ಅಘ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಸರ್ಕಾರವನ್ನು ರಚಿಸಿದ ಬಳಿಕ ಉಳಿದ ದೇಶಗಳೊಡನೆ ರಾಜತಾಂತ್ರಿಕ ಸಂಬಂಧವನ್ನು ಬೆಳೆಸಿಕೊಳ್ಳಲು, ಪ್ರಸ್ತುತ ಸ್ಥಿತಿಯನ್ನು ಸಾಮಾನ್ಯಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಇದೇ ಮೊದಲ ಬಾರಿಗೆ ತಾಲಿಬಾನ್ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನಕ್ಕೆ ಭಾಗವಹಿಸಿದೆ. ಅದರಲ್ಲೂ ಭಾರತದೊಂದಿಗೆ ಅಫ್ಘಾನಿಸ್ತಾನದ ರಾಜತಾಂತ್ರಿಕ ನಂಟನ್ನು ಈ ಹಿಂದಿನ ಸ್ಥಿತಿಗೆ ಕೊಂಡೊಯ್ಯಲು ಪ್ರಯಾಸ ಮಾಡುತ್ತಿದೆ. ಭಾರತವೂ ಈ ಪ್ರಯತ್ನಕ್ಕೆ ಜೊತೆಯಾಗಿದೆ.
ಇತ್ತೀಚೆಗೆ ತಾಲಿಬಾನ್ ಸರ್ಕಾರವು ಭಾರತಕ್ಕೆ ಹಂಗಾಮಿ ರಾಯಭಾರಿಯನ್ನು ನೇಮಿಸಿದೆ. ಇಕ್ರಮುದ್ದೀನ್ ಕಾಮಿಲ್ ಅವರನ್ನು ರಾಯಭಾರಿಯಾಗಿ ನೇಮಿಸಿರುವುದಾಗಿ ಅಫ್ಘಾನ್ ವಿದೇಶಾಂಗ ಸಚಿವಾಲಯವು ಪ್ರಕಟಿಸಿದೆ. ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಾಲಿಬಾನ್ ಸರ್ಕಾರ ಹೇಳಿಕೊಂಡಿದೆ. ಆದರೆ ಈ ರಾಯಭಾರಿಯನ್ನು ಭಾರತ ಸರ್ಕಾರ ಇನ್ನೂ ಅಂಗೀಕರಿಸಿಲ್ಲ.
ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಮುಂಬೈನಲ್ಲಿನ ಅಫ್ಘಾನ್ನ ಕಾನ್ಸುಲ್ ಜನರಲ್ ಜಾಕಿಯಾ ವರ್ದಕ್ ರಾಜೀನಾಮೆ ನೀಡಿದ ಆರು ತಿಂಗಳ ನಂತರ ಇದೀಗ ಕಾಬೂಲ್ ಈ ಖಾಲಿ ಹುದ್ದೆಯನ್ನು ಭರ್ತಿ ಮಾಡಿದೆ. 2021ರಲ್ಲಿ ಅಫ್ಘಾನಿಸ್ತಾನದಲ್ಲಿ ತನ್ನ ಸರ್ಕಾರವನ್ನು ರಚಿಸಿದ ಬಳಿಕ ಇದೇ ಮೊದಲ ಬಾರಿಗೆ ತಾಲಿಬಾನ್ ಭಾರತದಲ್ಲಿ ರಾಜತಾಂತ್ರಿಕ ನೇಮಕಾತಿ ಮಾಡಿದೆ.
ಇದನ್ನು ಓದಿದ್ದೀರಾ?: ಅಫ್ಘಾನಿಸ್ತಾನ | ಗುಂಡಿನ ದಾಳಿಗೆ 15 ನಾಗರಿಕರು ಬಲಿ, ಹೊಣೆ ಹೊತ್ತ ಐಸಿಸ್
ಸುಮಾರು 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಯುದ್ಧ ನಡೆಸಿದ ಅಮೆರಿಕ 2021ರಲ್ಲಿ ತರಾತುರಿಯಲ್ಲಿ ಅಫ್ಘಾನ್ನಿಂದ ಪಲಾಯನ ಮಾಡಿತು. ಅದಾದ ಬಳಿಕ ತಾಲಿಬಾನ್ ಅಫ್ಘಾನ್ಅನ್ನು ಆಕ್ರಮಿಸಿಕೊಂಡು ಸರ್ಕಾರ ರಚಿಸಿದೆ. ಆದರೆ, ತಾಲಿಬಾನ್ ಸರ್ಕಾರವನ್ನು ಅಧಿಕೃತ ಸರ್ಕಾರ ಎಂದು ಬಹುತೇಕ ರಾಷ್ಟ್ರಗಳು ಪರಿಗಣಿಸುತ್ತಿಲ್ಲ. ವಿಶ್ವಸಂಸ್ಥೆಯೂ ಕೂಡಾ ತನ್ನ ಸಾಮಾನ್ಯ ಸಭೆಯಲ್ಲಿ ಅಫ್ಘಾನಿಸ್ತಾನದ ಸ್ಥಾನವನ್ನು ತಾಲಿಬಾನ್ ಸರ್ಕಾರಕ್ಕೆ ನೀಡಿಲ್ಲ. ಅಫ್ಘಾನ್ನಲ್ಲಿ ಹೆಣ್ಣು ಮಕ್ಕಳಿಗೆ ಇರುವ ಕಠಿಣ ನಿರ್ಬಂಧ, ಧಾರ್ಮಿಕ ಕಾನೂನುಗಳೇ ಇದಕ್ಕೆ ಮುಖ್ಯ ಕಾರಣ.
