ಫುಟ್ಬಾಲ್ ಜಗತ್ತಿನ ಮಾಂತ್ರಿಕ ಆಟಗಾರ, ವಿಶ್ವಕಪ್ ವಿಜೇತ ನಾಯಕ ಲಿಯೋನೆಲ್ ಮೆಸ್ಸಿ, ಚೀನಾದ ಬೀಜಿಂಗ್ ವಿಮಾನ ನಿಲ್ದಾಣದಲ್ಲಿ ಮುಜುಗರ ಅನುಭವಿಸಿದ ಘಟನೆ ನಡೆದಿದೆ.
ಬೀಜಿಂಗ್ನ ವರ್ಕರ್ಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗುರುವಾರ (ಜೂನ್ 15) ಸೌಹಾರ್ದ ಪಂದ್ಯವನ್ನಾಡಲು ಅರ್ಜೆಂಟೀನಾದ ನಾಯಕ ಸೋಮವಾರ ಚೀನಾಗೆ ಆಗಮಿಸಿದ್ದರು. ಆದರೆ ವೀಸಾ ಸೇರಿದಂತೆ ಸರಿಯಾದ ದಾಖಲೆಗಳನ್ನು ಹೊಂದಿಲ್ಲ ಎಂಬ ಕಾರಣಕ್ಕೆ ದಿಗ್ಗಜ ಆಟಗಾರನನ್ನು ಗಡಿ ಭದ್ರತಾ ಪಡೆಯ ಪೊಲೀಸರು ಬೀಜಿಂಗ್ ವಿಮಾನ ನಿಲ್ದಾಣದಲ್ಲಿ ಸುಮಾರು ಅರ್ಧಗಂಟೆಗಳಿಗೂ ಹೆಚ್ಚು ಕಾಲ ತಡೆದು ನಿಲ್ಲಿಸಿದ್ದಾರೆ.
2017ರ ಬಳಿಕ ಇದೇ ಮೊದಲ ಬಾರಿಗೆ ಚೀನಾಗೆ ಆಗಮಿಸಿರುವ ಮೆಸ್ಸಿ, ವೀಸಾಗೆ ಅರ್ಜಿ ಸಲ್ಲಿಸಿರಲಿಲ್ಲ. ಇದಲ್ಲದೆ, ಅರ್ಜೆಂಟೀನಾದ ಬದಲಾಗಿ ಸ್ಪ್ಯಾನಿಷ್ ಪಾಸ್ಪೋರ್ಟ್ನೊಂದಿಗೆ ಮೆಸ್ಸಿ ಪ್ರಯಾಣಿಸಿದ್ದರು. ಆದರೆ ಈ ಪಾಸ್ಪೋರ್ಟ್, ಚೀನಾ ಪ್ರವೇಶದ ವೀಸಾ ಹೊಂದಿರಲಿಲ್ಲ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಮೆಸ್ಸಿಯನು ತಡೆದು ನಿಲ್ಲಿಸಿದ್ದರು.
ಸುಮಾರು 30 ನಿಮಿಷಗಳ ನಂತರ ವಿಚಾರಣೆ ಮತ್ತು ವೀಸಾ ಸಮಸ್ಯೆ ಕುರಿತು ಚರ್ಚಿಸಿದ ಬಳಿಕ ಅಧಿಕಾರಿಗಳು ಮೆಸ್ಸಿಗೆ ತೆರಳಲು ಅನುಮತಿ ನೀಡಿದ್ದಾರೆ. ಮೆಸ್ಸಿಯನ್ನು ಪೊಲೀಸರು ಸುತ್ತುವರಿದಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಮ್ಮ ನೆಚ್ಚಿನ ಆಟಗಾರನನ್ನು ಸ್ವಾಗತಿಸಲು ಬೀಜಿಂಗ್ ವಿಮಾನ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.
ಮೇಜರ್ ಲೀಗ್ ಸಾಕರ್ನತ್ತ ಮೆಸ್ಸಿ ಚಿತ್ತ
ಪ್ಯಾರಿಸ್ ಸೇಂಟ್-ಜರ್ಮೈನ್ (ಪಿಎಸ್ಜಿ) ಜೊತೆಗಿನ ಒಪ್ಪಂದವು ಕಳೆದ ತಿಂಗಳು ಕೊನೆಗೊಂಡ ನಂತರ ಅಮೆರಿಕದ ಮೇಜರ್ ಲೀಗ್ ಸಾಕರ್ ಟೂರ್ನಿಯ (ಎಂಎಲ್ಎಸ್) ಇಂಟರ್ ಮಿಯಾಮಿ ಕ್ಲಬ್ ಪರ ಮುಂದಿನ ಋತುವಿನಲ್ಲಿ ಮೆಸ್ಸಿ ಕಣಕ್ಕಿಳಿಯಲಿದ್ದಾರೆ. ಇಂಗ್ಲೆಂಡ್ನ ಮಾಜಿ ಆಟಗಾರ ಡೇವಿಡ್ ಬೆಕ್ಹ್ಯಾಮ್ ಅವರು ಮಿಯಾಮಿ ಫ್ರಾಂಚೈಸ್ನ ಮಾಲೀಕತ್ವ ಹೊಂದಿದ್ದಾರೆ.
ಇದರೊಂದಿಗೆ, ತನ್ನ ಬಾಲ್ಯದ ಕ್ಲಬ್ ಎಫ್ಸಿ ಬಾರ್ಸಿಲೋನಾಗೆ ಮತ್ತೊಮ್ಮೆ ಮೆಸ್ಸಿ ಮರಳಲಿದ್ದಾರೆ ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ.
ʻನಾನು ಮಿಯಾಮಿ ಕ್ಲಬ್ ಸೇರಲು ನಿರ್ಧರಿಸಿದ್ದೇನೆ. ಇದು 100% ಖಚಿತ. ಬಾರ್ಸಿಲೋನಾ ತಂಡದ ಜೊತೆಗೆ ಒಪ್ಪಂದವಾಗಿಲ್ಲ. ನನ್ನ ಕುಟುಂಬದ ಬಗ್ಗೆ ಹೆಚ್ಚು ಯೋಚಿಸಲು ಬಯಸುತ್ತೇನೆ. ವಿಶ್ವಕಪ್ ಗೆದ್ದ ನಂತರ ಅಮೆರಿಕದ ಕ್ಲಬ್ ಸೇರಲು ಬಯಸಿದೆ. ಫುಟ್ಬಾಲ್ ಅನ್ನು ವಿಭಿನ್ನ ರೀತಿಯಲ್ಲಿ ಅನುಭವಿಸಲು ಮತ್ತು ದಿನದಿಂದ ದಿನಕ್ಕೆ ಆನಂದಿಸಲು ಈ ಲೀಗ್ನಲ್ಲಿ ಪಾಲ್ಗೊಳ್ಳುತ್ತಿರುವೆ. ಜವಾಬ್ದಾರಿಯೊಂದಿಗೆ ಆಟ ಆಡುವೆʼ ಎಂದರು ಲಿಯೋನೆಲ್ ಮೆಸ್ಸಿ ಹೇಳಿದ್ದಾರೆ.