವ ಹಕ್ಕು ಯಾರಿಗೂ ಇಲ್ಲ. ಬಸವಣ್ಣನವರನ್ನು ವೈದಿಕ ಚೌಕಟ್ಟಿಗೆ ಸೀಮಿತಗೊಳಿಸುವುದಾಗಲಿ, ಗಾಂಧಿಯವರ ಹತ್ಯೆಯನ್ನು ಗೋಡ್ಸೆಯ ಸಮರ್ಥನೆಯ ಮೂಲಕ ನ್ಯಾಯೀಕರಿಸುವುದಾಗಲಿ ಇತಿಹಾಸದ ಸಮಗ್ರ ಅಧ್ಯಯನಕ್ಕೆ...

ಸಾಮಾನ್ಯವಾಗಿ ಯಾವುದೇ ಒಂದು ಕ್ರಿಮಿನಲ್ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಅತ್ಯಂತ್ಯ ನಿರ್ಣಾಯಕ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿಯೂ, ಈ ಹಲ್ಲೆ ನಡೆಯುವಾಗ ಅಲ್ಲಿಯೇ ಇದ್ದರು ಎನ್ನಲಾದ ನಾಲ್ವರು ಪ್ರಮುಖ ಸಾಕ್ಷಿಗಳ ಹೇಳಿಕೆ ಅತಿ ಮುಖ್ಯವಾಗುತ್ತದೆ. ಈ ಹಿಂದೆ ಘಟನೆ ನಡೆದ ಸ್ಥಳದಲ್ಲಿ ದರ್ಶನ್ ಸೇರಿದಂತೆ ಇತರೆ ಆರೋಪಿಗಳು ಇದ್ದರು, ಈ ಘಟನೆಯನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿಕೆ ನೀಡಿದ್ದ ಈ ನಾಲ್ವರು ಸಾಕ್ಷಿಗಳೂ ಈಗ ಉಲ್ಟಾ ಹೊಡೆದಿದ್ದಾರೆ. ಇದರಿಂದಾಗಿ ಮೇಲ್ನೋಟಕ್ಕೆ ಆರೋಪಿಗಳಿಗೆ, ವಿಶೇಷವಾಗಿ ಪ್ರಕರಣದ ಪ್ರಮುಖ ಆರೋಪಿ ದರ್ಶನ್ ಅವರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದಂತೆ ಕಾಣುತ್ತದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಸೆ.2ರಂದು ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಲು ಪ್ರದೋಷ್‌ಗೆ ಕೋರ್ಟ್‌ ಸಮನ್ಸ್

ಆದರೆ, ಭಾರತೀಯ ಸಾಕ್ಷ್ಯ ಅಧಿನಿಯಮ ಮತ್ತು ಸುಪ್ರೀಂ ಕೋರ್ಟ್‌ನ ಹಲವು ಮಹತ್ವದ ತೀರ್ಪುಗಳ ಹಿನ್ನೆಲೆಯನ್ನು ಪರಿಶೀಲಿಸುತ್ತಾ ನಾವು ರೇಣುಕಾಸ್ವಾಮಿ ಕೊಲೆ ಪ್ರಕರಣದತ್ತ ಮುಖ ಮಾಡಿದಾಗ ಹಲವು ಅಭಿಪ್ರಾಯಗಳು ಹುಟ್ಟಿಕೊಳ್ಳುತ್ತವೆ. ಕೇವಲ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾದ ಮಾತ್ರಕ್ಕೆ ಇಡೀ ಪ್ರಕರಣ ಬಿದ್ದುಹೋಗುತ್ತದೆಯೇ ಅಥವಾ ಆರೋಪಿಗಳು ಖುಲಾಸೆಯಾಗುತ್ತಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ಏನಿದು ಪ್ರಕರಣದ ಹಿನ್ನೆಲೆ ಮತ್ತು ಸಾಕ್ಷಿಗಳ ಉಲ್ಟಾ ನಡೆ?

ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ, ನಟಿ ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ ಬೆಂಗಳೂರಿನ ಆರ್. ಆರ್. ನಗರದ ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ಅಲ್ಲಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ಆರೋಪವಾಗಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದವರು ಮತ್ತು ಅಲ್ಲಿದ್ದ ಇತರ ನಾಲ್ವರು ವ್ಯಕ್ತಿಗಳನ್ನು ಪೊಲೀಸರು ಪ್ರಮುಖ ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನಾಗಿ ಪರಿಗಣಿಸಿದ್ದರು. ವಿಚಾರಣೆಯ ಆರಂಭಿಕ ಹಂತದಲ್ಲಿ ಇವರು ಘಟನೆಯನ್ನು ಕಣ್ಣಾರೆ ಕಂಡಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.

ಇದಷ್ಟೇ ಅಲ್ಲದೆ, ಪೊಲೀಸರ ಒತ್ತಡದಿಂದ ಸಾಕ್ಷಿಗಳು ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಬರಬಾರದು ಎಂಬ ಕಾರಣಕ್ಕೆ ತನಿಖಾಧಿಕಾರಿಗಳು ಈ ಸಾಕ್ಷಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ಗೌಪ್ಯ ಹೇಳಿಕೆಯನ್ನು ದಾಖಲಿಸಿದ್ದರು. ಆದರೆ, ಇದೀಗ ವಿಚಾರಣೆಯ ಸಂದರ್ಭದಲ್ಲಿ ಈ ನಾಲ್ವರು ಸಾಕ್ಷಿಗಳು ಉಲ್ಟಾ ಹೊಡೆದಿದ್ದಾರೆ. ಪಟ್ಟಣಗೆರೆ ಶೆಡ್‌ನ ಕೆಲಸಗಾರ ಕಿರಣ್, “ನಾನು ಎಂದಿನಂತೆ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಕೆಲಸ ಮಾಡಿದ್ದೇನೆ, ಅಲ್ಲಿ ಯಾವುದೇ ಅಸಹಜ ಘಟನೆ ನಡೆದಿರುವುದನ್ನು ನಾನು ನೋಡಿಲ್ಲ” ಎಂದು ಹೇಳಿಕೊಂಡಿದ್ದಾರೆ. ನ್ಯಾಯಾಧೀಶರ ಮುಂದೆ ನೀಡಿದ್ದ ಹೇಳಿಕೆಯಲ್ಲಿ ಏನು ಹೇಳಿದ್ದೆ ಎಂಬುದು ಈಗ ನೆನಪಿಲ್ಲ ಎಂದು ಉತ್ತರಿಸಿದ್ದಾರೆ.

ಶೆಡ್‌ನ ಪಾರ್ಕಿಂಗ್ ಅಟೆಂಡೆಂಟ್ ಪುನೀತ್ ಎಂ ಜೆ, “ತಾನು ಸಂಜೆ 6:30ರ ಸುಮಾರಿಗೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆ, ತನಗೆ ಕೊಲೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಹಾಗೂ ಎರಡು ದಿನಗಳ ನಂತರ ಸುದ್ದಿ ವಾಹಿನಿಗಳ ಮೂಲಕ ವಿಷಯ ತಿಳಿಯಿತು” ಎಂದು ಸಾಕ್ಷ್ಯ ನುಡಿದಿದ್ದಾರೆ. ಶೆಡ್‌ನ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ಮತ್ತು ಮಲ್ಲಿಕಾರ್ಜುನ್ ಕೂಡ ಘಟನೆಯ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳನ್ನು ಗುರುತಿಸಲು ಸಾಕ್ಷಿಗಳು ವಿಫಲರಾಗಿದ್ದಾರೆ. ಶೆಡ್ ಮಾಲೀಕನ ಮಗ ವಿನಯ್ ಹೊರತುಪಡಿಸಿ ಬೇರೆ ಯಾರನ್ನೂ ತಾವು ಶೆಡ್‌ನಲ್ಲಿ ನೋಡಿಲ್ಲ ಎಂದು ಪುನೀತ್ ಮತ್ತು ಇತರ ಸಾಕ್ಷಿಗಳು ಹೇಳಿದ್ದಾರೆ. ಇದು ಪ್ರಕರಣದ ದಿಕ್ಕನ್ನೇ ಬದಲಿಸುವ ಪ್ರಯತ್ನದಂತಿದೆ.

