ಮಾಲೆಗಾಂವ್ ಸ್ಫೋಟ- ಹಂಗಿದ್ರೆ ಬಾಂಬ್ ಇಟ್ಟದ್ದು ಭೂತಪ್ರೇತಗಳೇ?

Date:

ಅದು 2006 ಮತ್ತು 2008… ಮಹಾರಾಷ್ಟ್ರದ ಮಾಲೆಗಾಂವ್ ಪಟ್ಟಣದಲ್ಲಿ ರಂಜಾನ್ ಮಾಸದ ಪವಿತ್ರ ದಿನಗಳಂದೇ ನಡೆದ ಭೀಕರ ಸ್ಫೋಟಗಳು ಇಡೀ ದೇಶವನ್ನೇ ನಡುಗಿಸಿದ್ದವು. ನೂರಾರು ಅಮಾಯಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರು, ಹತ್ತಾರು ಕುಟುಂಬಗಳು ಅನಾಥವಾಗಿದ್ದವು. ಆದರೆ, ಈ ಭೀಕರ ಕೃತ್ಯ ನಡೆದು ಸುಮಾರು ಎರಡು ದಶಕಗಳು ಕಳೆಯುತ್ತಾ ಬಂದರೂ, ಇಂದು ನ್ಯಾಯದ ಚಕ್ರ ಎಲ್ಲಿ ಬಂದು ನಿಂತಿದೆ ಗೊತ್ತೇ?

- Advertisement -

ಮಾಲೆಗಾಂವ್ ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ. ಅವರ ವಿರುದ್ಧ ವಿಶೇಷ ನ್ಯಾಯಾಲಯ ನೀಡಿದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಚಂದಕ್ ಅವರ ಪೀಠವು ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ನಾಲ್ವರು ಆರೋಪಿಗಳಾದ ರಾಜೇಂದ್ರ ಚೌಧರಿ, ಧನ್ ಸಿಂಗ್, ಮನೋಹರ್ ರಾಮ್ ಸಿಂಗ್ ನರ್ವಾರಿಯಾ ಮತ್ತು ಲೋಕೇಶ್ ಶರ್ಮಾ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸಿದೆ. ಈ ನಾಲ್ವರ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಮತ್ತು ಕಠಿಣ ಕಾನೂನುಬಾಹಿರ (ಚಟುವಟಿಕೆಗಳು) ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದೂರು ದಾಖಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...
photo 6296418736386282397 y

ಈ ನಾಲ್ವರು ಆರೋಪಿಗಳು ಎನ್‌ಐಎ ತಮ್ಮ ವಿರುದ್ಧ ಯಾವುದೇ ಪುರಾವೆಗಳನ್ನು ಸಲ್ಲಿಸಲು ವಿಫಲವಾಗಿದೆ ಎಂದು ಹೇಳಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿ ಬಾಂಬೆ ಹೈಕೋರ್ಟ್ ದೋಷಮುಕ್ತಗೊಳಿಸಿದೆ. ವಿಶೇಷ ನ್ಯಾಯಾಲಯವು ಕಳೆದ ವರ್ಷ ಇವರ ವಿರುದ್ಧ ಹೊರಿಸಿದ್ದ ಆರೋಪಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ 19 ವರ್ಷಗಳ ನಂತರವೂ ಈ ಬಾಂಬ್ ಸ್ಫೋಟದ ನಿಜವಾದ ಅಪರಾಧಿಗಳು ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ.

ಏನಿದು 2006ರ ಮಾಲೆಗಾಂವ್ ಸ್ಫೋಟ ಪ್ರಕರಣ?

