ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಾಗದ ಗಳಿಗೆಗೊಂದು ಹೇಳಿಕೆ ನೀಡುತ್ತಿರುವ ಟ್ರಂಪ್, ಅಮೆರಿಕಕ್ಕೆ ದೊಡ್ಡ ಅಪಮಾನ. ಟ್ರಂಪ್ ನಡೆಯಿಂದಾಗಿ ಅಮೆರಿಕಕ್ಕೆ ಈ ಹಿಂದೆ ವಿವಿಧ ದೇಶಗಳು ನೀಡುತ್ತಿದ್ದ ಗೌರವ ತಗ್ಗಿದೆ, ಇನ್ನೂ ಕುಗ್ಗಲಿದೆ...
ಇರಾನ್-ಇಸ್ರೇಲ್ ಯುದ್ಧ ತೀಕ್ಷ್ಣ ಹಂತಕ್ಕೆ ತಲುಪುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಕ್ಕಲುತನವು ಇದೀಗ ಜಾಗತಿಕ ಆರ್ಥಿಕ ಮಾರುಕಟ್ಟೆಯ ಕುಸಿತಕ್ಕೆ ನಾಂದಿ ಹಾಡುವ ಹಂತಕ್ಕೆ ಬಂದು ನಿಂತಿದೆ. ಇಸ್ರೇಲ್ ಎಂಬ ತನ್ನ ಬಾಲಂಗೋಚಿಯನ್ನು ತಾಳಕ್ಕೆ ತಕ್ಕಂತೆ ಕುಣಿಸಿ ಅಮೆರಿಕ ಆಟ ನೋಡುತ್ತಿದೆ. ಆದರೆ ಇದರಿಂದ ಜಾಗತಿಕವಾಗಿ ಆಗಿರುವ ಮತ್ತು ಆಗಬಹುದಾದ ಪರಿಣಾಮದ ಹೊರೆ ವಿಶ್ವದ ದೊಡ್ಡಣ್ಣ ಹೊರದು. ಕಾಲು ಕೆರೆದು ಜಗಳಕ್ಕೆ ಆಹ್ವಾನಿಸಿ ಕೊನೆಗೆ ಪರಿಣಾಮ ಸಹಿಸಲಾಗದೆ ಪ್ರಬಲರೆನಿಸಿಕೊಂಡಿರುವವರ(ಅಮೆರಿಕ) ನೆರಳಲ್ಲಿ ಉಳಿಯುವ ಯತ್ನವನ್ನು ಇಸ್ರೇಲ್ ಮಾಡಿದೆ. ಇಸ್ರೇಲ್-ಇರಾನ್ ಸಂಘರ್ಷದ ನಡುವೆ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದೆ, ಇದರಲ್ಲಿ ಇಸ್ರೇಲ್ ಭಾಗಿತ್ವವೂ ಇದೆ.
ಇರಾನ್ ಎನ್ಪಿಟಿ ಅಂದರೆ ಪರಮಾಣು ಪ್ರಸರಣ ನಿಷೇಧ ಒಪ್ಪಂದ(Nuclear Non-Proliferation Treaty) ಮಾಡಿಕೊಂಡಿರುವ ದೇಶ. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶಗಳು ಅವುಗಳನ್ನು ಹರಡುವುದನ್ನು ಮತ್ತು ಪರಮಾಣು ಶಸ್ತ್ರಾಸ್ತ್ರಗಳಿಲ್ಲದ ದೇಶಗಳು ಪರಮಾಣು ಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗಾಗಿ ಬಳಸಲು ಅನುವು ಮಾಡಿಕೊಡುವ ಒಪ್ಪಂದ ಇದಾಗಿದೆ. ಹಾಗೆಯೇ ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ(ಐಎಇಎ) ನಿಗಾದಲ್ಲಿಯೂ ಇರಾನ್ ಇದೆ. ಇದ್ಯಾವುದರ ನಿಗಾದಲ್ಲಿರದ ಇಸ್ರೇಲ್, ಇರಾನ್ ಅಣ್ವಸ್ತ್ರ ಉತ್ಪಾದಿಸುತ್ತಿದೆ ಎಂಬ ಆರೋಪ ಹೊರಿಸಿ ದಾಳಿ ನಡೆಸಿದೆ.
