ಯುಎಇಯಲ್ಲಿ ಪ್ರತಿಷ್ಠಿತ ಉದ್ಯಮ, ಶಿಕ್ಷಣ ಸಮೂಹ ಕಟ್ಟಿ ಬೆಳೆಸಿರುವ ಮಂಗಳೂರಿನ ಡಾ. ತುಂಬೆ ಮೊಯ್ದಿನ್ ಅವರಿಗೆ 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.
ಹೊರನಾಡು – ಹೊರದೇಶ ವಿಭಾಗದಲ್ಲಿ ಡಾ ತುಂಬೆ ಮೊಯ್ದಿನ್ ಅವರ ಸೇವೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನವೆಂಬರ್ 1 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಡಾ. ತುಂಬೆ ಮೊಯ್ದಿನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಮೊಯ್ದಿನ್ ತುಂಬೆ ಅವರ ಪರಿಚಯ
ಯು ಎ ಇ ಯಲ್ಲಿ ಪ್ರತಿಷ್ಠಿತ ಉದ್ಯಮ, ಶಿಕ್ಷಣ ಸಮೂಹ ಕಟ್ಟಿ ಬೆಳೆಸಿದ ಡಾ. ತುಂಬೆ ಮೊಯ್ದಿನ್ 21ನೇ ವಯಸ್ಸಿಗೇ ಉದ್ಯಮ ಕ್ಷೇತ್ರಕ್ಕೆ ಪ್ರವೇಶಿಸಿದವರು.
ಡಾ.ತುಂಬೆ ಮೊಯ್ದಿನ್ ಅವರದ್ದು ಗಲ್ಫ್ ದೇಶಗಳ ಉದ್ಯಮ ವಲಯದಲ್ಲಿ ಇಂದು ಬಹು ದೊಡ್ಡ ಹೆಸರು. ಮಂಗಳೂರಿನ ತುಂಬೆ ಮೂಲದ ಮೊಯ್ದಿನ್ ಅವರು ತಮ್ಮ ತಂದೆ ದಿವಂಗತ ಡಾ. ಬಿ ಅಹಮದ್ ಹಾಜಿ ಮೊಹಿಯುದ್ದೀನ್ ಅವರು ಸ್ಥಾಪಿಸಿದ ದೊಡ್ಡ ಉದ್ಯಮದ ವ್ಯಾಪ್ತಿಯನ್ನು ವಿದೇಶಗಳಲ್ಲೂ ವಿಸ್ತರಿಸಿ ಯಶಸ್ವಿಯಾಗಿ ಮುನ್ನಡೆಸಿದವರು.
ಮಾರ್ಚ್ 23, 1957ರಲ್ಲಿ ಮಂಗಳೂರಿನಲ್ಲಿ ಜನಿಸಿದ್ದ ತುಂಬೆ ಮೊಯ್ದಿನ್, ತಂದೆ ಮತ್ತು ಅಜ್ಜ, ಖ್ಯಾತ ಉದ್ಯಮಿ ಯೆನೆಪೊಯ ಮೊಯ್ದೀನ್ ಕುಂಞಿ ಅವರಿಂದ ಕಲಿತ ಉದ್ಯಮದ ಪಾಠಗಳು, ಮೊಯ್ದಿನ್ ಅವರಿಗೆ ಕೆಲವೇ ವರ್ಷಗಳಲ್ಲಿ ಉದ್ಯಮಕ್ಕೆ ಹೊಸ ಆಯಾಮ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ನೆರವಾದವು.
1997 ರಲ್ಲಿ ಡಾ.ತುಂಬೆ ಮೊಯ್ದೀನ್ ಅವರು ಯುಎಇಯಲ್ಲಿ ತುಂಬೆ ಗ್ರೂಪ್ ಸ್ಥಾಪಿಸಿದರು. 1998 ರಲ್ಲಿ ಅಜ್ಮಾನ್ ನ ಆಡಳಿತಗಾರರ ಆಹ್ವಾನದ ಮೇರೆಗೆ ಅವರು ಅಜ್ಮಾನ್ ನಲ್ಲಿ ಪ್ರಾರಂಭಿಸಿದ ಗಲ್ಫ್ ಮೆಡಿಕಲ್ ಕಾಲೇಜು ಇವತ್ತು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಾಗಿ (ಜಿಎಂಯು) ಇಡೀ ಗಲ್ಫ್ ದೇಶಗಳಲ್ಲೇ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾಲಯವಾಗಿ ಭಾರೀ ಪ್ರಸಿದ್ಧಿ ಪಡೆದಿದೆ.