ಸದ್ಯ ಸಾಕ್ಷಿಗಳು ತಮ್ಮ ಹಿಂದಿನ ಹೇಳಿಕೆಗಳಿಗೆ ವಿರುದ್ಧವಾಗಿ ಸಾಕ್ಷ್ಯ ನುಡಿದಿರುವುದರಿಂದ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಪಿ. ಪ್ರಸನ್ನ ಕುಮಾರ್ ಅವರು ಈ ನಾಲ್ವರನ್ನೂ ‘ಪ್ರತಿಕೂಲ ಸಾಕ್ಷಿಗಳು’ (Hostile Witnesses) ಎಂದು ಪರಿಗಣಿಸಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಕ್ರಾಸ್ ಎಕ್ಸಮಿನೇಷನ್‌ಗೆ ಒಳಪಡಿಸುತ್ತಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ | ವಾರದಲ್ಲಿ 4 ದಿನ ಟ್ರಯಲ್‌, ವರ್ಷದೊಳಗೆ ವಿಚಾರಣೆ ಮುಗಿಸಲು ಕೋರ್ಟ್‌ ಸೂಚನೆ

ಕಾನೂನು ತಜ್ಞರು ಹೇಳುವುದೇನು?

ಈ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿದ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಮತ್ತು ಬರಹಗಾರ್ತಿ ರಾಜಲಕ್ಷ್ಮಿ ಅಂಕಲಗಿ, “ಸಾಮಾನ್ಯವಾಗಿ ಇದು ತಕ್ಕಮಟ್ಟಿಗೆ ನೆರವಾಗುತ್ತದೆ. ಸಾಕ್ಷಿಗಳ ಹೇಳಿಕೆಗಳು ಬದಲಾಗುತ್ತಾ ಹೋದಂತೆ ಪ್ರಕರಣ ದುರ್ಬಲವಾಗುತ್ತಾ ಹೋಗುತ್ತದೆ. ಪ್ರಕರಣ ಎಷ್ಟು ದುರ್ಬಲವಾಗುತ್ತದೆಯೋ ಅಷ್ಟೇ ಶಿಕ್ಷೆ ಕೊಡಿಸುವುದೂ ಕಷ್ಟವಾಗುತ್ತಾ ಹೋಗುತ್ತದೆ” ಎಂದು ಹೇಳಿದ್ದಾರೆ.

Rajalaxmi Ankalagi
ವಕೀಲೆ, ಸಾಮಾಜಿಕ ಕಾರ್ಯಕರ್ತೆ ಮತ್ತು ಬರಹಗಾರ್ತಿ ರಾಜಲಕ್ಷ್ಮಿ ಅಂಕಲಗಿ

“ಕ್ರಿಮಿನಲ್ ನ್ಯಾಯವ್ಯಾಪ್ತಿಯಲ್ಲಿ ಸಮಂಜಸವಾದ ಅನುಮಾನವನ್ನು ಮೀರಿ ಎಂಬುದು ಅತ್ಯಂತ ಕಠಿಣವಾದ ಪುರಾವೆಯ ಮಾನದಂಡವಾಗಿದೆ. ಯಾವುದೇ ಒಬ್ಬ ಅಪರಾಧಿಗೆ ಶಿಕ್ಷೆಯಾಗಬೇಕೆಂದರೆ ಆತನ ಅಪರಾಧ ಎಲ್ಲಾ ಸಂದೇಹಗಳನ್ನು ಮೀರಿ ನಿಂತಿರಬೇಕು. ಯಾವುದೇ ಅನುಮಾನ ಇರಬಾರದು. ಈಗ ಸಾಕ್ಷಿಗಳು ದುರ್ಬಲವಾದಾಗ ಆರೋಪಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲು ಯಾವ ಸಾಕ್ಷಿಯನ್ನು ನಂಬುವುದು? ಈ ವೇಳೆ ಇತರೆ ದಾಖಲೆಗಳೂ ಮುಖ್ಯವಾಗುತ್ತದೆ” ಎಂದು ತಿಳಿಸಿದ್ದಾರೆ.

