ದಕ್ಷಿಣ ಗಾಜಾ ಪಟ್ಟಣದ ರಾಫಾದಲ್ಲಿ ಕಳೆದ ರಾತ್ರಿ ಇಸ್ರೇಲ್ ಪಡೆಗಳು ದಾಳಿ ನಡೆಸಿದ ಪರಿಣಾಮ ಒಂಭತ್ತು ಮಕ್ಕಳು ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಈ ನಡುವೆ ಅಮೆರಿಕ ತನ್ನ ಮಿತ್ರ ರಾಷ್ಟ್ರ ಇಸ್ರೇಲ್‌ಗೆ ಬಿಲಿಯನ್ ಡಾಲರ್‌ಗಟ್ಟಲೆ ಹೆಚ್ಚುವರಿ ಮಿಲಿಟರಿ ನೆರವು ನೀಡುವ ಅನುಮೋದನೆ ಅಂತಿಮ ಹಂತದಲ್ಲಿದೆ.
20 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿರುವ ಗಾಜಾ ಪಟ್ಟಣದಲ್ಲಿ ಅರ್ಧದಷ್ಟು ಮಂದಿ ನಿರಾಶ್ರಿತರು ಬೇರೆಡೆ ವಲಸೆಗೆ ಹೋರಾಟ ನಡುಸುತ್ತಿರುವ ನಡುವೆ ಇಸ್ರೇಲ್ ನಿತ್ಯ ರಾಫಾ ಪ್ರದೇಶದಲ್ಲಿ ವಾಯು ದಾಳಿ ನಡೆಸುತ್ತಿದೆ.
ನಿರಾಶ್ರಿತ ಪ್ರದೇಶದಲ್ಲಿ ದಾಳಿಯನ್ನು ಸ್ಥಗಿತಗೊಳಿಸಿ ಸಂಯಮ ತೆಗೆದುಕೊಳ್ಳುವಂತೆ ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳು ಮನವಿ ಮಾಡುತ್ತಿದ್ದರೂ ಇಸ್ರೇಲ್ ದಾಳಿಯನ್ನು ಮುಂದುವರೆಸಿದೆ.
ಗಾಜಾದಲ್ಲಿ ಮಾನವೀಯ ನೆರವಿಗಾಗಿ 9 ಬಿಲಿಯನ್ ಡಾಲರ್ ಒಳಗೊಂಡು 26 ಬಿಲಿಯನ್ ಡಾಲರ್ ನೆರವಿನ ಪ್ಯಾಕೇಜ್ ನೀಡಲು ಅಮೆರಿಕದ ಹೌಸ್ ಆಫ್ ರೆಪ್ರಸೆಂಟಿವ್ಸ್ ಅನುಮೋದಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ
ಇಸ್ರೇಲ್ ನಿನ್ನೆ ರಾತ್ರಿ ನಡೆಸಿದ ಮೊದಲ ದಾಳಿಯಲ್ಲಿ ದಂಪತಿ ಹಾಗೂ 3 ವರ್ಷದ ಮಗು ಮೃತಪಟ್ಟಿದ್ದರು ಎಂದು ಕುವೈತಿ ಆಸ್ಪತ್ರೆ ವರದಿ ನೀಡಿದೆ.
ಎರಡನೇ ದಾಳಿಯಲ್ಲಿ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಹಾಗೂ ಎಂಟು ಮಕ್ಕಳು ಸಾವಿಗೀಡಾಗಿದ್ದಾರೆ.
ಸ್ಥಳೀಯ ಆರೋಗ್ಯ ಅಧಿಕಾರಿಗಳ ವರದಿಯ ಪ್ರಕಾರ ಗಾಜಾದ ಎರಡು ಪಟ್ಟಣಗಳ ಗಡಿಯಲ್ಲಿ ಇಲ್ಲಿಯವರೆಗೂ ನಡೆದ ಇಸ್ರೇಲ್ ಹಾಗೂ ಹಮಾಸ್ ಹೋರಾಟಗಾರರ ದಾಳಿಯಲ್ಲಿ 34 ಸಾವಿರ ಪ್ಯಾಲಿಸ್ತೀನಿಯರು ಮೃತಪಟ್ಟು, 75 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಸಂಘರ್ಷಣೆಯು 7ನೇ ತಿಂಗಳಿಗೆ ಕಾಲಿಟ್ಟಿದ್ದು, ದಾಳಿಯಿಂದ ಶೇ 80 ರಷ್ಟು ಜನರು ತಮ್ಮ ಮನೆಯನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ.