ಇದನ್ನು ಓದಿದ್ದೀರಾ? ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್ ಆಸ್ಪತ್ರೆ ಮೇಲೆ ಇರಾನ್ ದಾಳಿ: ಪ್ರತಿದಾಳಿಗೆ ಮುಂದಾದ ಇಸ್ರೇಲ್
ಒಪ್ಪಂದವಿದ್ದರೂ ನಮ್ಮ ಮೇಲೆ ದಾಳಿ ನಡೆಯುವುದಾದರೆ ಈ ಒಪ್ಪಂದವಾದರೂ ಏಕೆ? ಎಂಬ ಮನಸ್ಥಿತಿಗೆ ಸದ್ಯ ಇರಾನ್ ಬಂದಿದೆ. ಎನ್ಪಿಟಿ, ಐಎಇಎ ಒಪ್ಪಂದಗಳೆಲ್ಲವೂ ಮುರಿಯುವ ಸಾಧ್ಯತೆ ಹೆಚ್ಚಾಗಿದೆ. ಅಷ್ಟಕ್ಕೂ ಅಮೆರಿಕ ಎಂಬ ದೊಡ್ಡಣ್ಣನ ದರ್ಪದಿಂದಾಗಿ ಸದ್ಯ ವಿಶ್ವಸಂಸ್ಥೆಯ ಮಾತಿಗೂ, ನಿಯಮಕ್ಕೂ ಬೆಲೆ ಇಲ್ಲದಂತಾಗಿದೆ. ಶಾಂತಿ ಒಪ್ಪಂದ ನಿಯಮಗಳೆಲ್ಲವೂ ಮೀರಿ ದಾಳಿ, ಪ್ರತಿದಾಳಿ ನಡೆಯುತ್ತಿದೆ.
ಇರಾನ್ ಯುರೇನಿಯಂ ಅನ್ನು ಸಂಸ್ಕರಿಸಿ ಕೆಲವೇ ದಿನಗಳಲ್ಲಿ ಅಣ್ವಸ್ತ್ರ ಸಿದ್ದಪಡಿಸಲಿದೆ ಎಂಬುದು ಇಸ್ರೇಲ್ ಆರೋಪ. ಈ ಆರೋಪ ಮುಂದಿಟ್ಟುಕೊಂಡೇ ಇರಾನ್ ಮೇಲೆ ದಾಳಿ ನಡೆಸಿದೆ. ವಾಸ್ತವವಾಗಿ ಅಣ್ವಸ್ತ್ರ ಬಳಕೆ ನಿಯಂತ್ರಣ ಸಂಬಂಧಿತ ಯಾವುದೇ ಒಪ್ಪಂದಕ್ಕೆ ಸಹಿ ಹಾಕದಿರುವ ದೇಶ ಇಸ್ರೇಲ್. ಆದರೂ ಅಸ್ತ್ರಗಳನ್ನು ಹೊಂದಿದೆ. ಆದರೆ ಇರಾನ್ ಮೇಲೆ ಬೊಟ್ಟು ಮಾಡಿ ದಾಳಿಯನ್ನೇ ನಡೆಸಿದೆ.