ಅದು ಇಡೀ ಗಲ್ಫ್ ದೇಶಗಳಲ್ಲೇ ಪ್ರಪ್ರಥಮ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯ. 98 ಕ್ಕೂ ಹೆಚ್ಚು ದೇಶಗಳ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಎಂಯುನ ಆರು ಕಾಲೇಜುಗಳ 28 ಕೋರ್ಸುಗಳಲ್ಲಿ ಕಲಿಯುತ್ತಿದ್ದಾರೆ. 50 ಕ್ಕೂ ಹೆಚ್ಚು ದೇಶಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ಜಿಎಂಯುನಲ್ಲಿದ್ದಾರೆ.
ಅವರ ನಾಯಕತ್ವದಲ್ಲಿ ತುಂಬೆ ಸಮೂಹವು ಯುಎಇಯಲ್ಲಿ ಭಾರೀ ಬೆಳವಣಿಗೆ ಕಂಡಿತು. ತುಂಬೆ ಸಮೂಹವು ಶಿಕ್ಷಣ, ಆರೋಗ್ಯ, ವೈದ್ಯಕೀಯ ಸಂಶೋಧನೆ, ಡಯಾಗ್ನೋಸ್ಟಿಕ್ಸ್, ರಿಟೇಲ್ ಫಾರ್ಮಸಿ, ಆರೋಗ್, ಸಂವಹನ, ಪೌಷ್ಟಿಕಾಂಶ ಮಳಿಗೆಗಳು, ಹಾಸ್ಪಿಟಾಲಿಟಿ, ರಿಯಲ್ ಎಸ್ಟೇಟ್, ಪಬ್ಲಿಕೇಷನ್, ತಂತ್ರಜ್ಞಾನ, ಮಾಧ್ಯಮ, ಇವೆಂಟ್ ಮ್ಯಾನೇಜ್ ಮೆಂಟ್, ವೈದ್ಯಕೀಯ ಪ್ರವಾಸೋದ್ಯಮ, ವ್ಯಾಪಾರ ಮತ್ತು ಮಾರುಕಟ್ಟೆ ಸೇರಿದಂತೆ 20 ವಲಯಗಳಲ್ಲಿ ಕಾರ್ಯಾಚರಣೆ ಇರುವ ವೈವಿಧ್ಯಮಯ ಹಾಗು ಬೃಹತ್ ಉದ್ಯಮ ಸಮೂಹವಾಗಿ ವಿಕಸನಗೊಂಡಿದೆ. ಆ ಮೂಲಕ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ.
ತುಂಬೆ ಹಾಸ್ಪಿಟಲ್ ನೆಟ್ವರ್ಕ್ ಇಂದು ಇಡೀ ಗಲ್ಫ್ ಪ್ರದೇಶದಲ್ಲೇ ಅತಿದೊಡ್ಡ ಖಾಸಗಿ ಅರೋಗ್ಯ ಸೇವಾ ಸಮೂಹಗಳಲ್ಲಿ ಒಂದು ಹಾಗೂ ಪ್ರಪ್ರಥಮ ಖಾಸಗಿ ಶೈಕ್ಷಣಿಕ ಅರೋಗ್ಯ ಸೇವಾ ಸಮೂಹ. ತುಂಬೆ ನೆಟ್‌ವರ್ಕ್‌ನಲ್ಲೀಗ 8 ಆಸ್ಪತ್ರೆಗಳು, 10 ಕ್ಲಿನಿಕ್ ಗಳು, 56 ಫಾರ್ಮಸಿಗಳು, 5 ಲ್ಯಾಬ್ ಗಳಿದ್ದು 175 ಕ್ಕೂ ಹೆಚ್ಚು ದೇಶಗಳ ರೋಗಿಗಳಿಗೆ ಚಿಕಿತ್ಸೆ ಒದಗಿಸುತ್ತಿವೆ.
