- ಕೆನಡಾ ಮರ್ಕಮ್ ಮಸೀದಿಯಲ್ಲಿ ಘಟನೆ
- ಬಂಧನದ ಬಳಿಕ ಆರೋಪಿಗೆ ಜಾಮೀನು
ಕಳೆದ ವಾರದ ಆರಂಭದಲ್ಲಿ ಕೆನಡಾ ಮರ್ಕಮ್ ಮಸೀದಿಯಲ್ಲಿ ಧಾರ್ಮಿಕ ನಿಂದನೆ ಹಾಗೂ ದ್ವೇಷಪ್ರೇರಿತ ದಾಳಿ ನಡೆಸಿದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಪವಿತ್ರ ರಂಜಾನ್ ಮಾಸದ ಆಚರಣೆ ವೇಳೆ ಮುಸ್ಲಿಮರು ಮಸೀದಿಯಲ್ಲಿ ಜಮಾಯಿಸಿದ್ದಾಗ ಈ ಘಟನೆ ನಡೆದಿದೆ. ಹಲವು ಅಧಿಕಾರಿಗಳು ಘಟನೆಯನ್ನು ಖಂಡಿಸಿದ್ದಾರೆ. ಇದು ಇಸ್ಲಾಮೋಫೋಬಿಯಾ ಹಾಗೂ ಉದ್ದೇಶಪೂರಿತ ದ್ವೇಷಪ್ರೇರಿತ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂಟಾರಿಯೊದ ಮಾರ್ಕಮ್ ನಗರದ ಇಸ್ಲಾಮಿಕ್ ಸೊಸೈಟಿ ಆಫ್ ಮಾರ್ಕಮ್ ಮಸೀದಿಯ ನಿಲುಗಡೆ ಸ್ಥಳದಲ್ಲಿ ಈ ಘಟನೆ ನಡೆದಿದೆ. ಭಾರತೀಯ ಮೂಲದ ಶರಣ್ ಕರುಣಾಕರನ್ (28) ಬಂಧಿತ ಆರೋಪಿ.
ಏಪ್ರಿಲ್ 7ರಂದು ಈತನನ್ನು ಟೊರೊಂಟೊದಲ್ಲಿ ಬಂಧಿಸಲಾಗಿತ್ತು. ಪ್ರಸ್ತುತ ಈತ ಜಾಮೀನು ಪಡೆದಿದ್ದಾನೆ.
ಸ್ಥಳೀಯ ಕಾಲಮಾನ ಬೆಳಿಗ್ಗೆ 6.55ಕ್ಕೆ ಘಟನೆ ಕುರಿತು ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ”ಕೆನಡಾ ಮಾರ್ಕಮ್ ನಗರದ ಮಸೀದಿಯಲ್ಲಿ ನಡೆದ ದ್ವೇಷಪ್ರೇರಿತ ದಾಳಿ ಹಾಗೂ ಧರ್ಮ ನಿಂದನೆ ಘಟನೆಯ ನಂತರ ಆರೋಪಿ ವಿರುದ್ಧ ಹಲವಾರು ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ಯಾರ್ಕ್ ಪ್ರಾದೇಶಿಕ ಪೊಲೀಸರು ಹೇಳಿದ್ದಾರೆ.
“ಶಂಕಿತ ವ್ಯಕ್ತಿಯು ಮಸೀದಿಯಲ್ಲಿದ್ದ ಭಕ್ತರೊಬ್ಬರ ಬಳಿ ನೇರವಾಗಿ ತೆರಳಿ ಅವರಿಗೆ ಬೆದರಿಕೆ ಹಾಕಿ, ಧಾರ್ಮಿಕ ನಿಂದನೆ ಮಾಡಿದ್ದಾನೆ ಎಂದು ಸಾಕ್ಷ್ಯಗಳು ಹೇಳಿವೆ” ಎಂದು ಪೊಲೀಸರು ಮಾಹಿತಿ ನೀಡಿದರು.
ಕೆನಡಾ ಮುಸ್ಲಿಮರ ರಾಷ್ಟ್ರೀಯ ಮಂಡಳಿ (ಎನ್‌ಸಿಸಿಎಂ) ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಇದನ್ನು ‘ಅತ್ಯಂತ ವಿಷಾದನೀಯ’ ಎಂದು ಬಣ್ಣಿಸಿದೆ.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಭಾರೀ ಮಳೆ, ಬಿರುಗಾಳಿಗೆ ಧರೆಗುರುಳಿದ ಶತಮಾನದ ಹಳೆಯ ಮರ; 7 ಮಂದಿ ಸಾವು
“ಶಂಕಿತ ಆರೋಪಿಯು ಮಸೀದಿ ಪ್ರವೇಶಿಸಿ ಪವಿತ್ರ ಗ್ರಂಥ ಕುರಾನ್‌ನ ಒಂದು ಪ್ರತಿ ಹರಿದು ಭಕ್ತರ ಮೇಲೆ ದಾಂಧಲೆ ನಡೆಸಿದ. ಇದು ಇಸ್ಲಾಮೋಫೋಬಿಯಾದ ಸಂಕೇತ” ಎಂದು ಎನ್‌ಸಿಸಿಎಂ ಟ್ವೀಟ್‌ನಲ್ಲಿ ಕಿಡಿಕಾರಿದೆ.
ಈ ರೀತಿಯ ದ್ವೇಷಪೂರಿತ ದಾಳಿ ಎದುರಿಸಿ ಹಿಂದೆ ಲಂಡನ್ ಮೂಲದ ಕುಟುಂಬವೊಂದು ಬಲಿಯಾಗಿದೆ ಎಂದು ಎನ್‌ಸಿಸಿಎಂ ಹೇಳಿದೆ.