2006ರ ಸೆಪ್ಟೆಂಬರ್ 8ರಂದು ಹಮೀದಿಯಾ ಮಸೀದಿ ಮತ್ತು ಬಡಾ ಕಬರಿಸ್ತಾನ್ ಬಳಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಸೈಕಲ್‌ಗಳಲ್ಲಿ ಅಳವಡಿಸಲಾದ ಬಾಂಬ್‌ಗಳು ಸ್ಫೋಟಗೊಂಡವು. ಈ ದುರಂತದಲ್ಲಿ ಸುಮಾರು 37 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆರಂಭದಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ಈ ಬಗ್ಗೆ ತನಿಖೆ ನಡೆಸಿ, ನಿಷೇಧಿತ ಸಿಮಿ (SIMI) ಸಂಘಟನೆಕ್ಕೆ ಸೇರಿದವರು ಎಂದು ಹೇಳಲಾದ 9 ಮುಸ್ಲಿಂ ಯುವಕರನ್ನು ಬಂಧಿಸಿತ್ತು. ಬಳಿಕ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡಿತು. ಈ ವೇಳೆ ಪ್ರಕರಣಕ್ಕೆ ದೊಡ್ಡ ತಿರುವು ಕಂಡುಬಂದಿತ್ತು.

2011ರಲ್ಲಿ ಸ್ವಾಮಿ ಅಸೀಮಾನಂದ ನೀಡಿದ ತಪ್ಪೊಪ್ಪಿಗೆಯ ಆಧಾರದ ಮೇಲೆ, ಸ್ಫೋಟದ ಹಿಂದೆ ಬಲಪಂಥೀಯ ಉಗ್ರಗಾಮಿಗಳ ಕೈವಾಡವಿರಬಹುದು ಎಂದು NIA ಶಂಕಿಸಿತು. ಬಲಪಂಥೀಯರದ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ಈ ನಡುವೆ 2016ರಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುಂಬೈ ವಿಶೇಷ ನ್ಯಾಯಾಲಯವು ಆರಂಭದಲ್ಲಿ ಬಂಧಿತರಾಗಿದ್ದ ಎಲ್ಲ 9 ಮುಸ್ಲಿಂ ಆರೋಪಿಗಳನ್ನು ದೋಷಮುಕ್ತಗೊಳಿಸಿತು.

2008ರ ಸ್ಫೋಟ ಮತ್ತು ಹೇಮಂತ್ ಕರ್ಕರೆ ತನಿಖೆ

ಮಾಲೆಗಾಂವ್‌ನಲ್ಲಿ ಎರಡು ಪ್ರತ್ಯೇಕ ವರ್ಷಗಳಲ್ಲಿ ಸ್ಫೋಟಗಳು ಸಂಭವಿಸಿವೆ. 2008ರಲ್ಲಿ ರಂಜಾನ್ ತಿಂಗಳಲ್ಲಿ ಮಾಲೆಗಾಂವ್‌ನ ಜನನಿಬಿಡ ಪ್ರದೇಶದಲ್ಲಿ ಮೋಟಾರ್ ಸೈಕಲ್‌ಗೆ ಅಳವಡಿಸಿದ್ದ ಬಾಂಬ್ ಸ್ಫೋಟಗೊಂಡಿತ್ತು. 6 ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 100 ಜನರು ಗಾಯಗೊಂಡಿದ್ದರು. ಸೆಪ್ಟೆಂಬರ್ 29, 2008ರಂದು, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಮಾಲೆಗಾಂವ್ ಪಟ್ಟಣದ ಮಸೀದಿಯೊಂದರ ಬಳಿ ಸ್ಫೋಟ ಸಂಭವಿಸಿತ್ತು. ಮುಂಬೈನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಈ ಪಟ್ಟಣದಲ್ಲಿ, ಒಂದು ಮೋಟರ್‌ಸೈಕಲ್‌ಗೆ ಜೋಡಿಸಲಾದ ಸ್ಫೋಟಕ ಸಾಧನವು ಸ್ಫೋಟಗೊಂಡು ಆರು ಜನರು ಮೃತಪಟ್ಟು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರಂಜಾನ್ ಮಾಸದಲ್ಲಿ ಮತ್ತು ನವರಾತ್ರಿ ಹಬ್ಬದ ಮೊದಲು ಸ್ಫೋಟ ಸಂಭವಿಸಿದ ಪರಿಣಾಮ, ಕೋಮು ವಾತಾವರಣ ಹದಗೆಟ್ಟಿತ್ತು.

