ನೈರೋಬಿಯ ಮುಖ್ಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಭಾರತದ ಅದಾನಿ ಗ್ರೂಪ್‌ಗೆ ವರ್ಗಾಯಿಸುವ ಯೋಜನೆಗೆ ಕೀನ್ಯಾದ ಉಚ್ಚ ನ್ಯಾಯಾಲಯವು ತಾತ್ಕಾಲಿಕವಾಗಿ ತಡೆ ನೀಡಿದೆ ಎಂದು ವರದಿಯಾಗಿದೆ.
ಪೂರ್ವ ಆಫ್ರಿಕಾದ ಅತಿದೊಡ್ಡ ವಾಯುಯಾನ ಕೇಂದ್ರವಾದ ಜೋಮೊ ಕೆನ್ಯಾಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಅದಾನಿಗೆ 30 ವರ್ಷಗಳ ಗುತ್ತಿಗೆ ನೀಡುವ ಸರ್ಕಾರದ ಪ್ರಸ್ತಾಪವನ್ನು ಈ ಆದೇಶವು ನಿರ್ಬಂಧಿಸಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಅದಾನಿ ಗ್ರೂಪ್ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಇದನ್ನು ಓದಿದ್ದೀರಾ? ಮೋದಿ ಅತ್ಯಾಪ್ತ ಅದಾನಿಯೇ ದೇಶದ ಅತೀ ಶ್ರೀಮಂತ ಉದ್ಯಮಿ; ದೇಶಕ್ಕೆ ಬಂದ ಭಾಗ್ಯವೇನು?
ಕಳೆದ ತಿಂಗಳು, ಕೀನ್ಯಾದ ಪ್ರಮುಖ ವಾಯುಯಾನ ಕಾರ್ಮಿಕರ ಸಂಘಟನೆಯಾದ ಕೀನ್ಯಾ ಏವಿಯೇಷನ್ ವರ್ಕರ್ಸ್ ಯೂನಿಯನ್ ಅದಾನಿ ಗ್ರೂಪ್‌ಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಗುತ್ತಿಗೆ ನೀಡುವ ಒಪ್ಪಂದದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿತ್ತು.
ಈ ರೀತಿ ಬೇರೆ ದೇಶದ ಸಂಸ್ಥೆಗೆ ಗುತ್ತಿಗೆಯನ್ನು ನೀಡುವುದರಿಂದ ಈ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ನಾವು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಕೀನ್ಯಾದೇತರ ಕಾರ್ಮಿಕರನ್ನು ಈ ಸಂಸ್ಥೆಗಳು ಕರೆಸಿಕೊಳ್ಳುತ್ತದೆ ಎಂದು ಕಾರ್ಮಿಕರ ಸಂಘಟನೆ ಹೇಳಿದೆ.
ಭಾರತದಲ್ಲಿ ಅದಾನಿ ಸಂಸ್ಥೆಯು ಮುಂಬೈ, ನವಿ ಮುಂಬೈ, ಅಹಮದಾಬಾದ್, ಲಕ್ನೋ, ಮಂಗಳೂರು, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣ ಸೇರಿದಂತೆ ಒಟ್ಟು ಎಂಟು ವಿಮಾನ ನಿಲ್ದಾಣಗಳ ಗುತ್ತಿಗೆಯನ್ನು ಪಡೆದಿದೆ.
