ನೆನಪು | ವಿಶಿಷ್ಟ ಮ್ಯಾನರಿಸಂಗಳ ಮರೆಯಲಾರದ ನಟ ಜೀನ್‌ ಹ್ಯಾಕ್‌ಮನ್‌

Date:

Advertisements
'ಕಡುಕಷ್ಟದ ಕುಟುಂಬಗಳು ಹಲವಾರು ಒಳ್ಳೆಯ ನಟರನ್ನು ಹುಟ್ಟುಹಾಕಿವೆ' ಎಂದು ಹೇಳಿದ್ದ ಜೀನ್ ಹ್ಯಾಕ್‌ಮನ್‌, ನಿಜಬದುಕಿನಲ್ಲೂ ಹಾಗೂ ಚಿತ್ರಗಳಲ್ಲೂ ವೈವಿಧ್ಯಮಯ ಪಾತ್ರಗಳನ್ನೇ ನಿರ್ವಹಿಸಿದರು. ಸಾಕು ಎನಿಸಿದಾಗ ಚಿತ್ರರಂಗಕ್ಕೂ, ಬದುಕಿಗೂ ತಣ್ಣಗೆ ವಿದಾಯ ಹೇಳಿ ಹೊರಟರು.

ಖ್ಯಾತ ಹಾಲಿವುಡ್‌ ನಟ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಜೀನ್‌ ಹ್ಯಾಕ್‌ಮನ್‌(95), ನ್ಯೂ ಮೆಕ್ಸಿಕೋದ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜೊತೆಗೆ ತಮ್ಮ ಮೆಚ್ಚಿನ ಮಡದಿ ಬೆಟ್ಸಿ ಅರಕಾವಾ ಮತ್ತು ನಾಯಿಯನ್ನೂ ಜೊತೆಯಲ್ಲಿಯೇ ಕರೆದುಕೊಂಡುಹೋಗಿದ್ದಾರೆ. ಒಂದೇ ಮನೆಯಲ್ಲಿ, ಒಂದೇ ದಿನ ಮೂರು ಶವಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದರೂ, ಪೊಲೀಸರು ಸಹಜ ಸಾವು ಎಂದಿರುವುದು ಊಹಾಪೋಹಗಳಿಗೆ ತೆರೆಬಿದ್ದಿದೆ.

ಜೀನ್ ಹ್ಯಾಕ್‌ಮನ್‌ ಎಂಬ ನಟನನ್ನು ನಾವು ನೋಡಿದ್ದು ಮತ್ತು ಮೆಚ್ಚಿದ್ದು ಪೋಷಕ ಪಾತ್ರಗಳಲ್ಲಿ. ಏಕೆಂದರೆ, ಅವರು ಚಿತ್ರರಂಗಕ್ಕೆ ಅಡಿಯಿಟ್ಟಿದ್ದೇ ಮೂವತ್ತರ ನಂತರ. ಆದರೆ ಅವರ ಕರ್ಕಶ ಧ್ವನಿ, ಒರಟು ನೋಟ ಪ್ರೇಕ್ಷಕರನ್ನು ಸೆಳೆಯುತ್ತಿತ್ತು. ಟಿಪಿಕಲ್ ಅಭಿನಯ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಸೃಷ್ಟಿಸಿತ್ತು. ಅವರು ನಿರ್ವಹಿಸುತ್ತಿದ್ದ ಪಾತ್ರಗಳು- ನಾಯಕನಟನ ಸ್ನೇಹಿತ, ಖಳನಾಯಕ, ಪೊಲೀಸ್ ಚೀಫ್, ಗುಪ್ತಚರ ಅಧಿಕಾರಿ, ಮಿಲಿಟರಿ ಅಡ್ಮಿರಲ್, ತಂದೆ-  ಒಂದಕ್ಕಿಂತ ಒಂದು ವೈವಿಧ್ಯಮಯವಾಗಿದ್ದು, ಸಹಜಾಭಿನಯದಿಂದ ಕೂಡಿತ್ತು. ಹ್ಯಾಕ್‌ಮನ್‌ ವಿಶೇಷವೆಂದರೆ, ಆ ಪಾತ್ರಗಳ ಪರಕಾಯ ಪ್ರವೇಶ ಮಾಡುವುದು, ತಯಾರಿ ನಡೆಸುವುದು, ಪ್ರೇರಣೆ ಪಡೆಯುವುದು- ಅವರು ಎಂದೂ ಮಾಡಲಿಲ್ಲ. ತಮ್ಮ ಎಂದಿನ ಆಂಗಿಕಾಭಿನಯವೇ ಸಾಕು ಎನ್ನುತ್ತಿದ್ದರು.  

