ಇರಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಇಸ್ರೇಲ್ ದಾಳಿಯನ್ನು ಇರಾನ್ ಖಚಿತಪಡಿಸಿದೆ. ದಾಳಿ ಹಿನ್ನೆಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
“ಇಸ್ರೇಲ್ ಇರಾನ್ ನಲ್ಲಿ ದಾಳಿಗಳನ್ನು ನಡೆಸಿದೆ” ಎಂದು ಇಬ್ಬರು ಅಮೆರಿಕದ ಅಧಿಕಾರಿಗಳು ರಾಯಿಟರ್ಸ್‌ಗೆ ದೃಢಪಡಿಸಿದ್ದಾರೆ. ಈ ದಾಳಿಯಲ್ಲಿ ಅಮೆರಿಕ ಭಾಗಿಯಾಗಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಟೆಹ್ರಾನ್‌ನಲ್ಲಿ ಭಾರಿ ಸ್ಪೋಟದ ಸದ್ದುಗಳು ಕೇಳಿಸಿರುವ ಹಿನ್ನೆಲೆಯಲ್ಲಿ ಸಾವು-ನೋವಿನ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಟೆಹ್ರಾನ್ ಮೇಲೆ ಕ್ಷಿಪಣಿ ಹಾಗೂ ಡೋನ್ ದಾಳಿ ಬೆನ್ನಲ್ಲೇ ಇರಾನ್‌ನಿಂದ ಪ್ರತಿ ದಾಳಿ ನಿರೀಕ್ಷೆ ಮಾಡುತ್ತಿರುವ ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಇಸ್ರೇಲ್ ನಾದ್ಯಂತ ಸೈರನ್‌ಗಳು ಮೊಳಗುತ್ತಿದ್ದಂತೆ, ಇರಾನ್ ವಿರುದ್ಧದ ವೈಮಾನಿಕ ದಾಳಿ ಮುಂದುವರಿದಿರುವ ನಡುವೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಭದ್ರತಾ ಸಚಿವ ಸಂಪುಟದ ತುರ್ತು ಸಭೆಯನ್ನು ಕರೆದಿದ್ದಾರೆ. ಇಸ್ರೇಲ್‌ನೊಂದಿಗೆ ಹೆಚ್ಚಿದ ಉದ್ವಿಗ್ನತೆಯ ನಂತರ, ದೇಶದ ವಾಯು ರಕ್ಷಣಾ ವ್ಯವಸ್ಥೆಯು ಸಂಪೂರ್ಣ ಎಚ್ಚರಿಕೆಯಿಂದಿದೆ ಎಂದು ವರದಿಯಾಗಿದೆ.
“ಇರಾನ್‌ನ ಅಣ್ವಸ್ತ್ರ ಹಾಗೂ ಮಿಲಿಟರಿ ಭೀತಿಯನ್ನು ನಿರ್ಮೂಲನೆ ಮಾಡುವವರೆಗೂ ಈ ಕಾರ್ಯಾಚರಣೆಯು ಮುಂದುವರಿಯಲಿದೆ. ಅಲ್ಲದೆ ಇಸ್ರೇಲ್ ನಡೆಸಿರುವ ಕಾರ್ಯಾಚರಣೆಯನ್ನು ‘ರೈಸಿಂಗ್ ಲಯನ್’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಂಬೋಧಿಸಿದ್ದಾರೆ.
ಕಮಾಂಡರ್ ಹೊಸೇನ್ ಸಲಾಮಿ ಸಾವು
ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳ ಕಮಾಂಡರ್ ಹೊಸೇನ್ ಸಲಾಮಿ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಶುಕ್ರವಾರ ದೃಢಪಡಿಸಿದೆ.