ಕೇಂದ್ರೀಯ ಗಾಜಾ ಮೇಲೆ ಮಂಗಳವಾರ ನಸುಕಿನಲ್ಲಿ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ದಾಳಿಯ ಮೂಲಕ ಇಸ್ರೇಲ್ ಕದನ ವಿರಾಮವನ್ನು ಉಲ್ಲಂಘಿಸಿದೆ.
ಸಿರಿಯಾ ಮತ್ತು ಲೆಬನಾನ್ ಮೇಲೆ ಕೂಡಾ ದಾಳಿ ನಡೆದಿರುವುದನ್ನು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದು, ಈ ಪ್ರದೇಶಗಳಲ್ಲಿಯೂ ವ್ಯಾಪಕ ಸಾವುನೋವುಗಳು ಉಂಟಾಗಿದೆ.
“ಗಾಜಾಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 200ಕ್ಕೂ ಹೆಚ್ಚಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ” ಎಂದು ಏಜೆನ್ಸಿ ವಕ್ತಾರ ಮೊಹ್ಮದ್ ಬಸಾಲ್ ಹೇಳಿದ್ದಾರೆ.
“ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಪದೇ ಪದೇ ನಿರಾಕರಿಸಿರುವ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ” ಎಂದು ಇಸ್ರೇಲ್ ಸಮರ್ಥಿಸಿಕೊಂಡಿದೆ. ದಾಳಿಯ ಹಿನ್ನೆಲೆಯಲ್ಲಿ ಗಾಜಾಪಟ್ಟಿ ಪ್ರದೇಶದಲ್ಲಿ ಎಲ್ಲ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.
ಸಿರಿಯಾ ಮತ್ತು ಲೆಬನಾನ್ನ ವಸತಿ ಪ್ರದೇಶಗಳ ಮೇಲೂ ದಾಳಿ ನಡೆದಿದ್ದು, ದಾರಾ ಪ್ರದೇಶದಲ್ಲಿ ಮೂರು ಮಂದಿ ಮೃತಪಟ್ಟು ನಾಲ್ವರು ಮಕ್ಕಳು, ಮಹಿಳೆ, ರಕ್ಷಣಾ ಕಾರ್ಯಕರ್ತರು ಸೇರಿದಂತೆ 19 ಮಂದಿ ಗಾಯಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ; ಬಿಜೆಪಿ ವಿರೋಧವೇ ಅಸಾಂವಿಧಾನಿಕ
ಗಾಜಾದಲ್ಲಿ ಇನ್ನೂ ಬಂಧಿಸಲ್ಪಟ್ಟಿರುವ ಉಳಿದ 59 ಒತ್ತೆಯಾಳುಗಳ ಭವಿಷ್ಯದ ಕುರಿತು ಇಸ್ರೇಲ್ ಮತ್ತು ಹಮಾಸ್ ಸಂಘಟನೆಯ ನಡುವೆ ಹಲವು ದಿನಗಳ ಕಾಲ ನಡೆದ ಮಾತುಕತೆ ವಿಫಲವಾದ ನಂತರ ಈ ದಾಳಿಗಳು ನಡೆದಿವೆ. ಅಮೆರಿಕದ ಬೆಂಬಲದೊಂದಿಗೆ ಈಜಿಪ್ಟ್ ಮತ್ತು ಕತಾರ್ ನೇತೃತ್ವದ ಮಧ್ಯಸ್ಥಿಕೆ ಸಭೆಯ ಪ್ರಯತ್ನಗಳ ಹೊರತಾಗಿಯೂ ಹಮಾಸ್ ಸಂಘಟನೆ “ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಪದೇ ಪದೇ ನಿರಾಕರಿಸುತ್ತಿದೆ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಆರೋಪಿಸಿದೆ.
ಇದಕ್ಕೆ ಹಮಾಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಇಸ್ರೇಲ್ ಏಕಪಕ್ಷೀಯವಾಗಿ ಕದನ ವಿರಾಮವನ್ನು ರದ್ದುಗೊಳಿಸಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಮತ್ತಷ್ಟು ನಿಯಂತ್ರಣ ತಪ್ಪಬಹುದು ಎಂದು ಎಚ್ಚರಿಸಿದ್ದಾರೆ.
ಜನವರಿ 19 ರಂದು ನಡೆದ ಮಧ್ಯಸ್ಥಿಕೆ ಸಭೆಯ ಒಪ್ಪಂದವು, ಸುಮಾರು 2,000 ಪ್ಯಾಲೇಸ್ತೀನ್ ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಸಲುವಾಗಿ 33 ಇಸ್ರೇಲಿ ಮತ್ತು ಐದು ಥಾಯ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿತ್ತು.