ಯಾರೊಂದಿಗೂ ಹೆಚ್ಚು ಬೆರೆಯದ ಹ್ಯಾಕ್‌ಮನ್‌, ಒಂದು ರೀತಿಯಲ್ಲಿ ಮೌನಿ. ಹಸಿವು ಮತ್ತು ಅವಮಾನವನ್ನು ಅರಗಿಸಿಕೊಂಡವರು. ಬೀದಿಯಿಂದ ಎದ್ದುಬಂದವರು. ಸ್ವಂತಶ್ರಮದಿಂದ ಮೇಲೆದ್ದವರು. ಅದಕ್ಕೆ ಅವರ ಹುಟ್ಟು, ಬೆಳವಣಿಗೆ ಮತ್ತು ಸವೆಸಿದ ಹಾದಿ ಕಾರಣವಾಗಿರಲೂಬಹುದು.

Advertisements

ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊದಲ್ಲಿ ಜನವರಿ 30, 1930ರಂದು ಜನಿಸಿದ ಹ್ಯಾಕ್‌ಮನ್ ಪೋಷಕರು ಶ್ರೀಮಂತರಲ್ಲ. ಬದುಕನ್ನರಿಸಿ ವಲಸೆ ಹೋಗುತ್ತಿದ್ದರು. ಅವರು ಮಗುವಾಗಿದ್ದಾಗ ಇಲಿನಾಯ್ಸ್‌ಗೆ ಸ್ಥಳಾಂತರಗೊಂಡರು. ಅಪ್ಪ ಪತ್ರಿಕಾ ನಿರ್ವಾಹಕ, ವಿತರಕರಾಗಿದ್ದರು. ಅಪ್ಪ-ಅಮ್ಮನಿಗೆ ಜಗಳವಾಗಿ, ಹ್ಯಾಕ್‌ಮನ್ ಹದಿಹರೆಯದವರಾಗಿದ್ದಾಗ ಅಪ್ಪ ಕುಟುಂಬವನ್ನು ತ್ಯಜಿಸಿದರು. ನಂತರ, ಅವರ ತಾಯಿ ಬೆಂಕಿ ಆಕಸ್ಮಿಕದಲ್ಲಿ ಸಾವನ್ನಪ್ಪಿದರು.