ಅಮೆರಿಕದ ವಿಕೃತ ಯುದ್ಧಕೋರತನದ ಹಿಡಿತದಲ್ಲಿರುವುದು ಇಸ್ರೇಲ್. ಅಷ್ಟಕ್ಕೂ ಇಸ್ರೇಲ್ ಇನ್ನೊಂದು ದೇಶದ ಮೇಲೆ ದಾಳಿ ನಡೆಸಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ದೇಶಗಳ ವಿಚಾರಕ್ಕೆ ಮೂಗು ತೂರಿಸಿ ಇಸ್ರೇಲ್ ದಾಳಿ ನಡೆಸಿದೆ. ಅದರಲ್ಲಿ ಹೆಜ್ಬುಲ್ಲಾ ಕೂಡಾ ಒಂದು. ಹೆಜ್ಬುಲ್ಲಾ ವಿರುದ್ಧದ ದಾಳಿ ಯಶಸ್ವಿಯಾದ ಬಳಿಕ ಇರಾನ್ ಮೇಲೂ ತನ್ನ ಪ್ರಹಾರ ನಡೆಸಬಹುದು ಎಂಬ ಕುರುಡು ಕಲ್ಪನೆ ಇಸ್ರೇಲ್ನದ್ದಾಗಿತ್ತು. ಹಾಗಾಗಿ ಇರಾನ್ ಮೇಲೆ ದಾಳಿ ನಡೆಸಿ, ಪ್ರಮುಖವಾಗಿ ವಿಜ್ಞಾನಿಗಳು, ಸೇನಾ ಮುಖಂಡರನ್ನು ಗುರಿಯಾಗಿಸಿದೆ. ಆದರೆ ಇರಾನ್ ಶಸ್ತ್ರಸಜ್ಜಿತ ಸುಭದ್ರ ದೇಶ ಎಂಬುದು ಇಸ್ರೇಲ್ ಅರಿವಿಗೆ ಬಂದಿಲ್ಲ. ಯಾವುದೇ ನಾಯಕತ್ವದ ಕೊರತೆ ಉಂಟಾಗದಂತೆ ರಾಜಕೀಯವಾಗಿ ದೃಢವಾಗಿರುವ ಇರಾನ್ ಸದ್ಯ ಇಸ್ರೇಲ್ ವಿರುದ್ದ ಸೇಡು ತೀರಿಸಿಕೊಳ್ಳುವ ಪಣತೊಟ್ಟಿದೆ.
ಇದನ್ನು ಓದಿದ್ದೀರಾ? ಟೆಹ್ರಾನ್ನಲ್ಲಿರುವ ಮೂರು ಲಕ್ಷ ಜನ ಸ್ಥಳಾಂತರಗೊಳ್ಳಿ: ದಾಳಿ ಎಚ್ಚರಿಕೆ ನೀಡಿದ ಇಸ್ರೇಲ್
ಪರ್ಷಿಯನ್ ಕೊಲ್ಲಿ ಮತ್ತು ಇರಾನ್
ಪರ್ಷಿಯನ್ ಕೊಲ್ಲಿಯು ಪಶ್ಚಿಮ ಏಷ್ಯಾದಲ್ಲಿರುವ ಒಂದು ದೊಡ್ಡ ಜಲರಾಶಿ. ಅರಬ್ಬಿ ಸಮುದ್ರದ ಒಂದು ಭಾಗವಾಗಿರುವ ಇದು, ಇರಾನ್ ಮತ್ತು ಅರೇಬಿಯನ್ ಪರ್ಯಾಯ ದ್ವೀಪದ ನಡುವೆ ಇದೆ. ಇದು ಹಾರ್ಮುಜ್ ಜಲಸಂಧಿಯ ಮೂಲಕ ಓಮನ್ ಕೊಲ್ಲಿಯೊಂದಿಗೆ ಸಂಪರ್ಕ ಹೊಂದಿದೆ. ಇದು ಸಂಪೂರ್ಣವಾಗಿ ಇರಾನ್ ಹತೋಟಿಯಲ್ಲಿದೆ. ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಈ ಜಲಮಾರ್ಗವನ್ನು ಸಂಪೂರ್ಣವಾಗಿ ಮುಚ್ಚುವ ಇರಾದೆಯಲ್ಲಿ ಇರಾನ್ ಇದೆ. ಇದರಿಂದಾಗಿ ವಿಶ್ವದ ತೈಲ ವ್ಯಾಪಾರಕ್ಕೆ ತೀವ್ರ ಹೊಡೆತ ಬೀಳುವುದು ಖಚಿತ.
2024ರಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಿದ ಕಚ್ಚಾ ತೈಲದ ಶೇಕಡ 84ರಷ್ಟು ಮತ್ತು ದ್ರವೀಕೃತ ನೈಸರ್ಗಿಕ ಅನಿಲದ(ಎಲ್ಪಿಜಿ) ಶೇಕಡ 83ರಷ್ಟು ಏಷ್ಯಾದ ಮಾರುಕಟ್ಟೆಗಳಿಗೆ ಹೋಗಿದೆ ಎಂದು ಇಐಎ ಅಂದಾಜಿಸಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಏಷ್ಯಾಕ್ಕೆ ಸಾಗಿದ ಕಚ್ಚಾ ತೈಲವು ಚೀನಾ, ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ತಲುಪಿದೆ. ಹಾಗಿರುವಾಗ ಈ ಜಲಸಂಧಿ ಮುಚ್ಚಿದರೆ ಭಾರತದ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರುತ್ತದೆ.
ಭಾರತವು ರಷ್ಯಾ, ಯುಎಸ್, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಿಂದ ತೈಲವನ್ನು ಖರೀದಿಸುತ್ತದೆ. ಆದ್ದರಿಂದ ತೈಲ ಮತ್ತು ಅನಿಲವನ್ನು ಪಡೆಯುವ ವಿಚಾರದಲ್ಲಿ ತೊಂದರೆಯಾಗದು. ಆದರೆ ಬೆಲೆಯ ಮೇಲೆ ಪ್ರಭಾವ ಬೀರಬಹುದು. ಅಷ್ಟಕ್ಕೂ ಈ ಜಲಸಂಧಿ ಬರೀ ಕಚ್ಚಾ ತೈಲದ ಸಾಗಾಟ ಮಾರ್ಗವಲ್ಲ, ಹಲವು ವಸ್ತುಗಳ ರಫ್ತು, ಆಮದು ಮಾರ್ಗವೂ ಹೌದು. ಇದರಿಂದಾಗಿ ಜಾಗತಿಕ ಆರ್ಥಿಕ ಮಾರುಕಟ್ಟೆಯೇ ಕುಸಿಯಲಿದೆ. ಎಚ್ಚರಿಕೆಯನ್ನು ನೀಡುವ ಅಮೆರಿಕ ಬರೀ ಈ ವರಸೆಯನ್ನು ಮುಂದುವರಿಸಬಹುದೇ ಹೊರತು ಬೇರೇನು ಮಾಡಲಾಗದು. ಆದರೆ ಇರಾನ್ನ ಒಂದು ನಿರ್ಧಾರಕ್ಕೆ ಇಡೀ ವಿಶ್ವದ ಆರ್ಥಿಕತೆ ತಲ್ಲಣಿಸುವಷ್ಟು ಸಾಮರ್ಥ್ಯವಿದೆ.
ಇದನ್ನು ಓದಿದ್ದೀರಾ? ಅಮೆರಿಕದ ಟ್ರಂಪ್ ಎಂಬ ಹುಚ್ಚನೂ, ಇರಾನಿನ ಇಸ್ಲಾಮಿಕ್ ಖಮೇನಿಯೂ: ಏನಾಗಲಿದೆ ಮಧ್ಯ ಪ್ರಾಚ್ಯ?
ಇಸ್ರೇಲ್ ಈಗಾಗಲೇ ಇರಾನ್ನ 17ಕ್ಕೂ ಅಧಿಕ ಅಣು ವಿಜ್ಞಾನಿಗಳನ್ನು ಕೊಂದಿದೆ. ಹಾಗೆಯೇ ದೇಶದ ರಕ್ಷಣೆ ಮತ್ತು ಸುರಕ್ಷತೆಯ ಹೊಣೆ ಹೊತ್ತಿರುವ ಸೇನೆ ಅಥವಾ ಸೇನೆಯೇತರ ಪ್ರಮುಖ ವ್ಯಕ್ತಿಗಳನ್ನು ಇಸ್ರೇಲ್ ಹತ್ಯೆ ಮಾಡಿದೆ. ಇದಕ್ಕೆ ಪ್ರತೀಕಾರವನ್ನು ಇರಾನ್ ಈಗಲೇ ಘೋಷಿಸಿದೆ. ಇಸ್ರೇಲ್ನ ಹಲವು ವಿಜ್ಞಾನಿಗಳು, ಸೇನಾ ಮುಖ್ಯಸ್ಥರುಗಳನ್ನು ಗುರಿಯಾಗಿಸಿಕೊಂಡಿದೆ. ಈ ಎಲ್ಲಾ ಬೆಳವಣಿಗೆಯಿಂದಾಗಿ ಇಡೀ ಮಧ್ಯಪ್ರಾಚ್ಯ ಏಷ್ಯಾ ಒಂದು ರೀತಿಯಾದ ಹೊಸ ಪ್ರತ್ಯಕ್ಷ ಮತ್ತು ಪರೋಕ್ಷ ಅಲ್ಲೋಲಕಲ್ಲೋಲಗಳಿಗೆ ಸಾಕ್ಷಿಯಾಗುತ್ತಿದೆ. ತಾನು ಮಾಡದ ಕೃತ್ಯದ ಆರೋಪವನ್ನು ಹೊರಿಸಿದ ಕಾರಣ ಇರಾನ್ ಅಣ್ವಸ್ತ್ರ ತಯಾರಿ ವೇಗವನ್ನು ಹೆಚ್ಚಿಸಬಹುದು. ಇದು ಇಸ್ರೇಲ್ ಮತ್ತು ಅಮೆರಿಕಕ್ಕೆ ಅತಿ ದೊಡ್ಡ ಅಪಾಯ ಒಡ್ಡಬಹುದು. ಏನೇ ಆದರೂ ಈ ಪ್ರಕ್ರಿಯೆಗೆ ಇನ್ನೂ ಐದಾರು ವರ್ಷಗಳ ಅಗತ್ಯವಿದೆ.