photo 6296418736386282377 y

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತು. 2008ರ ಅಕ್ಟೋಬರ್‌ನಲ್ಲಿ ATSನ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆಯ ನೇತೃತ್ವದಲ್ಲಿ 11 ಆರೋಪಿಗಳನ್ನು ಬಂಧಿಸಲಾಯಿತು. ಮುಂಬೈ ದಾಳಿಯಲ್ಲಿ ಹುತಾತ್ಮರಾದ ಐಪಿಎಸ್‌ ಅಧಿಕಾರಿ ಹೇಮಂತ್ ಕರ್ಕರೆ ಆಗ ಎಟಿಎಸ್‌ನ್ನು ಮುನ್ನೆಡೆಸುತ್ತಿದ್ದರು. ಮಾಲೆಗಾಂವ್‌ ಸ್ಫೋಟದಲ್ಲಿ ಬಳಸಲಾದ ಮೋಟಾರ್‌ ಸೈಕಲ್‌, ಬಿಜೆಪಿ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಅವರಿಗೆ ಸೇರಿದ್ದು ಅನ್ನೋ ಆಧಾರದ ಮೇಲೆ ಅವರನ್ನು ಬಂಧಿಸಲಾಯಿತು. “ಪ್ರಜ್ಞಾ ಸಿಂಗ್‌ ಮಾಲೆಗಾಂವ್‌ ಸ್ಫೋಟ ಯೋಜನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು ಮತ್ತು ಇತರ ಆರೋಪಿಗಳಿಗೆ ವಾಹನವನ್ನು ಒದಗಿಸಿದ್ದರು” ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು. ಏಳು ಆರೋಪಿಗಳಲ್ಲಿ ಒಬ್ಬರಾದ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರನ್ನು ಕೂಡ ಬಂಧಿಸಲಾಯಿತು. “ಲೆ.ಕ. ಪುರೋಹಿತ್ ಅಭಿನವ್ ಭಾರತ್ ಗುಂಪಿನೊಂದಿಗೆ ಸಂಬಂಧ ಹೊಂದಿದ್ದರಲ್ಲದೇ, ಸ್ಫೋಟಕ್ಕಾಗಿ ವ್ಯಕ್ತಿಗಳನ್ನು ನೇಮಿಸಿಕೊಂಡು, ಸ್ಫೋಟದಲ್ಲಿ ಬಳಸಲಾದ ಆರ್‌ಡಿಎಕ್ಸ್ ಖರೀದಿಸಿದ್ದರು” ಎಂದು ಎಟಿಎಸ್‌ ಆರೋಪಿಸಿತ್ತು. ಆದರೆ ಪ್ರಜ್ಞಾ ಸಿಂಗ್‌ ಮತ್ತು ಲೆ.ಕ. ಪುರೋಹಿತ್‌ ಇಬ್ಬರೂ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು.