“ಮರಣೋತ್ತರ ಪರೀಕ್ಷೆಯ ವರದಿ ಇಂತಹ ಸಂದರ್ಭದಲ್ಲಿ ಮುಖ್ಯವಾಗುತ್ತದೆ. ಒಬ್ಬ ವ್ಯಕ್ತಿಗೆ 5 ಜನ ಸೇರಿ ಹತ್ತು ಏಟು ನೀಡಿದ್ದಾರೆ ಅಂದುಕೊಳ್ಳಿ, ಅಷ್ಟು ಏಟು ಬಿದ್ದರೂ ಆತ ಜೀವಂತವಾಗಿರಬಹುದು. ಆದರೆ ಬಹುತೇಕ ಸಾವಿನ ಅಂಚಿನಲ್ಲಿರುತ್ತಾನೆ. ಅಷ್ಟರಲ್ಲಿ ಆರನೇ ವ್ಯಕ್ತಿ ಬಂದು ಕಪಾಳಕ್ಕೆ ಒಂದೇ ಏಟು ಕೊಡುತ್ತಾನೆ ಅಂದುಕೊಳ್ಳಿ. ಆಗ ವ್ಯಕ್ತಿ ಸತ್ತು ಹೋಗುತ್ತಾನೆ. ಅವಾಗ ಆರನೇ ವ್ಯಕ್ತಿ ಮುಖ್ಯ ಆರೋಪಿಯಾಗುತ್ತಾನೆ. ಯಾಕೆಂದರೆ ಆತನ ಏಟಿಗೆ ಸತ್ತಿರುವುದು ಅಲ್ಲವೇ? ಹಾಗೆಯೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲೂ ಯಾರ ಏಟಿನಿಂದ ರೇಣುಕಾಸ್ವಾಮಿ ಸತ್ತ ಎಂಬುದು ಮುಖ್ಯವಾಗುತ್ತದೆ” ಎಂದು ಹೇಳಿದ್ದಾರೆ.

“ಈ ರೀತಿಯ ಪ್ರಕರಣಗಳು ದಾರದ ಮೇಲೆ ನಿಂತಿರುವ ಒಂದು ಹಗ್ಗವನ್ನು ಹರಿದಂತೆ. ಆರನೇ ವ್ಯಕ್ತಿ ಬಂದು ಹೊಡೆದಿಲ್ಲದಿದ್ದರೆ ಆ ವ್ಯಕ್ತಿ ಬದುಕುವ ಸಾಧ್ಯತೆ ಇರಬಹುದು ಎಂಬ ಆಯಾಮದಲ್ಲಿ ನೋಡಲಾಗುತ್ತದೆ. ಇದೀಗ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಪಾತ್ರ ಯಾವುದು ಎಂಬುದನ್ನು ಕೋರ್ಟ್ ನೋಡುತ್ತದೆ. ದರ್ಶನ್ ಪರವಾಗಿ ಹೇಳಿಕೆ ಬಂದರೆ ಈ ಪ್ರಕರಣ ದುರ್ಬಲವಾಗುತ್ತದೆ. ಶಿಕ್ಷೆ ಕೊಡಿಸಲು ಕಷ್ಟವಾಗುತ್ತದೆ. ದರ್ಶನ್ ದಾರಿ ಸ್ವಲ್ಪ ಸುಲಭವಾಗುತ್ತದೆ” ಎಂದು ತಿಳಿಸಿದ್ದಾರೆ.

ಕಾನೂನು ತಜ್ಞರ ಪ್ರಕಾರ, ಮ್ಯಾಜಿಸ್ಟ್ರೇಟ್ ಮುಂದೆ ನೀಡುವ ಸೆಕ್ಷನ್ 164 ಹೇಳಿಕೆಗೆ ಹೆಚ್ಚಿನ ತೂಕವಿರುತ್ತದೆ, ಆದರೆ ಅದೊಂದೇ ಶಿಕ್ಷೆಗೆ ಆಧಾರವಾಗುವುದಿಲ್ಲ. ಸಾಕ್ಷಿಯೊಬ್ಬ ನ್ಯಾಯಾಲಯದಲ್ಲಿ ಪಾಟಿ ಸವಾಲಿನ ವೇಳೆ ತನ್ನ 164 ಹೇಳಿಕೆಗೆ ವಿರುದ್ಧವಾಗಿ ಹೇಳಿಕೆ ನೀಡಿದರೆ, ಆತನನ್ನು ‘ಪ್ರತಿಕೂಲ ಸಾಕ್ಷಿ’ ಎಂದು ಘೋಷಿಸಲು ಪ್ರಾಸಿಕ್ಯೂಷನ್‌ಗೆ ಅವಕಾಶವಿರುತ್ತದೆ. ಅಲ್ಲದೆ, ಸುಳ್ಳು ಸಾಕ್ಷ್ಯ ನುಡಿದವರ ವಿರುದ್ಧ ‘ಪರ್ಜರಿ’ ಪ್ರಕರಣ ದಾಖಲಿಸುವ ಎಚ್ಚರಿಕೆಯೂ ಇರುತ್ತದೆ.

ದರ್ಶನ್ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇದು ನೆರವಾಗುವುದೇ?

ಒಟ್ಟಾರೆಯಾಗಿ ಪಟ್ಟಣಗೆರೆ ಶೆಡ್‌ನಲ್ಲಿದ್ದ ನಾಲ್ವರು ಸಾಕ್ಷಿಗಳು ಉಲ್ಟಾ ಹೊಡೆದಿರುವುದು ದರ್ಶನ್ ಪರ ವಕೀಲರಿಗೆ ವಾದ ಮಂಡಿಸಲು ಒಂದು ಪ್ರಬಲ ಅಸ್ತ್ರವಾಗಿ ಸಿಕ್ಕಿರುವುದು ನಿಜ. ಪ್ರತ್ಯಕ್ಷದರ್ಶಿಗಳೇ ಘಟನೆಯನ್ನು ನಿರಾಕರಿಸಿದಾಗ, ಆರೋಪಿಗಳ ಮೇಲಿನ ಆರೋಪವನ್ನು ‘ಸಂಶಯಕ್ಕೆ ಎಡೆಯಿಲ್ಲದಂತೆ’ ಸಾಬೀತುಪಡಿಸುವ ಜವಾಬ್ದಾರಿ ಪಬ್ಲಿಕ್ ಪ್ರಾಸಿಕ್ಯೂಟರ್ ಮೇಲೆ ಹೆಚ್ಚಾಗುತ್ತದೆ. ಸಾಕ್ಷಿಗಳ ಈ ನಡೆ ಪ್ರಕರಣಕ್ಕೆ ಹಿನ್ನಡೆಯನ್ನುಂಟು ಮಾಡಬಹುದಾದರೂ, ದರ್ಶನ್ ಅವರು ಸಂಪೂರ್ಣವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇದೊಂದೇ ಅಂಶ ಸಾಕಾಗುವುದಿಲ್ಲ. ಏಕೆಂದರೆ, ಈ ಪ್ರಕರಣದಲ್ಲಿ ಪೊಲೀಸರು ಕೇವಲ ಮೌಖಿಕ ಸಾಕ್ಷ್ಯಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ.

ಈ ಪ್ರಕರಣದಲ್ಲಿ ಪೊಲೀಸರು ಕಲೆಹಾಕಿರುವ ತಾಂತ್ರಿಕ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳು ಅತ್ಯಂತ ಬಲಿಷ್ಠವಾಗಿವೆ. ಆರೋಪಿಗಳ ಮೊಬೈಲ್ ಟವರ್ ಲೊಕೇಶನ್‌ಗಳು (ಸಿಡಿಆರ್‌), ಸಿಸಿಟಿವಿ ದೃಶ್ಯಾವಳಿಗಳು, ರೇಣುಕಾಸ್ವಾಮಿ ರಕ್ತದ ಕಲೆಗಳಿರುವ ಬಟ್ಟೆಗಳು, ಹಲ್ಲೆಗೆ ಬಳಸಲಾದ ವಸ್ತುಗಳ ಮೇಲಿನ ಡಿಎನ್‌ಎ ವರದಿಗಳು ಮತ್ತು ಆರೋಪಿಗಳ ನಡುವಿನ ಫೋನ್ ಕರೆಗಳ ವಿವರಗಳು ಚಾರ್ಜ್‌ಶೀಟ್‌ನ ಪ್ರಮುಖ ಭಾಗವಾಗಿವೆ. ಸಾಕ್ಷಿಗಳು ಉಲ್ಟಾ ಹೊಡೆದರೂ, ಡಿಎನ್‌ಎ ಮತ್ತು ಡಿಜಿಟಲ್ ಸಾಕ್ಷ್ಯಗಳು ಆರೋಪಿಗಳ ಉಪಸ್ಥಿತಿಯನ್ನು ಸಾಬೀತುಪಡಿಸಿದರೆ ನ್ಯಾಯಾಲಯವು ಅದನ್ನೇ ಆಧಾರವಾಗಿಟ್ಟುಕೊಂಡು ಶಿಕ್ಷೆ ವಿಧಿಸಬಹುದು.

ಸಾಕ್ಷಿಗಳು ಉಲ್ಟಾ ಹೇಳಿಕೆ ನೀಡಿರುವುದು ವಿಚಾರಣೆಯ ಹಾದಿಯನ್ನು ತುಸು ಕಠಿಣಗೊಳಿಸಬಹುದು. ಆರೋಪಿಗಳ ಪರ ವಕೀಲರಿಗೆ ‘ಅನುಮಾನದ ಲಾಭ’ (Benefit of Doubt- ಒಬ್ಬ ವ್ಯಕ್ತಿಯ ಬಗ್ಗೆ ಅಥವಾ ಒಂದು ವಿಷಯದ ಬಗ್ಗೆ ಸಂಪೂರ್ಣ ಪುರಾವೆ ಇಲ್ಲದಿದ್ದರೂ, ಸದ್ಯಕ್ಕೆ ಅವರನ್ನು ನಂಬುವುದು ಅಥವಾ ಅವರ ಪರವಾಗಿ ಒಳ್ಳೆಯದನ್ನೇ ಊಹಿಸುವುದು) ಕೇಳಲು ಅವಕಾಶ ಮಾಡಿಕೊಡಬಹುದು. ಆದ್ದರಿಂದ, ಈ ಬೆಳವಣಿಗೆಯು ತಾತ್ಕಾಲಿಕವಾಗಿ ದರ್ಶನ್ ಮತ್ತು ಇತರ ಆರೋಪಿಗಳಿಗೆ ಕಾನೂನು ಹೋರಾಟದಲ್ಲಿ ಒಂದಷ್ಟು ಉಸಿರಾಡುವ ಅವಕಾಶವನ್ನು ನೀಡಿದೆ ಎಂಬುದನ್ನು ಅಲ್ಲಗಳೆಯಲಾಗದು. ಆದರೆ ಆಧುನಿಕ ತನಿಖಾ ಪದ್ಧತಿಯಲ್ಲಿ ಕೇವಲ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಮೇಲೆಯೇ ಇಡೀ ಪ್ರಕರಣದ ಭವಿಷ್ಯ ನಿರ್ಧಾರವಾಗುವುದಿಲ್ಲ ಎಂದು ಪುನರುಚ್ಚರಿಸಬೇಕಾಗುತ್ತದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

9ನೇ ದಿನಕ್ಕೆ ಕಾಲಿಟ್ಟ ‘ಆಶಾ’ ಅಹೋರಾತ್ರಿ ಧರಣಿ: ಬೇಡಿಕೆಗಳ ಈಡೇರಿಕೆಗೆ ನಟಿ ತಾರಾ, ರಮ್ಯಾ ಒತ್ತಾಯ!

ಬಿಸಿಲು, ಮಳೆ, ಚಳಿಯನ್ನೂ ಲೆಕ್ಕಿಸದೆ ಮನೆಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯ ಕಾಪಾಡುವ...

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಠಿಣ ಕಾನೂನು: ತಪ್ಪಿತಸ್ಥರಿಗೆ 10 ವರ್ಷ ಜೈಲು, 10 ಕೋಟಿ ರೂ. ದಂಡಕ್ಕೆ ಶಿಫಾರಸು!

ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ನೇಮಕಾತಿ ಪರೀಕ್ಷೆಗಳಲ್ಲಿ ಪದೇ ಪದೇ ಕೇಳಿಬರುತ್ತಿರುವ...

ಈ ದಿನ ಸಂಪಾದಕೀಯ | ಹಳಿ ತಪ್ಪಿದ ಕೇಂದ್ರದ ಉದ್ಯಮ ನೀತಿ

ಕೇಂದ್ರ ಸರ್ಕಾರಕ್ಕೆ ಹನ್ನೆರಡು ವರ್ಷದ ಸುದೀರ್ಘ ಅವಧಿಯ ಆಡಳಿತದ ನಂತರ ತನ್ನ...

ಯಾದಗಿರಿ | ಉದ್ಯೋಗ ಖಾತ್ರಿ ಕೆಲಸದ ಸ್ಥಳದಲ್ಲಿ ಮಹಿಳೆ ಸಾವು: ಪರಿಹಾರಕ್ಕೆ ಆಗ್ರಹ

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾಮದ ಮಹೇಶ್ವರಿ (38) ಎಂಬ...