ಡಾ.ಮೊಯ್ದೀನ್ ಅವರು ಅಜ್ಮಾನ್ ಇಂಡಿಯನ್ ಅಸೋಸಿಯೇಷನ್, ಇಂಡಿಯನ್ ಬಿಸಿನೆಸ್ ಕೌನ್ಸಿಲ್ ಅಜ್ಮಾನ್, ಬ್ಯಾರಿಸ್ ಕಲ್ಚರಲ್ ಫೋರಂ, ದುಬೈ ಮತ್ತು ಕರ್ನಾಟಕ ಸಂಘ ಶಾರ್ಜಾದ ಮುಖ್ಯ ಪೋಷಕರಾಗಿದ್ದಾರೆ. ಅವರು ಏಷ್ಯನ್ ಹಾಸ್ಪಿಟಲ್ ಫೆಡರೇಶನ್ ಯುಎಇ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಫ್ರಾನ್ಸ್‌ನ ಫರ್ನಿ ವೋಲ್ಟೇರ್ನಲ್ಲಿರುವ ಅಂತರರಾಷ್ಟ್ರೀಯ ಹಾಸ್ಪಿಟಲ್ ಫೆಡರೇಶನ್ ಸದಸ್ಯರೂ ಆಗಿದ್ದಾರೆ. ಅಲ್ಲದೇ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ಅಧ್ಯಕ್ಷರ ಸಂಘದ ಸದಸ್ಯರೂ ಹೌದು.
ತುಂಬೆ ಫೌಂಡೇಶನ್ ಆರೋಗ್ಯ ಮತ್ತು ಶಿಕ್ಷಣ ರಂಗದಲ್ಲಿ ಸೇವಾ ಚಟುವಟಿಕೆಗಳಿಗೆ ಸದಾ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ. ಶೈಕ್ಷಣಿಕ – ತರಬೇತಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳು, ಫೆಲೋಶಿಪ್‌ಗಳು, ದೇಣಿಗೆಗಳು ಮತ್ತು ಇತರ ರೀತಿಯ ಹಣಕಾಸಿನ ನೆರವುಗಳ ಮೂಲಕ ಸಹಾಯ ಮಾಡುತ್ತಿದೆ.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಡಾ. ತುಂಬೆ ಮೊಯ್ದಿನ್, ಅವರ ಸಾಧನೆಗೆ ಮಧ್ಯಪ್ರಾಚ್ಯದ ಫೋರ್ಬ್ಸ್ ನಿಯತಕಾಲಿಕವು “ಅರಬ್ ಪ್ರಪಂಚದ ಅಗ್ರ ಭಾರತೀಯ ಉದ್ಯಮ ನಾಯಕ” ಗೌರವ ನೀಡಿದೆ.
ವೈದ್ಯಕೀಯ ಶಿಕ್ಷಣ, ಉದ್ಯಮ ಮತ್ತು ರಾಷ್ಟ್ರದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಉತ್ತೇಜನಕ್ಕೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ಗೌರವಿಸಿ ದುಬೈಯ ಅಮಿಟಿ ವಿಶ್ವವಿದ್ಯಾಲಯ ಹಾಗು ಮಂಗಳೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿವೆ. ಗಲ್ಫ್ ದೇಶದಲ್ಲಿ ಮಾಡಿರುವ ಅಸಾಮಾನ್ಯ ಸಾಧನೆ ಹಾಗೂ ಸೇವಾ ಚಟುವಟಿಕೆಗಳಿಗಾಗಿ ಅವರಿಗೆ ಗಲ್ಫ್ ಕನ್ನಡಿಗ ರತ್ನ ಪ್ರಶಸ್ತಿಯನ್ನೂ ನೀಡಲಾಗಿದೆ.
ತುಂಬೆ ಮೊಯ್ದಿನ್ ಅವರ ಪತ್ನಿ ಝೋಹ್ರಾ ಮೊಯ್ದಿನ್ ಅವರು ಚಿತ್ರ ಕಲಾವಿದರಾಗಿ ಛಾಪು ಮೂಡಿಸಿದವರು. ಮೊಯ್ದಿನ್ ಅವರ ಇಬ್ಬರು ಪುತ್ರರು ಅಕ್ಬರ್ ಮೊಯ್ದಿನ್ ಹಾಗೂ ಅಕ್ರಮ್ ಮೊಯ್ದಿನ್. ಇಬ್ಬರೂ ತಂದೆಯ ಜೊತೆ ತುಂಬೆ ಸಮೂಹದಲ್ಲಿ ಸಕ್ರಿಯವಾಗಿದ್ದಾರೆ.
