- ವಿನೂತನ ಗಾರ್ಡನ್ ಹೊಂದಿರುವ ಕೆಐಎ ಟರ್ಮಿನಲ್ 2
- ಪ್ರಯಾಣದ ಮಾಹಿತಿಗಾಗಿ ಆಯಾ ವಿಮಾನಯಾನ ಸಂಸ್ಥೆ ಸಂಪರ್ಕಿಸಿ
ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಆ. 31ರಿಂದ ವಿದೇಶಿ ವಿಮಾನ ಹಾರಾಟ ನಡೆಸಬೇಕಿತ್ತು. ಆದರೆ, ತಾಂತ್ರಿಕ ದೋಷ ಸೇರಿದಂತೆ ಇನ್ನಿತರೆ ಕೆಲವು ಸಮಸ್ಯೆಗಳ ಕಾರಣದಿಂದ ವಿದೇಶಿ ವಿಮಾನ ಹಾರಾಟ ಮುಂದೂಡಲಾಗಿದೆ.
ಕೆಐಎ ಟರ್ಮಿನಲ್ 2ನಿಂದ ವಿದೇಶಿ ವಿಮಾನ ಹಾರಾಟಕ್ಕೆ ಆ.31 ರಂದು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಮುಂದೂಡಿಕೆ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ.
“ಕೊನೆಯ ಕ್ಷಣದಲ್ಲಿ ಉಂಟಾದ ಈ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ಪ್ರಯಾಣಿಕರಿಗೆ ಉತ್ತಮ ಪ್ರಯಾಣವನ್ನು ನೀಡುವ ನಿಟ್ಟಿನಲ್ಲಿ ಕೊನೆಯ ಪರಿಶೀಲನೆಗೆ ಕೊನೆಯ ಕ್ಷಣದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ಆದೇಶದವರೆಗೂ ಟರ್ಮಿನಲ್ 1ರಿಂದ ವಿದೇಶಿ ವಿಮಾನಗಳ ಕಾರ್ಯಾಚರಣೆ ನಡೆಯಲಿದೆ. ಟರ್ಮಿನಲ್ 1ರಲ್ಲಿ ದೇಶೀಯ ವಿಮಾನ ಕಾರ್ಯಾಚರಣೆ ನಡೆಯಲಿದೆ” ಎಂದು ತಿಳಿಸಿದೆ.
“ಅಂತಾರಾಷ್ಟ್ರೀಯ ಪ್ರಯಾಣದ ಕುರಿತಂತೆ ಯಾವುದೇ ಹೆಚ್ಚಿನ ಮಾಹಿತಿ ಪಡೆಯಲು ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ. ಟರ್ಮಿನಲ್-2ರಿಂದ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಆರಂಭಿಸುವ ದಿನಾಂಕವನ್ನು ಗುರುವಾರ ಪ್ರಕಟಿಸಲಾಗುವುದು” ಎಂದು ಬಿಐಎಎಲ್ ವಕ್ತಾರರು ತಿಳಿಸಿದ್ದಾರೆ.
ಆ. 31ರಂದು ವಿದೇಶಿ ವಿಮಾನ ಹಾರಾಟ ನಡೆಸಬೇಕಿದ್ದ ಟರ್ಮಿನಲ್ 2
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಒತ್ತಡ ಕಡಿಮೆ ಮಾಡಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ (ಬಿಐಎಎಲ್) ಅಂತಾರಾಷ್ಟ್ರೀಯ ವಿಮಾನಗಳ ಸೇವೆಯನ್ನು ಸಂಪೂರ್ಣವಾಗಿ ಟರ್ಮಿನಲ್-2ಗೆ ಸ್ಥಳಾಂತರಿಸಲು ನಿರ್ಧರಿಸಿತ್ತು. ಗುರುವಾರದಿಂದ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಟರ್ಮಿನಲ್-2ರಿಂದ ಕಾರ್ಯಾಚರಣೆಗೊಳ್ಳಲಿದ್ದು, ಉಳಿದಂತೆ ದೇಶೀಯ ಸೇವೆಗಳನ್ನು ಎರಡೂ ಟರ್ಮಿನಲ್‌ಗೆ ಹಂಚಿಕೆ ಮಾಡಲಾಗುತ್ತದೆ ಎಂದು ಬಿಐಎಎಲ್ ಈ ಹಿಂದೆ ಪ್ರಕಟಣೆ ಮೂಲಕ ತಿಳಿಸಿತ್ತು. ಆದರೀಗ ಕೊನೆ ಕ್ಷಣದಲ್ಲಿ ಈ ನಿರ್ಧಾರವನ್ನು ಮೂಂದೂಡಲಾಗಿದೆ ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 38 ವರ್ಷದ ಹಿಂದೆ ಸೈಕಲ್ ಕಳ್ಳತನ ಮಾಡಿದ್ದ ಆರೋಪಿಯ ಬಂಧನ
ಕೆಐಎ ಟರ್ಮಿನಲ್ 2
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ವಿನೂತನ ಗಾರ್ಡನ್ ಹೊಂದಿದೆ. ಇದಕ್ಕೆ ₹5 ಸಾವಿರ ಕೋಟಿ ವೆಚ್ಚವಾಗಿದೆ. ಈ ಟರ್ಮಿನಲ್ಲಿ 27 ಏರ್‌ಲೈನ್ಸ್ ಕಾರ್ಯನಿರ್ವಹಿಸುತ್ತಿವೆ. ವಾರ್ಷಿಕವಾಗಿ 25 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಈ ಟರ್ಮಿನಲ್ 2 ಹೊಂದಿದೆ.
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಕಾಮಗಾರಿ 2018ರಲ್ಲಿ ಪ್ರಾರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು 2022ರ ನವೆಂಬರ್ನಲ್ಲಿ ಟರ್ಮಿನಲ್ 2 ಉದ್ಘಾಟಿಸಿದ್ದರು. ದೇಶೀಯ ಕಾರ್ಯಾಚರಣೆಗಳು 2023ರ ಜನವರಿ 15ರಂದು ಪ್ರಾರಂಭವಾಗಿದ್ದವು.
ಈ ಟರ್ಮಿನಲ್ ನಾನಾ ಜಾತಿಯ ಸಸ್ಯಗಳು ಹಾಗೂ ಮರಗಳಿಂದ ಸುತ್ತುವರೆದಿದೆ. ಇದನ್ನು ಇನ್ ದಿ ಗಾರ್ಡನ್ ಎಂದು ಕರೆಯಲಾಗುತ್ತಿದೆ.
ಈ ಟರ್ಮಿನಲ್ 2ರಲ್ಲಿ 180 ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಜಾತಿಯ ಸಸ್ಯಗಳಿವೆ. 3,600ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, ಬಿದಿರು, 620 ಸ್ಥಳೀಯ ಸಸ್ಯಗಳು, 7,700 ಕಸಿ ಮರಗಳು, 96 ಕಮಲ ಮತ್ತು ಇನ್ನೂ ಹೆಚ್ಚಿನ ಸಸ್ಯಗಳಿವೆ.