ಇವೆಲ್ಲವುದರ ನಡುವೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ತನ್ನದೇ ಆದ ಒಂದು ಸರ್ಕಾರ ವ್ಯವಸ್ಥೆಯನ್ನು ಸೃಷ್ಟಿಸುವ ಪ್ರಯತ್ನದಲ್ಲಿದೆ. ಅದಕ್ಕಾಗಿ ಬೇರೆ ಬೇರೆ ದೇಶಗಳ ಸಹಾಯ ಕೇಳುತ್ತಿದೆ, ರಾಜತಾಂತ್ರಿಕ ಹಸ್ತ ಚಾಚುತ್ತಿದೆ. ಕೆಲವು ದೇಶಗಳಲ್ಲಿ ಈ ಪ್ರಯತ್ನವು ಫಲಿಸಿದೆ. ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಯುಎಇ ತಾಲಿಬಾನ್ ಸರ್ಕಾರವನ್ನು ಅಫ್ಘಾನಿಸ್ತಾನ ಸರ್ಕಾರವಾಗಿ ಪರಿಗಣಿಸಿವೆ.
ಅಫ್ಘಾನ್ ಮತ್ತು ಭಾರತದ ನಂಟು
ಅಫ್ಘಾನಿಸ್ತಾನ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸ್ನೇಹದ ನಂಟು ನಿನ್ನೆ ಮೊನ್ನೆಯದಲ್ಲ. ಹಲವು ದಶಕಗಳಿಂದ ಉಭಯ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯವಿದೆ. ಅಫ್ಘಾನ್ ಮೇಲೆ ಭಾರತ ಸರ್ಕಾರವು ಸಾಕಷ್ಟು ಹೂಡಿಕೆ ಮಾಡಿದೆ. ಕಾಬೂಲ್ನಲ್ಲಿ ಅಫ್ಘಾನ್ ಸಂಸತ್ತನ್ನು ನಿರ್ಮಿಸಿರುವುದು ಕೂಡಾ ಭಾರತ ಸರ್ಕಾರ. 2015ರಲ್ಲಿ ತೆರೆಯಲಾದ ಸಂಸತ್ತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ.
ಇದನ್ನು ಓದಿದ್ದೀರಾ? ಅಫ್ಘಾನಿಸ್ತಾನ | ತಾಲಿಬಾನ್ ಆಯೋಜಿಸಿದ್ದ ಸಮಾವೇಶದಲ್ಲಿ ಭಾರತ ಸಹಿತ 10 ದೇಶಗಳು ಭಾಗಿ
2023ರ ಬಜೆಟ್ನಲ್ಲಿ ಭಾರತ ಸರ್ಕಾರವು ಅಫ್ಘಾನಿಸ್ತಾನಕ್ಕೆ 200 ಕೋಟಿ ರೂಪಾಯಿ ಸಹಾಯವನ್ನು ಘೋಷಿಸಿದೆ. ತಾಲಿಬಾನ್ ಇದನ್ನು ಸ್ವಾಗತಿಸಿದೆ.
ಅಫ್ಘಾನ್ನ ಶಾಂತಿ ಮಾತುಕತೆಯಲ್ಲಿ ಭಾರತದ ಉಪಸ್ಥಿತಿಯು ಅಫ್ಘಾನಿಸ್ತಾನದಲ್ಲಿ ಬದಲಾಗುತ್ತಿರುವ ಅಧಿಕಾರ ರಚನೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಸ್ಥಾನವನ್ನು ಭಾರತ ಬದಲಾಯಿಸಿದೆ ಎಂಬುದನ್ನು ಸೂಚಿಸುತ್ತದೆ. ಅಮೆರಿಕ ಅಫ್ಘಾನ್ನಿಂದ ಪಲಾಯನವಾದ ಬಳಿಕ ಪಾಕಿಸ್ತಾನ ನೇರವಾಗಿ ಅಥವಾ ಪರೋಕ್ಷವಾಗಿ ಅಫ್ಘಾನ್ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇವೆಲ್ಲವುದರ ನಡುವೆ ಅಫ್ಘಾನಿಸ್ತಾನವನ್ನು ಭಾರತದ ಹಿಡಿತಕ್ಕೆ ತರುವುದೇ ರಾಜತಾಂತ್ರಿಕ ನಡೆಯಂತಿದೆ. ಆದರೆ ಭಾರತ ಇನ್ನೂ ತಾಲಿಬಾನ್ ಸರ್ಕಾರವನ್ನು ಅಫ್ಘಾನ್ನ ಅಧಿಕೃತ ಸರ್ಕಾರವೆಂದು ಪರಿಗಣಿಸಿಲ್ಲ.