ಪೋಷಕರಿಲ್ಲದೆ, ಕುಟುಂಬವಿಲ್ಲದೆ ಅನಾಥನಾದ ಹ್ಯಾಕ್‌ಮನ್‌, ಊಟ-ವಸತಿಗಾಗಿ 16ನೇ ವಯಸ್ಸಿನಲ್ಲಿ ಮಿಲಿಟರಿ ಸೇರಲು ಸುಳ್ಳು ವಯಸ್ಸಿನ ದಾಖಲೆ ನೀಡಿದ್ದರು. ಅಲ್ಲಿ ಅವರು ರೇಡಿಯೋ ಆಪರೇಟರ್ ಆಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ, ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ದೂರದರ್ಶನ ನಿರ್ಮಾಣ ಮತ್ತು ಪತ್ರಿಕೋದ್ಯಮ ಅಧ್ಯಯನ ಮಾಡಿದರು. ಆಮೇಲೆ ಏನನ್ನಿಸಿತೋ, 30ರ ನಂತರ ನಟನಾಗಬೇಕೆಂದು ಕ್ಯಾಲಿಫೋರ್ನಿಯಾದ ಪಸಾಡೆನಾ ಪ್ಲೇಹೌಸ್‌ನಲ್ಲಿ ತರಬೇತಿ ಪಡೆದರು. ಅಲ್ಲಿ ಅವರಿಗೆ ಜೊತೆಯಾದವರು, ಡಸ್ಟಿನ್ ಹಾಫ್‌ಮನ್. ತರಬೇತಿ ಮುಗಿಸಿದರೂ, ಅವಕಾಶ ಸಿಗುವುದು ಕಷ್ಟ ಎನ್ನುವುದು ಇಬ್ಬರಿಗೂ ಗೊತ್ತಿತ್ತು. ಹಾಗಾಗಿ ನ್ಯೂಯಾರ್ಕ್‌ಗೆ ತೆರಳಿ, ಕೈಗೆ ಸಿಕ್ಕ ಸಣ್ಣಪುಟ್ಟ ಕೆಲಸಗಳನ್ನು ಮಾಡಿದರು. ನಡುವೆ ನಾಟಕಗಳಲ್ಲಿ ಅಭಿನಯಿಸಿದರು. ಬರವಣಿಗೆ ಮಾಡಿ ಮೂರು ಕಾದಂಬರಿಗಳ ಸಹ-ಲೇಖಕರಾದರು. ದೂರದರ್ಶನದಲ್ಲಿ ನಟನಾಗಿ, ತಂತ್ರಜ್ಞನಾಗಿ ಕಾಣಿಸಿಕೊಂಡರು.

f6218d40 da44 11ef 902e cf9b84dc1357

ಕೊನೆಗೆ 1961ರಲ್ಲಿ ತೆರೆಕಂಡ, ‘ಮ್ಯಾಡ್ ಡಾಗ್ ಕೋಲ್’ ಚಿತ್ರದಲ್ಲಿ ಪುಟ್ಟ ಪೊಲೀಸ್ ಪಾತ್ರದ ಅವಕಾಶ ಸಿಕ್ಕಿತು. ಆದರೆ ನಟನಾಗಿ ಬೇರು ಬಿಡಲು ಅದು ಸಹಕರಿಸಲಿಲ್ಲ. ಆನಂತರ ನಾಲ್ಕೈದು ಚಿತ್ರಗಳಲ್ಲಿ ನಟಿಸಿದರೂ, ಯಾರು ಕರೆದು ಕೆಲಸ ಕೊಡಲಿಲ್ಲ. 1964ರಲ್ಲಿ ಬಂದ ವಾರೆನ್ ಬೀಟಿ ನಟಿಸಿದ ‘ಲಿಲಿತ್’ ಚಿತ್ರ, ನಟನಾಗಿ ಗುರುತಿಸಲು ನೆರವಾಯಿತು. 1967ರಲ್ಲಿ ನಟ-ನಿರ್ಮಾಪಕ ವಾರೆನ್ ಬೀಟಿಯವರ ಕ್ರೈಮ್ ಥಿಲ್ಲರ್ ‘ಬೋನಿ ಅಂಡ್ ಕ್ಲೈಡ್’ ಚಿತ್ರದಲ್ಲಿ ಹ್ಯಾಕ್‌ಮನ್‌ಗೆ ಒಂದೊಳ್ಳೆಯ ಪಾತ್ರ ದೊರಕಿತು. ಅದು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವಂತೆ ಮಾಡಿತು. ಇದರ ಜೊತೆಗೆ, 1971ರಲ್ಲಿ ಬಂದ ‘ಐ ನೆವರ್ ಸಾಂಗ್ ಫಾರ್ ಮೈ ಫಾದರ್’ ಚಿತ್ರ, ಅವರನ್ನು ಎರಡನೇ ಅತ್ಯುತ್ತಮ ನಟ ನಾಮನಿರ್ದೇಶನಕ್ಕೆ ಪಾತ್ರವಾಗುವಂತೆ ನೋಡಿಕೊಂಡಿತು. ಪ್ರಶಸ್ತಿ ಮಾತ್ರ ಬರಲಿಲ್ಲ. ಆದರೆ ಮೂರನೇ ಪ್ರಯತ್ನವಾಗಿ 1971ರಲ್ಲಿ ಬಂದ ಆಕ್ಷನ್ ಡ್ರಾಮಾ ‘ದಿ ಫ್ರೆಂಚ್ ಕನೆಕ್ಷನ್’ ಚಿತ್ರದ ಸ್ವತಂತ್ರ ಪತ್ತೇದಾರಿ ಪಪಾಯ್ ಡಾಯ್ಲ್ ಪಾತ್ರ, ಹ್ಯಾಕ್‌ಮನ್‌ಗೆ ಅತ್ಯುತ್ತಮ ನಟನೆಗಾಗಿ ಆಸ್ಕರ್ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತು.