ಎನ್‌ಐಎ ತನಿಖೆ ಮತ್ತು ರಾಜಕೀಯ ಹಸ್ತಕ್ಷೇಪದ ಆರೋಪಗಳು

ಜನವರಿ 2009ರಲ್ಲಿ ಎಟಿಎಸ್‌ನಿಂದ ಮೊದಲ ಬಾರಿಗೆ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಏಪ್ರಿಲ್ 2011ರಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗೆ ವರ್ಗಾಯಿಸಲಾಯಿತು. ಮೊದಲು ಸಲ್ಲಿಸಿದ್ದ ಸಾಕ್ಷ್ಯಾಧಾರವನ್ನು ಎನ್.ಐ.ಎ. ಸುಳ್ಳು ಎಂದಿತ್ತು. ಪ್ರಕರಣದ ಮರು ತನಿಖೆಯನ್ನು ನಡೆಸಿತು. ಸಾಕ್ಷೀದಾರರ ಹೇಳಿಕೆಗಳನ್ನು ‘ರೀರೆಕಾರ್ಡ್’ ಮಾಡಲಾಯಿತು. ಹೊಸ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಈಗ ಹೊರಬಿದ್ದಿರುವ ತೀರ್ಪು ಈ ಹೊಸ ಸಾಕ್ಷ್ಯಾಧಾರಗಳನ್ನು ಆಧರಿಸಿದೆ.

ಇನ್ನು 2015 ರಲ್ಲಿ ಪ್ರಕರಣದ ಆಗಿನ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯನ್ ಅವರು ಆರೋಪಿಗಳ ಬಗ್ಗೆ “ಮೃದುತ್ವ” ವಹಿಸುವಂತೆ NIA ಕೇಳಿಕೊಂಡಿತ್ತು ಅನ್ನೋ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದರು. ಕೇಂದ್ರದಲ್ಲಿ ಹೊಸ ಸರ್ಕಾರ ಅಂದರೆ ಬಿಜೆಪಿ ನೇತೃತ್ವದ ಎನ್.ಡಿ.ಎ. ಆರಿಸಿ ಬಂದ ನಂತರ ‘ಮೆದು ಧೋರಣೆ’ ತಳೆಯುವಂತೆ ಎನ್.ಐ.ಎ. ತಮ್ಮ ಮೇಲೆ ಒತ್ತಡ ಹೇರಿತ್ತು. ಎನ್.ಐ.ಎ.ಯ ಅಧಿಕಾರಿಯೊಬ್ಬರು ದೂರವಾಣಿ ಕರೆ ಮಾಡಿದ್ದರು. ಬಂದು ತಮ್ಮನ್ನು ಭೇಟಿ ಮಾಡುವಂತೆ ಸೂಚಿಸಿದ್ದರು ಎಂದು 2015ರ ಜೂನ್ ತಿಂಗಳಿನಲ್ಲಿ ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಗೆ ನೀಡಿದ್ದ ಸಂದರ್ಶನದಲ್ಲಿ ರೋಹಿಣಿ ಸಾಲ್ಯಾನ್ ತಿಳಿಸಿದ್ದರು. ಕರ್ನಾಟಕದ ವಕೀಲರು, ಈ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ, NIA ತನಿಖೆಯನ್ನು ಉದ್ದೇಶಪೂರ್ವಕವಾಗಿ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು. ದೊಡ್ಡ ರಾಜಕೀಯ ಶಕ್ತಿಗಳ ಹಸ್ತಕ್ಷೇಪದಿಂದಾಗಿ ಪ್ರಕರಣದ ತನಿಖೆಯ ದಿಕ್ಕು ಬದಲಾಯ್ತು, NIA ರಾಜಕೀಯ ಒತ್ತಡಗಳಿಗೆ ಮಣಿಯುತ್ತಿದೆ ಅಂತ ಆರೋಪಿಸಿದ್ದರು. ಈ ಕಾರಣದಿಂದಾಗಿ, ಕೆಲವು ವಕೀಲರು ತಮ್ಮ ಕರ್ತವ್ಯದಿಂದ ಹಿಂದೆ ಸರಿದರು, ಈ ಆರೋಪಗಳು NIAಯ ತನಿಖೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು.