ಭಾರತ ಇಂದಿಗೂ ಕೂಡಾ ಯಾವುದೇ ಶಾಂತಿ ಪ್ರಕ್ರಿಯೆಯು ಅಫ್ಘಾನಿಸ್ತಾನದ ಅಧಿಕೃತ ಸರ್ಕಾರದ ನಿಯಂತ್ರಿತವಾಗಿರಬೇಕು ಎಂದು ನಂಬುತ್ತದೆ. ಭಾರತ ಈ ಹಿಂದೆ ಮತ್ತು ಇಂದಿಗೂ ಕೂಡಾ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವಕ್ಕೆ ಗೌರವ ನೀಡಬೇಕು ಎಂದು ಸ್ಪಷ್ಟವಾಗಿ ಹೇಳುತ್ತದೆ.
ಇದನ್ನು ಓದಿದ್ದೀರಾ? ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜವೆಂದ ಸಿಟಿ ರವಿ; ಆರ್ಎಸ್ಎಸ್ನ ದೇಶ ವಿರೋಧಿ ನಿಲುವಿನ ಪ್ರತಿಬಿಂಬ
ಅಫ್ಘಾನ್ ವಿಚಾರದಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳು ತಳೆದ ನಿಲುವನ್ನೇ ಇಂದಿನ ಬಿಜೆಪಿ ಸರ್ಕಾರ ಹೊಂದಿದೆ. ಭಾರತದಲ್ಲಿ ಮುಸ್ಲಿಂ ವಿರೋಧಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವು ಅಫ್ಘಾನಿಸ್ತಾನ ವಿಚಾರಕ್ಕೆ ಬಂದಾಗ ತದ್ವಿರುದ್ಧವಾಗುತ್ತದೆ. ಇಲ್ಲಿ ರಾಜತಾಂತ್ರಿಕ, ರಾಜಕೀಯ ದೃಷ್ಟಿಕೋನಗಳಿವೆ. ಆ ಪೈಕಿ ಅಫ್ಘಾನಿಸ್ತಾನ ಸಂಪೂರ್ಣವಾಗಿ ಪಾಕಿಸ್ತಾನದ ಹಿಡಿತಕ್ಕೆ ಸಿಲುಕದಂತೆ ಮಾಡುವುದು ಒಂದು ಅಜೆಂಡವಾಗಿದೆ.
ಅಫ್ಘಾನಿಸ್ತಾನವು ಪಾಕಿಸ್ತಾನಕ್ಕೆ ನೆರೆಯ ದೇಶ. ಆದ್ದರಿಂದ ಅಫ್ಘಾನ್ನಲ್ಲಿ ತನ್ನ ಹಿಡಿತ ಸಾಧಿಸುವ ಎಲ್ಲಾ ಪ್ರಯತ್ನವನ್ನು ಪಾಕಿಸ್ತಾನ ಮಾಡುತ್ತಿದೆ. ಇದಕ್ಕಾಗಿ ಭಾರತದಂತೆ ಪಾಕಿಸ್ತಾನವೂ ಕೂಡಾ ಅಫ್ಘಾನ್ನಲ್ಲಿ ಹೂಡಿಕೆ ಮಾಡಿದೆ. ಪ್ರಮುಖವಾಗಿ ಶಕ್ತಿ ಮತ್ತು ಜವಳಿ ಕ್ಷೇತ್ರದಲ್ಲಿ ಪಾಕ್ ರೂಪಾಯಿ ವ್ಯಯಿಸಿದೆ. ಪಾಕ್ನ ಐಎಸ್ಐ ಸುಲಿಗೆ ಅಫ್ಘಾನ್ ಸಿಲುಕದಂತಹ ನಿರ್ಧಾರಗಳನ್ನು ಕೈಗೊಳ್ಳುವುದು ಭಾರತಕ್ಕೆ ಈಗ ಅನಿವಾರ್ಯ ಮತ್ತು ಅತ್ಯಗತ್ಯ. ಮಾನವೀಯ ನೆಲೆಗಟ್ಟಿನಲ್ಲಿ ಯುದ್ಧಪೀಡಿತ ದೇಶಕ್ಕೆ ಸಹಾಯ ಮಾಡುವುದು ಶ್ಲಾಘನೀಯ. ಇದು ರಾಜತಾಂತ್ರಿಕ ದೃಷ್ಟಿಕೋನದಿಂದ ಭಾರತಕ್ಕೆ ಲಾಭವೂ ಕೂಡಾ ಹೌದು. ಅದರೊಂದಿಗೆ ಮಹಿಳೆಯರ ಶಿಕ್ಷಣ, ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅಫ್ಘಾನ್ನ ನಿಲುವನ್ನು ಖಂಡಿಸುವುದು ಕೂಡಾ ಅಗತ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.