ಆನಂತರ, ಅವರು ಹಿಂತಿರುಗಿ ನೋಡಲಿಲ್ಲ. ಕ್ಲಿಂಟ್ ಈಸ್ಟ್ ವುಡ್, ಫ್ರಾನ್ಸಿಸ್ ಫೋರ್ಡ್ ಕಪೋಲಾರಂತಹ ಪ್ರತಿಭಾನ್ವಿತ ನಿರ್ದೇಶಕರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ಅಲ್ ಪ್ಯಾಸಿನೊ, ಕ್ರಿಸ್ಟಫರ್ ರೀವ್, ಜಾನ್ ಟ್ರವೋಲ್ಟ, ವಿಲಿಯಂ ಡೆಫೊ, ಬರ್ಟ್ ರೆನಾಲ್ಡ್ಸ್‌ರಂತಹ ಜನಪ್ರಿಯ ನಟರೊಂದಿಗೆ ಬೆಳ್ಳೆತೆರೆ ಹಂಚಿಕೊಳ್ಳತೊಡಗಿದರು.

70ರ ದಶಕದಲ್ಲಿಇವರು ನಟಿಸಿದ ಚಿತ್ರಗಳು ಸಾಲು ಸಾಲಾಗಿ ತೆರೆ ಕಾಣತೊಡಗಿದವು. ದಿ ಪೋಸಿಡಾನ್ ಅಡ್ವೆಂಚರ್(1972), ದಿ ಕಾನ್ವರ್ಸೇಷನ್(1974), ನೈಟ್ ಮೂವ್ಸ್(1975), ಯಂಗ್ ಫ್ರಾಂಕೆನ್‌ಸ್ಟೈನ್(1974), ಸೂಪರ್‌ಮ್ಯಾನ್(1978) ಚಿತ್ರಗಳು ಹ್ಯಾಕ್‌ಮನ್‌ರನ್ನು ಹಾಲಿವುಡ್‌ನಲ್ಲಿ ಬಹುಬೇಡಿಕೆಯ ನಟನನ್ನಾಗಿ ಮಾಡಿ ಭದ್ರವಾಗಿ ನೆಲೆಯೂರಿಸಿದವು. ಬರೀ ಆಕ್ಷನ್, ಕ್ರೈಮ್, ಥ್ರಿಲ್ಲರ್ ಚಿತ್ರಗಳಷ್ಟೇ ಅಲ್ಲ, ಹಾಸ್ಯ ಪಾತ್ರಗಳನ್ನೂ ನಿರ್ವಹಿಸಿ, ಸೈ ಎನಿಸಿಕೊಂಡರು.

