ಅಮೆರಿಕದ ಕೆಲವು ಸರಕುಗಳ ಮೇಲೆ ಭಾರತವು 100% ತೆರಿಗೆ ಮತ್ತು ಹಲವು ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲು ನಿರ್ಧರಿಸಿದೆ. ಈ ಬೆನ್ನಲ್ಲೇ ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನೀವು ನಮಗೆ ಟ್ಯಾಕ್ಸ್ ಹಾಕಿದರೆ, ನಾವು ನಿಮಗೂ ತೆರಿಗೆ ಹಾಕುತ್ತೇವೆ’ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಇತರ ರಾಷ್ಟ್ರಗಳು ಅಮೆರಿಕ ಉತ್ಪನ್ನಗಳಿಗೆ ತೆರಿಗೆ ವಿಧಿಸಿದರೆ, ಅಮೆರಿಕ ಕೂಡ ಅದೇ ರೀತಿ ಪ್ರತಿಕ್ರಿಯಿಸುತ್ತದೆ” ಎಂದು ಹೇಳಿದ್ದಾರೆ.
”ಅವರು (ಭಾರತ ಮತ್ತು ಬ್ರೆಜಿಲ್) ನಮಗೆ ತೆರಿಗೆ ವಿಧಿಸಿದರೆ, ನಾವು ಅವರಿಗೆ ಅದೇ ಮೊತ್ತದ ತೆರಿಗೆ ವಿಧಿಸುತ್ತೇವೆ. ಬಹುತೇಕ ಎಲ್ಲ ಸಂದರ್ಭಗಳಲ್ಲಿ, ಅವರು ನಮಗೆ ತೆರಿಗೆ ವಿಧಿಸುತ್ತಿದ್ದಾರೆ. ಆದರೆ, ನಾವು ಅವರಿಗೆ ತೆರಿಗೆ ವಿಧಿಸುತ್ತಿಲ್ಲ. ಇನ್ನು ಮುಂದೆ ಹಾಗೆ ಇರುವುದಿಲ್ಲ” ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
“ಭಾರತವು ಅಮೆರಿಕ ಸರಕುಗಳ ಮೇಲೆ 100% ಸುಂಕವನ್ನು ವಿಧಿಸಿದರೆ, ಪ್ರತಿಯಾಗಿ ಅಮೆರಿಕ ಕೂಡ ಅದೇ ರೀತಿ ಮಾಡುತ್ತದೆ. ಪರಸ್ಪರತೆ ಎಲ್ಲ ಕಡೆಯಿಂದಲೂ ಒತ್ತು ಇರಬೇಕು. ಭಾರತವು ನಮಗೆ 100% ಶುಲ್ಕ ವಿಧಿಸಿದರೆ, ನಾವು ಅವರಿಗೆ ಏನನ್ನೂ ವಿಧಿಸದೇ ಇರಲು ಸಾಧ್ಯವೇ?” ಎಂದಿದ್ದಾರೆ.
“ಭಾರತವು ನಮಗೆ 100 ಮತ್ತು 200 ಶುಲ್ಕ ವಿಧಿಸುತ್ತದೆ. ಬ್ರೆಜಿಲ್ ಕೂಡ ಸಾಕಷ್ಟು ತೆರಿಗೆ ವಿಧಿಸುತ್ತದೆ. ಅವರು ನಮಗೆ ತೆರಿಗೆ ವಿಧಿಸಲು ಬಯಸಿದರೆ, ನಾವು ಅವರಿಗೆ ಅದೇ ರೀತಿಯಲ್ಲಿ ವಿಧಿಸಲಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.
ಆದಾಗ್ಯೂ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವ ಬೈಡೆನ್ ಅವರು ಭಾರತ-ಅಮೆರಿಕ ಸಂಬಂಧವನ್ನು ಶ್ಲಾಘಿಸಿದ್ದಾರೆ. “ನಾವು ಅಮೆರಿಕ-ಭಾರತ ಸಂಬಂಧದ ಬಗ್ಗೆ ಬಹಳ ಮಹತ್ವಾಕಾಂಕ್ಷೆಯನ್ನು ಮುಂದುವರಿಸುತ್ತೇವೆ. ಇತ್ತೀಚೆಗೆ ನಡೆದ ಕ್ವಾಡ್ ಶೃಂಗಸಭೆಯ ನಂತರ ನಾವು ಹಲವು ಉನ್ನತ ಮಟ್ಟದ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.