ಇರಾನ್ನಲ್ಲಿ ಮೊಳಗಿದ ರಾಷ್ಟ್ರೀಯತೆ
ಇರಾನ್ನಲ್ಲಿ ಆಂತರಿಕವಾಗಿ ಸಾಕಷ್ಟು ಬಿಕ್ಕಟ್ಟುಗಳಿವೆ. ಆದರೆ ಇದೀಗ ಎಲ್ಲಾ ಬಿಕ್ಕಟ್ಟುಗಳನ್ನು ಬದಿಗೊತ್ತಿ ಜನರು ರಾಷ್ಟ್ರೀಯತೆ ಪರವಾಗಿ ಧ್ವನಿ ಎತ್ತಿದ್ದಾರೆ. ಇರಾನ್ನಲ್ಲಿ ಹಲವು ಧಾರ್ಮಿಕ ಕಟ್ಟಳೆಗಳಿದ್ದು ಅವುಗಳ ವಿರುದ್ಧ ಚಿಲುಮೆಗಳಂತೆ ಪ್ರತಿರೋಧ ಉಕ್ಕಿಬಂದಿತ್ತು. ಆದರೆ ಇಸ್ರೇಲ್ ದಾಳಿ ಬಳಿಕ ಈ ವಿಚಾರಗಳೆಲ್ಲವನ್ನೂ ಬದಿಗೊತ್ತಿಕೊಂಡು ರಾಷ್ಟ್ರೀಯತೆ ದೃಷ್ಟಿಯಿಂದ ಒಂದಾಗಿದ್ದಾರೆ.
ಸದ್ಯ ಇಡೀ ಏಷ್ಯಾ ಖಂಡವೇ ಇಸ್ರೇಲ್ ವಿರುದ್ಧ ತಿರುಗಿಬೀಳಬಹುದಾದ ಸನ್ನಿವೇಶ ಉಂಟಾಗಿದೆ. ಯುದ್ಧಬಾಕತನದಿಂದ ಇಸ್ರೇಲ್ ಸೃಷ್ಟಿಸುತ್ತಿರುವ ಯುದ್ಧಗಳ ವಿರುದ್ಧ ದ್ವನಿಗೂಡಿಸಬಹುದು. ಈಗಾಗಲೇ ಅಮೆರಿಕದ ಮಾನ್ಯತೆಯು ಟ್ರಂಪ್ ತಿಕ್ಕಲುತನದಿಂದ ಕೆಳಗಿಳಿಯುತ್ತಿದೆ. ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಗಂಟೆಗೊಂದು, ದಿನಕ್ಕೊಂದು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಾಗದ ಹೇಳಿಕೆಗಳನ್ನು ನೀಡುತ್ತಿರುವ ಟ್ರಂಪ್, ಅಮೆರಿಕಕ್ಕೆ ದೊಡ್ಡ ಅಪಮಾನ. ಟ್ರಂಪ್ ನಡೆಯು ಅಮೆರಿಕಕ್ಕೆ ಈ ಹಿಂದೆ ವಿವಿಧ ದೇಶಗಳು ನೀಡುತ್ತಿದ್ದ ಗೌರವವನ್ನು ತಗ್ಗಿಸಿದೆ, ಇನ್ನೂ ಕುಗ್ಗಲಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.