80ರ ದಶಕದಲ್ಲಿ ಹ್ಯಾಕ್‌ಮನ್ ನಟಿಸಿದ ರೆಡ್ಸ್(1981), ಹೂಸಿಯರ್ಸ್(1986), ನೋ ವೇ ಔಟ್(1987) ಚಿತ್ರಗಳೊಂದಿಗೆ ಬಂದ ಮಿಸ್ಸಿಸ್ಸಿಪ್ಪಿ ಬರ್ನಿಂಗ್(1988) ಚಿತ್ರದ ಎಫ್‌ಬಿಐ ಏಜೆಂಟ್ ಪಾತ್ರ, ಅತ್ಯುತ್ತಮ ಪೋಷಕ ಪಾತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿ ಗೆದ್ದುಕೊಂಡಿತ್ತು. ಹಣ ಮತ್ತು ಖ್ಯಾತಿಯನ್ನೂ ತಂದುಕೊಟ್ಟಿತು.

ಇದನ್ನು ಓದಿದ್ದೀರಾ?: ಆಸ್ಕರ್‌ ಪ್ರಶಸ್ತಿ 2025: ನಾಮ ನಿರ್ದೇಶನಗೊಂಡಿರುವ ಚಿತ್ರಗಳು, ನಟರಿಗೆ ವಿವಾದಗಳ ಕಾರ್ಮೋಡ

‘ಸ್ಕೇರ್‌ಕ್ರೋ’ನಲ್ಲಿ ಅಲ್ ಪ್ಯಾಸಿನೊ ಜೊತೆ ಅಲೆಮಾರಿಯಾಗಿ, ‘ದಿ ಕಾನ್ವರ್ಸೇಷನ್’ನಲ್ಲಿ ಕಣ್ಗಾವಲು ತಜ್ಞನಾಗಿ, ‘ಎನಿಮಿ ಆಫ್ ದಿ ಸ್ಟೇಟ್’ನಲ್ಲಿ ಅಡ್ಮಿರಲ್ ಆಗಿ ಮತ್ತು ‘ದಿ ರಾಯಲ್ ಟೆನೆನ್‌ಬಾಮ್ಸ್’ನಲ್ಲಿ ವಿಲಕ್ಷಣ ತಂದೆಯಾಗಿ ಸಿನಿಪ್ರಿಯರ ಹೃದಯ ಗೆದ್ದರು. ಅದರಲ್ಲೂ ‘ಎನಿಮಿ ಆಫ್ ದಿ ಸ್ಟೇಟ್’- ಮಿಲಿಟರಿ ಯೋಧನೊಬ್ಬ ಶತ್ರುಪ್ರದೇಶದಿಂದ ಬಜಾವಾಗಿ ಬರುವ ರೋಚಕ ಕತೆಯನ್ನು ಹೊಂದಿದ್ದ ಚಿತ್ರ. ಪ್ರೇಕ್ಷಕರನ್ನು ಪ್ರತಿಕ್ಷಣ ಕುರ್ಚಿಯ ತುದಿಗೆ ತಂದು ಕೂರಿಸುವ ಚಿತ್ರವಾಗಿತ್ತು. ಅದರಲ್ಲಿನ ಅಡ್ಮಿರಲ್ ಪಾತ್ರ ನಿರ್ವಹಿಸಿದ್ದ ಹ್ಯಾಕ್‌ಮನ್, ಒಂದು ಸಲ ವಿಲನ್ ಆಗಿ, ಮತ್ತೊಂದು ಸಲ ಖಡಕ್ ಅಡ್ಮಿರಲ್ ಆಗಿ, ಸಂಭಾಷಣೆ ಮತ್ತು ನಟನೆಯ ಮೂಲಕ ಚಿತ್ರದ ತೂಕವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದರು.  