ನ್ಯಾಯಾಲಯದ ಅಂತಿಮ ತೀರ್ಪು ಮತ್ತು ಪ್ರಜ್ಞಾ ಠಾಕೂರ್ ಖುಲಾಸೆ

2018 ರಲ್ಲಿ ಏಳು ಆರೋಪಿಗಳ ವಿರುದ್ಧ ಔಪಚಾರಿಕವಾಗಿ ಆರೋಪಗಳನ್ನು ಹೊರಿಸಿ, ಹೊಸದಾಗಿ ವಿಚಾರಣೆಗೆ ದಾರಿ ಮಾಡಿಕೊಡಲಾಯಿತು. ಈ ಏಳು ವ್ಯಕ್ತಿಗಳೆಂದರೆ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ, ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ. 2016ರಲ್ಲಿ ಎನ್​ಐಎ ಆರೋಪ ಪಟ್ಟಿಯನ್ನು ಸಲ್ಲಿಸಿ, ಸಾಕಷ್ಟು ಪುರಾವೆಗಳಿಲ್ಲ ಎಂದು ಉಲ್ಲೇಖಿಸಿತು. ಎಟಿಎಸ್‌ ತನಿಖೆಯಲ್ಲಿ ಗಂಭೀರ ಲೋಪದೋಷಗಳನ್ನು ಕಂಡುಹಿಡಿದ ಎನ್‌ಐಎ, “ತಪ್ಪೊಪ್ಪಿಗೆ ಹೇಳಿಕೆಗಳನ್ನು ಪಡೆಯಲು ಆರೋಪಿಗಳನ್ನು ಹಿಂಸಿಸಲಾಯಿತು” ಎಂದು ಕೂಡ ಆರೋಪಿಸಿತ್ತು.

2025 ರ ಏಪ್ರಿಲ್‌ನಲ್ಲಿ 16 ವರ್ಷಗಳಿಗೂ ಹೆಚ್ಚು ಕಾಲದ ನಂತರ, ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಯ ಅಂತಿಮ ವಾದಗಳು ಮುಕ್ತಾಯಗೊಂಡವು. ಪ್ರಾಸಿಕ್ಯೂಷನ್ 1,300 ಪುಟಗಳಿಗೂ ಹೆಚ್ಚು ವಿಸ್ತಾರವಾದ ವಿವರವಾದ ಲಿಖಿತ ವಾದಗಳನ್ನು ಸಲ್ಲಿಸಿತು. ಮಲೇಗಾಂವ್‌ನಲ್ಲಿ ಸ್ಫೋಟ ಸಂಭವಿಸಿದ ಉದ್ದೇಶವನ್ನು ವಿವರಿಸುತ್ತಾ, ಇದು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶವಾಗಿದ್ದು, ಇಲ್ಲಿ ಸ್ಫೋಟ ನಡೆಸಿ ಮುಸ್ಲಿಂ ಸಮುದಾಯದ ಒಂದು ವರ್ಗವನ್ನು ಭಯಭೀತಗೊಳಿಸುವುದು, ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವುದು ಸಂಚುಕೋರರ ಉದ್ದೇಶವಾಗಿತ್ತು ಎಂದು NIA ವಾದಿಸಿತ್ತು.

