ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಮಾಡುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಿದ ಬೆನ್ನಲ್ಲೇ ಅಮೆರಿಕಕ್ಕೆ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಭಾರತ ನಿರ್ಧಿರಿಸಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ಅಮೆರಿಕಕ್ಕೆ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಅಂಚೆ ಇಲಾಖೆ ಪ್ರಕಟಿಸಿದೆ.
“ಆಗಸ್ಟ್ 25ರಿಂದ ಜಾರಿಗೆ ಬರುವಂತೆ ಅಮೆರಿಕಕ್ಕೆ ಕಳುಹಿಸಲಾಗುವ ಎಲ್ಲಾ ರೀತಿಯ ಅಂಚೆ ವಸ್ತುಗಳ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಅಂಚೆ ಇಲಾಖೆ ನಿರ್ಧರಿಸಿದೆ. ಪತ್ರಗಳು/ದಾಖಲೆಗಳು ಮತ್ತು 100 ಡಾಲರ್ ಮೌಲ್ಯದ ಉಡುಗೊರೆ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಸ್ಥಗಿತಗೊಳಿಸಲಾಗುತ್ತದೆ” ಎಂದು ಸರ್ಕಾರಿ ಅಧಿಸೂಚನೆ ತಿಳಿಸಿದೆ.
ಇದನ್ನು ಓದಿದ್ದೀರಾ? ಭಾರತದ ಮೇಲೆ ಅಮೆರಿಕ ಸುಂಕಾಸ್ತ್ರ; ಆಪ್ತಮಿತ್ರನಿಗೆ 26% ಸುಂಕ ವಿಧಿಸಿದ ಟ್ರಂಪ್
“800 ಡಾಲರ್‌ವರೆಗಿನ ಸರಕುಗಳಿಗೆ ಸುಂಕ-ಮುಕ್ತ ಡಿ ಮಿನಿಮಿಸ್ ವಿನಾಯಿತಿಯನ್ನು ಆಗಸ್ಟ್ 29ರಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲಾಗುವುದು” ಎಂಬ ಅಮೆರಿಕದ ಕಾರ್ಯನಿರ್ವಾಹಕ ಆದೇಶದ ಬೆನ್ನಲ್ಲೇ ಭಾರತೀಯ ಅಂಚೆ ಇಲಾಖೆ ಅಮೆರಿಕಕ್ಕೆ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಆದೇಶ ಹೊರಡಿಸಿದೆ.
“ಅಮೆರಿಕಕ್ಕೆ ಕಳುಹಿಸಲಾಗುವ ಎಲ್ಲಾ ಅಂತಾರಾಷ್ಟ್ರೀಯ ಅಂಚೆ ವಸ್ತುಗಳು, ಅವುಗಳ ಮೌಲ್ಯವನ್ನು ಲೆಕ್ಕಿಸದೆ, ದೇಶ-ನಿರ್ದಿಷ್ಟ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಶಕ್ತಿ ಕಾಯ್ದೆ (IEEPA) ಸುಂಕ ಚೌಕಟ್ಟಿನ ಪ್ರಕಾರ ಕಸ್ಟಮ್ಸ್ ಸುಂಕಗಳಿಗೆ ಒಳಪಟ್ಟಿರುತ್ತವೆ. ಆದಾಗ್ಯೂ, $100 ಮೌಲ್ಯದವರೆಗಿನ ಉಡುಗೊರೆ ವಸ್ತುಗಳು ಸುಂಕದಿಂದ ವಿನಾಯಿತಿ ಪಡೆಯುತ್ತವೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