ನ್ಯೂ ಮೆಕ್ಸಿಕೋದ ಸಾಂತಾ ಫೆ ಹೊರಗೆ ವಾಸಿಸುತ್ತಿದ್ದ ಹ್ಯಾಕ್‌ಮನ್‌ಗೆ ಇಬ್ಬರು ಮಡದಿಯರು. ಕ್ರಿಸ್ಟೋಫರ್, ಎಲಿಜಬೆತ್ ಜೀನ್ ಮತ್ತು ಲೆಸ್ಲೀ ಆನ್ ಎಂಬ ಮೂವರು ಮಕ್ಕಳನ್ನು ಹೊಂದಿದ್ದರು. ಮೊದಲ ಪತ್ನಿ ಫೇಯ್ ಮಾಲ್ಟೀಸ್‌ರಿಂದ ವಿಚ್ಛೇದನ ಪಡೆದಿದ್ದ ಹ್ಯಾಕ್‌ಮನ್, 1991ರಲ್ಲಿ ಬೆಟ್ಸಿ ಅರಕಾವಾ ಅವರನ್ನು ಮದುವೆಯಾಗಿದ್ದರು. ಅವರು ಶಾಸ್ತ್ರೀಯ ಪಿಯಾನೋ ವಾದಕಿಯಾಗಿದ್ದರು.

ಜೀನ್‌ ಹ್ಯಾಕ್‌ಮನ್‌ ಸರಿಸುಮಾರು 40 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದರು. 60ರ ದಶಕದಲ್ಲಿ ಆರಂಭವಾದ ಅವರ ಚಿತ್ರಬದುಕಿನಲ್ಲಿ 80ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದರು. 2004ರಲ್ಲಿ ‘ವೆಲ್‌ಕಮ್ ಟು ಮೂಸ್‌ಪೋರ್ಟ್’ ಚಿತ್ರದಲ್ಲಿ ನಟಿಸುವ ಮೂಲಕ, ನಟನಾ ವೃತ್ತಿಯಿಂದ ನಿವೃತ್ತರಾದರು. ಐದು ಬಾರಿ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದ ಹ್ಯಾಕ್‌ಮನ್‌, ಎರಡು ಬಾರಿ ಪ್ರಶಸ್ತಿ ಪಡೆದು ಬೀಗಿದ್ದರು.

jean hacman

ಜೀನ್ ಹ್ಯಾಕ್‌ಮನ್‌ ಒಂದು ಕಡೆ, ‘ಕಡುಕಷ್ಟದ ಕುಟುಂಬಗಳು ಹಲವಾರು ಒಳ್ಳೆಯ ನಟರನ್ನು ಹುಟ್ಟುಹಾಕಿವೆ’ ಎಂದು ಹೇಳಿದ್ದರು. ಅದು ಸ್ವತಃ ಅವರ ಕುರಿತೇ ಆಡಿದ ಮಾತಾಗಿತ್ತು. ಬಡತನದ ಕುಟುಂಬದಿಂದ ಬಂದ ಹ್ಯಾಕ್‌ಮನ್‌, ಪೋಷಕರನ್ನು ಕಳೆದುಕೊಂಡು ಅನಾಥನಾಗಿ, ಕೈಗೆ ಸಿಕ್ಕ ಕೆಲಸಗಳನ್ನು ಮಾಡುತ್ತ- ನಿಜಬದುಕಿನಲ್ಲೂ ಹಾಗೂ ಚಿತ್ರಗಳಲ್ಲೂ ವೈವಿಧ್ಯಮಯ ಪಾತ್ರಗಳನ್ನೇ ನಿರ್ವಹಿಸಿದರು. ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು, ಹಣ ಮತ್ತು ಖ್ಯಾತಿಯನ್ನು ಗಳಿಸಿದರು. ಸಾಕು ಎನಿಸಿದಾಗ ಚಿತ್ರರಂಗಕ್ಕೂ, ಬದುಕಿಗೂ ತಣ್ಣಗೆ ವಿದಾಯ ಹೇಳಿ ಹೊರಟರು.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

Download Eedina App Android / iOS

X