ಜುಲೈ 31ಕ್ಕೆ ಮುಂಬೈನ ವಿಶೇಷ ನ್ಯಾಯಾಲಯವು, ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಜಾಮೀನಿನ ಮೇಲೆ ಹೊರಗಿದ್ದ ಪ್ರಜ್ಞಾ ಠಾಕೂರ್ ಸೇರಿ ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿತು. ಕಾಕತಾಳೀಯ ಎಂಬಂತೆ ತೀರ್ಪು ಬರುವ ಒಂದು ದಿನದ ಹಿಂದೆ ಅಮಿತ್ ಶಾ, ರಾಜ್ಯಸಭೆಯಲ್ಲಿ “ಹಿಂದೂಗಳು ಎಂದಿಗೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ” ಅಂತ ಹೇಳಿದ್ದರು. ದೀರ್ಘಕಾಲದ ವಿಚಾರಣೆಯ ಬಳಿಕವೂ ಅಪರಾಧಿಗಳ ಪತ್ತೆಯಾಗಿಲ್ಲ. ಮಹಾರಾಷ್ಟ್ರದ ಅತ್ಯಂತ ಮಾರಕ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿರುವ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಯಾರನ್ನೂ ಹೊಣೆಗಾರರನ್ನಾಗಿ ಮಾಡಲಾಗಿಲ್ಲ. ಇದು ವ್ಯವಸ್ಥೆಯ ವೈಫಲ್ಯವೋ ಅಥವಾ ವ್ಯವಸ್ಥಿತ ಪಿತೂರಿಯೋ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ಮಾಲೆಗಾಂವ್ ಸ್ಫೋಟ ಪ್ರಕರಣದ ಈ ಸುದೀರ್ಘ ಕಾನೂನು ಹೋರಾಟದ ಅಂತ್ಯ ಹಲವು ಕಟು ಸತ್ಯಗಳನ್ನು ನಮ್ಮ ಮುಂದಿಟ್ಟಿದೆ. 19 ವರ್ಷಗಳ ತನಿಖೆ, ಲಕ್ಷಾಂತರ ಪುಟಗಳ ದಾಖಲೆಗಳು ಮತ್ತು ನೂರಾರು ಸಾಕ್ಷಿಗಳ ವಿಚಾರಣೆಯ ನಂತರವೂ, 43 ಅಮಾಯಕರ ಬಲಿ ಪಡೆದ ಅಸಲಿ ಹಂತಕರು ಯಾರೆಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿರುವುದು ನಮ್ಮ ತನಿಖಾ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ತನಿಖಾ ಸಂಸ್ಥೆಗಳ ನಡುವಿನ ಭಿನ್ನಾಭಿಪ್ರಾಯ, ರಾಜಕೀಯ ಹಸ್ತಕ್ಷೇಪದ ಆರೋಪಗಳು ಮತ್ತು ಸಾಕ್ಷ್ಯಾಧಾರಗಳ ಕೊರತೆಯ ನಡುವೆ ನ್ಯಾಯ ಎಂಬುದು ಕೇವಲ ‘ದೋಷಮುಕ್ತಿ’ಯ ತಾಂತ್ರಿಕತೆಗೆ ಸೀಮಿತವಾಯಿತೇ ಹೊರತು, ಸಂತ್ರಸ್ತ ಕುಟುಂಬಗಳ ಕಣ್ಣೀರನ್ನ ಒರೆಸುವಲ್ಲಿ ವಿಫಲವಾಗಿದೆ. ಅಪರಾಧಿಗಳ ಪತ್ತೆಯಾಗದೆ ಈ ಪ್ರಕರಣ ಮುಕ್ತಾಯಗೊಂಡಿರುವುದು ಕೇವಲ ಕಾನೂನಿನ ಸೋಲಲ್ಲ, ಬದಲಾಗಿ ನ್ಯಾಯಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ನಾಗರಿಕನ ನಂಬಿಕೆಗೆ ಬಿದ್ದ ದೊಡ್ಡ ಪೆಟ್ಟು. ಅಂತಿಮವಾಗಿ, ಈ ಭೀಕರ ಸ್ಫೋಟದ ಕಲೆಗಳು ಮಾಲೆಗಾಂವ್ ಇತಿಹಾಸದಲ್ಲಿ ಮಾಸದ ಗಾಯವಾಗಿ ಮತ್ತು ಉತ್ತರವಿಲ್ಲದ ಪ್ರಶ್ನೆಯಾಗಿ ಎಂದೆಂದಿಗೂ ಉಳಿಯಲಿವೆ. 

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...

ಬೀದರ್‌ | 125 ಎಕರೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ : ಸಚಿವ ಈಶ್ವರ ಖಂಡ್ರೆ

ಬೀದರ್ ನಗರದ ಸಮೀಪ 125 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ...