ಇರಾನ್ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷ ಹಾಗೂ ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ತನ್ನ ನಾಗರಿಕರಿಗೆ ತಕ್ಷಣವೇ ದೇಶ ತೊರೆಯುವಂತೆ ಸೂಚಿಸಿದೆ.
ಕಳೆದ ರಾತ್ರಿಯಿಂದ ನಡೆದಿರುವ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಭದ್ರತಾ ಆತಂಕಗಳ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದ್ದು, ಭಾರತೀಯರು ಇರಾನ್ ದೇಶಕ್ಕೆ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಪ್ರಸ್ತುತ ಅಲ್ಲಿರುವವರು ಲಭ್ಯವಿರುವ ಯಾವುದೇ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಂಡು ಆದಷ್ಟು ಬೇಗ ದೇಶದಿಂದ ಹೊರಡಬೇಕು ಎಂದು ಭಾರತ ಸರ್ಕಾರ ಮನವಿ ಮಾಡಿದೆ.
ಈ ಹೊಸ ತುರ್ತು ಸೂಚನೆಯು ಇರಾನ್‌ನಲ್ಲಿರುವ ಭಾರತದ ವಿದ್ಯಾರ್ಥಿಗಳು, ಉದ್ಯಮಿಗಳು, ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಸೇರಿದಂತೆ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೂ ಅನ್ವಯಿಸುತ್ತದೆ. ಪ್ರಸ್ತುತ ನಡೆಯುತ್ತಿರುವ ಇರಾನ್-ಅಮೆರಿಕ ಸಂಘರ್ಷದ ಅವಧಿಯಲ್ಲಿ ಭಾರತ ಸರ್ಕಾರವು ಹೊರಡಿಸುತ್ತಿರುವ 8ನೇ ತುರ್ತು ಪ್ರಕಟಣೆ ಇದಾಗಿದೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ, ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಯುದ್ಧ ಪೀಡಿತ ದೇಶದಿಂದ ಹೊರಡುವಂತೆ ಸೂಚಿಸಿತ್ತು. ಪರಿಸ್ಥಿತಿ ಮತ್ತೆ ಕೈಮೀರುವ ಮುನ್ನವೇ ಸುರಕ್ಷಿತವಾಗಿ ಹೊರಡಲು ಸಿಕ್ಕ ಈ ಕದನ ವಿರಾಮದ ಸಮಯವನ್ನು ಬಳಸಿಕೊಳ್ಳುವಂತೆ ತಿಳಿಸಲಾಗಿತ್ತು. ಜೊತೆಗೆ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯವಾಣಿ ಸಂಖ್ಯೆಯನ್ನು ಸಹ ಪ್ರಾರಂಭಿಸಲಾಗಿತ್ತು.
ಇದನ್ನೂ ಓದಿ: ದರ್ಗಾ ಇದ್ದ ಮಾತ್ರಕ್ಕೆ ಭೂಮಿ ವಕ್ಫ್ ಆಸ್ತಿ ಆಗುವುದಿಲ್ಲ: ಮದ್ರಾಸ್ ಹೈಕೋರ್ಟ್
ಇಷ್ಟೆಲ್ಲಾ ಮುನ್ನೆಚ್ಚರಿಕೆಗಳ ನಡುವೆಯೂ ಸದ್ಯ ಸುಮಾರು 7,500 ಕ್ಕೂ ಹೆಚ್ಚು ಭಾರತೀಯರು ಇರಾನ್‌ನಲ್ಲಿ ಉಳಿದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಇದಕ್ಕೂ ಮುನ್ನ, ಭಾರತೀಯ ರಾಯಭಾರ ಕಚೇರಿಯು ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಗಡಿ ಮಾರ್ಗಗಳ ಮೂಲಕ ಸಾವಿರಾರು ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಯಶಸ್ವಿಯಾಗಿ ನೆರವು ನೀಡಿತ್ತು. ಇದೀಗ ಉಳಿದ ಜನರಿಗೂ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಲು ತಾಕೀತು ಮಾಡಲಾಗಿದೆ.





